ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಫೈನಲ್‌ ಕನಸು ಭಗ್ನ

ಧಾರಾಕಾರ ಮಳೆಯಲ್ಲಿ ಕೊಚ್ಚಿ ಹೋದ ನಿರೀಕ್ಷೆ
Last Updated 8 ಡಿಸೆಂಬರ್ 2017, 19:43 IST
ಅಕ್ಷರ ಗಾತ್ರ

ಭುವನೇಶ್ವರ: ಧಾರಾಕಾರ ಮಳೆಯಲ್ಲಿ ಕೆಚ್ಚೆದೆಯ ಆಟವಾಡಿದರೂ ಭಾರತದ ಕನಸು ನನಸಾಗಲಿಲ್ಲ. ವಿಶ್ವ ಕ್ರಮಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಮತ್ತು ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಅರ್ಜೆಂಟೀನಾ ತಂಡದವರು ಭಾರತದ ಭರವಸೆಗೆ ಪೆಟ್ಟು ನೀಡಿದರು. ಇದರಿಂದಾಗಿ ವಿಶ್ವ ಹಾಕಿ ಲೀಗ್ ಫೈನಲ್‌ನ ಪ್ರಶಸ್ತಿ ಸುತ್ತು ಪ್ರವೇಶಿಸುವ ನಿರೀಕ್ಷೆ ಕಮರಿ ಹೋಯಿತು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ 1–0 ಗೋಲಿನಿಂದ ಭಾರತವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿತು.

ಗುಂಪು ಹಂತದ ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲಾಗದ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಅಮೋಘ ಆಟದ ಮೂಲಕ ಗೆದ್ದಿತ್ತು. ಬೆಲ್ಜಿಯಂ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3–2ರಿಂದ ಮಣಿಸಿತ್ತು.

ಈ ಜಯ ಭಾರತದ ಭರವಸೆಯನ್ನು ಹೆಚ್ಚಿಸಿತ್ತು. ಅರ್ಜೆಂಟೀನಾ ಮೇಲೆ ಕೂಡ ಆಧಿಪತ್ಯ ಸ್ಥಾಪಿಸುವ ನಿರೀಕ್ಷೆ ಮೂಡಿಸಿತ್ತು. ಆದರೆ ಶುಕ್ರವಾರ ಭಾರತಕ್ಕೆ ಮಣಿಯಲು ‘ಚಾಂಪಿಯನ್‌’ ತಂಡ ಸಿದ್ಧವಿರಲಿಲ್ಲ. ಆದರೆ ನಿರೀಕ್ಷಿತ ಅಂತರದಲ್ಲಿ ಗೆಲ್ಲಲು ಆ ತಂಡಕ್ಕೂ ಸಾಧ್ಯವಾಗಲಿಲ್ಲ.

ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ಆಧಿಪತ್ಯ ಸ್ಥಾಪಿಸಿದ ಅರ್ಜೆಂಟೀನಾ ನಿರಂತರವಾಗಿ ಭಾರತದ ಗೋಲು ಪೆಟ್ಟಿಗೆ ಬಳಿ ಆಕ್ರಮಣ ನಡೆಸಿತು. 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟು ಭಾರತ ತಂಡ ಕೈಸುಟ್ಟುಕೊಂಡಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಅರ್ಜೆಂಟೀನಾದ ಗೊನ್ಸಾಲೊ ಪೆಲಟ್‌ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಸಹ ಆಟಗಾರ ಫ್ಲಿಕ್ ಮಾಡಿದ ಚೆಂಡನ್ನು ಅವರು ಭಾರತದ ರಕ್ಷಣಾ ವಿಭಾಗದ ಆಟಗಾರರು ಮತ್ತು ಗೋಲ್‌ಕೀಪರ್‌ ಅವರನ್ನು ವಂಚಿಸಿ ಮಿಂಚಿನ ವೇಗದಲ್ಲಿ ಗುರಿ ಮುಟ್ಟಿಸಿದರು. ನಂತರ ಭಾರತ ಪ್ರಬಲ ಪ್ರತಿರೋಧ ಒಡ್ಡಿ ಮೇಲುಗೈ ಸಾಧಿಸಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ.

10ರಂದು ನಡೆಯಲಿರುವ ಕಂಚಿನ ಪದಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಮತ್ತು ಜರ್ಮನಿ ನಡುವಿನ ಸೆಮಿಫೈನಲ್‌ನಲ್ಲಿ ಸೋತ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್‌ಗೆ ನಿರಾಸೆ: ಏಳು ಮತ್ತು ಎಂಟನೇ ಸ್ಥಾನಕ್ಕಾಗಿ ಸಂಜೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ನಿರಾಸೆಗೆ ಒಳಗಾಯಿತು. ಈ ತಂಡವನ್ನು ನೆದರ್ಲೆಂಡ್ಸ್ ತಂಡ 1–0ಯಿಂದ ಮಣಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಗೋಲು ಗಳಿಸಲು ನಡೆಸಿದ ಶ್ರಮಕ್ಕೆ ಎದುರಾಳಿ ತಂಡದಿಂದ ಭಾರಿ ಪ್ರತಿರೋಧ ಎದುರಾಯಿತು. ಆದರೆ ದ್ವಿತೀಯಾರ್ಧದಲ್ಲಿ ನೆದರ್ಲೆಂಡ್ಸ್ ಯಶಸ್ಸು ಗಳಿಸಿತು. 42ನೇ ನಿಮಿಷದಲ್ಲಿ ಮಿರ್ಕೊ ಪ್ರೂಜರ್‌ ಗಳಿಸಿದ ಗೋಲು ಈ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟಿತು.

ನಂತರ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದ ನೆದರ್ಲೆಂಡ್ಸ್‌ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡದೆ ಜಯದ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT