ಭಾನುವಾರ, ಮಾರ್ಚ್ 7, 2021
22 °C

ಕ್ರೀಡೆಯಲ್ಲಿ ಕಂಡ ‘ಚಿನ್ನದ ಹೊಳಪು’

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಕ್ರೀಡೆಯಲ್ಲಿ ಕಂಡ ‘ಚಿನ್ನದ ಹೊಳಪು’

ಚಾಮರಾಜನಗರ: ಮನೆಯ ಎದುರಿನ ರಸ್ತೆಯಲ್ಲಿ ಆಡುತ್ತಿದ್ದ ಆರರ ಹರೆಯದ ಪೋರನ ಮೇಲೆ ಲಾರಿ ಹರಿದು ಬಲಗಾಲು ತುಂಡಾದಾಗ ಬದುಕು ಇಲ್ಲಿಗೇ ಮುಗಿಯಿತು ಎಂದು ಕಂಗೆಡಲಿಲ್ಲ. ಕೃತಕ ಕಾಲು ಅಳವಡಿಸಿಕೊಂಡ ಆ ಹುಡುಗನಲ್ಲಿ ಸವಾಲನ್ನು ಗೆಲ್ಲುವ ಛಲವಿತ್ತು. ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳಿಗೆ ಕೊರಳೊಡ್ಡಿ ದೇಶಕ್ಕೆ ಕೀರ್ತಿ ತಂದ ಹೆಮ್ಮೆ ಅವರ ಕಂಗಳಲ್ಲಿನ ಹೊಳಪನ್ನು ಮತ್ತಷ್ಟು ಪ್ರಖರವಾಗಿಸಿದೆ.

ತಾವು ಕಂಡ ಬೆಳಕನ್ನು ತನ್ನಂತೆಯೇ ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳಿಗೆ ಹಂಚುವ ಕಾರ್ಯದಲ್ಲಿ ತೊಡಗಿದ್ದಾರೆ ಅಂಗವಿಕಲ ಕ್ರೀಡಾಪಟು ಎಂ. ಪ್ರಭುಸ್ವಾಮಿ.

ಆಸಕ್ತಿ ಮೂಡಿಸಿದ ಓಟ: ಚಾಮರಾಜನಗರ ತಾಲ್ಲೂಕು ಮೇಲಾಜಿಪುರದವರಾದ ಪ್ರಭುಸ್ವಾಮಿ, ಬಾಲ್ಯದಲ್ಲಿ ಅಪಘಾತದಿಂದ ಕಾಲು ಕಳೆದುಕೊಂಡವರು. ಆದರೆ ಅಂಗವಿಕಲತೆ ಅವರ ಸಾಧನೆಗೆ ಅಡ್ಡಿ ಮಾಡಲಿಲ್ಲ.

ಕೃತಕ ಕಾಲು ಜೋಡಿಸಿಕೊಂಡ ಅವರು ತನ್ನ ಓರಗೆಯ ಹುಡುಗರಂತೆಯೇ ಆಡಿ ಬೆಳೆದವರು. ಈಗಲೂ ಕೃತಕ ಕಾಲು ಕಳಚಿ ಒಂಟಿ ಕಾಲಿನಲ್ಲಿಯೇ ಗಂಟೆಗಟ್ಟಲೆ ನಿಂತು ಆಡಬಲ್ಲ ಛಾತಿ ಅವರಿಗಿದೆ.

ಮೈಸೂರಿನಲ್ಲಿ ಕನ್ನಡ ವಿಷಯದಲ್ಲಿ ಎಂ.ಎ., ಮತ್ತು ಬಿ.ಎಡ್‌ ಪದವಿ ಮುಗಿಸಿರುವ ಅವರಲ್ಲಿ ಕ್ರೀಡೆಯತ್ತ ಆಸಕ್ತಿ ಮೂಡಿಸಿದ್ದು, 2003ರಲ್ಲಿ ಪದವಿ ಓದುವಾಗ ರೋಟರಿ ಕ್ಲಬ್‌ನಿಂದ ನಡೆದ ಅಂಗವಿಕಲರಿಗಾಗಿ ಓಟದ ಸ್ಪರ್ಧೆ.

ಕಂಕುಳಿಗೆ ಉರುಗೋಲು ಆನಿಸಿಕೊಂಡು ಓಡಿ ಮೊದಲ ಸ್ಥಾನ ಪಡೆದ ಅವರಿಗೆ ಈ ಕ್ಷೇತ್ರದಲ್ಲಿಯೇ ಸಾಧನೆ ಮಾಡಬಹುದಲ್ಲ ಎನಿಸಿತು. ವಿವಿಧ ಸಂಘ ಸಂಸ್ಥೆಗಳಿಂದ ನಡೆದ ಅಥ್ಲೆಟಿಕ್‌ಗಳಲ್ಲಿ ನಿರಂತರ ಭಾಗವಹಿಸಿ ಬಹುಮಾನಗಳನ್ನು ಗೆದ್ದರು.

ಓಟದಿಂದ ಶುರು ವಾಗಿದ್ದು, ಜಾವಲಿನ್‌, ಶಾಟ್‌ಪಟ್‌, ಸಿಟ್ಟಿಂಗ್ ವಾಲಿಬಾಲ್‌ ಮುಂತಾದ ಕ್ರೀಡೆಗಳಿಗೂ ಹೊರಳಿತು. ಹೈದರಾಬಾದ್, ದೆಹಲಿ, ರಾಜಸ್ತಾನಗಳಲ್ಲಿ ನಡೆದ ರಾಷ್ಟ್ರಮಟ್ಟದ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಹಲವು ಪದಕಗಳಿಗೆ ಕೊರಳೊಡ್ಡಿದರು.

ನ್ಯೂಜಿಲೆಂಡ್‌ನಲ್ಲಿ ಚಿನ್ನ: ಆಕ್ಲೆಂಡ್‌ನಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಗೇಮ್ಸ್‌ ಅಸೋಸಿಯೇಷನ್‌ ಆಯೋಜಿಸಿದ ವರ್ಲ್ಡ್‌ ಮಾಸ್ಟರ್ಸ್‌ ಗೇಮ್ಸ್‌ನ ಜಾವಲಿನ್‌ ಮತ್ತು ಶಾಟ್‌ಪಟ್‌ ಸ್ಪರ್ಧೆಗಳಲ್ಲಿ ಚಿನ್ನ ಜಯಿಸಿದ ಹೆಮ್ಮೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ನ್ಯೂಜಿಲೆಂಡ್‌ಗೆ ತೆರಳಲು ಹಣವಿಲ್ಲದೆ ಪರದಾಡಿದ ಅವರು ಜನಪ್ರತಿನಿಧಿಗಳು, ಅನೇಕ ಇಲಾಖೆಗಳ ಬಳಿ ಅಲೆದಾಡಿ ಕಂಗೆಟ್ಟಿದ್ದರು. ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು ಮತ್ತು ಅನೇಕರ ಸಹಾಯದಿಂದ ವಿಮಾನದ ಟಿಕೆಟ್‌ ಹಾಗೂ ಇತರೆ ಖರ್ಚು ವೆಚ್ಚದ ಹಣ ಸಂಗ್ರಹವಾಯಿತು ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

ಸಮಾಜ ಸೇವೆಯ ಮಂತ್ರ: ಬುದ್ಧಿಮಾಂದ್ಯ ಮಕ್ಕಳಿಗೆ ಆಸರೆ ನೀಡುವ ಜತೆಗೆ, ಅವರನ್ನು ಮುಖ್ಯವಾಹಿನಿಯಲ್ಲಿ ತೊಡಗಿಸುವಂತೆ ಮಾಡುವ ಮಹದಾಸೆ ಪ್ರಭುಸ್ವಾಮಿ ಅವರದು.

ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ್ದರೂ ಅವುಗಳಿಂದ ತೃಪ್ತಿ ಕಾಣದೆ, ತನ್ನಂತೆ ನೋವನ್ನನು ಭವಿಸುತ್ತಿರುವ ಸಮುದಾಯದ ಜನರಿಗಾಗಿ ಕೆಲಸ ಮಾಡಬೇಕು ಎಂಬ ಆಶಯದೊಂದಿಗೆ 2013ರಲ್ಲಿ ಮೈಸೂರಿನಲ್ಲಿ ಅಭ್ಯುದಯ ಸೇವಾ ಸಂಸ್ಥೆ ಆರಂಭಿಸಿದರು. ಪ್ರಸ್ತುತ 18 ಬುದ್ಧಿಮಾಂದ್ಯ ಮಕ್ಕಳು ಇಲ್ಲಿದ್ದಾರೆ. ಇದರ ಶಾಖೆಯನ್ನು ಚಾಮರಾಜನಗರದಲ್ಲಿಯೂ ತೆರೆಯುವ ಗುರಿ ಇದೆ ಎಂದು ಅವರು ತಿಳಿಸಿದರು.

ಸರ್ಕಾರದ ಎಲ್ಲ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಅಂಗವಿಕಲರಿಗೆ ದೊರಕಬೇಕಾದ ಶೇ 3ರ ಮೀಸಲಾತಿಯನ್ನು ದೊರಕಿಸಿಕೊಡುವ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜೀವನೋಪಾಯಕ್ಕಾಗಿ ಮೈಸೂರು ರೈಲು ನಿಲ್ದಾಣದಲ್ಲಿ ಚಿಕ್ಕ ಅಂಗಡಿ ಇಟ್ಟುಕೊಂಡಿರುವ ಅವರು, ಕೆಲಕಾಲ ರಂಗಾಯಣದಲ್ಲಿ ಬಣ್ಣಹಚ್ಚಿದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.