7

‘ಇಳುವರಿಗೆ ಒತ್ತು; ಬೆಲೆ ನಿಗದಿ ನಿರ್ಲಕ್ಷ್ಯ’

Published:
Updated:
‘ಇಳುವರಿಗೆ ಒತ್ತು; ಬೆಲೆ ನಿಗದಿ ನಿರ್ಲಕ್ಷ್ಯ’

ಚಿಕ್ಕಮಗಳೂರು: ‘ಅಧಿಕ ಇಳುವರಿ ಪಡೆಯುವ ಕುರಿತು ರೈತರಿಗೆ ಕೃಷಿ ವಿಶ್ವವಿದ್ಯಾಲಯಗಳು ಮಾರ್ಗದರ್ಶನ ನೀಡಿದವು. ಆದರೆ, ಕೃಷಿ ಉತ್ಪನ್ನಗಳ ಬೆಲೆ, ಮಾರುಕಟ್ಟೆ ಅನ್ಯಾಯದ ವಿರುದ್ಧ ಅರಿವು ಮೂಡಿಸಿಲ್ಲ’ ಎಂದು ದಾವಣಗೆರೆ ಕೃಷಿಕ ಅರುಣ್‌ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಕೃಷಿಕ ಸಮಾಜ, ಜಿಲ್ಲಾ ರೈತ ಸಂಘ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಕ್ಷಿಣ ಕನ್ನಡ–ಚಿಕ್ಕಮಗಳೂರು–ಉಡುಪಿ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಒಕ್ಕೂಟ, ಕೃಷಿ ತಂತ್ರಜ್ಞರ ಸಂಸ್ಥೆ, ತಾಲ್ಲೂಕು ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಉದ್ದಿಮೆದಾರರ ಸಂಘ, ಲಕ್ಷ್ಮಿ ವೆಂಕಟೇಶ್ವರ ಎಂಟರ್‌ಪ್ರೈಸಸ್‌ ಹಾಗೂ ಜನಸ್ಪಂದನ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಸಹಯೋಗದಲ್ಲಿ ತಾಲ್ಲೂಕಿನ ಮೂಗ್ತಿಹಳ್ಳಿಯ ಕೃಷಿಕ ಚಂದ್ರಶೇಖರ ನಾರಣಾಪುರ ಅವರ ಸಾವಯವ ಸಸ್ಯಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹೆಚ್ಚು ಗೊಬ್ಬರ ಹಾಕಿ ಹೆಚ್ಚು ಬೆಳೆ ಬೆಳೆಯಬೇಕು ಎಂಬುದನ್ನು ತಿಳಿಸಿಕೊಟ್ಟರು. ಸರ್ಕಾರ, ಕೃಷಿ ವಿಜ್ಞಾನಿಗಳು ಎಲ್ಲರೂ ರೈತರನ್ನು ಉತ್ಪಾದನೆ ಸಾಧನವಾಗಿ ಪರಿಗಣಿಸಿದರೆ ಹೊರತು ಮಾನವೀಯ ನೆಲೆಗಟ್ಟಿನಲ್ಲಿ ನೋಡಲೇ ಇಲ್ಲ. ರೈತರನ್ನು ಕತ್ತಲೆಯಲ್ಲೇ ಇಟ್ಟಿದ್ದಾರೆ’ ಎಂದು ಹೇಳಿದರು.

‘ಇಳುವರಿ ಹೆಚ್ಚು ಬಂದಿರುವು ದರಿಂದ ಬೆಲೆ ಕಡಿಮೆಯಾಗಿದೆ ಎಂದು ವಿಶ್ಲೇಷಣೆ ಮಾಡುತ್ತಾರೆ. ಆದರೆ, ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಇದ್ಯಾವುದಕ್ಕೂ ಬೆಲೆ ನಿಗದಿಪಡಿಸುವ ಕೆಲಸ ಮಾಡಿಲ್ಲ. ನೀರಿನ ಬಳಕೆ, ಬೆಳೆ ನಿರ್ವಹಣೆ, ವ್ಯವಸಾಯ ವಿಧಾನ ಇದಾವುದರ ಕುರಿತು ಮಾರ್ಗದರ್ಶನ ನೀಡಿಲ್ಲ. ಕೃಷಿ ವಿಜ್ಞಾನಿಗಳು ಹಳ್ಳಿಗಳಲ್ಲಿ ಕೃಷಿಕರಿಗೆ ಮಾರ್ಗದರ್ಶನ ನೀಡಬೇಕು’ ಎಂದರು.

‘ರೈತರನ್ನು ಮರೆತರೆ ಯಾರಿಗೂ ಉಳಿಗಾಲ ಇಲ್ಲ ಎಂಬುದನ್ನು ಸರ್ಕಾರ, ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ರೈತರು ಸಂಘಟಿತರಾಗಿ ಇದನ್ನು ಹೇಳದಿದ್ದರೆ, ಸರ್ಕಾರ ಹೇಳಿದ್ದನ್ನು ಕೇಳುವ ಪರಿಪಾಠವೇ ಮುಂದುವರಿಯುತ್ತದೆ’ ಎಂದರು.

‘ಸರಕು–ಸೇವಾ ತೆರಿಗೆಯಿಂದ (ಜಿಎಸ್‌ಟಿ) ಸಣ್ಣ ಕೈಗಾರಿಕೆಗಳ ಮೇಲೆ ಭಾರಿ ಪೆಟ್ಟು ಬಿದ್ದಿದೆ. ಶೇ 28 ತೆರಿಗೆ ಹೇರುವುದರಿಂದ ಸಣ್ಣಕೈಗಾರಿಕೆಗಳ ಸ್ಥಿತಿ ಡೋಲಾಯಮಾನವಾಗಿದೆ. ಇದನ್ನೆಲ್ಲ ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ರೈತರು ನಿರಾಶರಾಗಬಾರದು. ಕೃಷಿಯಲ್ಲಿ ಉನ್ನತಿ ಸಾಧಿಸಲು ಮುಂದಾಗಬೇಕು. ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮನೋಕಚಿಕಿತ್ಸಕಿ ಮಮತಾ ಮಹೇಶ್ಚಂದ್ರ ಮಾತನಾಡಿ, ‘ರೈತ ಒಂದು ಸಂಸ್ಕೃತಿ. ಸಮಾಜದಲ್ಲಿನ ಬದಲಾವಣೆಗಳು ರೈತ ಸಮುದಾಯದ ಮೇಲೆ ಪರಿಣಾಮ ಬೀರುತ್ತಿವೆ’ ಎಂದು ಹೇಳಿದರು.

‘ಒತ್ತಡ ಎದುರಿಸುವ ಸಾಮರ್ಥ್ಯ ಮತ್ತು ಸಂಪನ್ಮೂಲ ಇದ್ದರೆ ಆತಂಕ ಇರುವುದಿಲ್ಲ. ಅವುಗಳಿಲ್ಲದಿದ್ದರೆ ಗಂಡಾಂತರ ಎದುರಾಗುತ್ತದೆ. ಮಾನಸಿಕ ರೋಗಗಳು ಆತ್ಮಹತ್ಯೆಗೆ ಪ್ರಮುಖ ಕಾರಣ. ಈ ರೋಗಗಳ ಅರಿವು ಇದ್ದರೆ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು’ ಎಂದು ಹೇಳಿದರು.

ಪ್ರಗತಿ ಪರ ಕೃಷಿಕ ಮರಿಗೌಡ ಮಾತನಾಡಿ, ರೈತರಿಗಿಂತ ದೊಡ್ಡವರು ಯಾರೂ ಇಲ್ಲ. ಕೃಷಿಯಲ್ಲಿನ ಖುಷಿ ಯಾವ ಕ್ಷೇತ್ರದಲ್ಲೂ ಸಿಗುವುದಿಲ್ಲ. ಹೋಬಳಿ ಮಟ್ಟದಲ್ಲೂ ರೈತ ದಿನಾಚರಣೆ ಆಚರಿಸಬೇಕು ಎಂದು ಹೇಳಿದರು.

ಕೃಷಿಕ ಚಂದ್ರಶೇಖರ ನಾರಾಣಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಸಿ.ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರತಿನಿಧಿ ಎ.ಕೆ.ವಸಂತೇಗೌಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್‌.ಕುಮಾರಸ್ವಾಮಿ, ಉಪಾಧ್ಯಕ್ಷ ಸಿದ್ದೇಗೌಡ, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಡಿ.ಎಲ್‌.ಅಶೋಕ್‌ಕುಮಾರ್‌, ಕೊಪ್ಪ ತಾಲ್ಲೂಕು ಅಧ್ಯಕ್ಷ ಕೆ.ಯು.ನಾಗರಾಜ್‌, ಲಕ್ಷ್ಮಿ ವೆಂಕಟೇಶ್ವರ ಎಂಟರ್‌ಪ್ರೈಸಸ್‌ ಮಾಲೀಕ ಗಣೇಶ್‌, ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜು, ಕೃಷಿ ಇಲಾಖೆ ಜಂಟಿನಿರ್ದೇಶಕಿ ಎಂ.ಸಿ.ಸೀತಾ, ಎಂ.ಎಸ್‌.ವಿಕ್ರಾಂತ್‌, ಎಚ್‌.ಡಿ.ಚಂದ್ರಶೇಖರ್‌, ಶಿವಪ್ರಸಾದ್‌, ಜಾನಕಿರಾಮ್‌, ಗಿರೀಶ್‌, ಮಹೇಶ್‌, ಮಂಜುನಾಥ್‌ ಇದ್ದರು.

ಬಳ್ಳೇಕೆರೆ ಗ್ರಾಮದಲ್ಲಿ ರೈತ ದಿನಾಚರಣೆ

ಕಡೂರು: ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿರುವ ರೈತರ ಜೀವನದಲ್ಲಿ ಬದಲಾವಣೆಯಾಗದಿದ್ದರೆ, ದೇಶದಲ್ಲಿ ತಿನ್ನುವ ಅನ್ನಕ್ಕೂ ಸಂಚಕಾರ ಬರುವುದು ಖಚಿತ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ದಾಸಯ್ಯನಗುತ್ತಿ ಚಂದ್ರಪ್ಪ ಅಭಿಪ್ರಾಯಪಟ್ಟರು.

ಕಡೂರು ತಾಲ್ಲೂಕಿನ ಬಳ್ಳೇಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜ ಮತ್ತು ಸಾವಯವ ಒಕ್ಕೂಟ ಏರ್ಪಡಿಸಿದ್ದ ಅಂತರರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರನ್ನು ಗೌರವಿಸುತ್ತಿದ್ದ ದಿನಗಳು ಈಗಿಲ್ಲ. ರೈತರಿಗೇ ಕೃಷಿ ಬದುಕು ಬೇಡ ಎಂಬಂತಹ ಹತಾಶ ಸ್ಥಿತಿ ಎದುರಾಗಿದೆ. ಮಳೆಯಿಲ್ಲದೆ ಬೆಳೆ ಬೆಳೆಯಲಾಗದ, ಬೆಳೆದರೂ ಮಾರುಕಟ್ಟೆ ಇಲ್ಲದಂತಹ ದಯನೀಯ ಪರಿಸ್ಥಿತಿಯಲ್ಲಿ ರೈತರಿದ್ದು, ಕೃಷಿ ಬದುಕಿನಲ್ಲೂ ಸುಖವಿದೆ ಎಂಬಂತಹ ಪರಿಸ್ಥಿತಿ ಬರಬೇಕಿದೆ. ರೈತ ದಿನಾಚರಣೆಯಲ್ಲಿ ರೈತರ ಬದುಕು ಹಸನಾಗುವಂತಹ ವಿಷಯಗಳ ಬಗ್ಗೆ. ಚರ್ಚೆ ನಡೆಯಬೇಕು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಶಿವ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ‘ರೈತಪರ ದಿನಾಚರಣೆಗಳು ಕಡಿಮೆಯಾದರೂ ಇತ್ತೀಚೆಗೆ ಕೃಷಿಗೆ ವಿಶ್ವವ್ಯಾಪಿ ಸ್ಥಾನಮಾನ ದೊರೆಯುತ್ತಲಿರುವುದು ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆ  ಎಂದರು.

ಈ ಸಂದರ್ಭದಲ್ಲಿ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ಎರೆಹುಳು ಈಶ್ವರಪ್ಪ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಬಳ್ಳೇಕೆರೆ ಗ್ರಾಮ ಪಂಚಾಯಿತಿ ಅದ್ಯಕ್ಷೆ ರೇಣುಕಮ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಬಳ್ಳೇಕೆರೆ ವಿಶ್ವನಾಥ್, ಶಶಿಧರ್, ಕೃಷಿಕ ಸಮಾಜದ ನಿರ್ದೇಶಕರಾದ ಸದಾಶಿವ, ವಿಜಯ್‍ಕುಮಾರ್, ಕೃಷಿ ಅಧಿಕಾರಿಗಳಾದ ಎಸ್.ಕೆ. ಕಲ್ಲೇಶಪ್ಪ, ಚಂದ್ರಪ್ಪ, ಕರಿಯಪ್ಪ ಇದ್ದರು.

ರೈತರನ್ನು ಸಂತೈಸುವ ಕೆಲಸ ಆಗಬೇಕು

ತರೀಕೆರೆ: ಪ್ರಕೃತಿ ವಿಕೋಪಕ್ಕೆ ಇಂದು ರೈತಾಪಿ ವರ್ಗ ತತ್ತರಿಸಿ ಹೋಗಿದ್ದು, ರೈತರನ್ನು ಸಂತೈಸುವ ಕೆಲಸಗಳನ್ನು ಸರ್ಕಾರಗಳ ಜೊತೆ ಜನಸಾಮಾನ್ಯರು ಮಾಡಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಸಲಹೆ ನೀಡಿದರು.

ಕೃಷಿ ಇಲಾಖೆ ಹಾಗೂ ತಾಲ್ಲೂಕು ಕೃಷಿಕ ಸಮಾಜದಿಂದ ನಡೆದ ರೈತ ದಿನಾಚರಣೆಯಲ್ಲಿ ರೈತರನ್ನು ಸನ್ಮಾನಿಸಿ ಅವರು ಮಾತನಾಡಿ ‘ಸರ್ಕಾರ ರೈತರ ನೆರವಿಗೆ ಬಂದಿದ್ದು, ಬೆಳೆಗಾಗಿ ಬಹಳಷ್ಟು ಅನುದಾನವನ್ನು ಮೀಸಲಿಟ್ಟಿದೆ. ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಮಳೆಯ ಅಭಾವ ಇದ್ದು, ಸಾಕಷ್ಟು ರೈತರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾತನಾಡಿ, ‘ರೈತರು ದೇಶದ ಬೆನ್ನೇಲುಬಾಗಿದ್ದು, ರೈತರು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕು ಎಂದು ಸಲಹೆ ನೀಡಿದ ಅವರು, ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಬ್ಯಾಚ್-3 ರ ಮಹಿಳಾ ಸ್ವಸಹಾಯ ಸಂಘ ಸುತ್ತು ನಿಧಿ ಚೆಕ್‍ನ್ನು ಒಂದು ಸಂಘಕ್ಕೆ ₹25ಸಾವಿರವನ್ನು ವಿತರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಮಾತನಾಡಿದರು. ಮಣ್ಣು ವಿಜ್ಞಾನಿ ರಾಘವೇಂದ್ರ ಮಣ್ಣಿನ ಆರೋಗ್ಯ ಮತ್ತು ಮಣ್ಣಿನ ಮಹತ್ವ ಹಾಗೂ ಉತ್ಪಾದನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಶಿಕ್ಷಕ ಬಸವರಾಜಪ್ಪ ಅವರು ರೈತರಿಗೆ ವಿಡಿಯೊ ಪ್ರದರ್ಶನದ ಮೂಲಕ ಮಿಶ್ರ ಬೆಳೆ, ನೀರು ಹಿಂಗಿಸುವಿಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.

2016-17 ನೇ ಸಾಲಿನ ರಾಗಿ ಬೆಳೆಯ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಯನ್ನು ನಂದಿ ಗ್ರಾಮದ ರೈತ ಶಿವಣ್ಣ, ದೋರನಾಳು ಗ್ರಾಮದ ಚಂದ್ರಪ್ಪ, ಗುಳ್ಳದಮನೆಯ ಹನುಮಂತಪ್ಪ ಇವರಿಗೆ ನೀಡಿ ಸನ್ಮಾನ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್.ಮಹೇಂದ್ರ, ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಮೌಳಿ, ರೈತ ಮುಖಂಡ ಮಹೇಶ, ಕೃಷಿ ಇಲಾಖೆ ನಿರ್ದೇಶಕ ಟಿ.ಎನ್. ಚಿತ್ರಸೇನ, ಕೃಷಿಕ ಸಮಾಜದ ಬಿ.ಆರ್. ರವಿ, ಎ.ಅನ್ಬು, ಬಸವರಾಜು ಇದ್ದರು.

‘ಅನ್ನದಾತರ ಸ್ಮರಿಸಿ’

ಚಿಕ್ಕಮಗಳೂರು: ‘ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ₹ 50 ಸಾವಿರದವರೆಗಿನ ಸಾಲವನ್ನು ರಾಜ್ಯ ಸರ್ಕಾರವು ಮನ್ನಾ ಮಾಡಿದ್ದು, ಇದರಿಂದ 22ಲಕ್ಷ ರೈತರ ಸಾಲಮನ್ನಾ ಆಗಿದೆ. ಸಾಲಮನ್ನಾದ ಶ್ರೇಯಸ್ಸು ಮೃತಪಟ್ಟ ರೈತರಿಗೆ ಸಲ್ಲುತ್ತದೆ’ ಎಂದು ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.

ಕೆಪಿಸಿಸಿ ಕಿಸಾನ್ ಘಟಕದ ವತಿಯಿಂದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ‘ರೈತ ದಿನಾಚರಣೆ-ಕಿಸಾನ್ ದಿವಸ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸಾಲಮನ್ನಾ ಪ್ರಯೋಜನ ಪಡೆದವರು ಸಾಲಬಾಧೆಯಿಂದ ಮೃತಪಟ್ಟ ರೈತರನ್ನು ಸ್ಮರಿಸಬೇಕು. ಸಾಲಬಾಧೆಯಿ೦ದ ಮೃತಪಟ್ಟ ರೈತರು ಹುತಾತ್ಮ ಸೈನಿಕರಿಗೆ ಸಮಾನ’ ಎಂದರು.

‘ಕೇಂದ್ರ ಸರ್ಕಾರವು ಗೋರಖ್‌ ಸಿಂಗ್ ವರದಿ ಆಧರಿಸಿ ಸಾಲಮನ್ನಾ ಮಾಡಬೇಕು ಹಾಗು ಪುನರ್ವಸತಿ ಪ್ಯಾಕೇಜ್ ಒದಗಿಸಬೇಕು. ಅರಣ್ಯ ಅಧಿಕಾರಿಗಳು ರೈತರ ಕಾಫಿಗಿಡಗಳನ್ನು ಕಡಿದಿರುವುದು ಗಮನಕ್ಕೆ ಬಂದಿದೆ. ಕಾಫಿ ಬೆಳೆಗಾರರ ಜೊತೆ ಚರ್ಚಿಸಿ ಅರಣ್ಯಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದರು.

ಪ್ರಗತಿಪರ ರೈತರಾದ ಚಂದ್ರೇಗೌಡ, ಡಕಣಾಚಾರಿ ಅವರನ್ನು ಸನ್ಮಾನಿಸಲಾಯಿತು. ಸಾಲಬಾಧೆಯಿಂದ ಬೆರಣಗೋಡಿನ ಈರೇಗೌಡ, ಅಂಬಳೆಯ ಮಂಜೇಗೌಡ, ಕೂದುವಳ್ಳಿಯ ಜಗನ್ನಾಥ್, ಗಂಜಲಗೋಡಿನ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬದವರಿಗೆ ಕಿಸಾನ್‌ ಸೆಲ್‌ ವತಿಯಿಂದ ನೆರವುಧನ ವಿತರಿಸಲಾಯಿತು.

ಜಿಲ್ಲಾ ಘಟಕ ಅಧ್ಯಕ್ಷ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿಶಂತೇಗೌಡ, ರಾಜ್ಯ ಕಿಸಾನ್ ಸೆಲ್ ಸಂಚಾಲಕ ಸಿ.ಎನ್.ಅಕ್ಮಲ್, ಸಿಡಿಎ ಅಧ್ಯಕ್ಷ ಸಯ್ಯದ್ ಹನೀಫ್, ರಾಜ್ಯ ಕುರಿ ಮತ್ತು ಉಣ್ಣೆ ಮಂಡಳಿ ನಿರ್ದೇಶಕ ಕೋಟೆ ಆನಂದ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಾಹಿಲ್ ಶರೀಫ್, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಆದಿಲ್‌, ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಕವೀಶ್, ಉಪಾಧ್ಯಕ್ಷ ಪ್ರಸಾದ್ ಅಮೀನ್, ಕಿಸಾನ್ ಸೆಲ್ ಕಾರ್ಯದರ್ಶಿ ಪೃಥ್ವಿರಾಜ್, ಕೊಪ್ಪ ಕಿಸಾನ್ ಸೆಲ್ ಉಪಾಧ್ಯಕ್ಷ ಭರತ್, ಕಿಸಾನ್ ಸೆಲ್ ಘಟಕ ಜಿಲ್ಲಾ ಉಪಾಧ್ಯಕ್ಷ ಪೃಥ್ವಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ಬಲರಾಂ, ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry