7

ಜಾತಿ ಬೀಜ ಬಿತ್ತುವ ಸಿದ್ದರಾಮಯ್ಯಗೆ ಅಧಿಕಾರದ ಭ್ರಮೆ

Published:
Updated:
ಜಾತಿ ಬೀಜ ಬಿತ್ತುವ ಸಿದ್ದರಾಮಯ್ಯಗೆ ಅಧಿಕಾರದ ಭ್ರಮೆ

ಶಿವಮೊಗ್ಗ: ಸಿದ್ದರಾಮಯ್ಯ ಹಣ, ಹೆಂಡ ಹಂಚುವ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹರಮಘಟ್ಟ ಗ್ರಾಮದ ಬಳಿ ಗುರುವಾರ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದ ಬಹುತೇಕ ರಾಜ್ಯಗಳು ಇಂದು ಕಾಂಗ್ರೆಸ್‌ಮುಕ್ತವಾಗಿವೆ. 2018ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯವೂ ಕಾಂಗ್ರೆಸ್ ಮುಕ್ತವಾಗಲಿದೆ. ಅದಕ್ಕಾಗಿ ನಾಲ್ಕು ತಿಂಗಳು ನಿರಂತರವಾಗಿ ಶ್ರಮಿಸಬೇಕಿದೆ. ಸಂಕಲ್ಪ ಸಾಕಾರಗೊಳ್ಳಲು ಜನರು ಸಹಕಾರ ನೀಡಬೇಕು ಎಂದು ಕೋರಿದರು.

ದೇಶದ ಯಾವುದೇ ರಾಜ್ಯದಲ್ಲೂ ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿಲ್ಲ. ರಾಜ್ಯದಲ್ಲಿ ಮಾತ್ರ ಒಂದೂವರೆ ವರ್ಷಗಳ ಹಿಂದೆಯೇ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಪಕ್ಷ ಘೋಷಿಸಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಗುರಿ ಈಡೇರಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಾಗುವುದು ಎಂದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಮಹದಾಯಿ ಹೋರಾಟದಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ. ಆ ಪಕ್ಷದ ಕಾರ್ಯಕರ್ತರೇ ಹೋರಾಟಗಾರರ ನೆಪದಲ್ಲಿ ಬಸ್‌, ಟೈರ್‌ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ನೀರಾವರಿ ಸಚಿವ ಎಂ.ಬಿ. ಪಾಟೀಲ ನೀರಿಗಾಗಿ ತಲೆಕೆಡಿಸಿಕೊಳ್ಳದೇ ಲಿಂಗಾಯತ–ವೀರಶೈವರ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್ ಮುಖಂಡರ ಮನವೊಲಿಸುವ ಬದಲು ವಿನಾಕಾರಣ ಮೋದಿ, ಪರಿಕ್ಕರ್ ಅವರನ್ನು ದೂರುತ್ತಿದ್ದಾರೆ. ಇಂತಹ ಭಂಡ ಮುಖ್ಯ ಮಂತ್ರಿಯನ್ನು ಎಂದೂ ನೋಡಿಲ್ಲ ಎಂದು ಕುಟುಕಿದರು.

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ 7,800 ಕಿ.ಮೀ. ಸುತ್ತುತ್ತಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯುತ್ತಿಲ್ಲ. ಅಂಥವರು ಇನ್ನೂ ಎರಡು ಬಾರಿಯಾದರೂ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು’ ಎಂದು ಆಶಿಸಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ರುದ್ರೇಗೌಡ ಮಾತನಾಡಿ, ‘ಯಡಿಯೂರಪ್ಪ ಅವರ ಜೋಳಿಗೆ. ಊರಿಗೆಲ್ಲ ಹೋಳಿಗೆ. ಅವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಮೂರೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಅದಕ್ಕೆ ಉದಾಹರಣೆ’ ಎಂದರು.

ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ‘ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ 1994ರಿಂದ ಬಿಜೆಪಿ ಭದ್ರಕೋಟೆಯಾಗಿತ್ತು. ಕಳೆದ ಬಾರಿ ಅದು ಜೆಡಿಎಸ್‌ ಪಾಲಾಗಿದೆ. ಈ ಬಾರಿ ಮತ್ತೆ ಪಕ್ಷದ ವಶಕ್ಕೆ ಜನರು ನೀಡುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಾಶ್, ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷ ಗೋಂದಿಚಟ್ನಹಳ್ಳಿ ವಿರೂಪಾಕ್ಷಪ್ಪ, ಅಶೋಕ್ ನಾಯ್ಕ, ಅಂಜನ್‌ಕುಮಾರ್, ಧೀರರಾಜ್ ಹೊನ್ನವಿಲೆ, ವೀರಭದ್ರಪ್ಪ ಪೂಜಾರ್,

ಎಂ.ಎಸ್. ಚಂದ್ರಶೇಖರ್‌ ಮಾತನಾಡಿದರು.

ಮುಖಂಡರಾದ ಎಂ.ಪಿ.ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ತೇಜಸ್ವಿನಿ ಗೌಡ, ನೆ.ಲ.ನರೇಂದ್ರಬಾಬು, ಪದ್ಮನಾಭ ಭಟ್, ವಿಕ್ರಮಾಧಿತ್ಯ, ಡಿ.ಎಸ್.ಅರುಣ್, ಕಣೇಶ್ ಕಾರ್ಣಿಕ್, ಪವಿತ್ರಾ ರಾಮಯ್ಯ ಉಪಸ್ಥಿತರಿದ್ದರು. ಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ರಸ್ತೆಯ ಎರಡೂ ಬದಿ ಫ್ಲೆಕ್ಸ್, ಬಂಟಿಕ್ಸ್‌ಗಳ ಅಬ್ಬರ ಮೇರೆ ಮೀರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry