6

ಮನೆ ಹಂಚಿಕೆ: ಗುಡಿಸಲು ನಿವಾಸಿಗಳ ಆಗ್ರಹ

Published:
Updated:
ಮನೆ ಹಂಚಿಕೆ: ಗುಡಿಸಲು ನಿವಾಸಿಗಳ ಆಗ್ರಹ

ಬೆಳಗಾವಿ: ತಮಗೆ ತ್ವರಿತವಾಗಿ ಮನೆ ಹಂಚಿಕೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಶ್ರೀನಗರ ಜೋಡಪಪಟ್ಟಿ (ಗುಡಿಸಲು) ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಶ್ರೀನಗರ ಉದ್ಯಾನದ ಸಮೀಪದಲ್ಲಿ 30 ವರ್ಷಗಳಿಂದಲೂ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. 150 ಕುಟುಂಬಗಳು ಇಲ್ಲಿವೆ. ಮನೆ ಕಟ್ಟಿಸಿಕೊಡುವಂತೆ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ನಮ್ಮ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, 2014ರಲ್ಲಿ ರಾಜೀವ್‌ಗಾಂಧಿ ಆವಾಸ್‌ ಯೋಜನೆಯಡಿ ‘ಜಿ ಪ್ಲಸ್‌ 3’ ಮಾದರಿಯ ಮನೆಗಳನ್ನು ನಿರ್ಮಿಸಿದೆ. ಆದರೆ, 90 ಮನೆಗಳನ್ನು ಮಾತ್ರವೇ ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಇದರಿಂದ, ಉಳಿದವರಿಗೆ ಅನ್ಯಾಯವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಶ್ರೀನಗರದಲ್ಲಿ ರಾಜೀವ್‌ಗಾಂಧಿ ಆವಾಸ್‌ ಯೋಜನೆಯಡಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಮಾದರಿಯ ಮನೆಗಳನ್ನು ಹಂಚಬೇಕು. ಈ ಸಂಬಂಧ, ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ, ‘ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಮುಖಂಡರಾದ ಹನುಮಂತ ಟಿಕೋಳ ಹಾಗೂ ಮಲ್ಲೇಶ ಹ. ಹೆಳವರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮದ್ಯದಂಗಡಿ ಪರವಾನಗಿ ರದ್ದುಪಡಿಸಿ: ‌ಇಲ್ಲಿನ ಎಪಿಎಂಸಿ ರಸ್ತೆಯ ಮಾರ್ಕಂಡೇಯ ನಗರದಲ್ಲಿ ಮದ್ಯದಂಗಡಿ ಆರಂಭಿಸಲು ನೀಡಲಾಗಿರುವ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ, ಅಲ್ಲಿನ ನಿವಾಸಿಗಳು ಸಿದ್ದಾಯಿ ಮಹಿಳಾ ಸಂಘದಿಂದ ಇಲ್ಲಿನ ಕೊಲ್ಲಾಪುರ ವೃತ್ತ ಸಮೀಪದಲ್ಲಿರುವ ಅಬಕಾರಿ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಬಡಾವಣೆಯಲ್ಲಿ ಆರಂಭವಾಗಿದ್ದ ಮದ್ಯದಂಗಡಿಯನ್ನು ಒಂದೂವರೆ ವರ್ಷದ ಹಿಂದೆ ಬಂದ್‌ ಮಾಡಿಸಲಾಗಿತ್ತು. ಆದರೆ, ಈಗ ಅದೇ ಜಾಗದಲ್ಲಿ ಎರಡು ತಿಂಗಳಿಂದ ಮದ್ಯದಂಗಡಿ ಆರಂಭವಾಗಿದೆ. ಮಾಂಸಾಹಾರಿ ಹೋಟೆಲ್‌ ಹಸೆರಿನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಹಳ ತೊಂದರೆಯಾಗಿದೆ. ಅಲ್ಲದೇ, ಅಶ್ವಿನಿ ವೈನ್ಸ್‌ ಹೆಸರಿನಲ್ಲಿ ಮತ್ತೊಂದು ಮದ್ಯದಂಗಡಿ ಪ್ರಾರಂಭವಾಗುತ್ತಿರುವ ವಿಷಯವೂ ಗೊತ್ತಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಮಂಡಳದ ಅಧ್ಯಕ್ಷೆ ಸುಗಂಧಾ ಭರಮಪಾಟೀಲ ನೇತೃತ್ವ ವಹಿಸಿದ್ದರು.

ಅನೈತಿಕ ಚಟುವಟಿಕೆಗಳನ್ನು ತಪ್ಪಿಸಿ: ನಗರದ ಬಿ.ಎಸ್. ಯಡಿಯೂರಪ್ಪ ಮಾರ್ಗ ಸೇರಿದಂತೆ ಹೊರವಲಯದಲ್ಲಿ ರಾತ್ರಿ ವೇಳೆ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಹೊರವಲಯದ ರಸ್ತೆಗಳ ಬದಿಯಲ್ಲಿ ಗುಂಪು ಸೇರುವ ಕೆಲವರು ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಪಾರ್ಟಿ ಮಾಡುತ್ತಾರೆ. ದ್ವಿಚಕ್ರವಾಹನ ಹಾಗೂ ಕಾರುಗಳನ್ನು ನಿಲ್ಲಿಸಿಕೊಂಡು ಮದ್ಯಸೇವಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ಆ ರಸ್ತೆಯಲ್ಲಿ ಓಡಾಡುವವರು ಮುಜುಗರ ಅನುಭವಿಸುವಂತಾಗಿದೆ. ಪೊಲೀಸರು ಗಸ್ತು ಹೆಚ್ಚಿಸಿ, ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು. ರಾಜ್ಯಾಧ್ಯಕ್ಷ ರಾಮ ಹಸಣ್ಣವರ ಹಾಗೂ ಉಪಾಧ್ಯಕ್ಷ ವಿಶಾಲ ದೌಲತಕರ ನೇತೃತ್ವ ವಹಿಸಿದ್ದರು.

ಶಾಸಕ ಸಂಜಯ ನೇತೃತ್ವದಲ್ಲಿ ಮನವಿ

‘ತಾಲ್ಲೂಕಿನ ಶಿಂದೊಳ್ಳಿ– ಬಸರಿಕಟ್ಟಿ ರಸ್ತೆ ವಿಸ್ತರಣೆ ಕಾಮಗಾರಿ ಪ್ರಸ್ತಾವವನ್ನು ಕೈಬಿಡಬೇಕು’ ಎಂದು ರೈತರು ಕ್ಷೇತ್ರದ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ರಸ್ತೆ ವಿಸ್ತರಣೆ ಮಾಡುವುದರಿಂದ ನಮ್ಮ ಜಮೀನು ಹಾಳಾಗುತ್ತದೆ. ನಮಗೆ ಕಡಿಮೆ ಜಮೀನಿದ್ದು, ಅದರಲ್ಲೇ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಹಿಂದೆ ರಸ್ತೆ ನಿರ್ಮಿಸಿದಾಗಲೂ ಕೊಂಚ ಜಮೀನು ಕಳೆದುಕೊಂಡಿದ್ದೆವು. ಆದರೆ, ಯಾವುದೇ ಪರಿಹಾರವನ್ನೂ ನೀಡಿಲ್ಲ. ಈಗ ರಸ್ತೆ ವಿಸ್ತರಣೆಗಾಗಿ ನಮ್ಮನ್ನು ಬೀದಿಗೆ ತಳ್ಳಬಾರದು’ ಎಂದು ರೈತರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry