ಬುಧವಾರ, ಡಿಸೆಂಬರ್ 11, 2019
24 °C

ವರ್ತೂರಿಗೆ ಸ್ವಕ್ಷೇತ್ರದಲ್ಲೇ ವರ್ಚಸ್ಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ತೂರಿಗೆ ಸ್ವಕ್ಷೇತ್ರದಲ್ಲೇ ವರ್ಚಸ್ಸಿಲ್ಲ

ಕೋಲಾರ: ‘ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಸ್ವಕ್ಷೇತ್ರದಲ್ಲೇ ವರ್ಚಸ್ಸು ಕಳೆದುಕೊಂಡಿದ್ದು, ಇನ್ನು ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಏನು ಸಾಧನೆ ಮಾಡುತ್ತಾರೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪೇಟೆಯಲ್ಲಿ ನಡೆದ ವರ್ತೂರು ಪ್ರಕಾಶ್‌ರ ಹುಟ್ಟು ಹಬ್ಬ ಆಚರಣೆಗೆ ನಿರೀಕ್ಷೆಯಂತೆ ಜನ ಸೇರಲಿಲ್ಲ. ಹೀಗಾಗಿ ಬೇರೆ ಕಡೆಯಿಂದ ಜನರನ್ನು ಕರೆತಂದು ಹುಟ್ಟು ಹಬ್ಬ ಆಚರಿಸಿಕೊಂಡರು ಎಂದು ವ್ಯಂಗ್ಯವಾಡಿದರು.

ವರ್ತೂರು ಪ್ರಕಾಶ್‌ ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ತಂದಿದ್ದೇನೆ ಎಂದು ಹೇಳಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾರೆ. ಕ್ಷೇತ್ರವನ್ನು ನೋಡಿದರೆ ಏನು ಅಭಿವೃದ್ಧಿಯಾಗಿದೆ ಎಂದು ಗೊತ್ತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ₹ 100 ಕೋಟಿ ಅನುದಾನ ನೀಡಿರುವುದು ಸುಳ್ಳು ಎಂದು ಹೇಳಿದರು.

ಪರಿವರ್ತನಾ ರ‍್ಯಾಲಿಗೆ 30 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವುದಾಗಿ ಬಿಜೆಪಿ ಮುಖಂಡರು ಹೇಳಿದ್ದರು. ಆದರೆ, 3 ಸಾವಿರ ಜನರನ್ನೂ ಸೇರಿಸಲು ಆಗಲಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಹೆಸರೇ ಇಲ್ಲ. ಇನ್ನು ಶನಿವಾರದ (ಫೆ.3) ಜೆಡಿಎಸ್ ಸಮಾವೇಶಕ್ಕೆ ಜನ ಹೇಗೆ ಸೇರುತ್ತಾರೆ. ಕ್ಷೇತ್ರದಲ್ಲಿ ಎಷ್ಟೇ ಸಮಾವೇಶ ನಡೆಸಿದರೂ ಜನ ಬದಲಾಗುವ ಪ್ರಶ್ನೆಯಿಲ್ಲ. ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯರಗೋಳ್ ಯೋಜನೆ ಮತ್ತು ಮಾರ್ಕಾಂಡೇಯ ಡ್ಯಾಂ ಬಳಿ ಉದ್ಯಾನ ನಿರ್ಮಿಸುವುದು ತಡವಾಗಿದೆ ಎಂದರು.

ಗುಡಿಸಲು ಮುಕ್ತ ಕ್ಷೇತ್ರ ನಿರ್ಮಾಣಕ್ಕಾಗಿ ವಿವಿಧ ಯೋಜನೆಗಳಡಿ ಕ್ಷೇತ್ರಕ್ಕೆ 14 ಸಾವಿರ ಮನೆಗಳು ಮಂಜೂರಾಗಿದ್ದು, ಈ ಪೈಕಿ 3 ಸಾವಿರ ಮನೆಗಳನ್ನು ಸಾಮಾನ್ಯ ವರ್ಗದವರಿಗೆ ಕಲ್ಪಿಸಲಾಗಿದೆ. ಪಕ್ಷ ಭೇದವಿಲ್ಲದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕೊಟ್ಟಿದ್ದೇವೆ ಎಂದು ಅವರು ವಿವರಿಸಿದರು.

ಭಿನ್ನಾಭಿಪ್ರಾಯವಿಲ್ಲ: ತಾನು ಯಾರ ಬಣದಲ್ಲೂ ಗುರುತಿಸಿಕೊಂಡಿಲ್ಲ. ತನ್ನದು ಕಾಂಗ್ರೆಸ್ ಬಣ. ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್ ಹಿರಿಯರು. ಅವರ ಮಾರ್ಗದರ್ಶನದಲ್ಲೇ ಕ್ಷೇತ್ರ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ಶಾಸಕನಾಗಿ ಸಚಿವರ ಬಳಿ ಕೇಳಿಕೊಳ್ಳುವುದು ಸಾಮಾನ್ಯ. ಕೆಲಸ ತಡವಾದರೆ ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಅದು ಬಿಟ್ಟರೆ ರಮೇಶ್‌ಕುಮಾರ್‌ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುನಿಯಪ್ಪ ಮತ್ತು ರಮೇಶ್‌ಕುಮಾರ್ ಜತೆ ರಾಜ್ಯ ನಾಯಕರು ಚರ್ಚೆ ನಡೆಸಿ ಒಗ್ಗಟ್ಟಾಗಿ ಇರುವಂತೆ ಹೇಳಿದ್ದು, ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ. ಉಳಿದ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಗಳಿದ್ದು, ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಬಿಜೆಪಿ ಎದುರಾಳಿ: ‘ಬಂಗಾರಪೇಟೆ ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್‌ನಿಂದ ರಾಮಕೃಷ್ಣಪ್ಪ ಸ್ಪರ್ಧಿಸಿದ್ದರು. ಈಗ ಅವರು ನನ್ನ ಜತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಮಾತ್ರ ನನ್ನ ಎದುರಾಳಿ. ಹಿಂದಿನ ಚುನಾವಣೆಯಲ್ಲಿ ಮಾಜಿ ಶಾಸಕ ವೆಂಕಟಮುನಿಯಪ್ಪ ನನಗೆ ಸಹಕಾರ ನೀಡಿದ್ದರು. ಕ್ಷೇತ್ರದಲ್ಲಿ ಈಗಷ್ಟೇ ಚಿಗುರೊಡೆಯುತ್ತಿರುವ ಜೆಡಿಎಸ್ ಅಭ್ಯರ್ಥಿಗೆ ನನಗೆ ಸ್ಪರ್ಧೆ ನೀಡುವ ಸಾಮರ್ಥ್ಯವಿಲ್ಲ’ ಎಂದು ಹೇಳಿದರು.

ಮೂಲೆಗುಂಪು ಮಾಡಿಲ್ಲ: ಹಿಂದಿನ ಸರ್ಕಾರಗಳಿಗೆ ಹೊಲಿಸಿದರೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ. ಅಭಿವೃದ್ಧಿ ವಿಚಾರದಲ್ಲೂ ಪಕ್ಷವು ಜನಪರ ಆಡಳಿತ ನೀಡಿ ಮನೆ ಮಾತಾಗಿದೆ. ಇದಕ್ಕಿಂತ ಇನ್ನೇನು ಬೇಕು. ಸರ್ಕಾರ ಲೋಕಾಯುಕ್ತರನ್ನು ಮೂಲೆಗುಂಪು ಮಾಡಿಲ್ಲ. ಅವರ ಅಧಿಕಾರವನ್ನು ಅವರು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

* * 

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರುವುದು ಖಚಿತ. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಹೈಕಮಾಂಡ್‌ ಇನ್ನೂ ಸೂಚಿಸಿಲ್ಲ. ಚುನಾವಣೆ ಬಳಿಕ ನಿರ್ಧಾರವಾಗುತ್ತದೆ.

ಎಸ್‌.ಎನ್‌.ನಾರಾಯಣಸ್ವಾಮಿ, ಶಾಸಕ

ಪ್ರತಿಕ್ರಿಯಿಸಿ (+)