ಬುಧವಾರ, ಡಿಸೆಂಬರ್ 11, 2019
16 °C

ನಿರೀಕ್ಷೆ ಬೆಟ್ಟದಷ್ಟು; ಸಿಗುವುದೆಷ್ಟು..?

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ನಿರೀಕ್ಷೆ ಬೆಟ್ಟದಷ್ಟು; ಸಿಗುವುದೆಷ್ಟು..?

ವಿಜಯಪುರ: ಸಂಸತ್‌ನಲ್ಲಿ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭ ಗೊಂಡಿದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ಬಾರಿಯಾದರೂ ರಾಜ್ಯದ 16 ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾಗೆ ಸಮ್ಮತಿಯ ಮುದ್ರೆಯೊತ್ತಲಿದ್ದಾರೆಯೇ ಎಂಬ ನಿರೀಕ್ಷೆ ಬೆಳೆಗಾರರಲ್ಲಿ ನೂರ್ಮಡಿಗೊಂಡಿದೆ.

ಮುಂಬರುವ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮತದಾರರನ್ನು ಓಲೈಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಕೊಡುಗೆ ಘೋಷಿಸಬಹುದು ಎಂಬ ಭರವಸೆ ಬೆಳೆಗಾರರದ್ದಾಗಿದೆ. 2017ರ ಜ 28ರಂದು ರಾಜ್ಯ ಸರ್ಕಾರ ಸಹ ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಧಾವಿಸಿ, ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಬಾರಿಯಾದರೂ ನಮ್ಮ ನೆರವಿಗೆ ಧಾವಿ ಸಬಹುದು ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದೇವೆ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯ ಕುಮಾರ ಎಸ್‌ ನಾಂದ್ರೇಕರ ತಿಳಿಸಿದರು.

‘ಸಾಲ ಮನ್ನಾಗೆ ಆಗ್ರಹಿಸಿ ಮೂರ್ನಾಲ್ಕು ವರ್ಷದಿಂದ ಕೇಂದ್ರ–ರಾಜ್ಯ ಸರ್ಕಾರಕ್ಕೆ ನಿಯೋಗ ಹೋಗಿ ಸೋತಿದ್ದೇವೆ. ಅವರು ಇವರ ಮೇಲೆ ಹೇಳಿದರೆ, ಇವರು ಅವರ ಮೇಲೆ ಹೇಳ್ತಿದ್ದಾರೆ. ನಾವು ಹೋದಾಗಲೆಲ್ಲ ಭರವಸೆಯ ಮೂಟೆಯನ್ನು ಹೊರಿಸಿ ವಾಪಸ್‌ ಕಳುಹಿಸುವ ಕೆಲಸ ಮಾಡಿದ್ದಾರೆ ವಿನಾಃ, ಒಮ್ಮೆಯೂ ಅನುಷ್ಠಾನಗೊಳಿಸಲು ಯಾರೊಬ್ಬರೂ ಮುಂದಾಗಿಲ್ಲ. ಪರಸ್ಪರರ ವಿರುದ್ಧ ಕಠಿಣ ಹೇಳಿಕೆ ನೀಡುವಂತೆ ಪ್ರಚೋದನೆ ನೀಡುವ ಕೆಲಸವನ್ನಷ್ಟೇ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಇನ್ಯಾವ ಉಪಕಾರವನ್ನು ಎರಡೂ ಸರ್ಕಾರಗಳು ದ್ರಾಕ್ಷಿ ಬೆಳೆಗಾರರಿಗಾಗಿ ಮಾಡಿಲ್ಲ. ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಎಂಬ ಬೇಡಿಕೆಯೂ ನನೆಗುದಿಗೆ ಬಿದ್ದಿದೆ.

ನಿತ್ಯವೂ ಭರವಸೆಯಲ್ಲೇ ದ್ರಾಕ್ಷಿ ಬೆಳೆಗಾರರು ಬದುಕು ನಡೆಸುತ್ತಿದ್ದಾರೆ. ಇಂದಾಗದಿದ್ದರೂ, ನಾಳೆಯಾದರೂ ನಮ್ಮ ನೆರವಿಗೆ ಸರ್ಕಾರಗಳು ಧಾವಿಸಿ, ಕೈ ಹಿಡಿಯಲಿವೆ ಎಂಬ ಆಶಾವಾದದಿಂದ ದಿನ ದೂಡುತ್ತಿದ್ದಾರೆ’ ಎಂದರು.

‘ಮುಕ್ತ ಮಾರುಕಟ್ಟೆಯಲ್ಲಿ ಇದೀಗ ಉತ್ಕೃಷ್ಟ ಒಣದ್ರಾಕ್ಷಿಯ ಧಾರಣೆ ಕೆ.ಜಿ.ಗೆ ₹ 148 ಇದೆ. ಆದರೆ ಉತ್ಪಾದನಾ ವೆಚ್ಚವೇ ₹ 165 ದಾಟಲಿದೆ. ಇದರ ಜತೆಗೆ ಬರೆ ಹಾಕಿದಂತೆ 5% ಜಿಎಸ್‌ಟಿ. ಆತಂಕ ತಂದಿದೆ ಎಂದರು.

ಪ್ರಮುಖ ರೈಲ್ವೆ ಬೇಡಿಕೆಗಳು

* ಗೋಳಗುಮ್ಮಟ ಎಕ್ಸ್‌ಪ್ರೆಸ್‌ ರೈಲು 12 ತಾಸಿನಲ್ಲಿ ಬೆಂಗಳೂರು ತಲುಪಲಿ. ಜತೆಗೆ ವಿಜಯಪುರದಿಂದ ರಾತ್ರಿ ಹೊರಡಲಿ

* ಖಾಲಿ ಓಡುವ ಬಸವ ಎಕ್ಸ್‌ಪ್ರೆಸ್‌ ರೈಲನ್ನು ಗುಂತಕಲ್‌ ಮಾರ್ಗದಲ್ಲಿ ಓಡಿಸಿ ಅಥವಾ ವೇಳೆ ಬದಲಿಸಿ ಹುಬ್ಬಳ್ಳಿ ಮಾರ್ಗದಲ್ಲೇ ವಿಜಯಪುರದಿಂದ ಓಡಿಸಿ

* ಗದಗ–ಹುಟಗಿ ನಡುವಿನ ರೈಲು ಸಂಚಾರ ವೇಗಗೊಳಿಸಿ

* ದಕ್ಷಿಣ ಭಾರತಕ್ಕೆ ಸಂಪರ್ಕ ಕಲ್ಪಿಸಲು ವಿಜಯಪುರದಿಂದ ಗುಂತಕಲ್ ಮಾರ್ಗದಲ್ಲಿ ರೈಲು ಓಡಿಸಿ

* ಸೊಲ್ಲಾಪುರ–ಮುಂಬಯಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲನ್ನು ಸೂಪರ್‌ ಫಾಸ್ಟ್‌ ಟ್ರೈನಾಗಿ ಪರಿವರ್ತಿಸಿ, ವಿಜಯಪುರ ಅಥವಾ ಹುಬ್ಬಳ್ಳಿಯಿಂದ ಆರಂಭಿಸಿ

* ವಿಜಯಪುರ ಮಾರ್ಗದಲ್ಲಿ ನವದೆಹಲಿಗೆ ರೈಲು ಸಂಚಾರ ಆರಂಭಿಸಿ

* *

ಕೇಂದ್ರ–ರಾಜ್ಯ ಸರ್ಕಾರ ಭರವಸೆ ನೀಡುವುದನ್ನು ಕೈಬಿಟ್ಟು, ನೇರವಾಗಿ ವಾಸ್ತವಾಂಶ ತಿಳಿಸಿದರೆ, ನಾವು ನಮ್ಮ ಹಾದಿಯನ್ನಾದರೂ ನೋಡಿಕೊಳ್ಳಲಿದ್ದೇವೆ

ಅಭಯಕುಮಾರ ಎಸ್‌ ನಾಂದ್ರೇಕರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ

ಪ್ರತಿಕ್ರಿಯಿಸಿ (+)