ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಿಗೆ ಸಿ.ಎಂ ಆಹ್ವಾನಿಸಿದ್ದು ನಿಜ: ಸತೀಶ ಜಾರಕಿಹೊಳಿ

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬಿಜೆಪಿ ಶಾಸಕ ಉಮೇಶ ಕತ್ತಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ನೀಡಿರುವುದು ನಿಜ’ ಎಂದು ಶಾಸಕ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಇಲ್ಲಿ ಶುಕ್ರವಾರ ತಿಳಿಸಿದರು.

‘ಜನವರಿವರೆಗೆ ಕಾದು ನೋಡುತ್ತೇನೆ ಎಂದು ಕತ್ತಿ ತಿಳಿಸಿದ್ದಾರೆ. ಅವರು ಗೆಲ್ಲುವ ಅಭ್ಯರ್ಥಿ ಆಗಿರುವುದರಿಂದ ನಾವಾಗಿಯೇ ಕರೆದಿದ್ದೇವೆ. ಇದರಲ್ಲಿ ಮುಚ್ಚು ಮರೆ ಏನಿಲ್ಲ. ಪಕ್ಷ ಬಲಪಡಿಸಲು ಈ ಆಹ್ವಾನ ಕೊಟ್ಟಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಜನವರಿಗೆ ವಲಸೆ ಶುರುವಾಗ ಲಿದೆ. 10 ಮಂದಿ ಹಾಲಿ ಶಾಸಕರು ಮುಖ್ಯಮಂತ್ರಿ ಸಂಪರ್ಕದಲ್ಲಿದ್ದಾರೆ. ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದರು.

‘ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಅಸಮಾಧಾನವಿಲ್ಲ. ಪಕ್ಷ ಬಿಡುವ ಪ್ರಶ್ನೆಯೂ ಇಲ್ಲ. ಬಿಡುವಂತಿದ್ದರೆ, ನಾನ್ಯಾಕೆ ನನ್ನ ಖರ್ಚಿನಲ್ಲಿ ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಓಡಾಡುತ್ತಿದ್ದೆ? ಮೂಢನಂಬಿಕೆ ವಿರುದ್ಧದ ಕಾರ್ಯಕ್ರಮ ಇದ್ದುದ್ದರಿಂದ, ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಗೆ ಹೋಗಲಿಲ್ಲ. ಈ ವಿಷಯವನ್ನು ಮೊದಲೇ ಮುಖಂಡರಿಗೆ ತಿಳಿಸಿದ್ದೆ. ಅಷ್ಟಕ್ಕೇ ಅಸಮಾಧಾನ ಎಂದರೆ ಹೇಗೆ’ ಎಂದು ಕೇಳಿದರು.

‘ನನಗಿರುವ ಜನಬೆಂಬಲ ಕಂಡು ಸಹಿಸಲಾಗದವರು, ನನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಆಗಾಗ ಷಡ್ಯಂತ್ರ ಮಾಡುತ್ತಿರುತ್ತಾರೆ. ಏನೇನೋ ಬರೆಸುತ್ತಾರೆ. ಸಿದ್ದರಾಮಯ್ಯ ಹಾಗೂ ಪಕ್ಷದ ವಿರುದ್ಧ ಇದ್ದೇನೆ ಎಂದು ಬಿಂಬಿಸುತ್ತಾರೆ. ಸಚಿವನಿದ್ದಾಗಲೂ ಮುಖ್ಯಮಂತ್ರಿಯನ್ನು ಭೇಟಿ ಆಗುತ್ತಿದ್ದುದು ಕಡಿಮೆ. ಈಗಲೂ ಹಾಗೆಯೇ’ ಎಂದು ಪ್ರತಿಕ್ರಿಯಿಸಿದರು.

‘ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಓಡಾಡಿ ಜನಾಭಿಪ್ರಾಯ ಸಂಗ್ರಹಿಸುವಂತೆ ವಿಧಾನಪರಿಷತ್‌ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ ಅವರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಲ್ಲಿ ನೇಕಾರರ ಸಂಖ್ಯೆ ಜಾಸ್ತಿ ಇದೆ. ಲಕ್ಷ್ಮಿನಾರಾಯಣ ಅದೇ ಸಮಾಜದವರಾಗಿರುವುದರಿಂದ ಅಭ್ಯರ್ಥಿ ಮಾಡಬಹುದಾಗಿದೆ. ನಾವೂ ಜನರ ಅಭಿಪ್ರಾಯ ಕೇಳುತ್ತೇವೆ. ಅಂತಿಮ ನಿರ್ಧಾರ ಹೈಕಮಾಂಡ್‌ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.

‘ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಫಿರೋಜ್‌ ಸೇಠ್‌ ಗೆಲ್ಲುವ ಅಭ್ಯರ್ಥಿ. ಅವರ ಬದಲಿಗೆ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ಕಣಕ್ಕಿಳಿಸುವ ಪ್ರಸ್ತಾವ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT