ಗೌರವ, ಅಭಿನಂದನೆಯ ಮಹಾಪೂರ

7
ಯುವ ಪಡೆಯ ಬಗ್ಗೆ ಗೌರವದ ನುಡಿಗಳನ್ನಾಡಿದ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಹಿರಿಯ ಆಟಗಾರರು

ಗೌರವ, ಅಭಿನಂದನೆಯ ಮಹಾಪೂರ

Published:
Updated:

ನವದೆಹಲಿ : ಭಾರತ 19 ವರ್ಷದೊಳಗಿನವರ ತಂಡ ವಿಶ್ವಕಪ್ ಗೆದ್ದ ನಂತರ ದೇಶದಾದ್ಯಂತ ಸಂಭ್ರಮ ಮನೆ ಮಾಡಿದ್ದು ಯುವ ಪಡೆಯ ಕಡೆಗೆ ಅಭಿನಂದನೆಯ ಪೂರವೇ ಹರಿದು ಬಂದಿದೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಮಂತ್ರಿ ನರೇಂದ್ರ ಮೋದಿ, ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

’ವಿಶ್ವಕಪ್ ಗೆದ್ದ ತಂಡಕ್ಕೆ ಅಭಿ ನಂದನೆಗಳು. ತಂಡದ ಸಾಧನೆ ಹೆಮ್ಮೆ ತಂದಿದೆ. ಯುವ ಆಟಗಾರರು ದೇಶಕ್ಕೆ ಹೆಮ್ಮೆ ತಂದಿದ್ದಾರೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

‘ತಂಡಕ್ಕೆ ಅಭಿನಂದನೆಗಳು. ನಾಯಕ ಪೃಥ್ವಿ ಶಾ ಮತ್ತು ಬಳಗದ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ನೆರವು ಸಿಬ್ಬಂದಿಯ ಶ್ರಮವನ್ನು ಕೂಡ ಮರೆಯುವಂತಿಲ್ಲ’ ಎಂಬುದು ರಾಷ್ಟ್ರಪತಿ ಅವರ ಟ್ವೀಟ್‌ನ ಸಾರ.

‘ಕಿರಿಯರ ತಂಡ ಭಾರತಕ್ಕೆ ಗೌರವ ತಂದುಕೊಟ್ಟಿದೆ. ಕ್ರಿಕೆಟ್ ಲೋಕದಲ್ಲಿ ಹೊಸ ತಲೆಮಾರಿನ ಆಟಗಾರರು ಉದಯವಾಗಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

‘ವ್ಹಾ...ಎಂಥ ಜಯ ಇದು. ಈ ಅಮೋಘ ಕ್ಷಣವನ್ನು ಆಸ್ವಾದಿಸಲೇಬೇಕು. ಭವಿಷ್ಯದ ಹಾದಿಗೆ ಇದು ಮೆಟ್ಟಿಲು’ ಎಂದು ವಿರಾಟ್ ಕೊಹ್ಲಿ ಹೇಳಿದ್ದರೆ ‘ರಾಹುಲ್‌ ದ್ರಾವಿಡ್ ಮತ್ತು ಸಿಬ್ಬಂದಿಯೂ ಅಭಿನಂದನಾರ್ಹರು. ಗೆದ್ದ ತಂಡದ ಭವಿಷ್ಯ ಉಜ್ವಲವಾಗಲಿ’ ಎಂದು ತೆಂಡೂಲ್ಕರ್‌ ಆಶಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ‘ಅತ್ಯಮೋಘ ಆಟವಾಡಿದ್ದೀರಿ. ನೀವು ದೇಶದ ಗೌರವವನ್ನು ಎತ್ತಿ ಹಿಡಿದಿದ್ದೀರಿ’ ಎಂದು ಹೇಳಿದ್ದಾರೆ.

‘ಭಾರತದ ಪ್ರತಿಯೊಬ್ಬರೂ ಸಂಭ್ರಮದಲ್ಲಿದ್ದಾರೆ. ತಂಡಕ್ಕಾಗಿ ಅರ್ಪಣಾ ಭಾವದಿಂದ ದುಡಿದ ರಾಹುಲ್‌ ದ್ರಾವಿಡ್ ಮತ್ತು ನೆರವು ಸಿಬ್ಬಂದಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಯುವರಾಜ್‌ ಸಿಂಗ್ ಮತ್ತು ಅಜಿಂಕ್ಯ ರಹಾನೆ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ರಘು ಬಾರ್ ದಾಸ್‌, ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಹಾಗೂ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳೂ ಅಭಿನಂದನೆ ಸಲ್ಲಿಸಿದವರ ಸಾಲಿನಲ್ಲಿದ್ದಾರೆ.

**

ಶುಭ್‌ಮನ್ ಗಿಲ್‌ ಮನೆಯಲ್ಲಿ ಭಾಂಗ್ರಾ ನೃತ್ಯದ ಹೊನಲು

ಚಂಢೀಗಡ : ಭಾರತ ತಂಡ ವಿಶ್ವಕಪ್‌ ಗೆದ್ದ ಕೂಡಲೇ ಶುಭಮನ್‌ ಗಿಲ್ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಸಂಬಂಧಿಕರು, ಗೆಳೆಯರು ಮತ್ತು ಅವರ ಸಮುದಾಯದವರು ಸೇರಿ ‘ಭಾಂಗ್ರಾ’ ಮಾಡಿ ಹರ್ಷದ ಹೊನಲಿನಲ್ಲಿ ಮಿಂದರು.

‘ಮಗ ಮತ್ತು ತಂಡದ ಆಟಕ್ಕೆ ನಾವು ಮನಸೋತಿದ್ದೇವೆ. ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಕಪ್‌ ಎತ್ತಿ ಹಿಡಿದ ಗಳಿಗೆಯನ್ನು ಮರೆಯಲು ಸಾಧ್ಯವಿಲ್ಲ’ ಎಂದು ಶುಭಮನ್ ಅವರ ತಂದೆ ಲಖ್ವಿಂದರ್‌ ಸಿಂಗ್ ಸುದ್ದಿ ಸಂಸ್ಥೆಗೆ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry