7

ಅಭಿವೃದ್ಧಿ ಸೋಗಿನಲ್ಲಿ ಮಂಕು ಬೂದಿ

Published:
Updated:
ಅಭಿವೃದ್ಧಿ ಸೋಗಿನಲ್ಲಿ ಮಂಕು ಬೂದಿ

ಕೋಲಾರ: ‘ಬಿಜೆಪಿ ಮುಖಂಡರು ಅಭಿವೃದ್ಧಿಯ ಸೋಗಿನಲ್ಲಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಕಿಡಿಕಾರಿದರು. ನಗರದಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2008ರ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡಿದರು. ಆದರೆ ಬಿಜೆಪಿಯವರು ರಾಜ್ಯವನ್ನು ಲೂಟಿ ಮಾಡಿದರು. ಅಭಿವೃದ್ಧಿಗೆ ಅಡ್ಡಗಾಲು ಹಾಕುವುದೇ ಅವರ ಕಾಯಕ ಎಂದು ಟೀಕಿಸಿದರು.

ಬಿಜೆಪಿಯವರಿಗೆ ಚರಿತ್ರೆ ಗೊತ್ತಿಲ್ಲ. ಕಾಂಗ್ರೆಸ್‌ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಆದರೆ, ಬಿಜೆಪಿಯವರು ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಪಕ್ಷವು ಅದಕ್ಕೆ ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್‌ ಸರ್ಕಾರ ದಲಿತರು, ಮುಸ್ಲಿಮರು, ಕ್ರೈಸ್ತರು ಹಾಗೂ ಹಿಂದೂಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದೆ ಎಂದರು.

ರಾಮನವಮಿ ಹಬ್ಬದಲ್ಲಿ ಮಜ್ಜಿಗೆ ಪಾನಕವನ್ನು ಬೀದಿ ಬೀದಿಯಲ್ಲಿ ಹಂಚುತ್ತೇವೆ. ಆದರೆ, ಪ್ರಧಾನಿ ಮೋದಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಮಜ್ಜಿಗೆ ಮೇಲೆ ತೆರಿಗೆ ಹಾಕಿದ್ದಾರೆ. ದೇಶದ ಇತಿಹಾಸದಲ್ಲಿ ಮಜ್ಜಿಗೆ ಮೇಲೆ ತೆರಿಗೆ ವಿಧಿಸಿದ ಉದಾಹರಣೆ ಇಲ್ಲ ಎಂದು ಕಿಡಿಕಾರಿದರು.

ಕೊಡಲಿ ಪೆಟ್ಟು: ಈ ಹಿಂದೆ ಪಕ್ಷದ ಭದ್ರಕೋಟೆಯಾಗಿದ್ದ ಕೋಲಾರ ಕ್ಷೇತ್ರದಲ್ಲಿ ಏನೇನೊ ನಡೆದು ಹೋಗಿದೆ. ಯಾರ‍್ಯಾರೋ ಬಂದು ಶಾಸಕರಾಗಿದ್ದು, ಕಾಂಗ್ರೆಸ್‌ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಇನ್ನಾದರೂ ಗುಂಪುಗಾರಿಕೆ ಬಿಟ್ಟು ಪಕ್ಷ ಸಂಘಟಿಸಬೇಕು ಎಂದು ಕರೆ ನೀಡಿದರು.

ಈ ಭಾಗದಲ್ಲಿ ಮುನಿಯಪ್ಪ ಸತತ ಏಳು ಬಾರಿ ಸಂಸದರಾಗಿದ್ದಾರೆ. ಆದರೂ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸದಿರುವುದು ದುರ್ದೈವ. ಬಿಜೆಪಿ, ಜೆಡಿಎಸ್ ವಿರುದ್ಧ ಪಕ್ಷವು ದೊಡ್ಡ ಹೋರಾಟಕ್ಕೆ ಹೊರಟಿದೆ. ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ 6 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಆಧಾರ ಸ್ತಂಭ: ‘ಕಾಂಗ್ರೆಸ್‌ ಈ ದೇಶದ ಶಕ್ತಿ. ಕಾರ್ಯಕರ್ತರೇ ಪಕ್ಷದ ಆಧಾರ ಸ್ತಂಭ. ಅವರು ಇಲ್ಲದಿದ್ದರೆ ಪಕ್ಷವಿಲ್ಲ. ಹೀಗಾಗಿ ಪಕ್ಷ ಸದಾ ಕಾರ್ಯಕರ್ತರ ಧ್ವನಿಯಾಗಿರುತ್ತದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಪಕ್ಷವು ಬಯಲುಸೀಮೆ ಜಿಲ್ಲೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎತ್ತಿನಹೊಳೆಯಿಂದ ನೀರು ತರುವ ಪ್ರಯತ್ನ ಮಾಡಿದೆ. ಆದರೆ, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದರು. ಅವರನ್ನು ಸಮಾಧಾನಪಡಿಸಿ ಯೋಜನೆ ಮುಂದುವರಿಸಿದ್ದೇವೆ. ಕೋಲಾರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆದರೆ, ಇಲ್ಲಿನ ಜನ ಯಾಮಾರಬಾರದು ಎಂದರು.

ಕಾಂಗ್ರೆಸ್‌ ಪ್ರತೀಕ: ‘ತ್ಯಾಗ, ಬಲಿದಾನ ಹಾಗೂ ಉಜ್ವಲ ರಾಷ್ಟ್ರ ಪ್ರೇಮಕ್ಕೆ ಕಾಂಗ್ರೆಸ್‌ ಪ್ರತೀಕವಾಗಿದೆ. ಪಕ್ಷಕ್ಕೆ 132 ವರ್ಷಗಳ ಭವ್ಯ ಇತಿಹಾಸವಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಕ್ಷದ ಕೊಡುಗೆ ಅನನ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಿಜೆಪಿ ಪಕ್ಷವೇ ಇರಲಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಅರ್ಧ ತಾಸಿನಲ್ಲಿ ರೈತರ ಹಿತಕ್ಕಾಗಿ ಹಾಲಿಗೆ ಪ್ರೋತ್ಸಾಹಧನ ಘೋಷಿಸಿದರು. ಆದರೆ, ಹಸಿರು ಶಾಲು ಹಾಕಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯ ಯಡಿಯೂರಪ್ಪ ಹಾವೇರಿಯಲ್ಲಿ ರೈತರ ಎದೆಗೆ ಗುಂಡು ಹೊಡೆಸಿದರು. ಬಿಜೆಪಿ ನಾಯಕರಿಗೆ ರೈತರ ಕಷ್ಟ ಗೊತ್ತಿಲ್ಲ. ಅವರಿಗೆ ಮರ್ಯಾದೆ ಇದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಲೋಕಸಭೆಗೆ ಮುತ್ತಿಗೆ ಹಾಕಲಿ ಎಂದು ಸವಾಲು ಹಾಕಿದರು.

ಸಚಿವರಾದ ಕೆ.ಆರ್‌.ರಮೇಶ್‌ಕುಮಾರ್‌, ಎಚ್‌.ಎಂ.ರೇವಣ್ಣ, ಸಂಸದ ಕೆ.ಎಚ್‌.ಮುನಿಯಪ್ಪ, ಮುಳಬಾಗಿಲು ಶಾಸಕ ಕೊತ್ತೂರು ಜಿ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ ಕುಮಾರ್‌ ಪಾಲ್ಗೊಂಡಿದ್ದರು.

ಕರಪತ್ರ ಹಂಚಿಕೆ

ಕೋಲಾರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು ಮತ್ತು ವೇಮಗಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಉದಯ್‌ಕುಮಾರ್‌ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಬೆಂಬಲಕ್ಕೆ ನಿಂತಿದ್ದಾರೆ. ಆ ಮೂಲಕ ಪಕ್ಷ ದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲ ಮುಖಂಡರು ಸಮಾವೇಶದಲ್ಲಿ ಕರಪತ್ರ ಹಂಚಿದ್ದು ಚರ್ಚೆಗೆ ಗ್ರಾಸವಾಯಿತು.

ಪರಮೇಶ್ವರ್‌ ಗರಂ

ಸಮಾವೇಶದ ಆರಂಭದಲ್ಲಿ ಕೆಲ ಕಾರ್ಯಕರ್ತರು ನಿವೃತ್ತ ಐಎಎಸ್ ಅಧಿಕಾರಿ ಸೈಯದ್‌ ಜಮೀರ್‌ ಪಾಷಾ ಪರ, ಮತ್ತ ಕೆಲವರು ಜಿಲ್ಲಾ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ ಕುಮಾರ್‌ ಪರ ಜೈಕಾರ ಕೂಗಿದರು.

ಪರಮೇಶ್ವರ್ ಭಾಷಣ ಆರಂಭಿಸಿದರೂ ಜೈಕಾರ ನಿಲ್ಲಲಿಲ್ಲ. ಇದರಿಂದ ಗರಂ ಪರಮೆಶ್ವರ್‌ ಅವರು, ‘ನಾವು ಅಭ್ಯರ್ಥಿ ಆಯ್ಕೆ ಮಾಡಲು ಇಲ್ಲಿಗೆ ಬಂದಿದ್ದೇವಾ, ನೀವು ಏನು ಮಾಡುತ್ತಿದ್ದೀರಿ ಎನ್ನುವುದು ಗೊತ್ತಿದೆಯಾ. ಜಿಲ್ಲಾ ಅಧ್ಯಕ್ಷರೆ ಏನು ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ. ಜನ ಮಾಧ್ಯಮದಲ್ಲಿ ಇದನ್ನು ನೋಡಬೇಕಾ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

* * 

ಶಾಸಕ ವರ್ತೂರುಗೆ ಜಿಲ್ಲೆಯಲ್ಲಿ ಏನೂ ಕೆಲಸವಿಲ್ಲ. ಉತ್ತರ ಕರ್ನಾಟಕಕ್ಕೆ ಬಂದು ಬೊಗಳೆ ಬಿಡುತ್ತಿದ್ದಾರೆ. ಅವರ ನಮ್ಮ ಕಾಂಗ್ರೆಸ್‌ ಪಕ್ಷ ನೆಲಕಚ್ಚುವುದು ಖಚಿತ ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry