7
ಹೂಡಿಕೆದಾರರಿಗೆ ಕೇಂದ್ರ ಹಣಕಾಸು ಸಚಿವಾಲಯ ಸಲಹೆ

‘ಬಿಟ್‌ಕಾಯಿನ್‌ ಬಗ್ಗೆ ಎಚ್ಚರದಿಂದಿರಿ’

Published:
Updated:

ನವದೆಹಲಿ: ಬಿಟ್‌ ಕಾಯಿನ್ ತರಹದ ಡಿಜಿಟಲ್ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲ. ಇದು ಸಹ ಒಂದು ರೀತಿಯ ವಂಚಕ ಯೋಜನೆಯಾಗಿದೆ ಎಂದು ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.

ವಂಚಕ ಯೋಜನೆಗಳಲ್ಲಿ ಹಣ ತೊಡಗಿಸುವುದರಿಂದ ಅಪಾಯವೇ ಹೆಚ್ಚು. ಅದರಲ್ಲೂ ಚಿಲ್ಲರೆ ಹೂಡಿಕೆದಾರರು ಕಷ್ಟಪಟ್ಟು ಗಳಿಸಿದ ಹಣವನ್ನು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ ಕಳೆದುಕೊಳ್ಳುವಂತಾಗಬಾರದು. ಇಂತಹ ಯೋಜನೆಗಳ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಿ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಬಿಟ್‌ಕಾಯಿನ್‌ಗಳು ಡಿಜಿಟಲ್‌ ಅಥವಾ ಎಲೆಕ್ಟ್ರಾನಿಕ್‌ ರೂಪದಲ್ಲಿ ಇರುತ್ತವೆ. ಹೀಗಾಗಿ ಹ್ಯಾಕಿಂಗ್, ಮಾಲ್‌ವೇರ್‌ ದಾಳಿಗಳಿಗೆ ಸುಲಭವಾಗಿ ತುತ್ತಾಗುವ ಅಪಾಯವಿದೆ. ಪಾಸ್‌ವರ್ಡ್‌ ಕಳೆದುಕೊಳ್ಳುವ ಆತಂಕವೂ ಇರುತ್ತದೆ. ಇದರಿಂದಾಗಿ ಶಾಶ್ವತವಾಗಿ ಹಣ ಕಳೆದುಕೊಳ್ಳಬೇಕಾಗಿ ಬರಬಹುದು.

ಇತ್ತೀಚಿನ ದಿನಗಳಲ್ಲಿ ಭಾರತವನ್ನೂ ಒಳಗೊಂಡು ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಆದರೆ ಈ ರೂಪದ ಕರೆನ್ಸಿಗಳು ಯಾವುದೇ ಆಂತರಿಕ ಮೌಲ್ಯವನ್ನಾಗಲಿ, ಯಾವುದೇ ಸಂಪತ್ತಿನ ಬಲವನ್ನಾಗಲಿ ಹೊಂದಿಲ್ಲ ಎನ್ನುವುದನ್ನು ಗಮನಿಸಬೇಕು ಎಂದು ಹೂಡಿಕೆದಾರರಿಗೆ ತಿಳಿಹೇಳಿದೆ.

ಆಕರ್ಷಕ ಲಾಭದ ಆಮಿಷ ಒಡ್ಡಲಾಗುತ್ತಿದೆ. ಸದ್ಯಕ್ಕೆ ಇಂತಹ ಡಿಜಿಟಲ್‌ ಕರೆನ್ಸಿಗಳು ಕಾನೂನುಬಾಹಿರವಾಗಿದ್ದು, ಅವುಗಳ ಮೇಲೆ ಯಾವುದೇ ನಿಯಂತ್ರಣಗಳಿಲ್ಲ. ಇವುಗಳ ಖರೀದಿ ಮತ್ತು ವಹಿವಾಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry