7

ಮಂದ್; ವಿಜೃಂಭಿಸಿದ ಕೊಡವ ಸಂಸ್ಕೃತಿ

Published:
Updated:
ಮಂದ್; ವಿಜೃಂಭಿಸಿದ ಕೊಡವ ಸಂಸ್ಕೃತಿ

ಗೋಣಿಕೊಪ್ಪಲು: ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಇಲ್ಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಎರಡು ದಿನ ಆಯೋಜಿಸಿದ್ದ ಕೊಡವ ಮಂದ್ ನಮ್ಮೆ ವಿಜೃಂಭಣೆಯಿಂದ ಜರುಗಿತು.

ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದ ವಿವಿಧ ಮಂದ್‌ಗಳ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಕೊಡವ ಸಾಂಪ್ರದಾಯಕ ದಿರಿಸಿನಲ್ಲಿ ಕಂಗೊಳಿಸಿದರು. ಬೆಳಿಗ್ಗೆ 10.30ಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಕಾವೇರಿ ಕಾಲೇಜಿನ ಮೈದಾನದವರೆಗೆ ನಡೆದ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದ ಕೊಡವ ಪುರುಷ ಮತ್ತು ಮಹಿಳೆಯರು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಯುವಕರು ಕೊಡವ ವಾಲಗಕ್ಕೆ ಕುಣಿದು ಕುಪ್ಪಳಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ‘ವಾಯ್ಸ್ ಆಫ್ ಕೊಡವ’ ಇಂಗ್ಲಿಷ್ ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ವಕೀಲ ಪಾಲಚಂಡ ಸುಬ್ಬಯ್ಯ, ‘ಕೊಡವರಿಗೆ ಬಂದೂಕು ಹೊಂದುವುದಕ್ಕೆ ಪರವಾನಗಿ ಬೇಕಿಲ್ಲ. ದೇಶದಲ್ಲಿ ಪರವಾನಗಿ ಇಲ್ಲದೆ ಬಂದೂಕು ಬಳಸಲು ಕೊಡವರಿಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಇದನ್ನು 1861ರಲ್ಲಿಯೇ ಬ್ರಿಟಿಷ್ ಅಧಿಕಾರಿ ಮಾರ್ಕ್ ಕಬ್ಬನ್ ಕೊಡವರಿಗೆ ಕೊಟ್ಟ ಮಹತ್ವದ ಹಕ್ಕಾಗಿದೆ. ತಂದೆ ತೀರಿಕೊಂಡ ಬಳಿಕ ಈ ಹಕ್ಕು ಮಕ್ಕಳಿಗೂ ಮುಂದುವರಿಯಲಿದೆ. ಆದರೆ, ಜಿಲ್ಲೆಯಿಂದ ಹೊರಗೆ ಕೊಂಡೊಯ್ಯುವಾಗ ಜಿಲ್ಲಾಧಿಕಾರಿ ಅನುಮತಿ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು.

ಹೈಕೋರ್ಟ್ ವಕೀಲ ಪವನ್ ಚಂದ್ರಶೆಟ್ಟಿ ಮಾತನಾಡಿ, ‘ಕೊಡಗಿನ ಭೂಮಿ ಪರಭಾರೆಯಾಗದಂತೆ ಎಚ್ಚರವಹಿಸಬೇಕು. ಭೂಮಿ ಕಳೆದುಕೊಂಡರೆ ಇಡೀ ಸಂಸ್ಕೃತಿಯೇ ಕಳೆದುಹೋಗಲಿದೆ. ಭೂಮಿ ಮಾರಾಟ ಮಾಡುವುದಾದರೂ ಅದನ್ನು ಸ್ಥಳೀಯರಿಗೆ ಕೊಡುವಂತಿರಬೇಕು. ಈ ಬಗ್ಗೆ ಕಾನೂನು ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ‘ಕೊಡವ ಸಮಾಜಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ತಪ್ಪದೆ ಸಂಸ್ಕೃತಿಯ ಉಳಿವಿಗೆ ಗಮನಕೊಡಬೇಕು. ಅಂತರ್‌ ಜಾತಿ ವಿವಾಹ ನಿಷೇಧಿಸಬೇಕು. ಇಲ್ಲದಿದ್ದರೆ ಸಂಸ್ಕೃತಿಯ ಅಳಿವಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಸಂಸ್ಕೃತಿ ಅಳಿದರೆ ವಿಕೃತಿ ಆರಂಭಗೊಳ್ಳಲಿದೆ. ಅದಕ್ಕೆ ಅವಕಾಶಮಾಡಿಕೊಡಬಾರದು’ ಎಂದು ಮನವಿ ಮಾಡಿದರು.

ಐಎಎಸ್ ಅಧಿಕಾರಿ ಪೆಮ್ಮಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪೃಥ್ಯು ಮಾತನಾಡಿದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಸಿ.ಗಣಪತಿ, ಪ್ರಾಂಶುಪಾಲ ಪಟ್ಟಡ ಪೂವಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ, ದಾನಿ ಕೇಚಮಾಡ ಗಣೇಶ್ ತಿಮ್ಮಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ, ಸಿ.ಕೆ.ಬೋಪಣ್ಣ, ಶರೀನ್ ಸುಬ್ಬಯ್ಯ, ಸಿ.ಡಿ.ಮಾದಪ್ಪ, ಬಿದ್ದಪ್ಪ, ಸಣ್ಣುವಂಡ ವಿಶ್ವನಾಥ್, ಮಾಚಿಮಾಡ ರವೀಂದ್ರ, ಅನೀಶ್ ಮಾದಪ್ಪ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಮಾದಯ್ಯ, ಅಣ್ಣೀರ ಹರೀಶ್, ಲೋಹಿತ್ ಭೀಮಯ್ಯ, ಚೆಪ್ಪುಡೀರ ಸುಜು ಕರುಂಬಯ್ಯ, ಸುಮಿ ಸುಬ್ಬಯ್ಯ, ಆದೇಂಗಡ ತಾರಾ ಅಯ್ಯಮ್ಮ, ಕೊಣಿಯಂಡ ಬೋಜಮ್ಮ, ರವಿ ಚಂಗಪ್ಪ ಹಾಜರಿದ್ದರು.

ಬಳಿಕ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಪರೆಯಕಳಿ, ಕೊಂಬ ಮೀಸೆರ ಬಂಬೊ, ಬೋಜಿ ಜಡೇರ ಬೋಜಕ್ಕ ಮೊದಲಾದ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು. ಆರಂಭದಲ್ಲಿ ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರ ಕೊಡವ ಗೀತೆಗಾಯನ ಸುಶ್ರಾವ್ಯವಾಗಿತ್ತು.

‘ಟಿಪ್ಪುವನ್ನು ಹಿಮ್ಮೆಟ್ಟಿಸಿದ ವೀರರು ಕೊಡವರು’

‘ಕೊಡವ ಜನಾಂಗದವರು ಮತಾಂಧ ಟಿಪ್ಪುವನ್ನು ಹಿಮ್ಮೆಟ್ಟಿಸಿದ ವೀರ ಯೋಧರು. ದೇಶಕ್ಕೆ ಅಪಾರ ಸೇವೆಸಲ್ಲಿಸುವುದರ ಜತೆಗೆ ಸಂಸ್ಕೃತಿಯ ಉಳಿವಿಗೂ ಹೋರಾಡುತ್ತಿರುವುದರಿಂದ ಕೊಡವ ಜನಾಂಗದ ಬಗ್ಗೆ ಅಪಾರ ಅಭಿಮಾನವಿದೆ’ ಎಂದು ಸಂಸದ ನಳೀನ್ ಕಟೀಲ್ ಹೇಳಿದರು.

ಯುಕೊ ಕೊಡವ ಮಂದ್ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ಹಿಂದಿನವರು ಸೃಷ್ಟಿಸಿದ ಪದ್ಧತಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮೂಲಕ ಈ ದೇಶದ ಹಿಂದೂ ಸಂಸ್ಕೃತಿಯ ಉಳಿವಿಗೆ ಪಣತೊಟ್ಟಿರುವ ಯುಕೊ ಸಂಘಟನೆಯ ಪ್ರಯತ್ನ ಶ್ಲಾಘನೀಯ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry