ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿ ಕೋಗಿಲೆಗಳ ತಾಲೀಮು

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಹತ್ತಾರು ಪುಟ್ಟಪುಟ್ಟ ಕೋಗಿಲೆಗಳ ಹಿಂಡು, ಒಂದಕ್ಕಿಂತ ಒಂದರ ಧ್ವನಿ ಮಧುರ. ಜತೆಗೆ ಪರಿಣಿತ ಹಿರಿ ಕೋಗಿಲೆಗಳ ರಮ್ಯಗಾನದ ಸೆಳೆತ, ಕುಣಿತ...

ಇದು ‘ಸರಿಗಮಪ ಲಿಟ್ಲ್ ಚಾಂಪ್ಸ್‌ ಸೀಸನ್‌ 14’ರ ಸೆಟ್‌ನಲ್ಲಿ ಕಂಡ ದೃಶ್ಯ.

ಹಂಸಲೇಖ ಮಹಾಗುರುವಾಗಿ, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಖ್ಯಾತ ಗಾಯಕ ವಿಜಯಪ್ರಕಾಶ್‌ ನಿರ್ಣಾಯಕರಾಗಿದ್ದಾರೆ. ಈ ಮರಿಕೋಗಿಲೆಗಳಿಗೆ ತರಬೇತಿ ನೀಡುತ್ತಿರುವವರು ಪ್ರೊ.ಸುಚೇತನ ರಂಗಸ್ವಾಮಿ. ಸ್ಪರ್ಧೆಯಲ್ಲಿ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಹಾಡುತ್ತಿದ್ದಾರೆ. ಅನುಭವ, ತರಬೇತಿ, ಪ್ರೋತ್ಸಾಹ ಮತ್ತವರ ಕನಸುಗಳನ್ನು ಆ ಮಕ್ಕಳು ತಮ್ಮ ಸಿಹಿ ನುಡಿಗಳಲ್ಲಿ ಇಲ್ಲಿ ಹಂಚಿಕೊಂಡಿದ್ದಾರೆ.

ನೂರಾರು ಕನಸುಗಳನ್ನು ಹೊತ್ತ ಮರಿ ಕೋಗಿಲೆಗಳು ರಾಜ್ಯದ ವಿವಿಧ ಜಿಲ್ಲೆ, ಪ್ರದೇಶಗಳಿಂದ ಬೆಂಗಳೂರಿಗೆ ಹಾರಿಕೊಂಡು ಬಂದಿವೆ. ಸಂಗೀತ ಲೋಕದಲ್ಲಿ ಅಪಾರ ಸಾಧನೆಗೈಯಲು ಹಾತೊರೆಯ್ಯುತ್ತಿವೆ. ಸದ್ಯ ಪ್ರೇಕ್ಷಕರ ಮನಸೊರೆಗೊಳ್ಳುವಂತೆ ಗಾನ ಬನದಲ್ಲಿ ರಂಜಿಸುತ್ತಿವೆ.

ಅಮ್ಮ ನನ್ನ ಗುರು

ನಾನು ಬೆಂಗಳೂರಿನ ದತ್ತ ಪ್ರಸಾದ್‌, ಇದೇ ಮೊದಲ ಬಾರಿಗೆ ಈ ಶೊ ನಲ್ಲಿ ಹಾಡ್ತೀದ್ದೀನಿ. ಮೂಲವಾಗಿ ನಾನು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಕೊಡುವವನು. ಅಮ್ಮನೇ ನನ್ನ ಸಂಗೀತದ ಗುರು. ಸಿನಿಮಾ ಸಂಗೀತ ಕಲಿಯಲು ತುಂಬಾ ಉತ್ಸುಹಕನಾಗಿದ್ದೇನೆ. ಹೊಸ ಬಗೆಯ ಅನುಭವ ಆಗ್ತೀದೆ, ಕೆಲವು ಸಾರಿ ಸಿನಿಮಾ ಹಾಡುಗಳನ್ನು ಹಾಡುವಾಗ ಶಾಸ್ತ್ತೀಯ ಸಂಗೀತದ ಶೈಲಿ ಗೊತ್ತಿಲ್ಲದೆ ಬಂದು ಬಿಡುತ್ತೆ. ಈ ಭೂಮಿ ಬಣ್ಣದ ಬುಗುರಿ ಹಾಡೊವಾಗ ಹೀಗೆ ಆಯ್ತು. ಮೆಂಟರ್‌ ಸುಚೇತನ್‌ ಸರ್‌ ಮತ್ತೆ ರಿಹರ್‌ಸಲ್‌ ಮಾಡಿಸಿ ಆ ತಪ್ಪುಗಳನ್ನು ತಿದ್ದಿಕೊಳ್ಳೊಕೆ ಹೇಳ್ತಾರೆ. ಅವರ ಮಾರ್ಗದರ್ಶನದಂತೆ ನಮ್ಮ ತಯಾರಿ ನಡೆಯುತ್ತೆ. ನಾನು ಮುಂದೆ ಲೇಖಕನಾಗಬೇಕು, ಸಂಗೀತದಲ್ಲೆ ಹಿನ್ನೆಲೆ ಗಾಯಕನಾಗಬೇಕು ಅನ್ನೋ ಆಸೆ ಇದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ವಾರಕ್ಕೊಮ್ಮೆ ಹಂಸಲೇಖ ಸರ್‌ ವಿಶೇಷ ತರಬೇತಿ ಕೊಡ್ತಾರೆ. ಅಲ್ಲಿ ಸಂಗೀತದ ಸಂಯೋಜನೆ, ರಾಗ, ತಾಳದ ಜ್ಞಾನವನ್ನು ನಮಗೆ ತಿಳಿಸಿಕೊಡ್ತಾರೆ. ಅವರಿಂದ ಸಂಗೀತಾಭ್ಯಾಸ ಮಾಡುತ್ತಿರುವ ನಾವೇ ಧನ್ಯರು ಎಂದು ಹರ್ಷವ್ಯಕ್ತಪಡಿಸಿದರು.

ದೊಡ್ಡ ಗಾಯಕಿಯಾಗಬೇಕು

ನಾನು ಮೈಸೂರಿನ ರುಚಿತಾ ರಾಜೇಶ್‌, ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಈ ಮುಂಚೆ ಭಾಗವಹಿಸಿದ್ದೆ. ಈ ಶೊದಲ್ಲೂ ಹಾಡಬೇಕು ಅನ್ನೊದು ನನ್ನ ಕನಸಾಗಿತ್ತು. ಪ್ರತಿ ಶನಿವಾರ ಮತ್ತು ಭಾನುವಾರ ತಪ್ಪದೇ ಈ ಕಾರ್ಯಕ್ರಮ ನೋಡ್ತಾ ಇದ್ವಿ.ಅಪ್ಪ ಅಮ್ಮನಿಗೂ ನಾನಿಲ್ಲಿ ಹಾಡಬೇಕು ಅಂತಾ ತುಂಬಾ ಆಸೆ ಇತ್ತು. ಇಲ್ಲಿ ನಾವು ಹಾಡೊವಾಗ ಆಗೋ ತಪ್ಪುಗಳನ್ನು ವಿಜಯಪ್ರಕಾಶ್‌ ಸರ್‌, ಜನ್ಯ ಸರ್‌, ಹಂಸಲೇಖ ಸರ್‌ ಚೆನ್ನಾಗಿ ತಿದ್ದಿ ಹೇಳ್ತಾರೆ, ಬೈಯಲ್ಲಾ. ಹಾಡುವಾಗ ನಮ್ಮ ಹಾವಭಾಗಗಳು ಹೇಗಿರಬೇಕು ಅಂತಾ ತಿಳಿಸಿ ಕೊಡ್ತಾರೆ. ಇದರಿಂದ ನಮ್ಮ ಮುಂದಿನ ಗಾಯನ ಪಯಣ ಸುಲಭವಾಗಿ ಸಾಗುತ್ತೆ. ನಾನು ಮುಂದೆ ದೊಡ್ಡ ಗಾಯಕಿ ಆಗಬೇಕು, ಜೊತೆಗೆ ಬೇರೆ ಉದ್ಯೋಗಾನು ಮಾಡಬೇಕು ಅಂತಾ ಆಸೆ ಇದೆ ಎಂದು ಪಟಪಟ ಮಾತಿನ ಚಟಾಕಿ ಹಾರಿಸಿದರು.

ನನಗೆ ಭಯ ಆಗಲ್ಲ

ನಾನು ಬೇಲೂರಿನ ನೇಹಾ, ನನಗೆ 5 ವರ್ಷ. ನನಗೆ ಇಲ್ಲಿ ಹಾಡೊಕೆ ತುಂಬಾ ಖುಷಿ ಆಗ್ತಿದೆ, ಬೆಳಗ್ಗೆ ಬೇಗ ಎದ್ದು, ಪ್ರ್ಯಾಕ್ಟಿಸ್‌ ಮಾಡ್ತೀನಿ. ಹಾಡೊವಾಗ ಏನೋ ಭಯ ಆಗಲ್ಲ. ನಾನು ಮುಂದೆ ಡಾಕ್ಟ್‌ರ್ರೂ ಮತ್ತೆ ಗಾಯಕಿ ಆಗಬೇಕು ಅಂತಾ ಆಸೆ ಇದೆ ಎಂದು ತನ್ನ ತೊದಲು ನುಡಿಗಳ ಅನುಭವ ಹಂಚಿಕೊಂಡವಳು ಕಾರ್ಯಕ್ರಮದ ವಿಶೇಷ ಪ್ರತಿಭೆ ಈ ಪುಟಾಣಿ.

ಕಹಿ ಹೋಗಿ ಕಪಿ ಬರಹವಾಗಿತ್ತು

ನಾನು ಕೀರ್ತನಾ 8 ನೇ ತರಗತಿಯಲ್ಲಿ ಓದುತ್ತಿದ್ದೀನಿ. ಮುಂಚೆ ಸರಿಗಮಪ ಸಿಜನ್‌ 9ರಲ್ಲಿ ಭಾಗವಹಿಸಿ ದ್ವಿತೀಯ ರನ್ನರ್‌ ಅಪ್‌ ಆಗಿದ್ದೆ. ಹಂಸಲೇಖ ಸರ್‌ ಮುಂದೆನೂ ಹಾಡಬೇಕು ಅಂತಾ ಆಸೆ ಇತ್ತು. ಅದಕ್ಕೆ ಅಡಿಷನ್‌ ಕೊಟ್ಟೆ, ಆಯ್ಕೆ ಆದೆ. ನಮ್ಮ ಧ್ವನಿಗೆ ಸರಿ ಹೊಂದುವ ಹಾಡುಗಳನ್ನು ಗುರುಗಳೆ ಆಯ್ಕೆ ಮಾಡ್ತಾರೆ, ನಾವೂ ಸಹ ಆಯ್ಕೆ ಮಾಡಿಕೊಳ್ಳಬಹುದು.4, 5 ಬಾರಿ ಪ್ರ್ಯಾಕ್ಟಿಸ್‌ ಮಾಡ್ತೀವಿ, ಅದರಲ್ಲಿ ಆಗೋ ತಪ್ಪುಗಳನ್ನು ತಿದ್ದಿ, ಇನ್ನೂ ಏನೆನೂ, ಹೇಗೆಗೆ ಸರಿ ಮಾಡಿ ಹಾಡಬೇಕು ಅನ್ನೋದನ್ನಾ ಹೇಳಿಕೊಡ್ತಾರೆ. ಜೊತೆಗೆ ತರಲೆ ತಮಾಷೆನೂ ಮಾಡ್ತಾರೆ. ವಿರಹಾ..... ಹಾಡು ಹಾಡೊವಾಗ ಕಹಿ ಬರಹ ಅಂತಾ ಇರೋದನ್ನಾ ನಾನು ಕಪಿ ಬರಹ ಅಂತಾ ತಪ್ಪಾಗಿ ಹಾಡಿದ್ದೆ, ಆಗಾ ಎಲ್ಲರೂ ಗೊಳ್ಳ್‌ ಅಂತಾ ನಕ್ಕಿದ್ರು. ನಾನಿಲ್ಲಿ ಗೆಲ್ಲಲೇ ಬೇಕು ಅಂತಾ ಬಂದಿಲ್ಲ, ಕಲಿಬೇಕು ಅಂತಾ ಬಂದಿದ್ದೀನಿ. ನನಗೆ ವಿಜಯ್‌ ಪ್ರಕಾಶ್‌ ಸರ್ ಅಂದ್ರೆ ತುಂಬಾ ಇಷ್ಟ ಎನ್ನುತ್ತಾರೆ.

ನಮ್ಮನ್ನಾ ನಾವು ಗುರುತಿಸಿಕೊಳ್ಳೊಕೆ  ಒಳ್ಳೆ ಅಡಿಪಾಯ

ನಾನು ಬೆಳಗಾವಿಯ ಇಟಗಿ ತಾಲೂಕಿನ ವಿಶ್ವಪ್ರಸಾದ್‌. ನಾನು ಇಲ್ಲಿ ವಿಜಯ್‌ ಪ್ರಕಾಶ್‌ ಸರ್‌ ಅವರನ್ನು ನೋಡಬೇಕು ಅಂತಾ ಬಂದಿದ್ದೇ, ಆಮೇಲೆ ತುಂಬಾ ಪ್ರಯತ್ನ ಮಾಡಿ ಹಾಡಿ, ಆಡಿಷನ್‌ನಲ್ಲಿ ಆಯ್ಕೆ ಆದೆ. ರಾಜ್ಯದ ಜನತೆಯಲ್ಲಾ ನಮ್ಮ ಗಾಯನ ನೋಡಿ, ಗುರ್ತಿಸುತ್ತಾರೆ. ನಮ್ಮನ್ನಾ ನಾವು ಗುರುತಿಸಿಕೊಳ್ಳೊಕೆ ಇದೊಂದು ಒಳ್ಳೆ ಅಡಿಪಾಯ. ಇಂತಹ ಅವಕಾಶ ನಮಗೆಲ್ಲೂ ಸಿಗಲ್ಲ. ಈ ಮುಂಚೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡಿ ವಿಜೇತನಾಗಿದ್ದೆ. ಇನ್ನೂ ಬೇರೆ ಬೇರೆ ಕಾರ್ಯಕ್ರಮಗಳಲ್ಲೂ ಹಾಡಿದ್ದೇನೆ. ಇಲ್ಲಿಯ ವಾದ್ಯವೃಂದದವರು ನಮ್ಮ ಜೊತೆಗೆ ಸ್ನೇಹಿತರಾಗಿ ಸಲುಗೆಯಿಂದ ಇದ್ದಾರೆ. ಸುಚೇತನ್‌ ಸರ್‌ ಚೆನ್ನಾಗಿ ತರಬೇತಿ ಕೊಡ್ತಿದ್ದಾರೆ. ಗಂಟಲು ಒಣಗದಂತೆ ಹೇಗೆ ನೋಡಕೊಬೇಕು. ತುಂಬಾ ಮಾತನಾಡೊದು, ಚಿರಾಡೊದು ಮಾಡಬಾರದು, ಪದೇ ಪದೇ ನೀರು ಕುಡಿದು ಗಂಟಲನ್ನು ಹಸಿಯಾಗಿ ಇಟ್ಟುಕೊಳ್ಳಬೇಕು. ಯಾವ ಹಾಡನ್ನು ಹೇಗೆ ಹಾಡಿದ್ರೆ ಕೇಳೊರ್‌ ಮನಸನ್ನು ಸೆಳೆಯಬಹುದು ಅನ್ನೋದನ್ನೆಲ್ಲಾ ಹೇಳಿಕೊಡ್ತಾರೆ.

***

ನಾನು ಗಾಯಕನಾಗಬೇಕು

ನಾನು ಉಡುಪಿ ಮೂಲದ ಅಭಿಜಿತ್‌, ವಾರದಲ್ಲಿ 4 ದಿನ ರಿಹರ್‌ಸಲ್‌ ಇರುತ್ತೆ, ಬೆಳಗ್ಗೆ ಹತ್ತು ಗಂಟೆಗೆ ಶುರುವಾಗುತ್ತೆ. 1 ದಿನ ವಿಶ್ರಾಂತಿ ಕೊಡ್ತಾರೆ. ಆಮೇಲೆ ಚಿತ್ರೀಕರಣ ಶುರುವಾಗತ್ತೆ. ಉತ್ತಮ ಗಾಯನದ ತಂತ್ರಗಾರಿಕೆ ಬಗ್ಗೆ ಹೇಳಿಕೊಡ್ತಾರೆ. ಮುಂದೆ ನಾನು ಗಾಯಕನಾಗಬೇಕು, ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಬೇಕು ಅಂತಾ ಆಸೆ ಇದೆ. ಅಪ್ಪ, ಅಮ್ಮ, ಸ್ನೇಹಿತರೆಲ್ಲರೂ ತುಂಬಾ ಚೆನ್ನಾಗಿ ಪ್ರೋತ್ಸಾಹ ಕೊಡ್ತಿದ್ದಾರೆ.

***

ತುಂಬಾ ಖುಷಿಯಾಗಿದೆ

ನಾನು ಕ್ಷಿತಿ ಕೆ.ರೈ(12 ವರ್ಷ), ಮೂಲ ಧರ್ಮಸ್ಥಳ. ಈ ಮುಂಚೆ ಕೆಲವು ಟಿವಿ ವಾಹಿನಿಗಳ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಕ್ವಾಟರ್‌ ಫಿನಾಲೆವರೆಗೂ ಹೋಗಿದ್ದೆ. ಈ ಶೊನಲ್ಲಿ ಭಾಗವಹಿಸಬೇಕು ಅಂತಾ ತುಂಬಾ ಆಸೆ ಇತ್ತು. ನಾನು ಭಾಗವಹಿಸಿದ ಬೇರೆ ಶೊಗಳಿಗೂ ಇದಕ್ಕೂ ತುಂಬಾ ವ್ಯತ್ಯಾಸ ಇದೆ. ಇಲ್ಲಿಯ ತರಬೇತಿ ವಿಬಿನ್ನವಾಗಿದೆ. ಒಂದು ಹಾಡನ್ನು ದಿನಕ್ಕೆ 2 ರಿಂದ 3 ಬಾರಿ ರಹರ್ಸಲ್‌ ಮಾಡಿಸ್ತಾರೆ. ತಪ್ಪುಗಳನ್ನು ತಿದ್ದಿ ಮತ್ತೆ ಹಾಡಿಸ್ತಾರೆ. ಆಮೇಲೆ ವಾದ್ಯ ಮೇಳದೊಂದಿಗೆ ಹಾಡಿಸ್ತಾರೆ. ಮನೆಲೂ ನಾನು ಪ್ರ್ಯಾಕ್ಟಿಸ್‌ ಮಾಡ್ತೀನಿ. ನನಗೆ ಎಂ.ಡಿ.ಪಲ್ಲವಿ, ಸಿ.ಅಶ್ವಥ್‌ ಇಷ್ಟ. ನನ್ನ ಸ್ಪರ್ಧಿಗಳಲ್ಲಿ ನನಗೆ ವಿಶ್ವಪ್ರಸಾದ್‌, ಸಾಕ್ಷಿ, ಕೀರ್ತನಾ ಅವರ ಧ್ವನಿ ಮತ್ತು ಗಾಯನ ತುಂಬಾ ಇಷ್ಟವಾಗುತ್ತೆ. ಈ ಸ್ಪರ್ಧೆಯಲ್ಲಿ ನಾನು ಗ್ರಾಂಡ್‌ ಫಿನಾಲೆವರೆಗೂ ಹೋಗಲೇಬೇಕು ಅಂತಾ ಆಸೆ ಇದೆ. ಗೆಲ್ತೀನೊ ಇಲ್ವೊ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ತುಂಬಾ ಖುಷಿಯಾಗಿದೆ ಎಂದರು.

**

ಇಲ್ಲಿ ಸಂಗೀತದ ಗಂಧ ಗಾಳಿ ಗೊತ್ತಿಲ್ಲದ, ಮತ್ತು ಸಂಗೀತ ಬಲ್ಲ ಸ್ಪರ್ಧಿಗಳೂ ಇದ್ದಾರೆ. ಎಲ್ಲಾ ರೀತಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಧ್ಯೇಯ ನಮ್ಮದು.  ಗಾಯನದ ಬಗೆಗಿನ ಜ್ಞಾನ, ಅದರ ಹಿಂದಿನ ವಿಜ್ಞಾನವನ್ನು ತಿಳಿಸಿ, ಸಂಗೀತಶಾಸ್ತ್ರದ ಪರಿಚಯ, ಶಾರೀರಿಕ ಪೋಷಣೆಯ ಜತೆಗೆ ಆಂಗಿಕ, ಮಾನಸಿಕ ತರಬೇತಿ ಸಹ ಇಲ್ಲಿ ಕೊಡಲಾಗುತ್ತದೆ.

ಪ್ರತಿ ಕಂತಿಗೂ (ಎಪಿಸೊಡ್‌) ಆಯಾ ಸ್ಪರ್ಧಿಗಳ ಧ್ವನಿಗೆ ಹೊಂದುವಂತಹ ಹಾಡುಗಳನ್ನು ಆಯ್ಕೆ ಮಾಡಿ, ಗಾಯನದ ಕ್ರಮಾನುಗತಿಗಳನ್ನು ಹೇಳಿಕೊಡಲಾಗುತ್ತದೆ. ಗೀತೆಯ ಸನ್ನಿವೇಷ, ಹಾವಭಾವ, ಸಾಹಿತ್ಯ, ಸಂಗೀತ ಸಂಯೋಜನೆ ಎಲ್ಲದರ ತರಬೇತಿ ನೀಡಿದ ಬಳಿಕ ವಾದ್ಯವೃಂದದ ಜತೆಗೆ ಅಭ್ಯಾಸ ಮಾಡಿಸಲಾಗುತ್ತದೆ ಎಂದು ಧ್ವನಿ ಸಂರಕ್ಷಣೆಯಲ್ಲಿ ಪರಿಣಿತರಾದ ‘ವೈಸ್‌ಗುರು’ ಮತ್ತು ಸ್ಪರ್ಧಿಗಳ ಮೆಂಟರ್‌ ಆದ ಪ್ರೊ.ಸುಚೇತನ ರಂಗಸ್ವಾಮಿ ತರಬೇತಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಗಾಯನದ ಜ್ಞಾನ ವಿಜ್ಞಾನ

ಇಲ್ಲಿ ಕ್ರಮಬದ್ಧವಾಗಿ ಸಂಗೀತ ಕಲಿಯದ ಸ್ಪರ್ಧಿಗಳೂ ಇದ್ದಾರೆ. ಕೆಲವರಿಗೆ ಸಂಗೀತ ಜ್ಞಾನ ಸಾಕಷ್ಟಿದೆ. ಎಲ್ಲ ರೀತಿಯ ಪ್ರತಿಭೆಗಳನ್ನೂ ನಾವು ಸಮಾನವಾಗಿ ಪ್ರೋತ್ಸಾಹಿಸುತ್ತೇವೆ. ಗಾಯನದ ಜ್ಞಾನ, ಅದರ ಹಿಂದಿನ ವಿಜ್ಞಾನ, ಸಂಗೀತಶಾಸ್ತ್ರದ ಪರಿಚಯ ಮಾಡಿಕೊಡುತ್ತೇವೆ. ಆಂಗಿಕ ಮತ್ತು ಮಾನಸಿಕ ಚಾತುರ್ಯದ ಪರಿಚಯವನ್ನೂ ಮಾಡಿಕೊಡುತ್ತೇವೆ. ಗೀತೆಯ ಸನ್ನಿವೇಶ, ಹಾವಭಾವ, ಸಾಹಿತ್ಯ, ಸಂಗೀತ ಸಂಯೋಜನೆ ಎಲ್ಲದರ ತರಬೇತಿ ನೀಡಿದ ಬಳಿಕ ವಾದ್ಯವೃಂದದ ಜತೆಗೆ ಅಭ್ಯಾಸ ಮಾಡಿಸಲಾಗುತ್ತದೆ.

ಪ್ರೊ.ಸುಚೇತನ ರಂಗಸ್ವಾಮಿ, ಮೆಂಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT