ಹಾನಗಲ್‌ ಶ್ರೀ ಬಗ್ಗೆ ದ್ವೇಷ ಇಲ್ಲ: ಮಾತೆ ಮಹಾದೇವಿ

7

ಹಾನಗಲ್‌ ಶ್ರೀ ಬಗ್ಗೆ ದ್ವೇಷ ಇಲ್ಲ: ಮಾತೆ ಮಹಾದೇವಿ

Published:
Updated:
ಹಾನಗಲ್‌ ಶ್ರೀ ಬಗ್ಗೆ ದ್ವೇಷ ಇಲ್ಲ: ಮಾತೆ ಮಹಾದೇವಿ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಹಾನಗಲ್ ಕುಮಾರ ಸ್ವಾಮೀಜಿ ಬಗ್ಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ, ಅವರು ವೀರಶೈವ ಮಹಾಸಭಾ ಸ್ಥಾಪಿಸಿದ್ದರಿಂದಲೇ ಲಿಂಗಾಯತ ಧರ್ಮದ ಮಾನ್ಯತೆಗೆ ನೂರು ವರ್ಷ ಹಿನ್ನಡೆಯಾಯಿತು ಎಂಬ ಕಟುಸತ್ಯವನ್ನು ನಾನು ಹೇಳಿದ್ದೇನೆ. ಕೆಲವರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಮಹಾದೇವಿ ಹೇಳಿದರು.

‘ನಾಗನೂರು ಮಠದ ಸಿದ್ಧರಾಮ ಸ್ವಾಮೀಜಿ ಶಿವಯೋಗ ಮಂದಿರದಲ್ಲಿಯೇ ತರಬೇತಿ ಪಡೆದವರು. ಆದ್ದರಿಂದ ಅವರು ಅಲ್ಲಿಯ ಬಸವ ತತ್ವಕ್ಕೆ ವಿರುದ್ಧವಾದ ಸಂಸ್ಕೃತಿ, ಪರಂಪರೆಯನ್ನು ಖಂಡಿಸದೆ ಒಪ್ಪಿಕೊಳ್ಳುತ್ತಿದ್ದಾರೆ. ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದ ಬಹುತೇಕ ವಟುಗಳು ಪಂಚಪೀಠದವರ ಜೊತೆ ಸಖ್ಯ ಬೆಳೆಸಿ ವೀರಶೈವವೇ ಸತ್ಯ ಎಂದು ಹೇಳುತ್ತಾ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘22 ವರ್ಷಗಳ ಹಿಂದೆಯೇ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡಿದವರು ನಾವು. ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ಪಂಚಪೀಠಾಧೀಶರ, ವೀರಶೈವ ಮಹಾಸಭಾದ ಬಗ್ಗೆ ಚಕಾರ ಎತ್ತದೆ ನಮ್ಮ ಮೇಲೆ ಆರೋಪ ಮಾಡಿದ್ದು ಖಂಡನೀಯ’ ಎಂದು ಅವರು ಹೇಳಿದ್ದಾರೆ.

‘ವೀರಶೈವ ಮಹಾಸಭೆಯ ಧೋರಣೆಗಳು ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿವೆ. ಆದ್ದರಿಂದಲೇ ಎಸ್.ಎಂ.ಜಾಮದಾರ, ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಹಾಗೂ ವಿನಯ ಕುಲಕರ್ಣಿಯವರು ವಿಶ್ವ ಲಿಂಗಾಯತ ಪರಿಷತ್ ಸ್ಥಾಪಿಸುತ್ತಿದ್ದಾರೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ವಿವರಿಸಿದ್ದಾರೆ.

‘115 ವರ್ಷಗಳಿಂದ ವೀರಶೈವ ಮಹಾಸಭಾ, ಪಂಚಪೀಠಾಧೀಶರು ಲಿಂಗಾಯತ ಸಮಾಜದ ಮೇಲೆ ಕಳೆ ಬೆಳೆಸಿದ್ದಾರೆ. ಅದರ ಸತ್ಯವನ್ನು ಹೇಳುವ ಮೂಲಕ ಲಿಂಗಾಯತ ಸಮಾಜಕ್ಕೆ ಅಂಟಿದ್ದ ಕಳೆಯನ್ನು ತೆಗೆಯುವ ಕೆಲಸ ಮಾಡುತ್ತಿದ್ದೇವೆ ಎಂಬುವುದನ್ನು ಹೊರಟ್ಟಿ ಗಮನಿಸಬೇಕು’ ಎಂದು ಹೊರಟ್ಟಿ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry