7

‘ಕೆಲಸ ಮಾಡದಿದ್ದರೆ ಗಂಟು ಮೂಟೆ ಕಟ್ಟಿ’

Published:
Updated:

ರಾಯಬಾಗ: ಯಾವ ಗ್ರಾಮ ಪಂಚಾಯ್ತಿ ಪಿಡಿಒ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅಂಥವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುವುದು. ಕೆಲಸ ಮಾಡದಿದ್ದರೆ ನಿಮ್ಮ ಗಂಟು ಮೂಟೆ ಕಟ್ಟಿಕೊಂಡು ಹೋಗಲು ಸಿದ್ಧರಾಗಿ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎ.ಎಂ. ಪಾಟೀಲ ಎಚ್ಚರಿಕೆ ನೀಡಿದರು. ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಶೌಚಾಲಯಗಳ ನಿರ್ಮಾಣದ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಸ್ವಚ್ಛ ಭಾರತ ಯೋಜನೆಯಡಿ ಜನವರಿ 26ರೊಳಗೆ ತಾಲ್ಲೂಕನ್ನು ಬಯಲು ಶೌಚ ಮುಕ್ತ ತಾಲ್ಲೂಕು ಎಂದು ಘೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ 37 ಗ್ರಾಮ ಪಂಚಾಯ್ತಿಗಳ ಪಿಡಿಒ ಹಾಗೂ ನೋಡಲ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕುಎಂದು ಅವರು ಸೂಚಿಸಿದರು.

‘ನೀವು ಮನಸ್ಸು ಮಾಡಿದರೆ ಪ್ರತಿದಿನ ಕನಿಷ್ಠ ಐದು ಶೌಚಾಲಯಗಳನ್ನು ಕಟ್ಟಿಸಬಹುದಾಗಿದೆ. ಎಂಥ ಪರಿಸ್ಥಿತಿ ಬಂದರೂ ಜನವರಿ 26ರೊಳಗೆ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಶೌಚಾಲಯ ಇಲ್ಲದ ಒಂದೂ ಕುಟುಂಬ ಇರಬಾರದು ಎಂದರು.

ಸರಿಯಾಗಿ ಮಾಹಿತಿ ತರದ ಇಟನಾಳ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಎ.ಎಂ. ಪಾಟೀಲ ಸಭೆಗೆ ಬರುವಾಗ ಸರಿಯಾದ ಮಾಹಿತಿ ತರುವಂತೆ ಹೇಳಿ ಸಭೆಯಿಂದ ಹೊರಹೋಗುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಬಸವ ಹಾಗೂ ಅಂಬೇಡ್ಕರ್‌ ವಸತಿ ಮನೆಗಳ ನಿರ್ಮಾಣದ ಪ್ರಗತಿಯ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸಹ ಮಾಹಿತಿ ಪಡೆದರು.

ತಾಲ್ಲೂಕು ಪಂಚಾಯ್ತಿ ಇ.ಒ ಡಿ.ಎಂ.ಜಕ್ಕಪ್ಪಗೋಳ ಮಾತನಾಡಿ, ತಾಲ್ಲೂಕಿನ ಸಿದ್ದಾಪೂರದಲ್ಲಿ ಕೇವಲ 13 ಶೌಚಾಲಯಗಳು ಮಾತ್ರ ಬಾಕಿ ಇವೆ. ಅವನ್ನು ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry