ಶುಕ್ರವಾರ, ಡಿಸೆಂಬರ್ 13, 2019
27 °C

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಗೆ ಸಿಂಧು; ಸೈನಾಗೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಗೆ ಸಿಂಧು; ಸೈನಾಗೆ ನಿರಾಸೆ

ನವದೆಹಲಿ: ಅಗ್ರಶ್ರೇಯಾಂಕದ ಆಟಗಾರ್ತಿ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದರು. ಆದರೆ ಸೈನಾ ನೆಹ್ವಾಲ್  ಎಂಟರ ಘಟ್ಟದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಪಿ.ವಿ. ಸಿಂಧು 21–12, 19–21, 21–11ರಿಂದ ಸ್ಪೇನ್‌ ತಂಡದ ಬೀಟ್ರಿಜ್ ಕೊರಲ್ಸ್‌ ಅವರನ್ನು ಸೋಲಿಸಿದರು.   ಪಂದ್ಯದಲ್ಲಿ ಸಿಂಧು ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆದ್ದರು.  ಆದರೆ, ಎರಡನೇ ಗೇಮ್‌ನಲ್ಲಿ ಸ್ಪೇನ್ ಆಟಗಾರ್ತಿಯಿಂದ ಕಠಿಣ ಪೈಪೋಟಿ ಎದುರಿಸಿದರು. ತುರುಸಿನ ಹೋರಾಟದಲ್ಲಿ ಸಿಂಧು ಸೋತರು.

ಮೂರನೇ ಗೇಮ್‌ನಲ್ಲಿ ಬಿರುಸಿನ ಆಟವಾಡಿದ ಸಿಂಧು ಬರೋಬ್ಬರಿ ಹತ್ತು ಪಾಯಿಂಟ್‌ಗಳ ಅಂತರದಿಂದ ಗೆದ್ದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು ಅವರು ಥಾಯ್ಲೆಂಡ್‌ನ ಆಟಗಾರ್ತಿ ರಚನಾಕ್ ಇಂಟನಾನ್ ಅವರನ್ನು ಎದುರಿಸುವರು.

ಸೈನಾಗೆ ನಿರಾಸೆ: ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್ 10–21, 13–21 ರಿಂದ ಅಮೆರಿಕದ ಬೀವೆನ್ ಝಾಂಗ್ ಅವರ ಎದುರು ಶರಣಾದರು.

ಹೋದ ತಿಂಗಳು ಇಂಡೋನೆಷ್ಯಾ ಮಾಸ್ಟರ್ಸ್‌ನಲ್ಲಿ ಸೈನಾ ರನ್ನರ್ಸ್ ಅಪ್ ಆಗಿದ್ದರು. ಆದ್ದರಿಂದ ಇಲ್ಲಿಯೂ ಅವರು ಫೈನಲ್ ತಲುಪುವ ವಿಶ್ವಾಸದಲ್ಲಿದ್ದರು. ಆದರೆ ಅವರ ಪಾದಚಲನೆಯು ಚುರುಕಾಗಿರಲಿಲ್ಲ.  ದಣಿದಂತೆ ಕಂಡ ಅವರ ರಿಟರ್ನ್‌ಗಳು ದುರ್ಬಲವಾಗಿದ್ದವು. ಇದರ ಲಾಭ ಪಡೆದ ಝಾಂಗ್ ಗೆಲುವಿನ ದಾರಿಯಲ್ಲಿ ಸಾಗಿದರು.

ಸಿಕ್ಕಿ ರೆಡ್ಡಿ–ಪ್ರಣವ್ ಸೆಮಿಗೆ

ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಅವರ ಜೋಡಿಯು ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಸಿಕ್ಕಿ ಮತ್ತು ಪ್ರಣವ್ 21–8, 21–13ರಿಂದ ಚೀನಾದ ಹ್ಯಾನ್ ಚೆಂಗಕೈ ಮತ್ತು ಕಾವೊ ಟಾಂಗ್ ವೀ ಜೋಡಿಯ ವಿರುದ್ಧ ಗೆದ್ದಿತು. ಆರಂಭದಿಂದಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಭಾರತದ ಜೋಡಿಯು ಯಾವುದೇ ಹಂತದಲ್ಲಿಯೂ ದುರ್ಬಲ ಆಟವಾಡಲಿಲ್ಲ.

ಇನ್ನೊಂದು ಪಂದ್ಯದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ 17–21, 11–21 ರಿಂದ  ಐದನೇ ಶ್ರೇಯಾಂಕದ ಜೋಡಿ ಮಥಾಯಿಸ್ ಕ್ರಿಶ್ಚಿಯನ್‌ಸೆನ್ ಮತ್ತು ಕ್ರಿಸ್ಟಿನಾ ಪೆಡರ್ಸನ್  ಎದುರು ಸೋಲನುಭವಿಸಿದರು.

ಕಶ್ಯಪ್, ಸಾಯಿಪ್ರಣೀತ್‌ಗೆ ಸೋಲು

ಪುರುಷರ ಸಿಂಗಲ್ಸ್‌ನಲ್ಲಿ ಪರುಪಳ್ಳಿ ಕಶ್ಯಪ್, ಬಿ. ಸಾಯಿಪ್ರಣೀತ್ ಮತ್ತು ಸಮೀರ್ ವರ್ಮಾ ಅವರು ಸೋತರು.

ಎಂಟರ ಘಟ್ಟದ ಪಂದ್ಯದಲ್ಲಿ ಕಶ್ಯಪ್ 16–21, 18–21ರಿಂದ ಚೀನಾದ ಕಿಯೋ ಬಿನ್ ವಿರುದ್ಧ ಸೋತರು. ಪ್ರಣೀತ್ 15–21, 13–21 ರಿಂದ ತೈವಾನ್‌ನ ಚೋ ಟೀನ್ ಚೆನ್ ವಿರುದ್ಧ ಸೋತರು.

ಇನ್ನೊಂದು ಪಂದ್ಯದಲ್ಲಿ ಸಮೀರ್ 17–21, 14–21 ಗೇಮ್‌ಗಳಿಂದ ಮಲೇಷ್ಯಾದ ಇಸ್ಕಂದರ್ ಜುಲ್ಕರನೆನ್  ಅವರಿಗೆ ಶರಣಾದರು. 49 ನಿಮಿಷಗಳ ಪಂದ್ಯದಲ್ಲಿ ಸಮೀರ್ ಸೋಲನುಭವಿಸಿದರು. ಜುಲ್ಕರನೆನ್ ಅವರು ಗುರುವಾರ ಕಿದಂಬಿ ಶ್ರೀಕಾಂತ್ ಅವರನ್ನು ಸೋಲಿಸಿದ್ದರು.

ಪ್ರತಿಕ್ರಿಯಿಸಿ (+)