5

ಭತ್ತದ ಪೈರಿಗೆ ಸೈನಿಕ ಹುಳು ಬಾಧೆ

Published:
Updated:
ಭತ್ತದ ಪೈರಿಗೆ ಸೈನಿಕ ಹುಳು ಬಾಧೆ

ಕಳಸ: ಇಳಿಸಂಜೆಯ ನಂತರ ಗದ್ದೆಗೆ ಧುತ್ತೆಂದು ದಾಳಿ ಇಡುವ ಈ ಹುಳುಗಳು, ರಾತ್ರೋರಾತ್ರಿ ಭತ್ತದ ತೆನೆ ಮತ್ತು ಪೈರನ್ನು ತಿಂದು ನಾಶಪಡಿಸುತ್ತಿವೆ. ಇದರಿಂದ ಲಾಭದಾಯಕವಲ್ಲದಿದ್ದರೂ ಭಾವನಾತ್ಮಕವಾಗಿ ಭತ್ತದ ಬೆಳೆಯನ್ನು ಮುಂದುವರೆಸಿರುವ ಹೋಬಳಿಯ ರೈತರು ಈಗ ಹತಾಶರಾಗಿದ್ದಾರೆ.

ಬಯಲುಸೀಮೆಯಲ್ಲಿ ಸೈನಿಕ ಹುಳುಗಳ ಹಾವಳಿ ಕೇಳಿದಾಗ ‘ಮಲೆನಾಡಿಗೆ ಇವು ಬರಲಿಕ್ಕಿಲ್ಲ’ ಎಂದು ರೈತರು ನಿರ್ಲಕ್ಷ್ಯ ಮಾಡಿದ್ದರು. ಆದರೆ, ಇದೀಗ ಸಂಸೆ ಗ್ರಾಮದ ಬಾಳಗಲ್‌ ಮತ್ತು ಜಾಂಬಳೆಯಲ್ಲಿ ಸೈನಿಕ ಹುಳುಗಳು ಕಂಡು ಬಂದಿವೆ. ಅವುಗಳ ಆಟಾಟೋಪ ಕಂಡಾಗ ಭತ್ತದ ಬೆಳೆಗೆ ಉಳಿಗಾಲವೇ ಇಲ್ಲ ಎಂಬ ತೀರ್ಮಾನಕ್ಕೆ ರೈತರು ಬಂದಿದ್ದಾರೆ.

ಬಾಳಗಲ್‌ ಸತೀಶ್‌, ಜಾಂಬಳೆಯ ಚಂದ್ರೇಗೌಡ, ಚಂದ್ರರಾಜಯ್ಯ, ಭಾಸ್ಕರ ಮತ್ತಿತರ ರೈತರ ಗದ್ದೆಯಲ್ಲಿ ಸೈನಿಕ ಹುಳುಗಳ ಕಾಟ ಮಿತಿ ಮೀರಿದೆ. ‘ಇನ್ನು 15 ದಿನಗಳಲ್ಲಿ ಕೈಸೇರುತ್ತಿದ್ದ ಫಸಲನ್ನು ಹುಳುಗಳು ತಿಂದು ಹಾಕಿವೆ. ಮುಂದಿನ ಸಲ ಭತ್ತದ ಕೃಷಿ ಮಾಡುವುದೇ ಬೇಡ ಎಂಬಷ್ಟು ಬೇಸರ ಆಗಿದೆ’ ಎಂದು ಬಾಳಗಲ್‌ ಸತೀಶ್ ಹೇಳುತ್ತಾರೆ.

‘ನಮ್ ಜೀವಮಾನದಲ್ಲಿ ಇಂಥಾ ಹುಳ ನಾವು ನೋಡಿರ್ಲಿಲ್ಲ. ರಾತ್ರೋರಾತ್ರಿ ಗದ್ದೆಯೆಲ್ಲ ತಿಂದು, ಕತ್ತರಿಸಿ ಹಾಳು ಮಾಡಿದಾವೆ. ಕಾಡು ಹಂದಿಗಿಂತಲೂ ಈ ಹುಳುಗಳ ಕಾಟ ಜಾಸ್ತಿಯೇ ಆಯ್ತು’ ಎಂದು ಜಾಂಬಳೆಯ ಕೃಷಿಕರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.

ಕಳಸ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಚ್‌. ಆರ್‌. ಪಾಂಡುರಂಗ ಅವರನ್ನು ರೈತರು ಈ ಬಗ್ಗೆ ಸಂಪರ್ಕಿಸಿದ್ದಾರೆ. ಅಧಿಕಾರಿ ಕೆಲವರ ಜಮೀನಿಗೆ ಭೇಟಿ ನೀಡಿದ್ದು ಸೈನಿಕ ಹುಳುಗಳ ಬಾಧೆಯನ್ನು ಖಚಿತಪಡಿಸಿದ್ದಾರೆ. ಈ ಕೀಟಗಳ ನಿವಾರಣೆಗೆ ಅವರು ಸೂತ್ರವೊಂದನ್ನು ರೈತರಿಗೆ ವಿವರಿಸಿದ್ದಾರೆ.

ಸಂಸೆಯ ಹಿರಿಯ ಕೃಷಿಕರೊಬ್ಬರು, ‘ಈ ಹುಳಗಳು ವಾಟೆ ಮತ್ತು ಬಿದಿರು ಮೆಳೆಯಲ್ಲಿ ಮೊದಲಿಂದಲೂ ಇರುತ್ತಿದ್ದವು. ಈಗ ವಾಟೆ ಮತ್ತು ಬಿದಿರು ಸತ್ತಿರೋದರಿಂದ ಭತ್ತಕ್ಕೆ ಬಂದಿವೆ’ ಎಂದು ಹೇಳುತ್ತಾರೆ.

ಕೃಷಿ ಇಲಾಖೆ ಸೈನಿಕ ಹುಳುಗಳ ಸೂಕ್ತ ಹತೋಟಿ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳದಿದ್ದರೆ ಮಲೆನಾಡಿನಲ್ಲಿ ಭತ್ತದ ಬೇಸಾಯ ಬಹುತೇಕ ನಿಂತುಹೋಗಬಹುದು ಎಂಬ ಭೀತಿ ರೈತರನ್ನು ಕಾಡುತ್ತಿದೆ.

ಹುಳು ನಿಯಂತ್ರಣಕ್ಕೆ ತಂತ್ರ

20 ಕೆಜಿ ಅಕ್ಕಿ ತೌಡು ಮತ್ತು 2 ಕೆಜಿ ಬೆಲ್ಲಕ್ಕೆ, ತಲಾ ಕಾಲು ಲೀಟರ್‌ ಮೊನೋಕ್ರೋಟೋಫಾಸ್‌ ಮತ್ತು ನೂವಾನ್‌ ಕೀಟನಾಶಕವನ್ನು ಬೆರಸಿ ಎರಡು ದಿನ ಹಾಗೇ ಇರಿಸಬೇಕು. ಈ ಮಿಶ್ರಣ ಹುಳಿ ಬಂದ ಮೇಲೆ ಗದ್ದೆಯ ಅಂಚಿನ ಮೇಲೆಲ್ಲಾ ಹರಡಬೇಕು. ಸೈನಿಕ ಹುಳುಗಳು ಸಿಹಿ ತಿಂಡಿಯ ಪರಿಮಳದ ಆಕರ್ಷಣೆಗೆ ಒಳಗಾಗಿ ಇದನ್ನು ತಿಂದು ಸಾವನ್ನಪ್ಪುತ್ತವೆ ಎಂದು ಸಹಾಯಕ ಕೃಷಿ ಅಧಿಕಾರಿ ಪಾಂಡುರಂಗ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry