ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಫಲಾನುಭವಿಗಳಿಗಿಲ್ಲ ಸೀಮೆಎಣ್ಣೆ ಭಾಗ್ಯ!

Last Updated 17 ಡಿಸೆಂಬರ್ 2017, 6:50 IST
ಅಕ್ಷರ ಗಾತ್ರ

ಯಾದಗಿರಿ: ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಭದ್ರತಾ ಯೋಜನೆಯಡಿ ಅಕ್ಕಿ, ಬೇಳೆ, ಸೀಮೆಎಣ್ಣೆ, ಗೋಧಿ, ರಾಗಿ ವಿತರಿಸಬೇಕೆಂಬ ನಿಯಮ ಇದ್ದರೂ, ಜಿಲ್ಲೆಯ ನಗರಭಾಗದ ಅರ್ಹ ಬಿಪಿಎಲ್‌ ಪಡಿತರ ಫಲಾನುಭವಿಗಳಿಗೆ ಅಕ್ಕಿ, ಗೋಧಿ ಮಾತ್ರ ಸಿಗುತ್ತಿದೆ. ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿರುವ ನಗರ ಭಾಗದ ಜನರಿಗೆ ಸರ್ಕಾರ ತೀರಾ ಅಗತ್ಯ ವಸ್ತು ‘ಸೀಮೆಎಣ್ಣೆ’ ವಿತರಣೆಯನ್ನು ಸ್ಥಗಿತಗೊಳಿಸಿದೆ.

ಅಡುಗೆ ಅನಿಲ ರಹಿತ ಬಿಪಿಎಲ್ ಪಡಿತರ ಫಲಾನುಭವಿಗಳು ಪಡಿತರ ಕೇಂದ್ರಗಳಲ್ಲಿ ಸೀಮೆಎಣ್ಣೆ ಸ್ಥಗಿತಗೊಂಡಿರುವುರಿಂದ ಉರುವಲಿಗಾಗಿ ಅಲೆದಾಡುವಂತಾಗಿದೆ. ಈ ಜನರು ಅಡವಿ, ಅರಣ್ಯಗಳಿಗೆ ನುಗ್ಗುತ್ತಿರುವುದರಿಂದ ಜಿಲ್ಲೆಯಲ್ಲಿ ಶೇ 3ರಷ್ಟು ಇರುವ ಅರಣ್ಯ ಉರುವಲಿಗಾಗಿ ಬರಿದಾಗುವ ಆತಂಕ ಎದುರಿಸುವಂತಾಗಿದೆ. ಉರುವಲಿನ ಅನಿವಾರ್ಯತೆ ಈಗ ಮಹಿಳೆಯರ ಹೆಗಲ ಮೇಲೆ ಬಿದ್ದಿದೆ. ಬಡ, ಮಧ್ಯಮ ವರ್ಗದ ಮಹಿಳೆಯರು ನಿತ್ಯ ಉರುವಲಿಗಾಗಿ ಕಾಡಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಹಾಗೂ ಹೋಬಳಿ ಭಾಗಗಳಲ್ಲಿ ನೆಲೆಸಿರುವ ಬಡ ಮತ್ತು ಮಧ್ಯಮ ವರ್ಗದ ಬಿಪಿಎಲ್‌ ಪಡಿತರ ಫಲಾನುಭವಿಗಳಿಗೆ ಸರ್ಕಾರ ಸೀಮೆಎಣ್ಣೆ ವಿತರಿಸದಂತೆ ಆದೇಶಿಸಿ ವರ್ಷ ಕಳೆದಿದೆ.

‘ಒಂದು ವರ್ಷದಿಂದ ಸೀಮೆಎಣ್ಣೆ ಸಿಗದ ಕಾರಣ ಜನರು ಉರುವಲಿಗಾಗಿ ಪರಿತಪಿಸುವಂತಾಗಿದ್ದು, ಕೂಲಿ ಬಿಟ್ಟು ಉರುವಲಿಗಾಗಿಯೇ ದಿನ ಕಳೆಯುವಂತಾಗಿದೆ’ ಎಂದು ಇಲ್ಲಿನ ಅಂಬೇಡ್ಕರ್‌ ನಗರ ನಿವಾಸಿಗಳಾದ ಹನುಮವ್ವ, ಭಾಗ್ಯಮ್ಮ, ಸುಶೀಲಮ್ಮ ಹೇಳುತ್ತಾರೆ.

‘ಖಾಸಗಿಯಾಗಿ ಸೀಮೆಎಣ್ಣೆ ಕೂಡ ಸಿಗುವುದಿಲ್ಲ. ಸಿಕ್ಕರೂ ಒಂದು ಲೀಟರ್‌ಗೆ ₹35 ಇದೆ. ಇಷ್ಟು ದುಬಾರಿ ಬೆಲೆ ಕೊಟ್ಟು ಸೀಮೆಎಣ್ಣೆ ಖರೀದಿಸಲು ಆಗುವುದಿಲ್ಲ. ಆದ್ದರಿಂದ, ಉರುವಲು ಬಳಕೆ ಮಾಡುತ್ತೇವೆ. ಉರುವಲು ಆಯ್ದುಕೊಂಡು ಬರಲು ಇಡೀ ದಿನ ಬೇಕಾಗುತ್ತದೆ. ಒಮ್ಮೆ ಉರುವಲು ಆಯ್ದುಕೊಂಡು ಬಂದರೆ ಮೂರು, ನಾಲ್ಕು ದಿನ ಚಿಂತೆ ಇರುವುದಿಲ್ಲ. ನಂತರ ಪುನಃ ಉರುವಲಿಗಾಗಿ ಕಾಡಿಗೆ ಹೋಗಲೇಬೇಕಾಗುತ್ತದೆ’ ಎನ್ನುತ್ತಾರೆ ಅವರು.

‘ಜಿಲ್ಲೆಯಲ್ಲಿ ಮೂರು ನಗರಸಭೆ, ಒಂದು ಪುರಸಭೆ, ಒಂದು ಅಧಿಸೂಚಿತ ಪ್ರದೇಶ ಇದ್ದು, ಒಟ್ಟು 16 ಹೋಬಳಿ ಕೇಂದ್ರಗಳಿವೆ. ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳ ನಗರ ಭಾಗದಲ್ಲಿ ತೀರಾ ಕೆಳಸ್ತರದ ಕುಟುಂಬಗಳು ನೆಲೆಸಿವೆ. ಬಿಪಿಎಲ್‌ ಪಡಿತರ ಹೊಂದಿರುವ ಒಟ್ಟು 32,182 ಸಾವಿರ ಬಡ ಕುಟುಂಬಗಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನೆಲೆಸಿವೆ. ಹೋಬಳಿ ಕೇಂದ್ರಗಳಲ್ಲಿ ನೆಲೆಸಿರುವ ಫಲಾನುಭವಿಗಳ ಸಂಖ್ಯೆ ಗಣನೆಗೆ ಸಿಕ್ಕಿಲ್ಲ. ಈ ಜನರಿಗೆ ಪಡಿತರ ವಿತರಣಾ ಕೇಂದ್ರಗಳಲ್ಲಿ ಸೀಮೆಎಣ್ಣೆ ಪೂರೈಕೆ ಸ್ಥಗಿತಗೊಳಿಸಲಾಗಿದೆ’ ಎನ್ನುತ್ತಾರೆ ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ.

‘ಅಡುಗೆ ಅನಿಲ ಹೊಂದುವ ಉದ್ದೇಶ’

ನಗರ ಭಾಗದವರಿಗೆ ಸೀಮೆಎಣ್ಣೆ ವಿತರಣೆ ಸ್ಥಗಿತಗೊಳಿಸಿ ಒಂದು ವರ್ಷ ಕಳೆದಿದೆ. ಹೋಬಳಿ ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿ ನೆಲೆಸಿರುವ ಜನರು ಅಡುಗೆ ಅನಿಲ ಸೌಲಭ್ಯ ಪಡೆಯಲಿ ಎಂಬ ಸದುದ್ದೇಶದಿಂದ ಸರ್ಕಾರ ಹೊಂದಿದೆ. ಸದ್ಯ ಪಡಿತರ ಒಂದು ಕುಟುಂಬಕ್ಕೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಾಗೂ ₹38 ದರಕ್ಕೆ ಒಂದು ಕೆಜಿ ತೊಗರಿ ಬೇಳೆ ಪ್ರತಿ ತಿಂಗಳು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ನಾಗಭೂಷಣ ಮಾಹಿತಿ ನೀಡಿದರು.

* * 

ಹೋಬಳಿ ಕೇಂದ್ರಗಳಲ್ಲಿ ಬಡತನ ರೇಖೆಗಿಂತ ಕೆಳಗಿರು<br/>ವವರೇ ಶೇ 80ರಷ್ಟು ಮಂದಿ ಇದ್ದಾರೆ. ಅವರಿಗೆ ಸೀಮೆಎಣ್ಣೆ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು
ಉಮಾದೇವಿ, ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT