ಜೆಡಿಎಸ್‌ನವರು ಅವಕಾಶವಾದಿಗಳು

7

ಜೆಡಿಎಸ್‌ನವರು ಅವಕಾಶವಾದಿಗಳು

Published:
Updated:

ಬೇಲೂರು: ‘ರಾಜ್ಯದಲ್ಲಿ ಜೆಡಿಎಸ್‌ ಪ್ರಭಾವ ಇಲ್ಲ. ಜೆಡಿಎಸ್‌ನವರು ಅವಕಾಶವಾದಿಗಳು. ಮುಂದಿನ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿ ಕಿಂಗ್‌ ಮೇಕರ್‌ಗಳಾಗಲು ಕಾಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಹರಿಹಾಯ್ದರು.

ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಅವರು, ‘ಅವರಪ್ಪನಾಣೆ ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಈ ರಾಜ್ಯದ ಸಿ.ಎಂ ಆಗುವುದಿಲ್ಲ ಜೆಡಿಎಸ್‌ನವರು ಅವಕಾಶವಾದಿ ರಾಜಕಾರಣಿಗಳು’ ಎಂದು ಪುನರುಚ್ಚರಿಸಿದರು.

ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಜೆಡಿಎಸ್‌ ಅಸ್ತಿತ್ವ ಕೇವಲ 4–5 ಜಿಲ್ಲೆಗಳಲ್ಲಿ ಮಾತ್ರ ಇದೆ. ಉತ್ತರ ಕರ್ನಾಟಕ, ಕರಾವಳಿಯಲ್ಲಿ ಜೆಡಿಎಸ್‌ ಪ್ರಭಾವ ಇಲ್ಲ’ ಎಂದು ವ್ಯಾಖ್ಯಾನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದಲ್ಲಿ ‘ಅವಕಾಶವಾದಿಗಳು’ ಎಂದು ಜೆಡಿಎಸ್‌ ನಾಯಕರನ್ನು ಟೀಕಿಸಲು ಆರಂಭಿಸುತ್ತಿದ್ದಂತೆ ವೇದಿಕೆಯಲ್ಲಿ ಇದ್ದ ಜೆಡಿಎಸ್‌ನ ಜನಪ್ರತಿನಿಧಿಗಳು ಒಬ್ಬೊಬ್ಬರಾಗಿಯೇ ಇಳಿದು ಹೋದರು.

ಟೀಕೆಯಿಂದ ಬೇಸರಗೊಂಡ ಜೆಡಿಎಸ್‌ ಪಕ್ಷದ, ತಾ.ಪಂ ಅಧ್ಯಕ್ಷ ಪಿ.ಎಸ್‌.ಹರೀಶ್, ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‌ ಕುಮಾರ್‌, ಜಿ.ಪಂ ಸದಸ್ಯರಾದ ಲತಾ ಮಂಜೇಶ್ವರಿ, ರತ್ನಮ್ಮ ಐಸಾಮಿಗೌಡ, ಲತಾ ದಿಲೀಪ್‌, ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್‌ ವೇದಿಕೆಯಿಂದ ನಿರ್ಗಮಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು, ‘ದೇವರಾಜ ಅರಸು ನಂತರ ಐದು ವರ್ಷದ ಅಧಿಕಾರ ಪೂರೈಸಿದ್ದೇನೆ. ಮುಂದಿನ ಚುನಾವಣೆಯಲ್ಲೂ ರಾಜ್ಯದ ಜನ ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ’ ಎಂದರು.

‘ನನ್ನ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದು ಜನ ಮೆಚ್ಚುವ ರೀತಿಯ ಅಧಿಕಾರ ನೀಡಿದೆ. ರಾಜ್ಯದ ಇತಿಹಾಸದಲ್ಲಿ ಯಾವುದಾದರೂ ಸರ್ಕಾರ ನುಡಿದ ಮಾತು ಈಡೇಸಿದ್ದರೆ, ಅದು ತಮ್ಮದೇ ಸರ್ಕಾರ. ಯಾವುದೇ ಕ್ಷೇತ್ರಕ್ಕೂ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಿಲ್ಲ. ಯಾವುದೇ ಪಕ್ಷದ ಶಾಸಕ ಪ್ರತಿನಿಧಿಸುತ್ತಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ’ ಎಂದು ಹೇಳಿದರು.

‘ಕರ್ನಾಟಕದ ಜನ ಬರಗಾಲದಿಂದ ನರಳುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 42 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಎಂದು ಕೈ ಮುಗಿದು ಬೇಡಿದೆ. ಆದರೆ, ಮೋದಿ ಜಪ್ಪಯ್ಯ ಎನ್ನಲಿಲ್ಲ. ಬಿಜೆಪಿ ಮುಖಂಡರು ಈ ಬಗ್ಗೆ ಬಾಯಿ ಬಿಡಲಿಲ್ಲ. ಪ್ರಧಾನಿ ಮತ್ತು ರಾಜ್ಯ ಬಿಜೆಪಿ ಮುಖಂಡರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಪ್ರಧಾನಿಯ ಮನ್‌ ಕೀ ಬಾತ್‌ನಿಂದ ಹೊಟ್ಟೆ ತುಂಬುವುದಿಲ್ಲ. ಅಭಿವೃದ್ಧಿಯಾಗುವುದಿಲ್ಲ’ ಎಂದರು.

ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆದರೆ ಯಡಿಯೂರಪ್ಪ ಸೀರೆ ಕೊಟ್ಟಿದ್ದೇನೆ. ಸೈಕಲ್‌ ಕೊಟ್ಟಿದ್ದೇನೆ ಎಂದಷ್ಟೇ ಹೇಳುತ್ತಾರೆ. ಅವರ ಮೂರನೇ ಕೆಲಸ, ಜೈಲಿಗೆ ಹೋಗಿ ಬಂದಿದ್ದ ಎಂದು ವ್ಯಂಗ್ಯವಾಡಿದರು.

ನೀರು ಹಂಚಿಕೆ: ಬೇಲೂರು ಕ್ಷೇತ್ರದ ಹಳೇಬೀಡು, ಮಾದಿಹಳ್ಳಿ ಮತ್ತು ಜಾವಗಲ್‌ ಹೋಬಳಿಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಕಡತಕ್ಕೆ ಭಾನುವಾರ ಸಹಿ ಹಾಕಿದ್ದು, ಆದೇಶ ಹೊರಡಿಸಿದ್ದೇನೆ. ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ‘ಸರ್ಕಾರಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡಿದರೆ ಕೆಲವರು ಟೀಕಿಸುತ್ತಾರೆ. ಸರ್ಕಾರಿ ಕಾರ್ಯಕ್ರಮವನ್ನು ಸರ್ಕಾರಿ ವೆಚ್ಚದಲ್ಲಿ ಮಾಡದೆ, ಯಾವುದರಲ್ಲಿ ಮಾಡಬೇಕು’ ಎಂದು ಪ್ರಶ್ನಿಸಿದರು.

ಶಾಸಕರಾದ ವೈ.ಎನ್.ರುದ್ರೇಶ್‌ ಗೌಡ, ಎಂ.ಎ.ಗೋಪಾಲಸ್ವಾಮಿ, ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್‌, ತಾ.ಪಂ ಅಧ್ಯಕ್ಷ ಪಿ.ಎಸ್‌.ಹರೀಶ್‌, ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‌ಕುಮಾರ್‌, ಬೇಲೂರು–ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎ. ಜಮಾಲುದ್ದೀನ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್‌ಪಿ ರಾಹುಲ್‌ಕುಮಾರ್‌ ಶಹಪುರ್‌ವಾಡ್‌ ಇದ್ದರು.

ಚನ್ನಕೇಶವ ದೇಗುಲ ಸಂಭ್ರಮಾಚರಣೆಗೆ ₹ 3 ಕೋಟಿ ಅನುದಾನ–ಸಿ.ಎಂ

ಬೇಲೂರು: ‘ವಿಶ್ವ ವಿಖ್ಯಾತ ಚನ್ನಕೇಶವಸ್ವಾಮಿ ದೇಗುಲಕ್ಕೆ 900 ವರ್ಷವಾಗಿದ್ದು, ಸಂಭ್ರಮಾಚಾರಣೆಗೆ ಸರ್ಕಾರ ₹ 3 ಕೋಟಿ ಅನುದಾನ ನೀಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೇಲೂರು ಶಿಲ್ಪಕಲೆಯ ನಾಡು. 900 ವರ್ಷ ಆಗಿರುವುದು ಐತಿಹಾಸಿಕ ಸಂದರ್ಭ. ಕಾಂಗ್ರೆಸ್‌ ಸರ್ಕಾರ ಸಾಹಿತ್ಯ, ಸಂಸ್ಕೃತಿ, ಕಲೆಗೆ ಪ್ರೋತ್ಸಾಹ ನೀಡಲಿದೆ. ವ್ಯವಸ್ಥಾಪನಾ ಸಮಿತಿ ಸಂಭ್ರಮಾಚರಣೆಗೆ ₹ 3 ಕೋಟಿ ವಿಶೇಷ ಅನುದಾನ ಕೋರಿದೆ. ಅದನ್ನು ಈಡೇರಿಸಲಾಗುವುದು’ ಎಂದು ಹೇಳಿದರು.

ಬೇಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಮೈದಾನ ಭೂಮಿ ಕಬಳಿಕೆಗೆ ಯತ್ನಿಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಎಂದು ಮುಖ್ಯಮಂತ್ರಿ ಸೂಚಿಸಿದರು.

‘ಸರ್ಕಾರಿ ಭೂಮಿ ರಕ್ಷಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಕಾನೂನು ಬಾಹಿರವಾಗಿ ಯಾರೇ ಕೆಲಸ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry