ಶುದ್ಧ ಜಲಸಂಗ್ರಹಾಗಾರ ನಿರ್ಮಾಣ ಪೂರ್ಣ

7

ಶುದ್ಧ ಜಲಸಂಗ್ರಹಾಗಾರ ನಿರ್ಮಾಣ ಪೂರ್ಣ

Published:
Updated:

ಶ್ರವಣಬೆಳಗೊಳ: ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕದ ಅಂಗವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಮೇಲ್ವಿಚಾರಣೆಯ ಶುದ್ಧ ಜಲ ಸಂಗ್ರಹ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ.

ಪಟ್ಟಣ ವ್ಯಾಪ್ತಿಯ ಎಲ್ಲ 7 ವಾರ್ಡ್‌ಗಳಿಗೂ ಮತ್ತು ಮಹಾಮಸ್ತಕಾಭಿಷೇಕ ಮಹೋತ್ಸವದ 12 ತಾತ್ಕಾಲಿಕ ಉಪ ನಗರಗಳಿಗೆ ನಿತ್ಯ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಇಲಾಖೆ ಮಾಡಿಕೊಂಡಿದೆ. ಈಗಾಗಲೇ ಹೆಚ್ಚುವರಿಯಾಗಿ ನಿರ್ಮಿಸಿರುವ ನಾಗಯ್ಯನಕೊಪ್ಪಲು ಬಳಿಯ 5 ಲಕ್ಷ ಲೀಟರ್‌ ಸಾಮರ್ಥ್ಯದ ಜಲ ಸಂಗ್ರಹಾಗಾರ, ಈ ಹಿಂದೆ ನಿರ್ಮಿಸಿದ್ದ ಶ್ರೀಕಂಠನಗರ ಬಡಾವಣೆಯಲ್ಲಿರುವ ₹ 9.50 ಲಕ್ಷ ಲೀಟರ್‌ ಸಾಮರ್ಥ್ಯದ 3 ಜಲ ಸಂಗ್ರಹಾಗಾರಗಳಿಗೆ ಈ ಪಂಪ್‌ಹೌಸ್‌ನಿಂದ ನೀರು ಸರಬರಾಜಾಗಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್‌.ವಿ.ಲೋಕೇಶ್‌ ತಿಳಿಸಿದರು.

ನೂತನವಾಗಿ ನಿರ್ಮಾಣವಾಗಿರುವ ₹ 3 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿಯು 10 ಚದರಳತೆಯ ಪಂಪ್‌ ಹೌಸ್‌ ಹೊಂದಿದೆ. ಜಲ ಸಂಗ್ರಹಾಗಾರದ ಒಳ ಭಾಗದಲ್ಲಿ 60 ಅಶ್ವಶಕ್ತಿಯ 6 ಮೋಟರ್‌ಗಳನ್ನು ಹಾಗೆಯೇ ಮೇಲ್ಭಾಗದಲ್ಲಿ 6 ಪ್ಯಾನಲ್‌ ಬೋರ್ಡ್‌ಗಳನ್ನು ಮತ್ತು 3 ಕಂಟ್ರೋಲ್‌ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.

ಪ್ರತ್ಯೇಕವಾಗಿ 4 ಟ್ಯಾಂಕ್‌ಗಳಿಗೆ ನೀರನ್ನು ಕೊಳವೆಗಳ ಮೂಲಕ ಸರಬರಾಜು ಮಾಡಲು ಪ್ರತ್ಯೇಕ ಮೋಟರ್‌ಗಳನ್ನು ಅಳವಡಿಸಿ ವಿನ್ಯಾಸಗೊಳಿಸಲಾಗಿದೆ. ಅನಿರೀಕ್ಷಿತ ಬಳಕೆಗಾಗಿ ಹೆಚ್ಚುವರಿಯಾಗಿ 2 ಮೋಟರ್‌ಗಳನ್ನು ಅಳವಡಿಸಲಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರಾದ ಎಚ್‌.ಎಂ.ಜಗದೀಶ್ ಪ್ರಜಾವಾಣಿಗೆ ತಿಳಿಸಿದರು.

ಈ ಕಾಮಗಾರಿಯ ಗುತ್ತಿಗೆಯ ಹೊಣೆಯನ್ನು ಹೊತ್ತಿರುವ ಬೆಂಗಳೂರಿನ ಶುಭಾ ಸೇಲ್ಸ್‌ನ ಕೆ.ಎ.ನಂದಾ ಮಾತನಾಡಿ, ‘ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು, ಇದರ ನಿರ್ವಹಣೆಯನ್ನು ಒಂದು ವರ್ಷದವರೆಗೂ ಗುತ್ತಿಗೆದಾರರೇ ನಿರ್ವಹಿಸುತ್ತಾರೆ’ ಎಂದು ತಿಳಿಸಿದರು.

ಉಪನಗರಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆ

ಶ್ರವಣಬೆಳಗೊಳ : ಮಹಾಮಸ್ತಕಾಭಿಷೇಕದ ಪ್ರಯುಕ್ತ ನಿರ್ಮಾಣವಾಗುತ್ತಿರುವ ಉಪನಗರಗಳ ಭೇಟಿಗೆ ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ವಾಹನಗಳಿಗೆ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು.

ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ತ್ಯಾಗಿ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಇದರಿಂದ ತಾತ್ಕಾಲಿಕ ಉಪನಗರಗಳಿಗೆ ಬರುವ ವಯೋವೃದ್ಧರು ಮತ್ತು ಅಂಗವಿಕಲರಿಗೆ ತಾತ್ಕಾಲಿಕ ಬಸ್ ನಿಲ್ದಾಣಗಳು ಹಾಗೂ ಸಮೀಪದ ಬಸದಿಗಳಿಗೆ ಸಂಚರಿಸಲು ಅನುಕೂಲವಾಗುತ್ತದೆ. ಉಪನಗರಗಳ ಗುತ್ತಿಗೆದಾರರಾದ ಲಾಲು ಅವರು ಬೇರೆ ರಾಜ್ಯದಿಂದ ಇದನ್ನು ತರಿಸಿದ್ದು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

ಈಗಾಗಲೇ ಶ್ರವಣಬೆಳಗೊಳಕ್ಕೆ 10 ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳು ಬಂದಿದ್ದು, 6 ಗಂಟೆ ಚಾರ್ಜ್‌ ಮಾಡಿದರೆ ಸುಮಾರು 70 ಕಿ.ಮೀ ಸಂಚರಿಸಬಹುದು. ಒಂದು ಬಾರಿಗೆ ಸುಮಾರು 6ರಿಂದ 8 ಮಂದಿ ಪ್ರಯಾಣಿಸಬಹುದು. ಇದರ ಬೆಲೆ ₹ 3.5 ಲಕ್ಷ ಎಂದು ಆಡಳಿತ ಮಂಡಳಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry