ಗುರುವಾರ , ಡಿಸೆಂಬರ್ 12, 2019
25 °C

ಕಡಲಾಳದಲ್ಲಿ ಫೋಟೊ ‘ಹೆಕ್ಕುವ’ ಧೀರಜ್‌

Published:
Updated:
ಕಡಲಾಳದಲ್ಲಿ ಫೋಟೊ ‘ಹೆಕ್ಕುವ’ ಧೀರಜ್‌

ಆಳ ಕಡಲಿನಲ್ಲಿ ಜಲಚರಗಳ ಜತೆ ಈಜುವುದು ಈ ತರುಣನಿಗೆ ಬಹಳ ಇಷ್ಟ. ಸ್ವಚ್ಛಂದವಾಗಿ ಈಜಾಡುವ ಮೀನು, ಕಡಲಾಮೆ, ಹವಳ ದ್ವೀಪ, ಮೃದ್ವಂಗಿಗಳ ದಿಬ್ಬ, ದೊಡ್ಡ ಮೀನುಗಳ ಬಾಯಿಯಿಂದ ತಪ್ಪಿಸಿಕೊಂಡು ಶರವೇಗದಲ್ಲಿ ಮರೆಯಾಗುವ ಸಣ್ಣ ಮೀನುಗಳ ಕಣ್ಣಾಮುಚ್ಚಾಲೆ... ಹೀಗೆ ಕಡಲಾಳದ ಜಗತ್ತನ್ನು ನೋಡುತ್ತಾ ಕಳೆದುಹೋಗುವ ಹವ್ಯಾಸ ಇವರದು.

ಬನಶಂಕರಿಯ ಎಂ.ವಿ.ಜೆ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಧೀರಜ್‌ ಎಂ.ನಂದಾ ಎಂಬ ತರುಣನ ಸಾಹಸ ಯಾನದ ಕಿರುಪರಿಚಯವಿದು. ವಯಸ್ಸು ಕೇವಲ 18. ಪ್ರತಿ ಬಾರಿ ಆಳ ಸಾಗರ ಪ್ರವಾಸ ಕೈಗೊಂಡಾಗಲೂ ಅಲ್ಲಿನ ಅಪರೂಪದ ಸನ್ನಿವೇಶಗಳನ್ನು ಕ್ಯಾಮೆರಾದಲ್ಲಿ ದಾಖಲಿಸುವ ಮೂಲಕ ಜಲಾಂತರ ಛಾಯಾಗ್ರಹಣದ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ಅರ್ಥಾತ್‌, ಅವರು ಕಡಲಾಳದಲ್ಲಿ ಫೋಟೊಗಳನ್ನು ಹೆಕ್ಕುತ್ತಾರೆ. ಇದಕ್ಕಾಗಿ ವರ್ಷಕ್ಕೆ ಕನಿಷ್ಠವೆಂದರೂ ಮೂರು ಬಾರಿ ಸಾಗರದಾಳಕ್ಕೆ ಧುಮುಕುತ್ತಾರೆ.

ಧೀರಜ್‌ಗೆ ಡೈವಿಂಗ್‌ ಮಾಡುವಾಸೆ ಮೊಳೆತದ್ದು ಹತ್ತನೇ ವಯಸ್ಸಿನಲ್ಲಿ. ಮರುವರ್ಷವೇ ಗೋವಾದ ಬ್ಯಾರಕ್‌ಹುಡ್‌ ತರಬೇತಿ ಕೇಂದ್ರದ ವೆಂಕಟೇಶ್‌ ಚಾರ್ಲೊ ಅವರ ಮಾರ್ಗದರ್ಶನದಲ್ಲಿ ಸ್ಕೂಬಾ ಡೈವಿಂಗ್‌ ಓಪನ್‌ ವಾಟರ್‌ ಹಾಗೂ ಅಡ್ವಾನ್ಸ್ಡ್‌ ಓಪನ್‌ ವಾಟರ್‌ ಕೋರ್ಸ್‌ ಮುಗಿಸಿದರು. ಪ್ರಸ್ತುತ, 40 ಮೀಟರ್‌ನಷ್ಟು ಆಳಕ್ಕಿಳಿದು ಸಾಗರದಾಳದ ಅಗೋಚರ ಲೋಕದಲ್ಲಿ ಕ್ಯಾಮೆರಾ ಕಣ್ಣಿಗೆ ಭರ್ಜರಿ ಭೋಜನ ಉಣಬಡಿಸುತ್ತಾರೆ.

‘ನನ್ನ ಆಸಕ್ತಿಗೆ ಕುಟುಂಬದವರ ಪ್ರೋತ್ಸಾಹ ಇರುವುದರಿಂದಲೇ ಈ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಯಿತು. ನಮ್ಮದೇ ಆಫ್‌ಸೆಟ್‌ ಮುದ್ರಣಾಲಯವಿದೆ. ಅದರಲ್ಲಿ ಬರುವ ಆದಾಯ, ಛಾಯಾಚಿತ್ರಗಳ ಪ್ರದರ್ಶನ ಹಾಗೂ ಮಾರಾಟದಿಂದ ಕೈಸೇರುವ ಹಣದಿಂದ ಕ್ಯಾಮೆರಾ ಮತ್ತಿತರ ಪರಿಕರಗಳನ್ನು ಕೊಂಡುಕೊಳ್ಳಲು ಹಾಗೂ ಪ್ರಯಾಣದ ಖರ್ಚನ್ನು ಭರಿಸುತ್ತೇನೆ’ ಎಂದು ಹೇಳುತ್ತಾರೆ ಧೀರಜ್‌.

‘ಭೂಮಿ ಮೇಲಿನ ಮತ್ತು ನೀರಿನಾಳದ ಛಾಯಾಗ್ರಹಣಗಳ ನಡುವೆ ಸಾಕಷ್ಟು ಅಂತರವಿದೆ. ಭೂಮಿ ಮೇಲಾದರೆ ಕ್ಯಾಮೆರಾ ಇದ್ದರೆ ಸಾಕು ಚಿತ್ರ ಬೇಟೆ ಮಾಡಬಹುದು. ನೀರಿನಲ್ಲಿ ಹಾಗಾಗದು. ಗಾಳಿಗಿಂತ ನೀರಿನ ಸಾಂದ್ರತೆ ಹೆಚ್ಚಾಗಿರುವುದರಿಂದ ನೀರಿಗಿಳಿಯುತ್ತಿದ್ದಂತೆ ಬೆಳಕಿನಲ್ಲಿ ವ್ಯತ್ಯಾಸವಾಗುತ್ತದೆ. ಹಲವು ಬಣ್ಣಗಳೂ ಅಗೋಚರವಾಗುತ್ತವೆ. ಈಜು, ಕ್ಯಾಮೆರಾ ಮೇಲಿನ ನಿಯಂತ್ರಣ, ಎದುರಿಗಿನ ದೃಶ್ಯ ಎಲ್ಲದರ ಮೇಲೆ ಏಕಕಾಲದಲ್ಲೇ ಏಕಾಗ್ರತೆ ಸಾಧಿಸಬೇಕಿರುವುದರಿಂದ ಅಂದದ ಚಿತ್ರ ಕ್ಲಿಕ್ಕಿಸುವುದು ದೊಡ್ಡ ಸವಾಲು. ಹಾಗಾಗಿ ಕ್ಯಾಮೆರಾದಲ್ಲಿನ ಆಯ್ಕೆಗಳ ಪೂರ್ಣ ಜ್ಞಾನ, ಈಜು ಪ್ರಾವೀಣ್ಯವಿದ್ದರೆ ಒಳಿತು. ಎಲ್ಲಕ್ಕಿಂತ ಮುಖ್ಯವಾಗಿ ಜಲಾಂತರ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವವರು ಕಡ್ಡಾಯವಾಗಿ ಡೈವಿಂಗ್‌ ತರಬೇತಿಯನ್ನು ಪಡೆಯಬೇಕು’ ಎಂದು ಕಿವಿಮಾತು ಹೇಳುತ್ತಾರೆ.

‘ಸಾಗರವೆಂದರೆ ಭಯ ಪಡುವವರು ನೀರನ್ನು ಸ್ನೇಹಿತನಂತೆ ಭಾವಿಸಿ. ಈಜುವುದು ಭೂಮಿ ಮೇಲಿನ ನಡಿಗೆಯಷ್ಟೇ ಸರಾಗ’ ಎನ್ನುವುದು ಧೀರಜ್‌ ಕಿವಿಮಾತು. ಇದುವರೆಗೆ ಗೋವಾ, ನೇತ್ರಾಣಿ ದ್ವೀಪ, ಅಂಡಮಾನ್‌ ದ್ವೀಪದ ಹ್ಯಾವ್‌ಲಾಕ್‌, ಶ್ರೀಲಂಕಾದ ಟಿಂಕೊಮಲಿ ಐಲ್ಯಾಂಡ್‌, ಮಲೇಷ್ಯಾದ ಮಾಬುಲ್‌– ಶಿಪಾಗನ್‌ ಐಲ್ಯಾಂಡ್‌, ಇಂಡೊನೇಷ್ಯಾದ ರಾಜಾಂಪಟ್‌ ಮತ್ತು ಆ್ಯಂಬೋನ್‌ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ಡೈವಿಂಗ್‌ ಪೂರೈಸಿದ್ದಾರೆ.

ಚಿತ್ರಗಳನ್ನು ಸೆರೆ ಹಿಡಿಯುವುದರ ಜತೆಗೆ ವಿಡಿಯೊಗಳನ್ನೂ ಮಾಡುವ ಯೋಜನೆ ಧೀರಜ್‌ ಅವರಿಗಿದೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯಾವುದೇ ಸಂಸ್ಥೆಯೊಟ್ಟಿಗೆ ಸೇರಿ ಹೆಚ್ಚಿನ ಸಾಧನೆ ಮಾಡುವ ಕನಸೂ ಇದೆ.

‘ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ನಂತಹ ಬೇಡದ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸಾಗರ ಸೇರುತ್ತಿವೆ. ಈ ಕುರಿತು ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ’ ಎಂದು ಸಾಗರದ ಬಗ್ಗೆ ಕಾಳಜಿಯನ್ನೂ ವ್ಯಕ್ತಪಡಿಸುತ್ತಾರೆ ಧೀರಜ್‌.

ಪ್ರಶಸ್ತಿಗಳು

ರಾಯಲ್‌ ಸೊಸೈಟಿ ಆಫ್‌ ಬಯಾಲಜಿ ಲಂಡನ್‌ ಸಂಸ್ಥೆ ನೀಡುವ ’ವರ್ಷದ ಅತಿ ಕಿರಿಯ ಛಾಯಾಗ್ರಾಹಕ–2017’, ಯೂತ್‌ ಫೋಟೊಗ್ರಫಿ ಸೊಸೈಟಿಯ ‘ನೇಚರ್‌ ಯೂತ್‌ ಅವಾರ್ಡ್‌’, ಸಿಯೆನ್ನಾ ಅಂತರರಾಷ್ಟ್ರೀಯ ಫೋಟೊಗ್ರಫಿ ಅವಾರ್ಡ್ಸ್‌ನಲ್ಲಿ ‘ವಿದ್ಯಾರ್ಥಿ ವಿಭಾಗದ ಪ್ರಶಸ್ತಿ’, ನೇಚರ್ಸ್‌ ಬೆಸ್ಟ್‌ ಫೋಟೊಗ್ರಫಿ ಆಫ್ರಿಕಾ, ಸ್ಯಾಂಚುರಿಯಾ ಏಷ್ಯಾ, ಬ್ಲೂ ಇಂಡಿಯಾ ಫೋಟೋಗ್ರಫಿ ಅವಾರ್ಡ್‌, ನೇಚರ್‌ ಇನ್‌ ಫೋಕಸ್‌, ಇಂಡಿಯಾ ಫೋಟೊಗ್ರಫಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಶಸ್ತಿಗಳು ಮತ್ತು ಪ್ರಶಂಸೆಗೆ ಪಾತ್ರವಾಗಿದ್ದಾರೆ.

*ಶಾರ್ಕ್‌ ಸೇರಿದಂತೆ ಬಹುತೇಕ ಜಲಚರಗಳು ಅಪಾಯಕಾರಿ ಎಂಬ ತಪ್ಪು ತಿಳುವಳಿಕೆ ಸಾಮಾನ್ಯವಾಗಿ ಇದೆ. ತಮಗೆ ಅಪಾಯವಿದೆ ಎಂಬ ಸೂಚನೆ ಸಿಕ್ಕಿದರೆ ಮಾತ್ರ ಅವು ತಿರುಗಿ ಬೀಳುತ್ತವೆ. ಅದಕ್ಕೆ ಅವಕಾಶ ನೀಡದೆ ಜಾಗರೂಕವಾಗಿ ಮುಂದುವರಿದರೆ ನಮಗೂ ಅಪಾಯ ಇರುವುದಿಲ್ಲ.

–ಧೀರಜ್‌ ಎಂ.ನಂದಾ

ಪ್ರತಿಕ್ರಿಯಿಸಿ (+)