ಹರ್ಷೋಲ್ಲಾಸದ ಹಳದಿಪುರ

7

ಹರ್ಷೋಲ್ಲಾಸದ ಹಳದಿಪುರ

Published:
Updated:
ಹರ್ಷೋಲ್ಲಾಸದ ಹಳದಿಪುರ

ಬೆಳಿಗ್ಗೆ ಒಂದಿಷ್ಟು ಆಟ, ಫುಟ್‌ಪಾತ್ ಊಟ, ಆಫೀಸ್‌ ಜಂಜಾಟ, ಟ್ರಾಫಿಕ್ ಕಾಟ, ಸದಾ ನೆಮ್ಮದಿಯ ಹುಡುಕಾಟ...

ಆಗ ಶುರುವಾಗಿದ್ದೇ ಹೊಸ ವರ್ಷಕ್ಕೆ ಊರು ಬಿಡೋ ಪ್ಲಾನ್. ನಮಗ್ಯಾರಿಗೂ ಅದ್ದೂರಿ ಪ್ರವಾಸ ಬೇಕಿರಲಿಲ್ಲ. ಬೆಂಗಳೂರಿನಿಂದ ಆಚೆ ಒಂದೆರಡು ದಿನ ವಿಶ್ರಾಂತಿ ಮಾಡಬೇಕು ಅನ್ನೋ ಹಂಬಲವಷ್ಟೆ. ಯಾರ‍್ಯಾರ ಜೊತೆ ಹೋಗೋದು ಅನ್ನೋ ಪ್ರಶ್ನೆಯಷ್ಟೇ ಮುಂದಿತ್ತು. ಆದರೆ, ಎಲ್ಲಿಗೆ ಅನ್ನೋ ವಿಷಯದಲ್ಲಿ ಸ್ಪಷ್ಟತೆ ಇತ್ತು. ಗೆಳೆಯ ಗಣಪತಿಯ ಮನೆಗಿಂತ ನೆಮ್ಮದಿ ತಾಣ ನಮಗಂತೂ ಗೊತ್ತಿರಲಿಲ್ಲ. ಎಂದಿನಂತೆ ನಮ್ಮ ಮೊದಲ ಆದ್ಯತೆ, ಹೊನ್ನಾವರದ ಹಳದಿಪುರ.

ಕೆಲವೇ ದಿನಗಳ ಪ್ಲಾನ್. ಎಲ್ಲರೂ ಯೆಸ್ ಅಂದುಬಿಟ್ರು. ಸಂಘಟಕ ಗಣಪತಿಯನ್ನ ಒಂದು ದಿನ ಮುಂಚಿತವಾಗಿಯೇ ಕಳುಹಿಸಿಕೊಟ್ವಿ. ಅಂದುಕೊಂಡಂತೆ, ಡಿಸೆಂಬರ್‌ 30ರ ರಾತ್ರಿ ರಾಜಾಜಿನಗರದಿಂದ ನಮ್ಮ ಪ್ರಯಾಣ ಆರಂಭ. ಬೆಂಗಳೂರಿನಿಂದ ಸುಮಾರು 470 ಕಿಲೋ ಮೀಟರ್‌ ದೂರದ ದಾರಿ.

ಸುಖಕರ ಪ್ರಯಾಣ, ದಾರಿಯುದ್ದಕ್ಕೂ ಒಂದಷ್ಟು ಚೇಷ್ಟೆ. ಯೋಗಿಯ ಗೊರಕೆ ಸದ್ದು, ಸುನೀಲನ ತರ್ಲೆ ಜೋಕು, ದುರ್ಗದ ಯೋಗಿಯ ವೆಜ್‌ ಜೋಕ್‌, ಹಿರಿಯರಾದ ಲಕ್ಷ್ಮೀ ಸರ್‌ ಅವರ ರಸಾನುಭವದ ಮಾತುಗಳು. ಇವುಗಳ ಮಧ್ಯೆದೆ ನಿದ್ರೆಗೆ ಜಾರಿದ ನಮಗೆ, ಬೆಳಗಾಗಿದ್ದೇ ಗೊತ್ತಾಗಿಲ್ಲ. ಶಿರಸಿ, ಶಿರಸಿ ಅಂತ ಕ್ಲೀನರ್‌ ಕಿರುಚುತ್ತಿದ್ರೆ, ಅದೇ ನಮ್ಮ ಅಲರಾಂ. ಗಣಪ ಕೂಡ ಅದೇ ಸಮಯಕ್ಕೆ ಸರಿಯಾಗಿ ಫೋನ್‌ ಮಾಡಿದ. ಎಲ್ಲರೂ ಎಲ್ಲಿದ್ದೀರಾ ಅಂದ. ಕುಮುಟಾ ಹತ್ರ ಅಂದ್ವಿ, ಅಲ್ಲೇ ಇಳೀರಿ ಅಂದ. ಹೊನ್ನಾವರಕ್ಕೆ ಹೊರಟವರು ಕುಮುಟಾದಲ್ಲೇ ಇಳಿದ್ವಿ.

ನಮ್ಮ ಹಳೆಯ ಸಾರಥಿ, ಷಫೀಕ್ ಭಯ್ಯಾನನ್ನ ಕರೆದುಕೊಂಡು ಗಣಪತಿ ಬಂದೇ ಬಿಟ್ಟ. ವರ್ಷದ ಬಳಿಕ, ಹಳೇ ಗೆಳೆಯರನ್ನೆಲ್ಲಾ ನೋಡಿದ ಷಫೀಕ್‌ ಭಯ್ಯಾ, ತುಂಬಾನೆ ಖುಷಿ ಪಟ್ರು. ಅಲ್ಲೇ ಚಾ ಕುಡಿದು, ಹಳದಿಪುರಕ್ಕೆ ಹೊರಟ್ವಿ.

ದಾರಿ ಮಧ್ಯೆ, ಕುಮಟಾ ಫಿಷ್‌ ಮಾರ್ಕೆಟ್‌ಗೊಂದು ವಿಸಿಟ್‌. ನಮ್ಮೂರಿನ ಎಪಿಎಂಸಿ ನೆನಪಾಯ್ತು. ತರಕಾರಿ ಬದಲು, ಬಗೆಬಗೆಯ ಮೀನುಗಳು. ನಂತರ ನಮ್ಮ ಗಮ್ಯತಾಣದತ್ತ ಪ್ರಯಾಣ. ಸಮುದ್ರದ ಅಲೆಗಳು ಕಣ್ಣಿಗೆ ಕಾಣಿಸುತ್ತಿದ್ದಂತೆ, ಎಲ್ಲರ ಮನದಲ್ಲೂ ಉತ್ಸಾಹ ಇಮ್ಮಡಿಯಾಯ್ತು.

ಗಣಪತಿ ಮನೆಗೆ ಎಂಟ್ರಿಕೊಟ್ಟವರೇ, ಅಮ್ಮ, ಅಕ್ಕ, ಭಾವನ ಜೊತೆ ಒಂದಷ್ಟು ಹರಟಿದ್ವಿ. ಕಣ್ಣು ಹಾಯಿಸುವಷ್ಟು ದೂರದಲ್ಲಿ ಕಡಲು, ಮನೆಯ ಸುತ್ತ ಮುತ್ತ ಮರಳು, ದಾಹ ತಣಿಸೋಕೆ ಕೈಬೀಸಿ ಕರೆಯುತ್ತಿದ್ದ ಕಲ್ಪವೃಕ್ಷ. ಸುಂದರ ಪರಿಸರದಲ್ಲೊಂದು ಮನೆ, ಹಿತ್ತಲಲ್ಲಿ ಅಡುಗೆ ಮನೆ, ನಮ್ಮ ಪಾಲಿಗೆ ಅದೇ ಭೋಜನಶಾಲೆ. ಎಲ್ಲರೂ ಫ್ರೆಷ್‌ ಆಗುತ್ತಿದ್ದಂತೆ, ಬಿಸಿಬಿಸಿ ನೀರು ದೋಸೆ, ಕಾಯಿಚಟ್ನಿ ನಮಗಾಗಿ ಕಾದಿತ್ತು. ಭರ್ಜರಿ ಬ್ಯಾಟಿಂಗ್, ಎಲ್ಲರದ್ದೂ ಬಿಗ್‌ ಸ್ಕೋರ್.

ನಂತರ ಮತ್ತೆ ಕಡಲ ಕಡೆಗೆ ಜರ್ನಿ. ವಾಲಿಬಾಲ್‌ ಕೋರ್ಟ್ ರೆಡಿ ಮಾಡೋ ಸಂಭ್ರಮ. ಒಂದಷ್ಟು ಆಟ. ಆದ್ರೂ ರಣ ಬಿಸಿಲಿನ ಮುಂದೆ ನಮ್ಮ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕೆಲವೊತ್ತಿನಲ್ಲೇ ಮನೆಗೆ ಬಂದು, ಅಘನಾಶಿನಿಗೆ ಹೊರಡೋ ನಿರ್ಧಾರ ಮಾಡಿದ್ವಿ. ಅಲ್ಲಿ ಗಣಪನ ಮತ್ತೊಬ್ಬ ಅಕ್ಕ ಇದ್ದಾರೆ. ಹಳದೀಪುರದಿಂದ ಸುಮಾರು 20 ಕಿಲೋ ಮೀಟರ್‌ ಪ್ರಯಾಣ.ಕಡಲತಡಿಯಲ್ಲಿ ಸ್ನೇಹಿತರ ಮೋಜು ಮಸ್ತಿ

ಅಕ್ಕನ ಮನೆಯಲ್ಲಿದ್ದ ಅಜ್ಜಿ ಎಲ್ಲರಿಗೂ ಕವಳ ರೆಡಿ ಮಾಡಿಕೊಟ್ರು. ಅಲ್ಲೇ ಒಂದಷ್ಟು ವಿಶ್ರಾಂತಿ ಮಾಡಿ, ಸುತ್ತಾಟ ನಡೆಸಿದ್ವಿ. ಹೊತ್ತು ಮುಳುಗುತ್ತಲೇ ನಾವು ಮತ್ತೆ ಹಳದಿಪುರ ಸೇರಬೇಕಿತ್ತು. ಕಡಲ ತಡಿಯಲ್ಲೇ ಹೊಸವರ್ಷದ ಸಂಭ್ರಮಕ್ಕೆ ಸಿದ್ಧತೆ ಮಾಡಬೇಕಿತ್ತು. ರಾತ್ರಿಯಿಡೀ ಕ್ಯಾಂಪ್ ಫೈರ್ ಸಂಭ್ರಮಕ್ಕೆ ಸಾಥ್ ನೀಡಿತ್ತು.

ಮರುದಿನ ಬೆಳಿಗ್ಗೆ ಚುಮುಚಮು ಚಳಿ, ಅಲೆಗಳ ಅಬ್ಬರ ನಮ್ಮನ್ನ ಎಚ್ಚರಿಸಿತು. ಹೊಸವರ್ಷದ ಸೂರ್ಯೋದಯಕ್ಕೆ ನಮ್ಮನ್ನ ಸ್ವಾಗತಿಸಿತು. ನಮ್ಮ ಟೆಂಟ್‌ ಸಮೀಪದಲ್ಲೇ ಇದ್ದ ಬೆಟ್ಟವೊಂದು ನಮ್ಮನ್ನ ಕೂಗಿ ಕರೆದಿತ್ತು. ವಾಕ್‌ ಹೋಗೋಣ ಅಂತ ಹೊರಟವರಿಗೆ ಆಗಲೇ ಗೊತ್ತಾಗಿದ್ದು ದೂರದ ಬೆಟ್ಟ ನುಣ್ಣಗೆ ಅನ್ನೋ ಸತ್ಯ. ಮಾತನಾಡುತ್ತಾ ಮಾತನಾಡುತ್ತಾ ಸುಮಾರು 3 ಕಿಲೋ ಮೀಟರ್‌ ಸಾಗಿದ್ವಿ. ವಾಪಸ್‌ ಬರೋ ಹೊತ್ತಿಗೆ, ಪಂಚರ್. ಆದ್ರೂ ಆ ಸುಂದರ ಪರಿಸರ ನಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಹಾಳು ಮಾಡಲಿಲ್ಲ.

ವಾಪಸ್ ಟೆಂಟ್ ಬಳಿ ಬಂದವರಿಂದ ಮತ್ತೆ ವಾಲಿಬಾಲ್ ಮ್ಯಾಚ್. ಸುಮಾರು 10 ಗಂಟೆ ವೇಳೆಗೆ ಮನೆಗೆ ಹೋಗಿ ಎಲ್ಲರೂ ಫ್ರೆಷ್ ಆದ್ವಿ. ಮೊದಲೇ ಹೊಸವರ್ಷದ ಮೊದಲ ದಿನ, ಅಂದಿನ ಕಾರ್ಯಕ್ರಮ ದೇಗುಲ ದರ್ಶನ. ಹೊಟ್ಟೆ ದೇವರು ಸಮಾಧಾನವಾದ ಬಳಿಕ, ಎಲ್ಲರೂ ಇಡಗುಂಜಿ ಗಣಪನ ದರ್ಶನಕ್ಕೆ ಹೊರಟ್ವಿ, ಅಲ್ಲಿಂದ ಮುರಡೇಶ್ವರ.

ಎರಡನೇ ದಿನ ಮನೆಯಲ್ಲೇ ನಿದ್ರೆಗೆ ಜಾರಿದ್ವಿ. ಸುತ್ತಾಡಿ ಸುತ್ತಾಡಿ ಸುಸ್ತಾದವರಿಗೆ, ತಲೆಗೆ ದಿಂಬು ಸಿಗುತ್ತಿದ್ದಂತೆ ನಿದ್ರೆ ಬಂತು. ಬೆಳಗಿನ ಜಾವ ಮಲಗಿದ್ದ ಜಾಗದಲ್ಲೇ ಒಂದಷ್ಟು ಹಾಸ್ಯ ಚಟಾಕಿ. ಮತ್ತೊಂದು ರೌಂಡ್ ವಾಕಿಂಗ್, ವಾಲಿಬಾಲ್, ಜೊತೆಯಲ್ಲೇ ಈಜು ತಜ್ಞ ಗಣಪತಿಯಿಂದ ನಮಗೆಲ್ಲಾ ಸಮುದ್ರದಲ್ಲಿ ಈಜು ಕಲಿಸೋ ವ್ಯರ್ಥ ಪ್ರಯತ್ನ. ಅಯ್ಯೋ ಮುಗೀತಲ್ಲಪ್ಪ ಟ್ರಿಪ್‌, ಸಂಜೆ ಮತ್ತೆ ಬಸ್‌ ಹತ್ತಬೇಕಲ್ಲಪ್ಪ ಅಂತ ಬೆಳಗ್ಗೆಯೇ ಮನಸ್ಸು ಗೊಣಗುತ್ತಿತ್ತು. ಬೇಸರ ಮನಸ್ಸಿಗೆ ಮಾತ್ರ, ಹೊಟ್ಟೆಗಲ್ಲ. ಇದು ನಮ್ಮೆಲ್ಲರ ಪಾಲಿಸಿ. ಗೊಂದಲವನ್ನ ಬದಿಗಿಟ್ಟು, ಬೆಳಗ್ಗೆಯೇ ದೋಸೆ ಮೀನು ಸಾರು ಬಾರಿಸಿದ್ವಿ.

ಹೊತ್ತು ಜಾರಿತ್ತು, ಹೊನ್ನಾವರದಿಂದ ರಾತ್ರಿ ಹತ್ತರ ಬಸ್‌. 8 ಗಂಟೆಗೆ ಹಳದಿಪುರ ಬಿಟ್ಟೆವು. ಎಲ್ಲರ ಮನಸ್ಸು ಭಾರವಾಗಿತ್ತು. ಗಣಪತಿ ಕುಟುಂಬದವರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಕುಟುಂಬದವರ ಜೊತೆ ಫೋಟೋ ಕ್ಲಿಕ್ಕಿಸಿ, ಕಡಲ ಮರಳ ಹಾದಿಯಲ್ಲೇ ಪ್ರಯಣ ಬೆಳೆಸಿದ್ವಿ. ಬಸ್‌ ಹತ್ತಿ ಮಲಗಿದ ನಮಗೆ ಕಣ್ಣು ಬಿಡುತ್ತಿದ್ದಂತೆ, ನೆಲಮಂಗಲ ಫ್ಲೈಓವರ್‌ ಕಾಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry