ಗುರುವಾರ , ಜೂನ್ 4, 2020
27 °C

ಯಾದವೀ ಕಲಹ, ಬೀಗರ ಮುನಿಸು!

ಎಸ್.ಎಂ.ಹಿರೇಮಠ Updated:

ಅಕ್ಷರ ಗಾತ್ರ : | |

ಯಾದವೀ ಕಲಹ, ಬೀಗರ ಮುನಿಸು!

ಬಾದಾಮಿ: ಚಾಲುಕ್ಯರ ಕಾಲದ ವೈಭವವನ್ನು ಸದಾ ಕನವರಿಸುವ ಬಾದಾಮಿ ಕ್ಷೇತ್ರಕ್ಕೆ, ‘ಅಭಿವೃದ್ಧಿ’ ಎಂಬೋ ಅದೃಷ್ಟ ರೇಖೆ ಮಾತ್ರ ಯಾವಾಗಲೂ ಮರೀಚಿಕೆ. ಪ್ರತೀ ಚುನಾವಣೆ ವೇಳೆ ಈ ಶಾಪಗ್ರಸ್ತ ಅಂಗೈ ಗೆರೆಯ ಬದಲಿಸುವ ಕಿಂದರಿಜೋಗಿಯ ಬರುವನ್ನೇ ನಿರೀಕ್ಷೆ ಮಾಡುವುದು ನಂತರ ಅದು ಹೊರಳ ಹಾದಿ ಹಿಡಿಯುವುದು ಸ್ಥಳೀಯರ ಅನುಭವದ ಪಾಡು.

ಈ ಬಾರಿಯೂ ‘ಸಿಎಂ ಸ್ಪರ್ಧೆ’ಯ ಹೆಸರಿನಲ್ಲಿ ಅಂತಹದ್ದೇ ಗುಸುಗುಸು ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ. ಅದು ಸ್ಥಳೀಯವಾಗಿ ಚುನಾವಣಾ ಜ್ವರದ ಏರಿಳಿತಕ್ಕೆ ಕಾರಣವಾಗಿದೆ.

ಬಾದಾಮಿ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಅಂತಿಮ ಅಭ್ಯರ್ಥಿ ಆಯ್ಕೆಯ ಗೊಂದಲದಲ್ಲಿವೆ. ಟಿಕೆಟ್‌ ಪಡೆಯಲು ಪಕ್ಷದ ಹೈಕಮಾಂಡ್‌ ಓಲೈಸುವಲ್ಲಿ ಮುಖಂಡರು ತೊಡಗಿದ್ದಾರೆ. ಸದ್ಯ ಜೆಡಿಎಸ್‌ ಮಾತ್ರ ಸ್ಪರ್ಧೆಯ ಸರ್ವಸನ್ನದ್ಧತೆ ತೋರುತ್ತಿದೆ.

ಕಾಂಗ್ರೆಸ್– ಯಾದವೀ ಕಲಹ: ಬಾದಾಮಿಗೆ ಇತ್ತೀಚೆಗೆ ಕೆಪಿಸಿಸಿ ವೀಕ್ಷಕರು ಬಂದಾಗ ಎಂಟು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಅವರಲ್ಲಿ ಮಹಿಳೆಯೊಬ್ಬರು ಸೇರಿದ್ದಾರೆ. ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಗಳಾದ ಡಾ. ದೇವರಾಜ ಪಾಟೀಲ, ಮಹೇಶ ಹೊಸಗೌಡ್ರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್‌.ಡಿ. ಜೋಗಿನ, ವಿಧಾನಸಭೆ ಸಚಿವಾಲಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವೈ. ಕುಳಗೇರಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಮುಖಂಡರಾದ ಪ್ರಕಾಶ್‌ ನಾಯ್ಕರ್, ರೇಣುಕಾ ಗುಡ್ಡದ ಸೇರಿದ್ದಾರೆ.

ಕಳೆದ ಚುನಾವಣೆಯಲ್ಲಿ ಡಾ. ದೇವರಾಜ ಪಾಟೀಲ ಕೊನೆಯ ಕ್ಷಣದಲ್ಲಿ ಟಿಕೆಟ್‌ ತ್ಯಾಗ ಮಾಡಿದ್ದರು. ಪಕ್ಷದ ಟಿಕೆಟ್‌ ಪ್ರಕಟವಾದಾಗ ಅದರಲ್ಲಿ ಹೆಸರಿರಲಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಿದ್ದ ಚಿಮ್ಮನಕಟ್ಟಿ ಬೆಂಬಲಿಗರು ಹೈಕಮಾಂಡ್‌ ಮಣಿಸಿ ಟಿಕೆಟ್‌ ತಂದಿದ್ದರು. ಚುನಾವಣೆ ಫಲಿತಾಂಶ ಕೂಡ ಅದಕ್ಕೆ ಪೂರಕವಾಗಿತ್ತು.

ಕಳೆದ ಬಾರಿ ‘ತ್ಯಾಗರಾಜ’ರಾಗಿದ್ದ ದೇವರಾಜ ಪಾಟೀಲ ಈ ಬಾರಿ ಟಿಕೆಟ್‌ಗಾಗಿ ಗಂಭೀರ ಪ್ರಯತ್ನದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಮರು ಸ್ಪರ್ಧೆಗೆ ಬಯಸಿರುವ ಚಿಮ್ಮನಕಟ್ಟಿ ‘ನನ್ನ ಆರೋಗ್ಯದ ಚಿಂತಿ ನಿಮಗ್ಯಾಕೆ’ ಎಂದು ವಿರೋಧಿಗಳ ವಿರುದ್ಧ ತೊಡೆತಟ್ಟಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‌ನ ಹಿರಿಯ ತಲೆಯಾಳುಗಳೇ ಬಾದಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ ಎಂಬ ಸಂಗತಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇದು ಚಿಮ್ಮನಕಟ್ಟಿ ಅವರ ತಲೆನೋವು ಹೆಚ್ಚಿಸಿದ್ದರೆ ಪಕ್ಷದಲ್ಲಿರುವ ಅವರ ವಿರೋಧಿಗಳ ಮುಖ ಅರಳಿಸಿದೆ. ’ಪಕ್ಷ ಚಿಮ್ಮನಕಟ್ಟಿ ‘ಕೈ’ ಬಿಟ್ಟರೆ ಸ್ಥಳೀಯರಾದ ನಾವು ಹಕ್ಕುದಾರರು’ ಎಂಬುದು ಹೊಸಗೌಡ್ರ, ಜೋಗಿನ, ಕುಳಗೇರಿ, ಕಿತ್ತಲಿ, ನಾಯ್ಕರ, ಗುಡ್ಡದ ಅವರ ವಾದ.

ಬಿಜೆಪಿ– ಮುಗಿಯದ ಬೀಗರ ಮುನಿಸು: ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸ್ಪರ್ಧಿಸಿದ್ದರು. ಟಿಕೆಟ್‌ ಸಿಗದೇ ಬಿಜೆಪಿ ತೊರೆದಿದ್ದ ಅವರ ಅಳಿಯ ಮಹಾಂತೇಶ ಮಮದಾಪುರ ಜೆಡಿಎಸ್‌ನ ಹೊರೆ ಹೊತ್ತಿದ್ದರು. ಇದು ಚಿಮ್ಮನಕಟ್ಟಿ ಅವರಿಗೆ ವಿಧಾನಸೌಧದ ಹಾದಿ

ಸುಗಮವಾಗಿಸಿತ್ತು.

ಹಿಂದಿನ ಚುನಾವಣೆಯಲ್ಲಿ ಬೀಗರು ಪರಸ್ಪರ ಪ್ರತಿಷ್ಠೆ ಕಣಕ್ಕಿಟ್ಟ ಕಾರಣ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಈಗಲೂ ಅದೇ ಬೇಗುದಿ ಎದುರಿಸುತ್ತಿದೆ. ಲೋಕಸಭಾ ಚುನಾವಣೆ ವೇಳೆ ಮತ್ತೆ ಬಿಜೆಪಿ ಸೇರ್ಪಡೆಯಾಗಿರುವ ಮದಾಪುರ, ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಹಕ್ಕುದಾರಿಕೆಯೊಂದಿಗೆ ಟಿಕೆಟ್ ಕೇಳುತ್ತಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ಹಿರಿತನ ಪಟ್ಟಣಶೆಟ್ಟಿ ಅವರ ಬೆನ್ನಿಗಿದೆ. ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದು ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ಮುಖಂಡ ಎಸ್‌.ಟಿ. ಪಾಟೀಲ ಅವರಿಗೆ ಪ್ಲಸ್‌ ಪಾಯಿಂಟ್.

ಸಮೀಕ್ಷೆಯ ಮೊರೆ: ಬಾದಾಮಿಗೆ ಪರಿವರ್ತನಾ ಯಾತ್ರೆಗೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ‘ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಟಿಕೆಟ್‌ ಕೊಟ್ಟವರನ್ನು ಗೆಲ್ಲಿಸಲು ಉಳಿದವರು ಶ್ರಮಿಸಬೇಕು’ ಎಂದು ಹೇಳಿದ್ದಾರೆ. ಇದು ಬೀಗರ ಕದನಕ್ಕೆ ತಾರ್ಕಿಕ ಅಂತ್ಯ ನೀಡುವ ಜೊತೆಗೆ ನಾಲ್ವರು ಆಕಾಂಕ್ಷಿಗಳಲ್ಲೂ ನಿರೀಕ್ಷೆ ಗರಿಗೆದರಿಸಿದೆ.

ಜೆಡಿಎಸ್‌ನಿಂದ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ ಕಣಕ್ಕೆ ಇಳಿಯಲಿದ್ದಾರೆ. ವರ್ಷದ ಹಿಂದೆಯೇ ಅಭ್ಯರ್ಥಿ ಘೋಷಿಸಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಕಾಂಗ್ರೆಸ್‌ನ ಯಾದವೀ ಕಲಹ ಹಾಗೂ ಬಿಜೆಪಿಯಲ್ಲಿನ ಬೀಗರ ಮುನಿಸಿನ ಲಾಭ ಪಡೆಯಲು ಮುಂದಾಗಿದ್ದರು. ಅದಕ್ಕೆ ಪೂರಕವಾಗಿ ಯುವಪಡೆ ಬೆನ್ನಿಗಿಟ್ಟುಕೊಂಡು ಮಾವಿನಮರದ ಕ್ಷೇತ್ರಾದ್ಯಂತ ಸುತ್ತುತ್ತಿದ್ದಾರೆ. ಮಹದಾಯಿ ಹೋರಾಟದ ಲಾಭ ಪಡೆಯಲು ಜನಸಾಮಾನ್ಯರ ಪಕ್ಷ ಸ್ಪರ್ಧೆಗೆ ಮುಂದಾಗಿದ್ದರೂ, ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.