‘ದೇಶದಲ್ಲಿ ಭಯದ ವಾತಾವರಣ’

7

‘ದೇಶದಲ್ಲಿ ಭಯದ ವಾತಾವರಣ’

Published:
Updated:

ರಾಯಚೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಭಯದ ವಾತಾವರಣ ಮತ್ತಷ್ಟು ಹೆಚ್ಚಾಗಿದ್ದು, ಜನರು ಆತಂಕದಿಂದ ಜೀವನ ನಡೆಸಬೇಕಾಗಿದೆ ಎಂದು ಸಿಪಿಎಂ ರೆಡ್‌ ಫ್ಲ್ಯಾಗ್‌ ರಾಷ್ಟ್ರೀಯ ಕಾರ್ಯದರ್ಶಿ ಎಂ.ಎಸ್.ಜಯಕುಮಾರ್ ಹೇಳಿದರು.

ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ ದಲ್ಲಿ ಗುರುವಾರದಿಂದ ಆರಂಭ ವಾದ ನಾಲ್ಕು ದಿನಗಳ ಸಿಪಿಎಂ ರೆಡ್‌ ಫ್ಲ್ಯಾಗ್‌ನ 9ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಕೋಮುವಾದಿ ಶಕ್ತಿಗಳ ದೌರ್ಜನ್ಯ ಹೆಚ್ಚಾಗಿದೆ. ಆಳುವ ವರ್ಗದ ವಿರುದ್ಧ ಧ್ವನಿಯೆತ್ತಿದವರನ್ನು ಹತ್ಯೆ ಮಾಡಲಾಗುತ್ತಿದೆ. ದಲಿತರು, ಶೋಷಿತ ವರ್ಗದವರು ಪ್ರಾಣಿಗಳಿಗಿಂತ ಹೀನವಾಗಿದ್ದು, ಇದಕ್ಕೆ ಸರ್ಕಾರಗಳೇ ಕಾರಣ’ ಎಂದರು.

‘ಪನ್ಸಾರೆ, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಕೊಲೆಯಾದ ನಂತರ ಮತ್ತೆ ಯಾರ ಕೊಲೆ ಮಾಡಲಾಗುತ್ತದೆಯೋ ಎಂಬ ಆತಂಕ ನಿರ್ಮಾಣವಾಗಿದೆ. ಕರಾವಳಿ ಭಾಗ ಭಯೋತ್ಪಾದಕರ ನಾಡು ಆಗುತ್ತಿರುವುದಕ್ಕೆ ಹೊಣೆ ಯಾರು’ ಎಂದು ಪ್ರಶ್ನಿಸಿದರು.

‘ಮೋದಿ ಶ್ರೀಮಂತರಾದ ಅಂಬಾನಿ, ಅದಾನಿ, ಟಾಟಾ ಬಿರ್ಲಾ ಹಾಗೂ ವಿದೇಶಿ ಬಂಡವಾಳದಾರರಿಗೆ ಒಳ್ಳೆಯ ದಿನಗಳು ಬಂದಿವೆ ಹೊರತು ಬಡವರಿಗೆ ಬಂದಿಲ್ಲ. ನೋಟು ಅಮಾನ್ಯದ ನಂತರ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದರು.

ಕೇರಳ ರಾಜ್ಯದ ಕಾರ್ಯದರ್ಶಿ ಪಿ.ಸಿ.ಉನ್ನಿಚಿಕ್ಕನ್ ಮಾತನಾಡಿ, ಕೊಲೆ ಗಡುಕರು ಒಂದೆಡೆ ಸೇರಿಕೊಂಡು ಆಡಳಿತ ನಡೆಸುತ್ತಿರುವುದರಿಂದ ರೈತರು ಹಾಗೂ ದೇಶ ಅಪಾಯದಲ್ಲಿದೆ. ಖಾವಿ ಗೂಂಡಾಗಳು ದಲಿತ ಹಾಗೂ ಅಲ್ಪ ಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಆದ್ದರಿಂದ ಜಾತ್ಯತೀತ ದೇಶದ ನಿರ್ಮಾಣಕ್ಕೆ ದೇಶದ ಜನರು ಒಂದಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಮಿತಿ ಸದಸ್ಯ ಅಯ್ಯಪ್ಪ ಹೂಗಾರ್, ಟಿಯುಸಿಐ ರಾಷ್ಟ್ರೀಯ ಕಾರ್ಯದರ್ಶಿ ಚಾರ್ಲ್‌ ಜಾರ್ಜ್ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಬಿ.ಬಸವಲಿಂಗಪ್ಪ, ಬಾನ್ಕೋಡೆ, ಮೈಸೂರಿನ ವಿ.ಎನ್.ಲಕ್ಷ್ಮೀ ನಾರಾಯಣ, ತೆಲಂಗಾಣದ ಸತ್ಯವರ್ಧನ್, ಹೈದ್ರಬಾದ್‌ನ ಪ್ರಭಾಕರ್, ಆಂಧ್ರ ಪ್ರದೇಶದ ಟಿ.ಶ್ರೀನಿವಾಸರಾವ್, ಎರ್ನಾಕುಲಂ ಟಿ.ಬಿ. ಮಿನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry