ಭಾನುವಾರ, ಮಾರ್ಚ್ 7, 2021
27 °C
ಉದ್ಯೋಗಕ್ಕಾಗಿ ನಗರ ಪ್ರದೇಶಗಳತ್ತ ಗುಳೆ: ಬಿಕೊ ಎನ್ನುತ್ತಿರುವ ತಾಂಡಾ

ಹಾಲಭಾವಿ ತಾಂಡಾದ ಮನೆಗಳಿಗೆ ಬೀಗ

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

ಹಾಲಭಾವಿ ತಾಂಡಾದ ಮನೆಗಳಿಗೆ ಬೀಗ

ಲಿಂಗಸುಗೂರು: ಕೃಷಿ ಕೂಲಿಕಾರರು ಉದ್ಯೋಗ ಖಾತ್ರಿಯಲ್ಲಿ ಸಮರ್ಪಕ ಕೆಲಸ ಸಿಗದೆ ಬೆಂಗಳೂರು, ಮಂಗಳೂರು, ಪುಣೆಗಳಿಗೆ ಗುಳೆ ಹೊಗಿದ್ದು, ತಾಲ್ಲೂಕಿನ ಹಾಲಭಾವಿ ತಾಂಡಾದ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ.

ತಾಲ್ಲೂಕು ಕೇಂದ್ರದಿಂದ 16 ಕಿ.ಮೀ ಅಂತರದಲ್ಲಿರುವ ಹಾಲಭಾವಿ ತಾಂಡಾದಲ್ಲಿ 280 ಮನೆಗಳಿವೆ. ಗೊರೆಬಾಳ ಗ್ರಾಮ ಪಂಚಾಯಿತಿಗೆ ಇಲ್ಲಿಂದ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಜನಸಂಖ್ಯೆ ಅಂದಾಜು 1,700. ಆದರೆ, ತಾಂಡಾದಲ್ಲಿ ಸಧ್ಯ 300ರಿಂದ 350 ಜನ ಇದ್ದಾರೆ. ಉಳಿದವರು ಕೆಲಸ ಹುಡುಕಿಕೊಂಡು ಗುಳೆ ಹೋಗಿದ್ದಾರೆ.

ಮುಂಬೈ, ಪುಣೆ ನಗರಗಳಲ್ಲಿ ವರ್ಷ ಪೂರ್ತಿ ಕೆಲಸ ಸಿಗುತ್ತದೆ. ಹೆಚ್ಚಿನ ಪ್ರಮಾಣದ ಕೂಲಿ ನೀಡುತ್ತಾರೆ. ಉದ್ಯೋಗ ಖಾತ್ರಿಯಲ್ಲಿ ನಿಗದಿತ ಕೂಲಿ ಜತೆಗೆ ಕೇವಲ 100 ದಿನ ಕೆಲಸ ನೀಡುತ್ತಾರೆ. ವರ್ಷದ ಉಳಿದ ದಿನಗಳಲ್ಲಿ ಕೆಲಸ ಸಿಗಲ್ಲ. ಹೀಗಾಗಿ ತಾಂಡಾದ ಜನ ಮನೆಗೆ ಬೀಗ ಹಾಕಿಕೊಂಡು ಗುಳೆ ಹೋಗುವುದು ಸಾಮಾನ್ಯ ಎಂದು ಮೌನೇಶ ರಾಠೋಡ ಹೇಳುತ್ತಾರೆ.

‘ತಾಂಡಾದ 280 ಮನೆಗಳ ಪೈಕಿ 150ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಲಾಗಿದೆ. ದನಕರುಗಳನ್ನು ಅಕ್ಕಪಕ್ಕದ, ಸಂಬಂಧಿಗಳು ಜೋಪಾನ ಮಾಡುತ್ತಾರೆ. ಹೀಗಾಗಿಯೆ ತಾಂಡಾದಲ್ಲಿ ಶೈಕ್ಷಣಿಕ ಮಟ್ಟ ಕ್ಷೀಣಿಸುತ್ತ ಸಾಗಿದೆ. ಸರ್ಕಾರ ನಿರಂತರ ಉದ್ಯೋಗ ನೀಡುವ ಜತೆಗೆ ವಾರಕ್ಕೊಮ್ಮೆ ಕೂಲಿ ಹಣ ಪಾವತಿಸಿದರೆ ಗುಳೆ ತಪ್ಪಲಿದೆ’ ಎನ್ನುತ್ತಾರೆ ತಾಂಡಾ ಯುವಕ ಹನುಮಂತ ಚವಾಣ.

‘ತಾಂಡಾಕ್ಕೆ ಯರಗುಂಟಿ ಕ್ರಾಸ್‌ದಿಂದ 2 ಕಿ.ಮೀ ಸಂಪರ್ಕ ರಸ್ತೆ ವ್ಯವಸ್ಥಿತವಾಗಿ ಮಾಡಿಲ್ಲ. ತಾಂಡಾದಲ್ಲಿ ಕರೆಂಟ್‌ ಇದ್ದರೆ ಮಾತ್ರ ನೀರು ಪೂರೈಕೆ ಆಗುತ್ತದೆ. ಇಂದಿಗೂ ಶುದ್ಧ ಹಾಗೂ ಸಮರ್ಪಕ ಕುಡಿವ ನೀರು ಪೂರೈಕೆ ಸೇರಿದಂತೆ ಸರ್ಕಾರದ ಯಾವೊಂದು ಯೋಜನೆಗಳು ಅನುಷ್ಠಾನಗೊಂಡಿಲ್ಲ. ಆಡಳಿತ ವ್ಯವಸ್ಥೆ ಮಲತಾಯಿ ಧೋರಣೆ ತೋರಿಸುತ್ತಿದೆ’ ಎಂದು ಕಸ್ತೂರೆಪ್ಪ, ದುರುಗಮ್ಮ ಅಳಲು ತೋಡಿಕೊಂಡರು.

‘ತಾಲ್ಲೂಕಿನ ಬಹುತೇಕ ಗ್ರಾಮ, ತಾಂಡಾ, ದೊಡ್ಡಿ ಪ್ರದೇಶಗಳ ಜನರು ವರ್ಷಪೂರ್ತಿ ಗುಳೆ ಹೋಗುವುದನ್ನು ಹವ್ಯಾಸ ಮಾಡಿಕೊಂಡಂತಾಗಿದೆ. ಉದ್ಯೋಗ ಖಾತ್ರಿ ಚುನಾಯಿತ ಪ್ರತಿನಿಧಿಗಳ ಹಿಂಬಾಲಕರ ಕಪಿಮುಷ್ಠಿಗೆ ಸಿಲುಕಿ ನಿಗದಿತವಾಗಿ ಕೆಲಸ ಸಿಗುತ್ತಿಲ್ಲ. ಕೆಲಸ ಮಾಡಿದವರಿಗೆ ಕೂಲಿ ಹಣ ಪಾವತಿಸುತ್ತಿಲ್ಲ ಹೀಗಾಗಿ ಬಹುತೇಕ ಜನರು ಗುಳೆ ಹೋಗುವುದು ವಾಡಿಕೆಯಾಗಿದೆ’ ಎಂದು ಕೂಲಿಕಾರ ಸಂಘದ ಅಧ್ಯಕ್ಷ ಗುಂಡಪ್ಪ ಹೇಳುತ್ತಾರೆ.

***

ತಾಂಡಾ ಜನತೆಗೆ ಕೃಷಿ ಭೂಮಿ ಕಡಿಮೆ ಇದೆ. ಇರುವ 1, 2 ಎಕರೆಯಲ್ಲಿ ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿ ಇದೆ. ಉದ್ಯೋಗ ಸಿಗದೆ ಗುಳೆ ಹೋಗಿದ್ದಾರೆ.

ಶಂಕರ್‌ ಚವಾಣ, ತಾಂಡಾದ ಹಿರಿಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.