ತಯಾರಿಕಾ ಹಂತದಲ್ಲೇ ಸೆಸ್‌?

7

ತಯಾರಿಕಾ ಹಂತದಲ್ಲೇ ಸೆಸ್‌?

Published:
Updated:
ತಯಾರಿಕಾ ಹಂತದಲ್ಲೇ ಸೆಸ್‌?

ನವದೆಹಲಿ: ಪಾನ್‌ ಮಸಾಲಾದಂತಹ ಕೆಲ ಸರಕುಗಳ ತಯಾರಿಕೆ ಹಂತದಲ್ಲಿಯೇ ಸೆಸ್‌ ವಿಧಿಸುವುದನ್ನು ಜಿಎಸ್‌ಟಿ ಮಂಡಳಿಯು ‍ಪರಿಗಣಿಸುವ ಸಾಧ್ಯತೆ ಇದೆ.

ಸರಕು ತಯಾರಕರ ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ವಿಧಿಸಲು ಮತ್ತು ವರಮಾನ ಸಂಗ್ರಹ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳುವುದನ್ನು ಪರಿಶೀಲಿಸಲಾಗುತ್ತಿದೆ. ತಯಾರಕರು ಪೂರೈಸಿದ ಸರಕಿನ ಮೇಲೆ ತೆರಿಗೆ ವಿಧಿಸುವ  ಬದಲಿಗೆ, ತಯಾರಿಕಾ ಸಾಮರ್ಥ್ಯ ಆಧರಿಸಿ ಸೆಸ್‌ ವಿಧಿಸಿದರೆ ವರಮಾನ ಹೆಚ್ಚಲಿದೆ ಎನ್ನುವುದು ಮಂಡಳಿಯ ಆಲೋಚನೆಯಾಗಿದೆ. ತಯಾರಿಕೆ ಹಂತದಲ್ಲಿಯೇ ಸೆಸ್‌ ವಿಧಿಸುವುದು ಜಾರಿಗೆ ಬಂದ ನಂತರ, ಸರಕಿನ ಪೂರೈಕೆ ಮೇಲೆ ಸೆಸ್‌ ವಿಧಿಸಲಾಗುವುದಿಲ್ಲ.

ಈ ಸಂಬಂಧ ‘ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ 2017’ಯಲ್ಲಿ ತಿದ್ದುಪಡಿ ತರುವುದನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈ ಕಾಯ್ದೆ ತಿದ್ದು‍ಪಡಿ ಪ್ರಸ್ತಾವದ ಪ್ರಕಾರ, ತಯಾರಕರು ಘೋಷಿಸಿಕೊಂಡ  ಉತ್ಪಾದನಾ ಸಾಮರ್ಥ್ಯದ ಮೇಲೆ ಸೆಸ್‌ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಾನ್‌ ಮಸಾಲಾದಂತಹ ಉತ್ಪನ್ನಗಳನ್ನು ಸಣ್ಣ ಸ್ಯಾಚೆಟ್‌ಗಳಲ್ಲಿ ಪೂರೈಕೆ ಮಾಡುವುದರಿಂದ ಅವುಗಳ ಪೂರೈಕೆ ಮೇಲೆ ನಿಗಾ ಇಡುವುದು ತೆರಿಗೆ ಇಲಾಖೆಗೆ ಕಠಿಣ ಕೆಲಸ ಆಗಿರಲಿದೆ. ಇದರಿಂದ ತಯಾರಕರು ಸುಲಭವಾಗಿ ತೆರಿಗೆ ತಪ್ಪಿಸಲೂ ಸಾಧ್ಯವಾಗಲಿದೆ.

ಜಿಎಸ್‌ಟಿ ಮಂಡಳಿಯು ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ ನಂತರ, ಸಂಸತ್ತಿನ ಎರಡನೆ ಹಂತದ ಬಜೆಟ್‌ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು.

ಸದ್ಯಕ್ಕೆ ಪಾನ್‌ ಮಸಾಲಾ ಮೇಲೆ ಶೇ 28ರಷ್ಟು ಗರಿಷ್ಠ ಜಿಎಸ್‌ಟಿ ಮತ್ತು ಅದರ ಮೇಲೆ ಶೇ 60ರಷ್ಟು ಸೆಸ್‌ ವಿಧಿಸಲಾಗುತ್ತಿದೆ. ಗುಟ್ಕಾ ಒಳಗೊಂಡ ಪಾನ್‌ ಮಸಾಲಾ ಮೇಲೆ ಶೇ 204ರಷ್ಟು ಸೆಸ್‌ ವಿಧಿಸಲಾಗುತ್ತಿದೆ.

ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾದ ಉತ್ಪನ್ನಗಳು ಮತ್ತು ವಿಲಾಸಿ ಸರಕುಗಳ ಮೇಲೆ ಸೆಸ್‌ ವಿಧಿಸಲಾಗುತ್ತಿದೆ. ಸೆಸ್‌ ಮೂಲಕ ಸಂಗ್ರಹವಾಗುವ ವರಮಾನವನ್ನು ರಾಜ್ಯಗಳಿಗೆ ಆಗುವ ತೆರಿಗೆ ವರಮಾನ ನಷ್ಟ ಭರ್ತಿಗೆ ಬಳಸಿಕೊಳ್ಳಲಾಗುತ್ತಿದೆ.

ಜಿಎಸ್‌ಟಿಆರ್‌–3ಬಿ ಸಲ್ಲಿಕೆಗೆ ಅವಧಿ ವಿಸ್ತರಣೆ ಅವಧಿಯು ಜನವರಿ 22ಕ್ಕೆ ಅಂತ್ಯವಾಗಲಿದೆ.

ಈ ಹಿಂದೆ ಡಿಸೆಂಬರ್‌ನಲ್ಲಿ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ಜ.22ರವರೆಗೆ ವಿಸ್ತರಣೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry