ನಾಣ್ಯ ತಯಾರಿಕೆ ಪುನರಾರಂಭಕ್ಕೆ ಸೂಚನೆ

7

ನಾಣ್ಯ ತಯಾರಿಕೆ ಪುನರಾರಂಭಕ್ಕೆ ಸೂಚನೆ

Published:
Updated:
ನಾಣ್ಯ ತಯಾರಿಕೆ ಪುನರಾರಂಭಕ್ಕೆ ಸೂಚನೆ

ಕೋಲ್ಕತ್ತ : ವಿವಿಧ ಮುಖಬೆಲೆಯ ನಾಣ್ಯಗಳನ್ನು ಟಂಕಿಸುವ ಕಾರ್ಯ ಪುನರಾರಂಭಿಸುವಂತೆ ಕೇಂದ್ರ ಸರ್ಕಾರವು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾಗೆ (ಎಸ್‌ಪಿಎಂಸಿಐಎಲ್‌) ನಿರ್ದೇಶನ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಲ್ಕತ್ತ, ಮುಂಬೈ, ನೊಯಿಡಾ ಮತ್ತು ಹೈದರಾಬಾದ್‌ನಲ್ಲಿ ಒಟ್ಟಾರೆ ನಾಲ್ಕು ಟಂಕಸಾಲೆಗಳಿವೆ. ಇಲ್ಲಿ ಒಂದು ಪಾಳಿಯಲ್ಲಿ ಮಾತ್ರವೇ ನಾಣ್ಯಗಳನ್ನು ಟಂಕಿಸುವಂತೆ ಸರ್ಕಾರ ಹೇಳಿದೆ.

‘ಶುಕ್ರವಾರದಿಂದಲೇ ನಾಣ್ಯಗಳನ್ನು ಟಂಕಿಸಲು ಆರಂಭಿಸಿದ್ದೇವೆ. ಎಲ್ಲಾ ಮುಖಬೆಲೆಯ ನಾಣ್ಯಗಳನ್ನೂ ಟಂಕಿಸಲು ಸೂಚನೆ ಬಂದಿದೆ’ ಎಂದು ಕೋಲ್ಕತ್ತ ಟಂಕಸಾಲೆಯ ಉದ್ಯೋಗಿಗಳ ಒಕ್ಕೂಟದ ಉಪಾಧ್ಯಕ್ಷ ಬಿಜನ್‌ ದೇ ತಿಳಿಸಿದ್ದಾರೆ.

‘ನಾಣ್ಯಗಳ ಸಂಗ್ರಹಕ್ಕೆ ಸ್ಥಳದ ಅಭಾವ ಇರುವುದರಿಂದ ತಕ್ಷಣದಿಂದಲೇ ತಯಾರಿಕೆ ನಿಲ್ಲಿಸುವಂತೆ ಜನವರಿ 9ರಂದು ಕೇಂದ್ರ ಸರ್ಕಾರ ಟಂಕಸಾಲೆಗಳಿಗೆ ಸೂಚನೆ ನೀಡಿತ್ತು. ನೋಟುಗಳ ಮುದ್ರಣ ಕಾರ್ಯಕ್ಕಾಗಿ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳದಂತೆಯೂ ಮುದ್ರಣ ಘಟಕಗಳಿಗೆ ಸರ್ಕಾರ ಮನವಿ ಮಾಡಿತ್ತು’.

‘ಸರ್ಕಾರದ ಆದೇಶದಿಂದ ತಮ್ಮ ವೇತನ ಕಡಿಮೆ ಆಗುವ ಕಾರಣ ನೀಡಿ, ಮುದ್ರಣ ಘಟಕಗಳ ಸಿಬ್ಬಂದಿ ಪ್ರತಿಭಟನೆ ಆರಂಭಿಸಿದ್ದರು. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದ ಬಳಿಕ ನಾಣ್ಯಗಳ ತಯಾರಿಕೆ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ’.

‘2017–18ನೇ ಆರ್ಥಿಕ ವರ್ಷಕ್ಕೆ 771 ಕೋಟಿ ನಾಣ್ಯಗಳು ನೀಡುವಂತೆ ಆರ್‌ಬಿಐ ಟಂಕಸಾಲೆಗಳಿಗೆ ತಿಳಿಸಿತ್ತು. ಅದರಲ್ಲಿ 590 ನಾಣ್ಯಗಳು ತಯಾರಾಗಿವೆ. ಆರ್ಥಿಕ ವರ್ಷ ಮುಗಿಯಲು ಎರಡೂವರೆ ತಿಂಗಳು ಬಾಕಿ ಇದ್ದು, ಟಂಕಸಾಲೆಗಳು ಬೇಡಿಕೆ ಪೂರೈಸುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry