ಗುರುವಾರ , ಡಿಸೆಂಬರ್ 12, 2019
24 °C

ವೇಟ್‌ಲಿಫ್ಟಿಂಗ್‌ನ ‘ಚಿನ್ನ’ ಕಾಂಚನಾ

Published:
Updated:
ವೇಟ್‌ಲಿಫ್ಟಿಂಗ್‌ನ ‘ಚಿನ್ನ’ ಕಾಂಚನಾ

ಬಾಲ್ಯದಲ್ಲಿಯೇ ಭಾರದ ವಸ್ತುಗಳನ್ನು ಸುಲಭವಾಗಿ ಎತ್ತಿ ಎಸೆಯುತ್ತಿದ್ದ ಹುಡುಗಿ, ಈಗ ಅಂತರರಾಷ್ಟ್ರೀಯ ವೇಟ್‌ಲಿಪ್ಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಬೆಳಗಾವಿ ತಾಲ್ಲೂಕು ಹಲಗಾ ಗ್ರಾಮದ ಗಣಪತ ಗಲ್ಲಿಯ ಪಿ.ಎಂ.ಕಾಂಚನಾ ಈಗ ಭಾರತ ವೇಟ್‌ಲಿಫ್ಟಿಂಗ್ ತಂಡದ ಪ್ರಮುಖ ಸ್ಪರ್ಧಿ.

ಈಚೆಗೆ ಪುಣೆಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಮಿಂಚಿದ್ದ ಕಾಂಚನಾ ಮೂಡಬಿದಿರೆಯಲ್ಲಿ ಕಳೆದ ವಾರ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಕಳೆದ ಫೆಬ್ರವರಿಯಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಚಿನ್ನ ಗಳಿಸಿದ್ದರು. ಕ್ರೀಡಾ ಹಿನ್ನೆಲೆ ಇಲ್ಲದ ಮನೆಯಲ್ಲಿ ಬೆಳೆದ ಕಾಂಚನಾ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದುದರ ಹಿಂದೆ ಪರಿಶ್ರಮದ ಕಥನವಿದೆ. ವೇಟ್‌ಲಿಫ್ಟಿಂಗ್‌ ಬಗ್ಗೆ ಏನೂ ಗೊತ್ತಿಲ್ಲದೇ ಇದ್ದ ಕಾಂಚನಾ ಅವರ ಬದುಕಿಗೆ ತಿರುವು ಲಭಿಸಿದ್ದು ರಾಮಾ ಹನಮಂತ ಎಂಬ ಶಿಕ್ಷಕರಿಂದ.

ಆಸಕ್ತಿ ಇದ್ದರೆ ವೇಟ್‌ಲಿಫ್ಟಿಂಗ್ ಹೇಳಿಕೊಡುವೆ ಎಂದು ಅಂದು ಹೇಳಿದ ಹನಮಂತ ಅವರು ನಂತರ ಕಾಂಚನಾ ಅವರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದರು.

ಹತ್ತನೇ ತರಗತಿಯಲ್ಲಿದ್ದಾಗ ಒಲ್ಲದ ಮನಸ್ಸಿನಿಂದಲೇ ಈ ಕ್ರೀಡೆಗೆ ಪದಾರ್ಪಣೆ ಮಾಡಿದ ಅವರು ಆರಂಭದಲ್ಲಿ ಸ್ಥಳೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದರು.

ಇದು ಹೊಸ ಹುರುಪು ತುಂಬಿತು. 2012ರಿಂದ ವೃತ್ತಿಪರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಶುರು ಮಾಡಿದರು; ಪದಕಗಳು ಒಲಿದವು. ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಬೆಂಗಳೂರು ಕೇಂದ್ರದ ಶ್ಯಾಮಲಾ ಶೆಟ್ಟಿ ಅವರ ಕಣ್ಣಿಗೆ ಬಿದ್ದ ನಂತರ ಅವರ ಪ್ರತಿಭೆ ಮತ್ತಷ್ಟು ಬೆಳಗಿತು.

90 ಕೆಜಿ ಮೇಲಿನವರ ವಿಭಾಗದಲ್ಲಿ ಪಾರಮ್ಯ

90 ಕೆ.ಜಿ ಮೇಲಿನವರ ವಿಭಾಗದಲ್ಲಿ ಕಾಂಚನಾ ಪಾರಮ್ಯ ಮೆರೆಯುತ್ತಿದ್ದಾರೆ. ಈ ವರೆಗೆ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಒಟ್ಟು ಐದು ಚಿನ್ನ ಮತ್ತು ನಾಲ್ಕು ಬೆಳ್ಳಿ ಪದಕ ಗೆದ್ದಿದ್ದಾರೆ. 

*

ಏಷ್ಯನ್ ಗೇಮ್ಸ್‌ನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದೇನೆ. ಸಾಯ್‌ ಸೇರಿದ ನಂತರ ಆತ್ಮವಿಶ್ವಾಸ ಹೆಚ್ಚಿದೆ. ಬೇರೆ ಕ್ರೀಡಾಪಟುಗಳ ಸಾಧನೆಯೇ ನನಗೆ ಸ್ಫೂರ್ತಿ.

ಕಾಂಚನಾ,

ವೇಟ್‌ಲಿಫ್ಟರ್‌

*

ಉತ್ತಮ ಸಾಧನೆ ಮಾಡುತ್ತಿರುವ ಕಾಂಚನಾಗೆ ಸರ್ಕಾರಿ ಉದ್ಯೋಗ ಸಿಗಬೇಕು. ಅದು ಅವರ ಮತ್ತಷ್ಟು ಬೆಳವಣಿಗೆಗೆ ನೆರವಾಗಲಿದೆ.

–ಶ್ಯಾಮಲಾ ಶೆಟ್ಟಿ,

ಸಾಯ್‌ ಕೋಚ್‌

ಪ್ರತಿಕ್ರಿಯಿಸಿ (+)