ಸೋಮವಾರ, ಮಾರ್ಚ್ 1, 2021
30 °C

‘ರಾಜಕಾರಣಿಗಳಿಗೆ ಶ್ರೀನಿವಾಸ ಮಲ್ಯ ಮಾದರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜಕಾರಣಿಗಳಿಗೆ ಶ್ರೀನಿವಾಸ ಮಲ್ಯ ಮಾದರಿ’

ಮಂಗಳೂರು: ಮುತ್ಸದ್ದಿ ರಾಜಕಾರಣಿ ಎಂದೇ ಖ್ಯಾತರಾಗಿದ್ದ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಅವರು, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಹಾನಗರ ಪಾಲಿಕೆ ಆಡಳಿತ ಮಂಡಳಿ, ನೌಕರರ ಸಂಘಗಳ ಆಶ್ರಯದಲ್ಲಿ ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಮಹಾನಗರ ಪಾಲಿಕೆ ದಿನಾಚರಣೆ ಹಾಗೂ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀನಿವಾಸ ಮಲ್ಯರಂತಹ ಅನೇಕರು ತ್ಯಾಗ ಮಾಡಿದ್ದರಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವತಂತ್ರ ಭಾರತದಲ್ಲಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ ಮಲ್ಯರು, ಈ ಭಾಗದಲ್ಲಿ ವಾಣಿಜ್ಯ ವಹಿವಾಟು, ರಫ್ತು ಉದ್ಯಮ, ಸೌಕರ್ಯಗಳನ್ನು ಒದಗಿಸುವ ಮೂಲಕ ಶ್ರೀಸಾಮಾನ್ಯನ ಬೆಳವಣಿಗೆಗೆ ಶ್ರಮಿಸಿದರು. ಅಂತಹ ಆದರ್ಶವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಲ್ಯರಿಗೆ ಸಮಸ್ಯೆಯನ್ನು ಪರಿಹರಿಸುವ ಚಾಣಾಕ್ಷತನ ಇತ್ತು. ದೇಶದ ಯಾವುದೇ ಭಾಗದಲ್ಲಿ ರಾಜಕೀಯ, ಪ್ರಾದೇಶಿಕ ಸಮಸ್ಯೆ ಎದು ರಾದಲ್ಲಿ, ಜವಾಹರಲಾಲ್‌ ನೆಹರೂ ಹಾಗೂ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಅವರು, ಶ್ರೀನಿವಾಸ್ ಮಲ್ಯರನ್ನೇ ಕಳುಹಿಸುತ್ತಿದ್ದರು. ಹಿಡಿದ ಕಾರ್ಯವನ್ನು ಬಿಡದೇ ಮಾಡುವಲ್ಲಿ ಅವರು ನಿಪುಣರು ಎಂದು ಬಣ್ಣಿಸಿದರು.

ಮುಂಬೈ- ಕನ್ಯಾಕುಮಾರಿ ಹೆದ್ದಾರಿ, ರೈಲು, ರೇಡಿಯೊ ಕೇಂದ್ರ, ವಿಮಾನ ನಿಲ್ದಾಣ, ಬಂದರು, ಗೊಬ್ಬರ ಕಾರ್ಖಾನೆ, ಈ ಕಾರ್ಯಕ್ರಮ ನಡೆಯುತ್ತಿರುವ ಪುರಭವನದ ನಿರ್ಮಾಣದಲ್ಲಿಯೂ ಮಲ್ಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

‘ನಮ್ಮ ತಂದೆ ರತ್ನವರ್ಮ ಹೆಗ್ಗಡೆ ಅವರು, ಶ್ರೀನಿವಾಸ ಮಲ್ಯರ ಬಗ್ಗೆ ನಮಗೆ ಹೇಳಿದ್ದರು. ಮಲ್ಯರು ಮಾತನಾಡದೇ ಕೆಲಸ ಸಾಧಿಸುವವರು. ರಾಜಕಾರಣಿಯಾಗಿ ಕೆಲಸ ಮಾಡು ವುದಕ್ಕಿಂತ ಕಾರ್ಯಕರ್ತರಾಗಿ ದುಡಿದವರು. ಸಂಸತ್ತಿನಲ್ಲಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಅವರು, ಅಭಿವೃದ್ಧಿಯ ವಿಷಯ ಬಂದಾಗ ಮುಂಚೂಣಿಯಲ್ಲಿ ಇರುತ್ತಿದ್ದರು’ ಎಂದು ಹೇಳಿದರು.

ಕ್ರೀಡೆ, ಸಂಸ್ಕೃತಿ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಾಧಕರಿಗೆ ಶ್ರೀನಿವಾಸ್‌ ಮಲ್ಯರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಅರ್ಥ ಪೂರ್ಣ ಕಾರ್ಯವಾಗಿದೆ ಎಂದರು.

ಮೇಯರ್‌ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ, ಉಪ ಮೇಯರ್‌ ರಜನೀಶ್ ಕಾಪಿಕಾಡ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ, ಅಬ್ದುಲ್ ರವೂಫ್, ಆಯುಕ್ತ ಎಂ. ಮುಹಮ್ಮದ್ ನಜೀರ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಬಾಲು ವೇದಿಕೆಯಲ್ಲಿದ್ದರು. ಪಾಲಿಕೆ ಸಚೇತಕ ಎಂ. ಶಶಿಧರ ಹೆಗ್ಡೆ ಸ್ವಾಗತಿಸಿದರು.

ಪ್ರಶಸ್ತಿಯ ಗೌರವ

ದಿ. ಉಳ್ಳಾಲ ಶ್ರೀನಿವಾಸ್‌ ಮಲ್ಯರ ಹೆಸರಿನಲ್ಲಿ ಪ್ರಥಮ ಬಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೀವಮಾನದ ಸಾಧನೆಗಾಗಿ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ ಅವರಿಗೆ ಗೌರವ ಪ್ರಶಸ್ತಿ, ಕಲಾ ಕ್ಷೇತ್ರದಲ್ಲಿ ಅಗರಿ ರಘುರಾಮ್‌ರಾವ್‌, ಕ್ರೀಡಾ ಕ್ಷೇತ್ರದಲ್ಲಿ ಪೂವಮ್ಮ, ಶಿಕ್ಷಣ ಕ್ಷೇತ್ರದಲ್ಲಿ ರೋಹಿಣಿ ಅವರಿಗೆ ಸ್ಮಾರಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಗೌರವ ಪ್ರಶಸ್ತಿಯು ₹1 ಲಕ್ಷ ನಗದು, ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದ್ದು, ಸ್ಮಾರಕ ಪ್ರಶಸ್ತಿಗಳು ತಲಾ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಗಮನ ಸೆಳೆದ ಮೇಯರ್‌

ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಯರ್‌ ಕವಿತಾ ಸನಿಲ್‌ ಅವರು, ಸ್ಥಾಯಿ ಸಮಿತಿ ಅಧ್ಯಕ್ಷೆಯರಾದ ಪ್ರತಿಭಾ ಕುಳಾಯಿ ಹಾಗೂ ಸಬಿತಾ ಮಿಸ್ಕಿತ್‌ ಅವರೊಂದಿಗೆ ನೃತ್ಯ ಪ್ರದರ್ಶಿಸಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಆರಂಭದಲ್ಲೂ ಮೇಯರ್‌ ಅವರೇ ನಾಡಗೀತೆ ಹಾಡುವ ಮೂಲಕ ಗಮನ ಸೆಳೆದರು. ಉಪ ಮೇಯರ್‌ ರಜನೀಶ್‌ ಕಾಪಿಕಾಡ್‌ ಸೇರಿದಂತೆ ಹಲವು ಸದಸ್ಯರು ನೃತ್ಯ, ಗಾಯನ ಪ್ರದರ್ಶಿಸಿ ಸೈ ಎನಿಸಿಕೊಂಡರು.

 

* *

ಶ್ರೀನಿವಾಸ ಮಲ್ಯರನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಅತ್ಯಂತ ಸ್ತುತ್ಯರ್ಹ. ಜಿಲ್ಲೆಯ ಇನ್ನೂ ಅನೇಕ ಹಿರಿಯರನ್ನು ಸ್ಮರಿಸಬೇಕು.</p><p>ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.