ರಾಜ್ಯದಲ್ಲಿ 150 ಸಹಾಯಕ ಪ್ರಾಸಿಕ್ಯೂಟರ್‌ ಹುದ್ದೆ ಖಾಲಿ

7

ರಾಜ್ಯದಲ್ಲಿ 150 ಸಹಾಯಕ ಪ್ರಾಸಿಕ್ಯೂಟರ್‌ ಹುದ್ದೆ ಖಾಲಿ

Published:
Updated:
ರಾಜ್ಯದಲ್ಲಿ 150 ಸಹಾಯಕ ಪ್ರಾಸಿಕ್ಯೂಟರ್‌ ಹುದ್ದೆ ಖಾಲಿ

ಬೆಂಗಳೂರು: ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಪಿಪಿ) ಹುದ್ದೆಗಳು ಖಾಲಿ ಇವೆ. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿ ವಿಳಂಬಕ್ಕೂ ಇದು ಕಾರಣವಾಗುತ್ತಿದೆ.

ಜಿಲ್ಲಾ ಕೇಂದ್ರಗಳಲ್ಲಿ ಕ್ರಿಮಿನಲ್‌ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕರಣಗಳಲ್ಲಿ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಸರ್ಕಾರದ ಪರವಾಗಿ ವಾದ ಮಂಡಿಸುತ್ತಾರೆ. ಈಗ ಹುದ್ದೆಗಳು ಖಾಲಿ ಇರುವುದರಿಂದ ಹಲವು ಪ್ರಕರಣಗಳ ವಿಚಾರಣೆಯನ್ನು ಪದೇ ಪದೇ ಮುಂದೂಡಬೇಕಾದ ಪ್ರಮೇಯ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ದೂರುದಾರರು, ಆರೋಪಿಗಳು, ಸಾಕ್ಷಿದಾರರು ಹಾಗೂ ವಕೀಲರು ನ್ಯಾಯಾಲಯಕ್ಕೆ ಪದೇ ಪದೇ ಬಂದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಅದರ ತನಿಖೆ ನಡೆಸುವ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಅದಾದ ನಂತರ ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ವಾದ ಮಂಡಿಸುವ ಜವಾಬ್ದಾರಿ ಎಪಿಪಿಗಳ ಮೇಲಿರುತ್ತದೆ. ಹಲವು ಪ್ರಕರಣಗಳಲ್ಲಿ ಪೊಲೀಸರು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಬಹುತೇಕ ಪ್ರಕರಣಗಳ ವಿಚಾರಣೆ ಇದುವರೆಗೂ ಆರಂಭವಾಗಿಲ್ಲ.

ನಾಲ್ಕು ವರ್ಷಗಳಿಂದ ಕೊರತೆ :

‘ನಾಲ್ಕು ವರ್ಷಗಳಿಂದ ಪ್ರಾಸಿಕ್ಯೂಟರ್‌ ಹಾಗೂ ಸಿಬ್ಬಂದಿ ಕೊರತೆ ಇದೆ. ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಸಿಕ್ಯೂಟರ್‌ಗಳಿಗೆ ಈಗ ಹೆಚ್ಚುವರಿಯಾಗಿ ಮೂರು– ನಾಲ್ಕು ನ್ಯಾಯಾಲಯಗಳ ಜವಾಬ್ದಾರಿ ವಹಿಸಲಾಗುತ್ತಿದೆ. ಇದರಿಂದ ಅವರ ಮೇಲೂ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಕಕ್ಷಿದಾರರು, ಸಾಕ್ಷಿದಾರರು, ಆರೋಪಿಗಳು ಮತ್ತು ವಕೀಲರೂ ಪರೋಕ್ಷವಾಗಿ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಎಂದು ರಾಜ್ಯ ಪ್ರಾಸಿಕ್ಯೂಟರ್‌ ಸಂಘದ ಅಧ್ಯಕ್ಷ ಚನ್ನಪ್ಪ ಹರಸೂರ ತಿಳಿಸಿದರು.

‘ಖಾಲಿ ಹುದ್ದೆಗಳ ಭರ್ತಿಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಎರಡು ನ್ಯಾಯಾಲಯಗಳಿವೆ. ಇಲ್ಲಿ ಎಪಿಪಿ ಹುದ್ದೆಗಳು ಖಾಲಿ ಇವೆ. ಜಿಲ್ಲೆಯಷ್ಟೇ ಅಲ್ಲದೆ, ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ರಾಜ್ಯ ವಕೀಲರ ಸಂಘದ ಪದಾಧಿಕಾರಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ’ ಎಂದು ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ ತಿಳಿಸಿದರು.

‘ಗುತ್ತಿಗೆ ಆಧಾರದಲ್ಲಿ ಅರ್ಹ ವಕೀಲರನ್ನು ಎಪಿಪಿ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ 2009–10ರಲ್ಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ. ಅದರನ್ವಯ ಸ್ಥಳೀಯ ಅರ್ಹ ವಕೀಲರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಹಿರಿಯ ಪ್ರಾಸಿಕ್ಯೂಟರ್‌ಗೆ ಹೆಚ್ಚುವರಿ ಕೆಲಸ :

ರಾಜ್ಯದಲ್ಲಿ ಸದ್ಯ 650ಕ್ಕೂ ಹೆಚ್ಚು ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಿದ್ದಾರೆ. ಅವರಿಗೆ ಎಪಿಪಿಗಳ ಕೆಲಸವನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಹಾಗಾಗಿ ಅವರಿಗೂ ಕೆಲಸದ ಒತ್ತಡ ಹೆಚ್ಚಾಗಿದೆ.

ವಾರದಲ್ಲಿ ಆರು ದಿನ ನ್ಯಾಯಾಲಯದ ಕಲಾಪಗಳು ನಡೆದರೆ, ಅದರಲ್ಲಿ ಎರಡು ದಿನ ಮಾತ್ರ ಹಿರಿಯ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಎಪಿಪಿಗಳ ಪ್ರಕರಣಗಳ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇನ್ನುಳಿದ ನಾಲ್ಕು ದಿನ ತಮ್ಮ ಪ್ರಕರಣಗಳಲ್ಲಿ ವಾದ ಮಂಡಿಸುತ್ತಿದ್ದಾರೆ. ಇದರಿಂದ ಎರಡೂ ಕಡೆಯೂ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ.

ಪ್ರಕರಣಗಳ ವಿಲೇವಾರಿಗೆ ನ್ಯಾಯಾಧೀಶರಿಗೆ ಗುರಿ ನಿಗದಿಪಡಿಸಲಾಗಿದೆ. ಆದರೆ, ಕಕ್ಷಿದಾರರ ಪರವಾಗಿ ವಾದ ಮಂಡಿಸಲು ಕೆಲವೆಡೆ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಇಲ್ಲದಿರುವುದರಿಂದ ನಿಗದಿತ ಸಮಯಕ್ಕೆ ಪ್ರಕರಣಗಳ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಕೆಲ ನ್ಯಾಯಾಧೀಶರು, ಹೈಕೋರ್ಟ್‌ ಅಧಿಕಾರಿಗಳಿಗೆ ಪತ್ರ ಬರೆದು ನೇಮಕಾತಿ ಸಂಬಂಧ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿದ್ದಾರೆ.

100 ಹುದ್ದೆ ಭರ್ತಿಗೆ ಅನುಮತಿ

’ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. 100 ಹುದ್ದೆಗಳ ಭರ್ತಿಗೆ ಅನುಮತಿ ದೊರಕಿದ್ದು, ಸಂಬಂಧಪಟ್ಟ ನೇಮಕಾತಿ ಮಂಡಳಿಯು ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ. 75 ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಅಭಿಯೋಜನೆ ಇಲಾಖೆಯ ನಿರ್ದೇಶಕ ಕೆ.ರುದ್ರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry