7
ಒಂದು ದೇಶ ಒಂದು ಕಾನೂನು ಜಾರಿ ಸುಲಭವಲ್ಲ: ಕಾನೂನು ಆಯೋಗ

ಏಕರೂಪ ಸಂಹಿತೆ ಅನುಮಾನ

Published:
Updated:
ಏಕರೂಪ ಸಂಹಿತೆ ಅನುಮಾನ

ನವದೆಹಲಿ: ದೇಶದಲ್ಲಿ ಭಾರಿ ಚರ್ಚೆಗೆ ಒಳಗಾದ ಏಕರೂಪ ನಾಗರಿಕ ಸಂಹಿತೆಯ ಜಾರಿ ಅಸಾಧ್ಯ ಎಂದು ಕಾನೂನು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿ.ಎಸ್‌. ಚೌಹಾಣ್‌ ಪರೋಕ್ಷವಾಗಿ ಹೇಳಿದ್ದಾರೆ.

ಸಮಗ್ರವಾದ ಏಕರೂಪ ನಾಗರಿಕ ಸಂಹಿತೆ ರೂಪಿಸಲು ಸಾಧ್ಯವಾಗದೇ ಇದ್ದರೆ ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿ ಮಾಡಲು ಧರ್ಮವಾರು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಚೌಹಾಣ್‌ ಹೇಳಿದ್ದಾರೆ.

ವಿವಿಧ ಧರ್ಮ, ಸಮುದಾಯ ಮತ್ತು ಪ್ರದೇಶಗಳಿಗೆ ಸಂವಿಧಾನ ಕೆಲವು ವಿಶೇಷ ಅವಕಾಶಗಳನ್ನು ನೀಡಿದೆ. ಈ ಅವಕಾಶಗಳನ್ನು ಉಲ್ಲಂಘಿಸಿ ನಾಗರಿಕ ಸಂಹಿತೆಯನ್ನು ರೂಪಿಸುವುದು ಎಂದೂ ಅವರು ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಕ್ಕೆ ಶಿಫಾರಸು ಮಾಡುವ ಯಾವುದೇ ಅಂಶ ಸಂವಿಧಾನದ ಚೌಕಟ್ಟಿನ ಒಳಗೇ ಇರುತ್ತದೆ. ಯಾವುದೇ ಧರ್ಮವನ್ನು ಅನುಸರಿಸುವ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕು ಉಲ್ಲಂಘನೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಬಗ್ಗೆ ವಿಚಾರ ಮಾಡುವಾಗ ಸಂವಿಧಾನದ ಆರನೇ ಪರಿಚ್ಛೇದವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ಪರಿಚ್ಛೇದವು ಈಶಾನ್ಯ ರಾಜ್ಯಗಳ ಜನರಿಗೆ ಕೆಲವು ವಿನಾಯಿತಿಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ ನಿಲುವು

1985: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಸಂಸತ್ತಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತು. ಶಾಬಾನು ಪ್ರಕರಣದ ಬಳಿಕ ಈ ಸೂಚನೆ ನೀಡಲಾಯಿತು. ಭಾರತೀಯ ದಂಡ ಸಂಹಿತೆಯ 125ನೇ ಸೆಕ್ಷನ್‌ ಪ್ರಕಾರ ಮುಸ್ಲಿಂ ಮಹಿಳೆಗೆ ಗಂಡನಿಂದ ಜೀವನಾಂಶ ಪಡೆಯುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು

2015: ಏಕರೂಪ ನಾಗರಿಕ ಸಂಹಿತೆಯ ಅಗತ್ಯ ಇದೆ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು. ‘ವಿವಿಧ ವಿಚಾರಗಳನ್ನು ತಮ್ಮ ವೈಯಕ್ತಿಕ ಕಾನೂನು ಅಡಿಯಲ್ಲಿಯೇ ನಿರ್ಧರಿಸಬೇಕು ಎಂದು ಬೇರೆ ಬೇರೆ ಧರ್ಮಕ್ಕೆ ಸೇರಿದವರು ಹೇಳಬಹುದು. ಅದು ಸ್ವೀಕಾರಾರ್ಹವಲ್ಲ’ ಎಂದು ಹೇಳಿತು

2016 ಅಕ್ಟೋಬರ್‌: ತ್ರಿವಳಿ ತಲಾಖ್‌ ವಿಚಾರದಲ್ಲಿ ಅಭಿಪ್ರಾಯ ತಿಳಿಸಲು ಕೇಂದ್ರಕ್ಕೆ ನಾಲ್ಕು ವಾರಗಳ ಅವಕಾಶ ನೀಡಿತು

2017 ಆಗಸ್ಟ್‌: ತ್ರಿವಳಿ ತಲಾಖ್‌ಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಸಂವಿಧಾನ ಪೀಠ ತೀರ್ಪು ಕೊಟ್ಟಿತು

45 ಸಾವಿರ ಸಲಹೆಗಳು

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಜನರು ಸಲಹೆಗಳನ್ನು ನೀಡುವಂತೆ ಕಳೆದ ಅಕ್ಟೋಬರ್‌ನಲ್ಲಿ ಕಾನೂನು ಆಯೋಗವು ಕೋರಿತ್ತು. ವಿವಿಧ ಕಾನೂನುಗಳನ್ನು ರದ್ದು ಮಾಡುವುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶ ಅಲ್ಲ, ಬದಲಿಗೆ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವುದು ಇದರ ಗುರಿ ಎಂದು ಆಯೋಗ ಹೇಳಿತ್ತು. ಆಯೋಗಕ್ಕೆ 45 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಜನವರಿಯಿಂದ ಈ ಸಲಹೆಗಳನ್ನು ವಿಶ್ಲೇಷಿಸಲಾಗುವುದು ಎಂದು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.

ಕೌಟುಂಬಿಕ ಕಾನೂನಿನ ಸುಧಾರಣೆಯಲ್ಲಿ ಯಾವುದೇ ಒಂದು ಪ್ರಭಾವಿ ವರ್ಗ, ಗುಂಪು ಅಥವಾ ಸಮುದಾಯದ ಪ್ರಾಬಲ್ಯ ಇರುವುದಿಲ್ಲ. ಶೋಷಣೆಗೆ ಒಳಗಾಗುತ್ತಿರುವ ದುರ್ಬಲ ವರ್ಗಗಳಿಗೆ ರಕ್ಷಣೆ ಕೊಡುವುದು ಮತ್ತು ಸಾಂಸ್ಕೃತಿಕ ಪದ್ಧತಿಗಳ ನಡುವೆ ಸಾಮರಸ್ಯ ಸಾಧಿಸುವುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶ ಎಂದು ಆಯೋಗ ಹೇಳಿತ್ತು.

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಭಾರತದಲ್ಲಿರುವ ವಿವಿಧ ಧರ್ಮಗಳಿಗೆ ಆಯಾ ಧರ್ಮಗಳ ಧರ್ಮಗ್ರಂಥಗಳು ಮತ್ತು ಚಾಲ್ತಿಯಲ್ಲಿರುವ ಆಚರಣೆಗಳ ಆಧಾರದಲ್ಲಿ ರೂಪಿಸಲಾದ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ.  ಉದಾಹರಣೆಗೆ ಹಿಂದೂ ವೈಯಕ್ತಿಕ ಕಾನೂನು, ಮುಸ್ಲಿಂ ವೈಯಕ್ತಿಕ ಕಾನೂನು ಇತ್ಯಾದಿ. ಈ ವೈಯಕ್ತಿಕ ಕಾನೂನುಗಳನ್ನು ರದ್ದುಗೊಳಿಸಿ, ದೇಶದ ಎಲ್ಲ ಜನರಿಗೂ ಅನ್ವಯವಾಗುವ ಒಂದೇ ರೀತಿಯ ನಿಯಮಗಳನ್ನು ಜಾರಿಗೆ ತರುವುದು ಏಕರೂಪ ನಾಗರಿಕ ಸಂಹಿತೆ. ಇದು ಜಾರಿಯಾದರೆ, ದೇಶದ ಎಲ್ಲ ಜನರ ವಿವಾಹ, ವಿಚ್ಛೇದನ, ಆಸ್ತಿ ಉತ್ತರಾಧಿಕಾರ ವಿಚಾರಗಳಿಗೆ ಒಂದೇ ನಿಯಮ ಅನ್ವಯವಾಗುತ್ತದೆ.

ಹಿಂಜರಿಕೆಗೆ ಮುಖ್ಯ ಕಾರಣ

ದೇಶದ ವಿವಿಧ ವರ್ಗ ಮತ್ತು ಸಮುದಾಯಗಳಿಗೆ ಸಂವಿಧಾನವೇ ಕೆಲವು ವಿನಾಯಿತಿಗಳನ್ನು ನೀಡಿದೆ. ಉದಾಹರಣೆಗೆ ಈಶಾನ್ಯ ಭಾರತದ ಒಂದು ಬುಡಕಟ್ಟಿನಲ್ಲಿ ಕಿರಿಯ ಮಗಳಿಗೆ ಮಾತ್ರ ಕುಟುಂಬದ ಆಸ್ತಿಯಲ್ಲಿ ಹಕ್ಕು ದೊರೆಯುತ್ತದೆ. ಇದಕ್ಕೆ ಸಂವಿಧಾನದ ರಕ್ಷಣೆ ಇದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಸಂವಿಧಾನದ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಕಾನೂನು ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಚೌಹಾಣ್‌ ಹೇಳಿದ್ದಾರೆ.

ಬಿಜೆಪಿಯ ಕಾರ್ಯಸೂಚಿ

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂಬುದು ಬಹಳ ಹಿಂದಿನಿಂದಲೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ವಿಚಾರ. ‘ಒಂದು ದೇಶಕ್ಕೆ ಒಂದು ಕಾನೂನು’ ಜಾರಿ ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಕಾನೂನು ಆಯೋಗಕ್ಕೆ ಕೇಂದ್ರ ಸರ್ಕಾರ ಕಳೆದ ಜೂನ್‌ನಲ್ಲಿ ಸೂಚಿಸಿತ್ತು. ಮುಸ್ಲಿಂ ಸಮುದಾಯ ಅನುಸರಿಸುತ್ತಿದ್ದ ತ್ರಿವಳಿ ತಲಾಖ್‌ ಪದ್ಧತಿಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ರದ್ದುಪಡಿಸಿದ ನಂತರ ಏಕರೂಪ ನಾಗರಿಕ ಸಂಹಿತೆ ಬಗೆಗಿನ ಚರ್ಚೆ ತೀವ್ರಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry