7

13 ಗ್ರಾಮ ಪಂಚಾಯ್ತಿ ಕೈಬಿಡಲು ಆಗ್ರಹ

Published:
Updated:
13 ಗ್ರಾಮ ಪಂಚಾಯ್ತಿ ಕೈಬಿಡಲು ಆಗ್ರಹ

ಧಾರವಾಡ: ತಾಲ್ಲೂಕಿನ 13 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 54ಕ್ಕೂ ಅಧಿಕ ಗ್ರಾಮಗಳನ್ನು ಧಾರವಾಡ ತಾಲ್ಲೂಕಿನಲ್ಲಿಯೇ ಉಳಿಸಿ ಅಳ್ನಾವರ ತಾಲ್ಲೂಕನ್ನು ರಚಿಸುವಂತೆ ಆಗ್ರಹಿಸಿ ಧಾರವಾಡ ತಾಲ್ಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಸ್ಥರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಮಿತಿ ಕಾರ್ಯಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ‘ಸರ್ಕಾರ ಯಾವುದೇ ಕಾರಣಕ್ಕೂ ಸದ್ಯ ಧಾರವಾಡ ತಾಲ್ಲೂಕಿನಲ್ಲಿರುವ 13 ಗ್ರಾಮ ಪಂಚಾಯ್ತಿಗಳನ್ನು ನೂತನ ಅಳ್ನಾವರ ತಾಲ್ಲೂಕಿಗೆ ಸೇರಿಸಬಾರದು.

ತಾಲ್ಲೂಕಿನ ಯರಿಕೊಪ್ಪ, ಮನಗುಂಡಿ, ಮನಸೂರು, ಬೆಳ್ಳಿಗಟ್ಟಿ, ನಿಗದಿ, ಮುಗದ, ಚಿಕ್ಕಮಲ್ಲಿಗವಾಡ, ಹಳ್ಳಿಗೇರಿ, ದೇವರ ಹುಬ್ಬಳ್ಳಿ, ಕಲಕೇರಿ, ಮಂಡ್ಯಾಳ, ಕ್ಯಾರಕೊಪ್ಪ, ರಾಮಾಪುರ, ಮುಮ್ಮಿಗಟ್ಟಿ ಸೇರಿದಂತೆ ಸುಮಾರು 54ಕ್ಕೂ ಹೆಚ್ಚು ಗ್ರಾಮಗಳು ಧಾರವಾಡದಿಂದ 10–15 ಕಿ.ಮೀ. ಅಂತರದಲ್ಲಿವೆ. ಇದು ಕೇವಲ 20 ನಿಮಿಷ ದಾರಿಯಾದ್ದರಿಂದ ಬಸ್ಸಿನ ಸೌಯರ್ಕವೂ ಸಾಕಷ್ಟಿದೆ. ಹೀಗಾಗಿ ಈ ಗ್ರಾಮಗಳನ್ನು ಮೊದಲಿನಂತೆ ಧಾರವಾಡ ತಾಲ್ಲೂಕಿನಲ್ಲೇ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ಇದುವರೆಗೆ ರಾಜ್ಯದಲ್ಲಿ ವಾಸುದೇವ ಆಚಾರ್ಯ ಆಯೋಗ ಸೇರಿದಂತೆ ನಾಲ್ಕು ತಾಲ್ಲೂಕು ರಚನಾ ಸಮಿತಿಗಳನ್ನು ರಚಿಸಿದೆ. ಈ ಸಮಿತಿಗಳು ಅಳ್ನಾವರ ಕೇಂದ್ರ ಸ್ಥಾನವಾಗಲು ಯೋಗ್ಯವಲ್ಲ ಎಂದು ತಿರಸ್ಕರಿಸಿವೆ. ಆದರೂ ರಾಜ್ಯ ಸರ್ಕಾರ ಹೊಸದಾಗಿ ಅಳ್ನಾವರ ತಾಲ್ಲೂಕು ರಚನೆಗೆ ಮುಂದಾಗಿದೆ.

ನೂತನ ತಾಲ್ಲೂಕು ರಚನೆಗೆ ನಮ್ಮದೇನೂ ವಿರೋಧವಿಲ್ಲ. ಆದರೆ ಸರ್ಕಾರ ಈ ಗ್ರಾಮಗಳನ್ನು ನೂತನ ತಾಲ್ಲೂಕಿಗೆ ಸೇರಿಸುವುದನ್ನು ಕೈಬಿಡಬೇಕು. ಜತೆಗೆ ಜಿಲ್ಲಾಧಿಕಾರಿ ಕೂಡಲೇ ಈ ಗ್ರಾಮ ಪಂಚಾಯ್ತಿಗಳನ್ನು ಧಾರವಾಡ ತಾಲ್ಲೂಕಿನಲ್ಲಿಯೇ ಉಳಿಸಲು ಪೂರಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸಾರ್ವಜನಿಕರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ತರುವಂತೆ ಜಿಲ್ಲಾಧಿಕಾರಿ ನಡೆದುಕೊಳ್ಳುವುದು ಸರಿಯಲ್ಲ. ಒಂದು ವೇಳೆ ಸರ್ಕಾರಕ್ಕೆ ಪೂರಕ ವರದಿ ಸಲ್ಲಿಸುವಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಲಾಬಿ ನಡೆಸಿದ್ದೇ ಆದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಈವೇಳೆ, ಸಂಭವಿಸುವ ಎಲ್ಲ ಅನಾಹುತಗಳಿಗೂ ಸರ್ಕಾರ ಮತ್ತು ಜಿಲ್ಲಾಡಳಿತ ನೇರ ಹೊಣೆಯಾಗುತ್ತವೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಹೋರಾಟ ಸಮಿತಿ ಗೌರವಾಧ್ಯಕ್ಷ ಮಹಾದೇವಪ್ಪ ನೀರಲಗಿ, ಅಧ್ಯಕ್ಷ ಮಲ್ಲನಗೌಡ ಗೌಡರ, ಡಾ.ಕಲ್ಮೇಶ ಹಾವೇರಿಪೇಟ, ಗಂಗಾಧರ ನಿಸ್ಸೀಮಣ್ಣವರ, ಕರಿಯಪ್ಪ ಅಮ್ಮಿನಭಾವಿ, ಬಸವರಾಜ ಭಾವಿ, ಯಲ್ಲಪ್ಪ ಕದಂ, ಮಲ್ಲಪ್ಪ ಭಾವಿ, ಎಸ್.ಬಿ. ಕರಿಗೌಡರ, ರುದ್ರಪ್ಪ ಸೇರಿದಂತೆ ವಿವಿಧ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry