ಗುರುವಾರ , ಫೆಬ್ರವರಿ 25, 2021
26 °C
ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ನಿರ್ಬಂಧ

ವಲಸೆ ನಿಷೇಧ ನೀತಿ:‘ಸುಪ್ರೀಂ’ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ವಲಸೆ ನಿಷೇಧ ನೀತಿ:‘ಸುಪ್ರೀಂ’ ಒಪ್ಪಿಗೆ

ವಾಷಿಂಗ್ಟನ್: ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸುವ ವಲಸೆ ನೀತಿಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದೆ.

ಇದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಹತ್ವದ ನಿರ್ಣಯಕ್ಕೆ ಜಯ ದೊರೆತಂತಾಗಿದೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಟ್ರಂಪ್‌ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದರು.

ಸುಪ್ರಿಂಕೋರ್ಟ್‌ ನೀಡಿರುವ ತೀರ್ಪಿನಿಂದಾಗಿ ಇರಾನ್, ಲಿಬಿಯಾ, ಸಿರಿಯಾ, ಯೆಮನ್, ಸೊಮಾಲಿಯಾ ಹಾಗೂ ಛಡ್ ರಾಷ್ಟ್ರಗಳ ಪ್ರಜೆಗಳಿಗೆ ವಿಧಿಸಿರುವ ನಿರ್ಬಂಧವು ಜಾರಿಯಾಗಲಿದೆ. ಜತೆಗೆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ.

ಕಾನೂನಾತ್ಮಕ ಸವಾಲುಗಳ ನಡುವೆಯೂ ವಲಸೆ ನಿಷೇಧ ನಿಯಮವನ್ನು ತಕ್ಷಣವೇ ಪೂರ್ಣವಾಗಿ ಜಾರಿಗೆ ತರಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಆದೇಶ ಕುರಿತು ಸುಪ್ರೀಂಕೋರ್ಟ್ ಯಾವುದೇ ಕಾರಣ ನೀಡಿಲ್ಲ. ಆದರೆ ಕೆಳಹಂತದ ನ್ಯಾಯಾಲಯಗಳು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಪುನರ್‌ಪರಿಶೀಲಿಸುವ ನಿರೀಕ್ಷೆ ಇದೆ ಎಂದು ಹೇಳಿದೆ.

‘ಸುಪ್ರಿಂಕೋರ್ಟ್‌ನ ಈ ತೀರ್ಪಿನಿಂದ ಆಶ್ಚರ್ಯವಾಗಿಲ್ಲ’ ಎಂದು ಶ್ವೇತಭವನದ ವಕ್ತಾರ ಹೊಗಾನ್‌ ಗಿಡ್ಲೆ ‍ಪ್ರತಿಕ್ರಿಯಿಸಿದ್ದಾರೆ. ವಲಸೆ ನಿಷೇಧ ನೀತಿಯನ್ನು ಪ್ರಶ್ನಿಸಿ ಹವಾಯಿ ಮತ್ತು ಅಮೆರಿಕನ್‌ ಸಿವಿಲ್‌ ಲಿಬರ್ಟಿಸ್‌ ಯೂನಿಯನ್‌ ನ್ಯಾಯಾಲಯದ ಮೊರೆ ಹೋಗಿದ್ದವು. ಇಂತಹ ನೀತಿಯಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮತ್ತು ತಾರತಮ್ಯ ಮಾಡಿದಂತಾಗುತ್ತದೆ ಎಂದು ಪ್ರತಿಪಾದಿಸಿದ್ದವು.

‘ಮುಸ್ಲಿಮರ ಪ್ರವೇಶ ನಿಷೇಧಿಸುವುದರಿಂದ ಅಮೆರಿಕ ಸುರಕ್ಷಿತವಾಗಿ ಉಳಿಯುತ್ತದೆ ಎನ್ನುವ ಭರವಸೆ ಇಲ್ಲ. ವರ್ಣ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ವಲಸೆ ನಿಷೇಧ ನೀತಿ ಸಹಿಸುವುದಿಲ್ಲ. ನಾವು ಟ್ರಂಪ್‌ ಅವರ ಯೋಜನೆ ವಿರುದ್ಧ ಹೋರಾಟ ಮುಂದುವರಿಸುತ್ತೇವೆ’ ಎಂದು ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.