ಚರಿತ್ರೆ ದಾಖಲಿಸುವ ಉದ್ಯಾನ

7

ಚರಿತ್ರೆ ದಾಖಲಿಸುವ ಉದ್ಯಾನ

Published:
Updated:
ಚರಿತ್ರೆ ದಾಖಲಿಸುವ ಉದ್ಯಾನ

ಸಾಮಾಜಿಕ ಪರಿವರ್ತನೆಗೆ ದುಡಿದವರ ಸ್ಥೂಲ ‍ಪರಿಚಯ ಮಾಡಿಕೊಡುವ ಉಬ್ಬುಚಿತ್ರಗಳ ಉದ್ಯಾನ ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಆವರಣದಲ್ಲಿ ತಲೆ ಎತ್ತಿದೆ. ವಿದ್ಯಾರ್ಥಿಗಳ ಮನದಲ್ಲಿ ಸಾಮಾಜಿಕ ಪ್ರಜ್ಞೆ ಬಿತ್ತುವ ಮತ್ತು ಆ ಮೂಲಕ ಬಡತನ, ಅಸಮಾನತೆ, ಶೋಷಣೆ ಹೋಗಲಾಡಿಸುವ ಆಶಯ ಈ ಉದ್ಯಾನ ನಿರ್ಮಾಣದ ಹಿಂದೆ ಇದೆ.

ಸಮಾನತೆ ಪ್ರತಿಪಾದಿಸಿದ ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ಬಿ.ಆರ್. ಅಂಬೇಡ್ಕರ್, ಕಾನ್ಷಿರಾಂ, ಪ್ರೊ.ಬಿ. ಕೃಷ್ಣಪ್ಪ, ಬಿ.ಬಸವಲಿಂಗಪ್ಪ ಅವರ ತತ್ವನಿಷ್ಠೆ ಉಬ್ಬುಚಿತ್ರಗಳಲ್ಲಿ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ನಾಯಕರ ಜೀವನ–ಸಾಧನೆಯ ಜೊತೆಗೆ ಕೋರೆಗಾವ್ ಸ್ತಂಭ, ಮಹಾಡದ ಚೌಡಾರ್ ಕೆರೆ ನೀರು ಮುಟ್ಟುವ ಐತಿಹಾಸಿಕ ನೆನಪಿನ ಚಿತ್ರಗಳು ಸಮಾಜದ ಅಂಚಿನಲ್ಲಿ ಉಳಿದವರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಯತ್ನಿಸುತ್ತಿವೆ.

‘ದಲಿತರ ಬದುಕಿನ ಬಗ್ಗೆ, ಸಮಾನತೆ ಪ್ರತಿಪಾದಿಸಿದ ಚಳವಳಿಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ಯಾನ ಇದು’ ಎನ್ನುತ್ತಾರೆ ಕೇಂದ್ರದ ನಿರ್ದೇಶಕ ಡಾ.ಸಿ. ಸೋಮಶೇಖರ್.

ಕೋರೆಗಾಂವ್ ವಿಜಯೋತ್ಸವ ನೆನಪಿನ ಸ್ತಂಭ ಉದ್ಯಾನದ ಪ್ರಮುಖ ಆಕರ್ಷಣೆ. 1818ರಲ್ಲಿ ಮಹಾರಾಷ್ಟ್ರದ ಪುಣೆ ಬಳಿಯ ಕೋರೆಗಾಂವ್‌ನ ಭೀಮಾ ನದಿಯ ದಡದ ಮೇಲೆ ಪೇಶ್ವೆ ಎರಡನೇ ಬಾಜೀರಾಯನ ಸೇನೆ ವಿರುದ್ಧ ಬ್ರಿಟಿಷ್ ಸೇನೆ ಯುದ್ಧ ನಡೆಸಿತು. ಬ್ರಿಟಿಷ್‌ ಸೈನ್ಯದಲ್ಲಿ ಮಹಾರ್ ಸಮುದಾಯದ ಸೈನಿಕರೂ ಇದ್ದರು. ಜನವರಿ 1, 1818ರಂದು ಪೇಶ್ವೆಯ ಸೇನೆಯ ವಿರುದ್ಧ ಮಹಾರ್ ರೆಜಿಮೆಂಟ್‌ ವಿಜಯ ಸಾಧಿಸಿತು.

‘ಇತಿಹಾಸದಲ್ಲಿ ಧರ್ಮಕ್ಕಾಗಿ, ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧಗಳು ನಡೆದಿವೆ. ಆದರೆ, ಕೋರೆಗಾಂವ್‌ ಯುದ್ಧವು ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ, ಜಾತೀಯತೆಯ ವಿರುದ್ಧ ನಡೆದ ಯುದ್ಧವಾಗಿತ್ತು. ಇದರ ನೆನ‍ಪಿಗಾಗಿ ಅಲ್ಲಿ 65 ಅಡಿ ಎತ್ತರದ ಸ್ತಂಭ ನಿರ್ಮಾಣ ಮಾಡಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿನ ಉದ್ಯಾನದಲ್ಲೂ 24 ಅಡಿ ಎತ್ತರ ಏಕಶಿಲಾ ಸ್ತಂಭ ಸ್ಥಾಪಿಸಲಾಗಿದೆ’ ಎನ್ನುತ್ತಾರೆ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ.

ಉಬ್ಬುಚಿತ್ರಗಳ ಉದ್ಯಾನ ವಿದ್ಯಾರ್ಥಿಗಳ ಸಂತೋಷಕ್ಕೂ ಕಾರಣವಾಗಿದೆ.

‘ಕೃಷಿ ಮತ್ತು ಪಶು ಸಂಗೋಪನಾ ವಿಶ್ವವಿದ್ಯಾಲಗಳಲ್ಲಿ ಹೊಸ ತಳಿಗಳನ್ನು ಪ್ರಯೋಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಲಾಗುತ್ತದೆ. ಆದರೆ, ಸಾಂಪ್ರದಾಯಿಕ ಕೋರ್ಸ್ ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳಿಂದ ಯಾವುದೇ ಪ್ರತಿಫಲ ನಿರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಧ್ಯಯನ ಕೇಂದ್ರ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ದೇಶದ ಸಾಂಸ್ಕೃತಿಕ, ಆರ್ಥಿಕ ಆಯಾಮದ ಚರಿತ್ರೆಯನ್ನು ಹೊಸ ದೃಷ್ಟಿಕೋನದಿಂದ ಗ್ರಹಿಸಿ ಸಂಶೋಧನೆ ಕೈಗೊಳ್ಳಲು ಈ ತಾಣ ಸ್ಫೂರ್ತಿಯ ಚಿಲುಮೆ’ ಎನ್ನುತ್ತಾರೆ ಕನಕಪುರದ ಪ್ರಗತಿಪರ ಹೋರಾಟಗಾರ ಬಿ.ಶಿವಣ್ಣ.

‘ಅಂಬೇಡ್ಕರ್ ಪ್ರತಿಪಾದಿಸಿದ ಆರ್ಥಿಕ ನೀತಿ, ನೀರಾವರಿ ಯೋಜನೆಗಳು, ಮಹಿಳಾ ಮೀಸಲಾತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಜನರ ಮನಮುಟ್ಟುವಂತೆ ಮಾಹಿತಿ ನೀಡುವ ವ್ಯವಸ್ಥೆ ಇಲ್ಲ. ಈ ದೃಷ್ಟಿಯಿಂದ ಗ್ರಂಥಾಲಯ, ಉಬ್ಬುಚಿತ್ರಗಳ ಮೇಲೆ ಕೆತ್ತಿರುವ ಮಾಹಿತಿ ಉಪಯುಕ್ತವಾಗಿದೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ವಿದ್ಯಾರ್ಥಿ ಸಿದ್ದಾರ್ಥ ಆನಂದ.

ಬೆಂಗಳೂರು ವಿಶ್ವವಿದ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಉದ್ಯಾನವನ್ನು ನಿರ್ಮಿಸಿದೆ. ಉಬ್ಬುಚಿತ್ರಗಳ ನಿರ್ಮಾಣಕ್ಕೆ 30 ಮಂದಿ ಕಲಾವಿದರು ಶ್ರಮಿಸಿದ್ದು, ₹16 ಲಕ್ಷ ವ್ಯಯಿಸಲಾಗಿದೆ. ಚಿತ್ರಕಲಾವಿದರಾದ ಚನ್ನಪಟ್ಟಣ ಶಿವಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಶೋಕ್ ಛಲವಾದಿ ಮತ್ತು ಕೇಂದ್ರದಲ್ಲಿ ಹಿಂದೆ ನಿರ್ದೇಶಕರಾಗಿ ಕೆಲಸ ಮಾಡಿದ ಹೊನ್ನು ಸಿದ್ದಾರ್ಥ ಅವರ ಪರಿಶ್ರಮದಿಂದ ಈ ಉದ್ಯಾನ ಸಾಕಾರಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry