ಗುರುವಾರ , ಡಿಸೆಂಬರ್ 12, 2019
24 °C
ಜಿಯೋ ಮೆಂಬ್ರೈನ್‌ ಪ್ಲಾಸ್ಟಿಕ್‌ ತಂತ್ರಜ್ಞಾನ ಬಳಸಿ ಕೆರೆ ಸಂರಕ್ಷಣೆ

ಹುಣಸೂರು: ಕೆರೆಗೆ ಜೀವಕಳೆ –ರೈತರಲ್ಲಿ ಮಂದಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಕೆರೆಗೆ ಜೀವಕಳೆ –ರೈತರಲ್ಲಿ ಮಂದಹಾಸ

ಹುಣಸೂರು: ಕೆರೆಗಳು ಕಣ್ಮರೆಯಾಗುತ್ತಿ ರುವ ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತಾಲ್ಲೂಕಿನ ಹೈರಿಗೆ ಕೆರೆ ಸಂರಕ್ಷಿಸಲಾಗಿದೆ. ಈ ತಂತ್ರಜ್ಞಾನ ಬಳಸಿದ ರಾಜ್ಯದ ಮೊದಲ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಟ್ಟೆಕೆರೆ ಗ್ರಾಮ ಪಂಚಾಯಿತಿಗೆ ಸೇರಿರುವ ಇದಕ್ಕೆ ಶತಮಾನದ ಇತಿಹಾಸ ಇದೆ. ತಾಲ್ಲೂಕಿನಲ್ಲೇ ಅತಿ ದೊಡ್ಡ ಕೆರೆ ಇದಾಗಿದೆ. ಅಂದಾಜು 650ರಿಂದ 700 ಎಕರೆ ವಿಸ್ತೀರ್ಣ ಇರುವ ಇದು 0.8 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. 1,750 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಸುತ್ತಮುತ್ತಲಿನ ಸುಮಾರು 40 ಗ್ರಾಮದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿದೆ. ಹಾಗೆಯೇ, ಜಲಚರ, ಪ್ರಾಣಿ–ಪಕ್ಷಿಗಳ ದಾಹ ನೀಗಿಸುತ್ತದೆ.

‘ಸುಮಾರು ವರ್ಷಗಳ ಹಿಂದೆ ಏರಿ ಶಿಥಿಲಗೊಂಡು ಸೋರಿಕೆ ಆರಂಭ ವಾಯಿತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರಲ್ಲಿ ಆತಂಕ ಮೂಡಿತು. ಆದರೆ, ಜೀರ್ಣೋದ್ಧಾರ ಆರಂಭಗೊಂಡ ಬಳಿಕ ಹೋದ ಜೀವ ಬಂದಂತಾಯಿತು’ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಾರೆ.

ಜೀರ್ಣೋದ್ಧಾರದ ಹಿಂದೆ ಹಾಲಿ ಶಾಸಕ ಮಂಜುನಾಥ್ ಹಾಗೂ ಹಿಂದಿನ ಶಾಸಕರ ಶ್ರಮ ಇದೆ. ನೂತನ ತಂತ್ರಜ್ಞಾನ ಬಳಸಿ ಏರಿ ಭ್ರಪಡಿಸಲಾಗಿದೆ.

ಸುಮಾರು 400ರಿಂದ 700 ಮೀಟರ್ ಉದ್ದದ ಏರಿ ಶಿಥಿಲಗೊಂಡು ನೀರು ಸೋರಿಕೆ ಆರಂಭವಾಗಿತ್ತು. ಅನಾಹುತ ತಪ್ಪಿಸಲು ನೀರಾವರಿ ಇಲಾಖೆ 5 ವರ್ಷದಿಂದ ಕೆರೆಗೆ ನೀರು ಹರಿಸುವ ಕೆಲಸ ಸ್ಥಗಿತಗೊಳಿಸಿತ್ತು! ಪರಿಣಾಮ, ಸುತ್ತಲಿನ ಅಂತರ್ಜಲ ಕುಸಿದು ಕೊಳವೆಬಾವಿ, ನೆಲಬಾವಿಗಳಲ್ಲಿ ನೀರು ಬತ್ತಿತು.

ಸ್ಥಳೀಯರ ಬೇಡಿಕೆಯಂತೆ ನೀರಾವರಿ ಇಲಾಖೆ 2 ದುರಸ್ತಿಗೆ ಪೂರ್ವ ತಯಾರಿ ಆರಂಭಿಸಿತು. 2016–17ರಲ್ಲಿ ಸರ್ಕಾರದ ಅನುಮೋದನೆ ಪಡೆದು

₹ 3.75 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿತು.

ಜಿಯೋ ಮೆಂಬ್ರೈನ್‌ ಪ್ಲಾಸ್ಟಿಕ್: ‘ನೀರು ಸೋರಿಕೆ ನಿಯಂತ್ರಿಸಲು ಏರಿಗೆ ಪ್ಲಾಸ್ಟಿಕ್ ಹಾಳೆ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಏರಿ ಮಟ್ಟದಿಂದ 3 ಅಡಿಯಷ್ಟು ಆಳದಿಂದ ಮೆಟ್ಟಿಲು ಮಾದರಿಯಲ್ಲಿ ಮಣ್ಣು ತೆಗೆದು ಒಂದು ಎಂ.ಎಂ ದಪ್ಪದ ಜಿಯೋ ಮೆಂಬ್ರೈನ್‌ ಪ್ಲಾಸ್ಟಿಕ್‌ ಹಾಳೆ ಹೊದಿಸಿ ಮಣ್ಣು ಮುಚ್ಚಲಾಗಿದೆ. ಈ ಹಾಳೆ ನೀರಿನ ಒತ್ತಡ ತಡೆದು ಏರಿಯ ‘ರಕ್ಷಾ ಕವಚ’ದಂತೆ ಕೆಲಸ ನಿರ್ವಹಿಸುತ್ತದೆ’ ಎಂದು ಹಾರಂಗಿ ನೀರಾವರಿ ಇಲಾಖೆ ಇ.ಇ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘750 ಮೀಟರ್‌ ಉದ್ದಕ್ಕೆ 32 ಸಾವಿರ ಚದರ ಮೀಟರ್‌ ಪ್ಲಾಸ್ಟಿಕ್‌ ಹಾಳೆ ಹಾಸಲಾಗಿದೆ. ಇದರ ಮೇಲೆ ಮಣ್ಣು ಹಾಕಿ ಕಾಡುಗಲ್ಲಿನಿಂದ ರಿವಿಟ್ಮೆಂಟ್‌ ನಿರ್ಮಿಸಿ ವಿನೂತನ ಮಾದರಿಯ ಎರಡು ಗೇಟ್ ಅಳವಡಿಸಲಾಗಿದೆ. ಇದರಿಂದ ಹೆಚ್ಚವರಿ ನೀರು ಹರಿದು ಹೊರ ಹೋಗಲು ಸಹಕಾರಿಯಾಗಿದೆ’ ಎಂದು ಹಾರಂಗಿ ನೀರಾವರಿ ಇಲಾಖೆ ಎ.ಇ.ಇ ಖುಷುಕುಮಾರ್‌ ಮಾಹಿತಿ ನೀಡಿದರು.

ಕೈ ಬಿಟ್ಟು ಹೋಗಿದ್ದ ಕೆರೆಗೆ ದುರಸ್ತಿ ನಂತರ ಜೀವಕಳೆ ಬಂದಿದೆ. ಅಚ್ಚುಕಟ್ಟು ರೈತರಲ್ಲಿ ಮಂದಹಾಸ ಮೂಡಿದೆ. ಒತ್ತುವರಿ ತೆರವುಗೊಳಿಸಿದರೆ ಮತ್ತಷ್ಟು ನೀರು ಸೇರಿಸುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ಈ ಭಾಗದ ರೈತರ ಬೇಡಿಕೆ.–ಹೈರಿಗೆ ಕೆರೆ ಏರಿಗೆ ಮೆಟ್ಟಿಲು ಮಾದರಿಯಲ್ಲಿ ಮಣ್ಣು ತೆಗೆದು ಜಿಯೋ ಮೆಂಬ್ರೈನ್‌ ಪ್ಲಾಸ್ಟಿಕ್‌ ಹಾಳೆ ಹೊದಿಸಿರುವುದು.

ಪ್ರತಿಕ್ರಿಯಿಸಿ (+)