4

ರೋಗ ಯಾವುದೆಂಬುದು ತಿಳಿಯದೆ ಚಿಕಿತ್ಸೆಯ ಕಸರತ್ತು

Published:
Updated:
ರೋಗ ಯಾವುದೆಂಬುದು ತಿಳಿಯದೆ ಚಿಕಿತ್ಸೆಯ ಕಸರತ್ತು

ರಾಜ್ಯದಲ್ಲಿ ಮೂರೂ ಪ್ರಧಾನ ಪಕ್ಷಗಳ ಚುನಾವಣಾ ನೇತೃತ್ವವನ್ನು ವಹಿಸಿಕೊಂಡಿರುವವರು ಮುಖ್ಯಮಂತ್ರಿ ಆಗಿರುವವರು ಅಥವಾ ಮುಖ್ಯಮಂತ್ರಿ ಆಗಿದ್ದವರು. ಅವರು ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ. ಈ ಮೂವರಿಗೂ ‘ಪ್ರಜಾವಾಣಿ’ ಎರಡು ಪ್ರಶ್ನೆಗಳನ್ನು ಕೇಳಿತ್ತು. ಅದರಲ್ಲಿ ಮೊದಲನೆಯದು– ನೀವು ಅಧಿಕಾರಕ್ಕೆ ಬಂದರೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ ನೀಡುವ ಒಂದು ನಿರ್ದಿಷ್ಟ ವಿಷಯ ಯಾವುದು? ಎರಡನೆಯದು– ನಿಮ್ಮ ಪ್ರಮುಖ ಎದುರಾಳಿ ಪಕ್ಷಗಳು ಏಕೆ ಸೋಲಬೇಕು?

ಮೂವರೂ ನಾಯಕರ ಉತ್ತರಗಳನ್ನು ಒಟ್ಟಂದದಲ್ಲಿ ಗಮನಿಸಿದಾಗ ಮೂವರೂ ಅತಿ ಮುಖ್ಯವಾದ ಆದ್ಯತಾ ಕ್ಷೇತ್ರಗಳನ್ನೇ ಆಯ್ದುಕೊಂಡಿದ್ದಾರೆ. ಆಯ್ದುಕೊಂಡ ಕ್ಷೇತ್ರಗಳಲ್ಲಿ ಏನು ಮಾಡಬೇಕು ಎಂಬ ವಿಚಾರದಲ್ಲಿ ಮೂವರಲ್ಲಿಯೂ ಅಸ್ಪಷ್ಟತೆ ಇದೆ. ಒಂದು ಬಗೆಯಲ್ಲಿ ರೋಗವೇನೆಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳದೆ ಸಾಮಾನ್ಯೀಕೃತ ಚಿಕಿತ್ಸೆಗಳನ್ನು ಹೇಳುವ ವೈದ್ಯರಂತೆ ಮೂವರೂ ನಾಯಕರು ಕಾಣಿಸುತ್ತಾರೆ. ಈ ಸಾಮಾನ್ಯೀಕೃತ ಚಿಕಿತ್ಸೆಯ ಸಲಹೆ ಮಾಡುವಾಗ ಸಿದ್ದರಾಮಯ್ಯ ರೋಗವನ್ನು ಹೆಚ್ಚು ಸ್ಪಷ್ಟವಾಗಿ ಕಂಡುಕೊಂಡಂತೆ ಇದೆ.

ಮಾನವ ಅಭಿವೃದ್ಧಿಯ ಮೂರು ಮುಖ್ಯ ಅಂಶಗಳೆಂದರೆ ಶಿಕ್ಷಣ, ಆದಾಯ ಮತ್ತು ಆರೋಗ್ಯ. ಶಿಕ್ಷಣವನ್ನು ಖಾತರಿಪಡಿಸಲು, ಆದಾಯ ತರುವ ಉದ್ಯೋಗವನ್ನು ಖಾತರಿ ಪಡಿಸಲು ನೀತಿ ನಿರೂಪಣೆಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಆದರೆ ಆರೋಗ್ಯ ಕ್ಷೇತ್ರಕ್ಕೆ ಈತನಕ ಸರಿಯಾದ ಒತ್ತು ದೊರೆತಿರಲಿಲ್ಲ. ಆ ಮಟ್ಟಿಗೆ ಸಿದ್ದರಾಮಯ್ಯ ರೋಗವನ್ನು ಗುರುತಿಸಿದ್ದಾರೆ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಈ ವಿಷಯದಲ್ಲಿ ಹಿಂದುಳಿದಿದ್ದಾರೆ. ನೀರಾವರಿ ಮತ್ತು ರೈತರ ಹಿತ ಎಂಬ ಎರಡೂ ಅಂಶಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಾಕಷ್ಟು ಆದ್ಯತೆಯನ್ನು ಪಡೆದುಕೊಂಡಿರುವ ವಿಚಾರಗಳು. ಆದರೂ ನೀರಾವರಿಯ ವಿಸ್ತರಣೆ ಮತ್ತು ರೈತರ ಹಿತ ಎಂಬುದು ನಿರೀಕ್ಷಿತ ಮಟ್ಟದ ಗುರಿಯನ್ನು ತಲುಪಿಲ್ಲ ಎಂಬುದೂ ನಿಜವೇ. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಹೊಸತನ್ನು ಸಾಧಿಸಬೇಕು ಎಂದರೆ ಬಹಳ ಸೃಜನಶೀಲವಾದ ಮತ್ತು ಈತನಕದ ಮಾರ್ಗವನ್ನು ಸಂಪೂರ್ಣವಾಗಿ ಮರೆತು ಹೊಸ ಹಾದಿಯನ್ನು ಕ್ರಮಿಸುವ ಅಗತ್ಯವಿದೆ. ನೀರಾವರಿಯ ವಿಚಾರದಲ್ಲಿ ಮಾತನಾಡಿರುವ ಯಡಿಯೂರಪ್ಪ ಮತ್ತೆ ಹಳೆಯ ಪರಿಕಲ್ಪನೆಗಳಲ್ಲಿಯೇ ಮುಳುಗಿರುವಂತೆ ಕಾಣಿಸುತ್ತದೆ. ಕೃಷಿ ಕ್ಷೇತ್ರದ ಸಂಪೂರ್ಣ ಪರಿವರ್ತನೆಯಂಥ ಕನಸುಗಳನ್ನು ಹಂಚಿಕೊಂಡಿರುವ ಕುಮಾರಸ್ವಾಮಿ ಅವರು ಯಡಿಯೂರಪ್ಪನವರಿಗಿಂತ ಸ್ವಲ್ಪ ಭಿನ್ನವಾಗುತ್ತಾರೆ.

ಬಡತನ ಮತ್ತು ಅನಾರೋಗ್ಯದ ನಡುವಣ ಸಂಬಂಧದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಡ್ಯೂಕ್ ವಿಶ್ವವಿದ್ಯಾಲಯದ ವಿದ್ವಾಂಸ ಅನಿರುದ್ಧ್ ಕೃಷ್ಣ 'ಬಡತನಕ್ಕಿರುವ ದೂರ ಒಂದು ಕಾಯಿಲೆಯಷ್ಟೇ!' ಎನ್ನುತ್ತಾರೆ. ಈ ದೃಷ್ಟಿಯಲ್ಲಿ ಸಿದ್ದರಾಮಯ್ಯ ಅವರು ಮೊದಲ ಆದ್ಯತೆಯಾಗಿ ಸ್ವೀಕರಿಸಿರುವ 'ಸರ್ವರಿಗೂ ಆರೋಗ್ಯ' ಪರಿಕಲ್ಪನೆ ಹೊಸತನದ್ದು. ಆದರೆ ಕರ್ನಾಟಕವೂ ಸೇರಿದಂತೆ ದೇಶವ್ಯಾಪಿಯಾಗಿ ಆರೋಗ್ಯವನ್ನು ಖಾತರಿಪಡಿಸುವ ಹಲವು ಯೋಜನೆಗಳು ಈಗಾಗಲೇ ಇವೆ. ಸಿದ್ದರಾಮಯ್ಯ ಹೇಳುವ ಪರಿಕಲ್ಪನೆ ಈಗಾಗಲೇ ಇರುವ ಯೋಜನೆಗಳ ಮಿತಿಯನ್ನು ಹೇಗೆ ಮೀರುತ್ತದೆ. ಹಾಗೆಯೇ ಇದಕ್ಕೆ ಬೇಕಿರುವ ಭಾರೀ ಮೊತ್ತದ ಸಂಪನ್ಮೂಲವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬ ಪ್ರಶ್ನೆ ಇಲ್ಲಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯನವರ ವಿಚಾರಗಳು ಅಸ್ಪಷ್ಟವಾಗಿವೆ. ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ 'ಪ್ರಪಂಚದ ಅತಿದೊಡ್ಡ ಆರೋಗ್ಯ ಯೋಜನೆ'ಯೂ ಇಂಥದ್ದೇ ಟೀಕೆಗಳಿಗೆ ಗುರಿಯಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಸ್ವಾತಂತ್ರ್ಯಾನಂತರದ ಎಲ್ಲ ಮುಂಗಡಪತ್ರಗಳಲ್ಲೂ, ಯೋಜನೆಗಳಲ್ಲೂ ನೀರಾವರಿಯು ಆದ್ಯತೆಯ ವಿಷಯವಾಗಿಯೇ ಇತ್ತು. ಆದರೂ ನೀರಾವರಿಯನ್ನು ಆದ್ಯತಾ ಕ್ಷೇತ್ರವಾಗಿ ಪರಿಗಣಿಸಬೇಕೆಂದು ಯಡಿಯೂರಪ್ಪನವರಿಗೆ ಅನ್ನಿಸಿರುವುದು ರಾಜ್ಯದ ನೀರಾವರಿ ಕ್ಷೇತ್ರದ ನಿಜ ಸ್ಥಿತಿಯನ್ನೂ ಪ್ರತಿಬಿಂಬಿಸುತ್ತದೆ. ವರ್ತಮಾನದಲ್ಲಿ ನೀರಾವರಿಯು ಆದ್ಯತೆಯ ವಿಷಯ ಎಂದರೆ ದೊಡ್ಡ ಸವಾಲನ್ನು ಸ್ವೀಕರಿಸುವುದು ಎಂದೇ ಅರ್ಥ. ಏಕೆಂದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ಕಾರಣದಿಂದ ದೊಡ್ಡ ನೀರಾವರಿ ಯೋಜನೆಗಳು ಈಗ ಸುಲಭವಲ್ಲ. ಇಂಥ ಯೋಜನೆಗಳಿಗೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯುವುದೂ ಕಷ್ಟ ಎಂಬ ಸ್ಥಿತಿ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ನೀರಾವರಿ ಯೋಜನೆ ಎಂದಾಕ್ಷಣವೇ ಅದು ದೊಡ್ಡ ಹಿಡುವಳಿದಾರರ ವಿಚಾರ ಎಂಬಂತಾಗಿಬಿಡುತ್ತದೆ. ನೀರಾವರಿ ಕ್ಷೇತ್ರ ಈಗ ಬಹಳ ಸೃಜನಶೀಲವಾದ ಯೋಜನೆ ಮತ್ತು ಯೋಚನೆಗಳನ್ನು ಬಯಸುತ್ತಿದೆ. ಈ ದೃಷ್ಟಿಯಲ್ಲಿ ಯಡಿಯೂರಪ್ಪನವರದ್ದು ಸಾಮಾನ್ಯೀಕೃತ ಚಿಕಿತ್ಸೆಯೇ ಹೊರತು ಸ್ಪಷ್ಟ ರೋಗನಿದಾನದಿಂದ ಹೊರಹೊಮ್ಮಿದ ಚಿಕಿತ್ಸಾ ವಿಧಾನವಲ್ಲ ಎನ್ನಬೇಕಾಗುತ್ತದೆ.

ಕುಮಾರಸ್ವಾಮಿ ಅವರು ಅಪ್ಪ ಹೊರಿಸಿದ ‘ತೆನೆ’ಯ ಪ್ರಭಾವಳಿಯಿಂದ ಹೊರಬರಲು ಬಯಸಿದಂತಿಲ್ಲ. ರೈತ ಸಮೂಹಕ್ಕೆ ಶಕ್ತಿ ತುಂಬುವುದು, ಅವರನ್ನು ಸಾಲಮುಕ್ತರನ್ನಾಗಿಸುವುದು ಮತ್ತು ಸಮಗ್ರ ಕೃಷಿ ನೀತಿ ಅವರ ಆದ್ಯತೆ. ಮೇಲ್ನೋಟಕ್ಕೆ ಸ್ಪಷ್ಟತೆ ಇರುವಂತೆ ಕಾಣುವ ಈ ಪರಿಕಲ್ಪನೆ ಸೂಕ್ಷ್ಮದಲ್ಲಿ ಹಲವು ಮಿತಿಗಳನ್ನು ಒಳಗೊಂಡಿದೆ. ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪನವರ ನೇತೃತ್ವದಲ್ಲಿ ಸಮಗ್ರ ಕೃಷಿ ನೀತಿಯೊಂದು ರೂಪುಗೊಂಡಿತ್ತು. ಅದರಲ್ಲಿರುವುದೇ ಈ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಈ ನಡುವಣ ಅವಧಿಯಲ್ಲಿ ಸ್ವತಃ ಕುಮಾರಸ್ವಾಮಿಯವರೂ ಕೆಲಕಾಲ ಮುಖ್ಯಮಂತ್ರಿಯೂ ಆಗಿದ್ದರು ಎಂಬುದನ್ನಿಲ್ಲಿ ಮರೆಯುವಂತಿಲ್ಲ.

ಇನ್ನು ಕೃಷಿ ಕ್ಷೇತ್ರದ ಸಂಪೂರ್ಣ ಪರಿವರ್ತನೆಯ ಮಾತು ನಿಜಕ್ಕೂ ರೈತರಲ್ಲಿ ಉತ್ಸಾಹ ತುಂಬುವಂಥದ್ದು. ಈ ಪರಿವರ್ತನೆ ಕೃಷಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ನಡೆಯಬೇಕಾದುದಲ್ಲ. ಕೃಷಿಯ ಸುತ್ತ ಇರುವ ಇನ್ನೂ ಅನೇಕ ಕ್ಷೇತ್ರಗಳ ಅಭಿವೃದ್ಧಿಯೂ ಇದರಲ್ಲಿ ಒಳಗೊಳ್ಳಬೇಕಾಗುತ್ತದೆ. ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಕಡಿಮೆ ಪಾಲು ನೀಡುತ್ತಾ ಆದರೆ ಹೆಚ್ಚು ಜನ ಅವಲಂಬಿಸಿರುವ ಕ್ಷೇತ್ರವೊಂದರ ಸಂಪೂರ್ಣ ಪರಿವರ್ತನೆಗೆ ಹೊರಡುವ ಮೊದಲು ಆ ಕ್ಷೇತ್ರವನ್ನು ಬಾಧಿಸಿರುವುದೇನು ಎಂಬುದನ್ನು ಸ್ಪಷ್ಟವಾಗಿ ಅರಿಯುವ ಅಗತ್ಯವಿದೆ. ಕುಮಾರಸ್ವಾಮಿ ಈ ವಿಷಯದಲ್ಲಿ ಪೂರ್ಣ ಗೆದ್ದಿಲ್ಲ. ಆದರೆ ಅವರು ರೈತರ ಮನಸ್ಸಿನಲ್ಲಿ ಕನಸು ಬಿತ್ತುವ ಕೆಲಸವನ್ನಂತೂ ಮಾಡಿದ್ದಾರೆ.

ಎದುರಾಳಿಗಳೇಕೆ ಸೋಲಬೇಕು ಎಂಬ ಪ್ರಶ್ನೆಗೆ ಹೆಚ್ಚು ಸ್ಪಷ್ಟವಾದ ಕಾರಣಗಳಿರುವುದು ಕುಮಾರಸ್ವಾಮಿಯವರ ಬಳಿಯೇ. ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡರ ಮಿತಿಗಳನ್ನೂ ಅವರು ಬಹಳ ಸಮರ್ಪಕವಾಗಿ ಗುರುತಿಸಿ ತಮ್ಮ ಕಾರಣಗಳನ್ನು ನೀಡಿದ್ದಾರೆ. ಈ ಸ್ಪಷ್ಟತೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಮಾತುಗಳಲ್ಲಿ ಕಾಣಸಿಗುವುದಿಲ್ಲ.

ಕುತೂಹಲಕಾರಿ ಸಂಗತಿಯೆಂದರೆ ಕುಮಾರಸ್ವಾಮಿಯವರ ದಾಳಿ ಬಿಜೆಪಿಯ ಮೇಲೇ ಹೆಚ್ಚು ಕೇಂದ್ರೀಕೃತವಾಗಿದೆ. ಕಾಂಗ್ರೆಸ್ಸನ್ನು ಟೀಕಿಸುವಾಗ ‘ಅವರೇನೂ ಬಿಜೆಪಿಗಿಂತ ಭಿನ್ನವಲ್ಲ’ ಎನ್ನುತ್ತಾರೆ. ‘ಕರ್ನಾಟಕದ ಪ್ರತಿಷ್ಠೆಯನ್ನೇ ಬಿಜೆಪಿ ಮಣ್ಣುಪಾಲು ಮಾಡಿತು’ ಎಂಬುದು ಅವರ ಮುಖ್ಯ ಆರೋಪ. ಕಾಂಗ್ರೆಸ್‌ನ ಮೇಲೆ ಸಿಟ್ಟಿರುವುದು ಭ್ರಷ್ಟಾಚಾರ ಮತ್ತು ಕುಂಠಿತ ಅಭಿವೃದ್ಧಿಯ ವಿಚಾರಕ್ಕೆ. ಆದ್ಯತೆಗೆ ಸಂಬಂಧಿಸಿದ ಪ್ರಶ್ನೆಯ ಉತ್ತರದಲ್ಲಿ ಹೇಳದೇ ಉಳಿದಿದ್ದ ಅಂಶವೊಂದನ್ನು ಅವರು ಇಲ್ಲಿ ಪ್ರಸ್ತಾಪಿಸುತ್ತಾರೆ. ಅದು ಪ್ರಾದೇಶಿಕ ಪಕ್ಷದ ಅಗತ್ಯ ಮತ್ತು ಅನಿವಾರ್ಯ. ಇದು ಜೆಡಿಎಸ್‌ ಉರುಳಿಸುತ್ತಿರುವ ಹೊಸ ರಾಜಕೀಯ ದಾಳ ಎನಿಸುತ್ತದೆ.

ಎದುರಾಳಿಗಳೇಕೆ ಸೋಲಬೇಕು ಎಂಬುದಕ್ಕೆ ಯಡಿಯೂರಪ್ಪ ನೀಡಿರುವ ಉತ್ತರ ಭಿನ್ನವಾದ ಕಾರಣವೊಂದಕ್ಕೆ ಮುಖ್ಯವಾಗುತ್ತದೆ. ಅವರು ಭ್ರಷ್ಟಾಚಾರದ ಕಾರಣಕ್ಕೆ ಕಾಂಗ್ರೆಸ್ ಸೋಲಬೇಕು ಎಂದು ವಾದಿಸಿದ್ದಾರೆಯೇ ಹೊರತು ಜೆಡಿಎಸ್‌ನ ಬಗ್ಗೆ 'ಅರ್ಥಪೂರ್ಣ' ಮೌನ ವಹಿಸಿದ್ದಾರೆ. ಇದು ಚುನಾವಣಾಪೂರ್ವ ಅಥವಾ ಚುನಾವಣೆ ನಂತರದ ಹೊಂದಾಣಿಕೆ ಬಗ್ಗೆ ಒಂದು ಹೊಳಹು ನೀಡುತ್ತದೆ. ಚುನಾವಣೆ ವೇಳೆ ಜೆಡಿಎಸ್‌ ಬಗ್ಗೆ ಕಟು ವಾಗ್ದಾಳಿ ಬೇಡ ಎಂದು ಬಿಜೆಪಿ ಹೈಕಮಾಂಡ್‌, ರಾಜ್ಯದ ನಾಯಕರಿಗೆ ಸೂಚನೆ ನೀಡಿದೆ ಎಂಬ ಪುಕಾರು ಹಬ್ಬಿದೆ. ಇದರ ನಿಜಾಂಶ ಬಲ್ಲವರೇ ಬಲ್ಲರು. ಆದರೆ ಯಡಿಯೂರಪ್ಪ ಪ್ರತಿಕ್ರಿಯೆಯಂತೂ ಈ ಪುಕಾರಿಗೆ ಪೂರಕವಾಗಿದೆ.

ಬಿಜೆಪಿಯನ್ನು ಕಾಂಗ್ರೆಸ್ ಪಕ್ಷ ವರ್ಷಗಳಿಂದ ಟೀಕಿಸಲು ಬಳಸಿರುವ ನುಡಿಗಟ್ಟನ್ನೇ ಸಿದ್ದರಾಮಯ್ಯ ಮತ್ತೆ ಬಳಿಸಿದ್ದಾರೆ. ಆದರೆ ಜೆಡಿಎಸ್ ಅನ್ನು ಟೀಕಿಸುವಾಗ ಮಾತ್ರ 'ಪ್ರಾದೇಶಿಕ ಪಕ್ಷ' ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ. ‘ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಅವಕಾಶವಾದಿ ಪಕ್ಷ’ ಎಂಬ ಅವರ ಮಾತು ಸಿದ್ದರಾಮಯ್ಯನವರ ಹಳೆಯ ಅಸಮಾಧಾನದ ಪ್ರತೀಕವೆಂಬಂತೆ ಕಾಣುತ್ತದೆ.

ಇದನ್ನೂ ಓದಿ

ಸರ್ವರಿಗೂ ಆರೋಗ್ಯ ಭಾಗ್ಯ: ಸಿದ್ದರಾಮಯ್ಯ

ನೀರಾವರಿಗೆ ₹ 1 ಲಕ್ಷ ಕೋಟಿ: ಬಿಎಸ್‌ವೈ

ರೈತ ಋಣಮುಕ್ತನಾಗಬೇಕು: ಎಚ್‌ಡಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry