ಪಕ್ಷಾತೀತವಾಗಿ ಸಾಲ ನೀಡಿಲ್ಲ: ಆರೋಪ

7
ಪಕ್ಷಾತೀತವಾಗಿ ಸಾಲ ನೀಡಿಲ್ಲ: ಆರೋಪ

ಪಕ್ಷಾತೀತವಾಗಿ ಸಾಲ ನೀಡಿಲ್ಲ: ಆರೋಪ

Published:
Updated:

ಕೆಜಿಎಫ್‌: ‘ಜಿಲ್ಲಾ ಸಹಕಾರ ಬ್ಯಾಂಕ್‌ (ಡಿಸಿಸಿ) ಬ್ಯಾಂಕ್‌ ಮೂಲಕ ನೀಡಲಾಗುತ್ತಿರುವ ಸಾಲವನ್ನು ಪಕ್ಷಾತೀತವಾಗಿ ನೀಡದೆ, ಪಕ್ಷಪಾತ ಮಾಡಲಾಗುತ್ತಿದೆ’ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಸಮೀಪದ ಸುಂದರಪಾಳ್ಯದಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿ, ‘ಡಿಸಿಸಿ ಬ್ಯಾಂಕ್‌ ನಿಂದ ಸಾಲ ನೀಡುವಾಗ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಕಡತವನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂದರು.

‘ಸುಳ್ಳು ಭರವಸೆ ನೀಡುತ್ತ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಮುಖ್ಯಮಂತ್ರಿ ಹೆಸರಿನಲ್ಲಿ ರಾಮನ ಬದಲು ರಾವಣ ಇರಬೇಕಾಗಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಹರಲ್ಲ’ ಎಂದರು.

‘ಧರ್ಮಸ್ಥಳದಲ್ಲಿ ಅಪಚಾರ ಮಾಡಿ, ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡದೆ ವಾಪಸ್‌ ಬಂದರು. ಈಗ ಹಿಂದೂ ಎನ್ನುತ್ತಾರೆ. ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಉಗ್ರಗಾಮಿಗಳು ಎಂದು ಸಂಬೋಧಿಸುತ್ತಾರೆ’ಎಂದು ಆರೋಪಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ₹ 1 ಲಕ್ಷ ಕೋಟಿ ನೀರಾವರಿ ಯೋಜನೆ ಮುಗಿಸಲು ವೆಚ್ಚ ಮಾಡಲಾಗುವುದು’ ಎಂದು ತಿಳಿಸಿದರು.

‘ಮಹದಾಯಿ ನೀರಿನ ಹಂಚಿಗೆ ಬಗ್ಗೆ ಗೋವಾದ ಯಾವುದೇ ಸಚಿವರು ಕೂಡ ಕನ್ನಡಿಗರ ಬಗ್ಗೆ ಮಾತನಾಡಿಲ್ಲ. ಮಾಧ್ಯಮದವರು ಅನಗತ್ಯ ಗೊಂದಲ ಉಂಟು ಮಾಡಬಾರದು. ಮುಖ್ಯಮಂತ್ರಿ ಮನೋಹರ ಪರಿಕ್ಕಾರ್ ಕನ್ನಡಿಗರ ಬಗ್ಗೆ ಅಭಿಮಾನವಿರುವ ವ್ಯಕ್ತಿ. ಅವರು ಸಮಸ್ಯೆ ಬಗೆಹರಿಸಲು ಸಿದ್ಧರಿದ್ದರೂ ಕಾಂಗ್ರೆಸ್‌ನವರು ಬಿಡುತ್ತಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಗೋವಾದಲ್ಲಿಯೇ ಇದ್ದರೂ ಈ ಬಗ್ಗೆ ಮಾತನಾಡಿಲ್ಲ. ಮಹದಾಯಿ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು’ ಎಂದರು.

ಶೋಭಾ ಕರಂದ್ಲಾಜೆ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ₹ 4500 ಕೋಟಿ ನೀಡಿದ್ದರೂ, ಬೆಳೆ ನಾಶದ ಬಗ್ಗೆ ರೈತರಿಗೆ ದುಡ್ಡು ಕೊಟ್ಟಿಲ್ಲ. ಅಧಿಕಾರಿಗಳು ₹ 3500 ಕೋಟಿ ಬ್ಯಾಂಕ್‌ನಲ್ಲಿಟ್ಟು ಬಡ್ಡಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಚಿವ ಎಚ್‌.ಕೆ.ಪಾಟೀಲ್ ಸದನದಲ್ಲಿಯೇ ಹೇಳಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರಕ್ಕೆ ಹಣ ವೆಚ್ಚವಾಗಿರುವ ಬಗ್ಗೆ ನಕಲಿ ಖರ್ಚು ಪಟ್ಟಿ ನೀಡಿದ್ದಾರೆ. ಇಂತಹ ಅಕ್ರಮವೆಸಗಿದ ಅಧಿಕಾರಿಗಳ ಬಗ್ಗೆ ಇದುವರೆವಿಗೂ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದರು.

‘ಯಡಿಯೂರಪ್ಪ ಜಾರಿಗೆ ತಂದಿದ್ದ ಸುವರ್ಣ ಭೂಮಿ, ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಗಂಗ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲಾಗಿದೆ. ಎಲ್ಲ ಧರ್ಮದವರಿಗೂ ಸಮಾನವಾಗಿ ಪ್ರೋತ್ಸಾಹ ನೀಡುವ ಬದಲು ಒಂದು ಧರ್ಮಕ್ಕೆ ಶಾದಿ ಭಾಗ್ಯ ಯೋಜನೆ ತರಲಾಗಿದೆ. ಮುಖ್ಯಮಂತ್ರಿಗಳು ಸುಳ್ಳು ಹೇಳುವುದಕ್ಕೆ ಮಿತಿಯೇ ಇಲ್ಲ.

ಕಾಂಗ್ರೆಸ್ ಸೋತರೇ ಅಚ್ಛೇ ದಿನ್ ಮಾಲೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸೋತು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಹೋದ ದಿನದಿಂದ ಕನಾರ್ಟಕದಲ್ಲಿ ಅಚ್ಛೇ ದಿನ್ ಆರಂಭವಾಗುತ್ತದೆ’ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪಟ್ಟಣದ ವೈಟ್ ಗಾರ್ಡನ್ ಬಳಿ ಭಾನುವಾರ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಮಂಜುನಾಥನ ದರ್ಶನಕ್ಕೆ ಮೀನು ತಿಂದು ಹೋಗಿ 6 ಕೋಟಿ ಜನರಿಗೆ ಅಪಮಾನ ಮಾಡಿದ್ದಾರೆ. ₹ 1.76 ಸಾವಿರ ಕೋಟಿ ಬಜೆಟ್ ಇದ್ದರೂ ಸಹ ರಾಜ್ಯದ ಅಭಿವೃದ್ಧಿಯಾಗಿಲ್ಲ’ ಎಂದು ದೂರಿದರು.

‘ಕೆಸಿ ವ್ಯಾಲಿ ಮತ್ತು ಎತ್ತಿನ ಹೋಳೆಗೆ ಖರ್ಚು ಮಾಡಿರುವ ಹಣದ ಕಮಿಷನ್ ಯಾರ ಜೇಬಿಗೆ ಹೋಗಿದೆ ಸ್ವಾಮಿ’ ಎಂದು ಪ್ರಶ್ನಿಸಿದರು.

‘ಇನ್ನೂ 4 ತಿಂಗಳಲ್ಲಿ ನಡೆಯಲಿರುವ ವಿಧಾನ ಸಭ ಚುನಾವಣೆಯಲ್ಲಿ ರಾಜ್ಯ ಸೇರಿದಂತೆ ಇನ್ನು 4 ರಾಜ್ಯಗಳು ಬಿಜೆಪಿ ಪಾಲಾಗಲಿವೆ’ ಎಂದರು.

‘ಚುನಾವಣೆಯಲ್ಲಿ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಮುನಿವೆಂಕಟಪ್ಪ, ಎ.ನಾಗರಾಜು, ಚಿನಾ.ರಾಮು, ಸಚ್ಚಿದಾನಂದ ಮೂರ್ತಿ, ಕೆ.ಕೃಷ್ಣರೆಡ್ಡಿ , ಮೋಹನ್ ರೆಡ್ಡಿ, ಆರ್.ಪ್ರಭಾಕರ್ ಇದ್ದರು.

ಮುಳಬಾಗಿಲು ವರದಿ: ಧಾರ್ಮಿಕ ಸ್ಥಳದಲ್ಲಿ ಗೋಮಾಂಸ ಸೇವನೆ ಮಾಡಿದವನ್ನು ಶಿಕ್ಷಿಸುವ ಬದಲಿಗೆ ಅಮಾಯಕ ಹಿಂದೂ ಯುವಕರನ್ನು ಬಂಧಿಸಿರುವುದು ಕಾನೂನು ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಎತ್ತಿ ತೋರಿಸುತ್ತದೆ' ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ನೇತಾಜೀ ಕ್ರೀಡಾಂಗಣದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಪರಿವರ್ತನಾ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ವರು ಮಾತನಾಡಿದರು.

‘ಇತ್ತೀಚೆಗೆ ನಗರದ ಅಂಜನಾಂದ್ರಿ ಬೆಟ್ಟದಲ್ಲಿ ಗೋ ಮಾಂಸ ಸೇವನೆ ವಿಚಾರದಲ್ಲಿ ಪೊಲೀಸ್ ಇಲಾಖೆ ತಾರತಮ್ಯ ನೀತಿಯನ್ನು ತೋರಿಸಿದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಜನ ಸಾಮಾನ್ಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry