15 ದಿನದೊಳಗೆ 2 ಇಂದಿರಾ ಕ್ಯಾಂಟೀನ್‌ ಆರಂಭ

7

15 ದಿನದೊಳಗೆ 2 ಇಂದಿರಾ ಕ್ಯಾಂಟೀನ್‌ ಆರಂಭ

Published:
Updated:
15 ದಿನದೊಳಗೆ 2 ಇಂದಿರಾ ಕ್ಯಾಂಟೀನ್‌ ಆರಂಭ

ಮಂಡ್ಯ: ನಗರದಲ್ಲಿ ರಾಜ್ಯ ಸರ್ಕಾರದ ಎರಡು ಇಂದಿರಾ ಕ್ಯಾಂಟೀನ್‌ ಕಾಮಗಾರಿ ಭರದಿಂದ ಸಾಗಿದೆ. ಲೋಕೋಪಯೋಗಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ಕ್ಯಾಂಟೀನ್‌ಗಳು ಶೀಘ್ರ ಆರಂಭಗೊಳ್ಳಲಿವೆ.

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆ ಮಾಡಲಾಗಿದ್ದು ಸದ್ಯ ಜಿಲ್ಲಾ ಕೇಂದ್ರಗಳಲ್ಲಿ ಕಾಮಗಾರಿ ಆರಂಭವಾಗಿದೆ. ಪ್ರಿ–ಕ್ಯಾಸ್ಟಿಂಗ್‌ ಕಾಂಕ್ರೀಟ್‌ ತಂತ್ರಜ್ಞಾನದಂತೆ ಮೊದಲೇ ರೂಪಿಸುವ ಕಟ್ಟಡ ಸಾಮಗ್ರಿಗಳನ್ನು ಜೋಡಿಸುವ ಕೆಲಸ ನಗರದಲ್ಲಿ ವಾರದಿಂದ ನಡೆಯುತ್ತಿದೆ. 40 ಅಡಿ ಎತ್ತರದ ಕ್ರೇನ್‌ನಿಂದ ಸಾಮಗ್ರಿ ಜೋಡಣೆ ಮಾಡಲಾಗುತ್ತಿದೆ. ಜ.27ರಂದು ಕ್ಯಾಂಟೀನ್‌ ಕಾರ್ಯಾರಂಭ ಮಾಡುವ ಯೋಜನೆ ಇತ್ತು, ಆದರೆ ಕಾಮಗಾರಿ ತಡವಾಗಿ ಆರಂಭವಾಗಿರುವ ಕಾರಣ ಕಾರ್ಯಾರಂಭವೂ ತಡವಾಗಲಿದೆ.

‘ನಗರದಲ್ಲಿ ಅಡುಗೆಮನೆ ಸಹಿತ ಕ್ಯಾಂಟೀನ್‌ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಬೇರೆಡೆ ಅಡುಗೆ ಮಾಡಿ ಕ್ಯಾಂಟೀನ್‌ಗೆ ತರಲಾಗುತ್ತದೆ. ಆದರೆ ಜಿಲ್ಲಾ ಕೇಂದ್ರಗಳಲ್ಲಿ ಇಲ್ಲೇ ಅಡುಗೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರವೇ ನೀಡಿರುವ ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಕಾಮಗಾರಿ ನಡೆಸುತ್ತಿದ್ದಾರೆ. ನಗರಸಭೆ ವತಿಯಿಂದ ಕ್ಯಾಂಟೀನ್‌ಗೆ ಅವಶ್ಯವಿರುವ ಮೂಲಸೌಲಭ್ಯ ಒದಗಿಸಿಕೊಡುತ್ತೇವೆ’ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರತಾಪ್‌ ಹೇಳಿದರು.

ಟೆಂಡರ್‌ ಕಾರ್ಯ ಪೂರ್ಣ: ಇಂದಿರಾ ಕ್ಯಾಂಟೀನ್‌ಗೆ ಮೂಲಸೌಲಭ್ಯ ಒದಗಿಸುವ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ನೀರು, ವಿದ್ಯುತ್‌ ಸಂಪರ್ಕ್‌, ಒಳಚರಂಡಿ ವ್ಯವಸ್ಥೆ, ಕ್ಯಾಂಟೀನ್‌ ಸುತಲ್ಲೂ ಬೇಲಿ, ಭದ್ರತಾ ಸಿಬ್ಬಂದಿ ನೇಮಕ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಜವಾಬ್ದಾರಿ ನಗರಸಭೆ ಮೇಲಿದೆ. ಇದೆಲ್ಲಕ್ಕೂ ಎಸ್‌ಎಫ್‌ಸಿ ಅನುದಾನ ಸೇರಿ ತೆರಿಗೆ ಹಣ ಬಳಸುವಂತೆ ಸರ್ಕಾರ ಸೂಚನೆ ನೀಡಿದೆ. ಅಡುಗೆ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ನಿರ್ವಹಣೆ ಮಾಡಲಿದ್ದಾರೆ.

‘ಜನಸಂದಣಿ ಹೆಚ್ಚಿರುವ ಭಾಗದಲ್ಲೇ ಇಂದಿರಾ ಕ್ಯಾಂಟೀನ್‌ ಆರಂಭಿಸಬೇಕು ಎಂಬ ನಿಯಮವಿದೆ. ಈಗ ನಾವು ಆರಂಭಿಸುತ್ತಿರುವ ಎರಡೂ ಸ್ಥಳದ ಸಮೀಪದಲ್ಲಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ, ಹೊಳಲು ಸರ್ಕಲ್‌, ತರಕಾರಿ ಮಾರುಕಟ್ಟೆಗಳಿವೆ. ಹೀಗಾಗಿ ಇದರಿಂದ ಕ್ಯಾಂಟೀನ್‌ ವಹಿವಾಟಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ನಗರಸಭೆ ಪೌರಾಯುಕ್ತ ಟಿ.ನರಸಿಂಹಮೂರ್ತಿ ಹೇಳಿದರು.

‘ಈಗಾಗಲೇ ನಗರದಾದ್ಯಂತ ವಿವಿಧ ರಾಜಕೀಯ ಪಕ್ಷಗಳ 10ಕ್ಕೂ ಹೆಚ್ಚು ₹ 10 ಕ್ಯಾಂಟೀನ್‌ಗಳಿವೆ. ಅವು ಚುನಾವಣೆ ಮುಗಿಯುತ್ತಿದ್ದಂತೆ ಉಳಿಯುತ್ತವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸರ್ಕಾರದಿಂದ ಆರಂಭವಾಗುತ್ತಿರುವ ಇಂದಿರಾ ಕ್ಯಾಂಟೀನ್‌ ಉಳಿಯಬಹುದು. ಬೆಂಗಳೂರಿನಲ್ಲಿ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಅಶೋಕ್‌ ನಗರದ ಭರತ್‌ಗೌಡ ಹೇಳಿದರು.

ಕಾಮಗಾರಿಗೆ ಅಡ್ಡಿ: ಅಂದುಕೊಂಡಂತೆ ಕಾಮಗಾರಿ ಆರಂಭವಾಗಿದ್ದರೆ ಜ.27ರಂದು ಕ್ಯಾಂಟೀನ್‌ ಆರಂಭಗೊಳ್ಳಬೇಕಾಗಿತ್ತು. ಆದರೆ ಲೋಕೋಪಯೋಗಿ ಕಚೇರಿ ಆವರಣದಲ್ಲಿ ಕೆಲವರು ಕ್ಯಾಂಟೀನ್‌ ಆರಂಭಿಸುವುದಕ್ಕೆ ತಡೆಯೊಡ್ಡಿದ್ದಾರೆ. ಕಾರ್ಮಿಕರು ನಾಲ್ಕುಬಾರಿ ವಾಪಸ್‌ ತೆರಳಿದ್ದಾರೆ. ಕಚೇರಿ ಆವರಣದಲ್ಲಿ ವಾಹನ ನಿಲ್ಲಿಸಲು ಸಮಸ್ಯೆಯಾಗುತ್ತದೆ ಎಂದು ಕಾಮಗಾರಿಗೆ ಅಡ್ಡಿಪಡಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಪೊಲೀಸ್‌ ಭದ್ರತೆಯೊಂದಿಗೆ ಕಾಮಗಾರಿ ಆರಂಭಿಸಲಾಗಿದೆ.

ಇದಕ್ಕೂ ಮೊದಲು ಹೊಳಲು ವೃತ್ತದ ಲಕ್ಷ್ಮಿ ಜನಾರ್ಧನ ದೇವಾಲಯ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಕಾರಣ ಅದನ್ನು ಕೈಬಿಡಲಾಯಿತು.

ಫೆ. 8ಕ್ಕೆ ಕ್ಯಾಂಟೀನ್‌ ಕಾರ್ಯಾರಂಭ?

ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.8ರಂದು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಅಂಬೇಡ್ಕರ್‌ ಭವನ ಹಾಗೂ ಕನಕ ಭವನಗಳನ್ನು ಅಂದು ಉದ್ಘಾಟಿಸಲಿದ್ದಾರೆ. ಆ ವೇಳೆಗೆ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಪೂರ್ಣಗೊಂಡಿದ್ದರೆ ಅಂದೇ ಉದ್ಘಾಟನೆಯನ್ನೂ ನೆರವೇರಿಸುವರು ಎಂದು ನಗರಸಭೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry