ಹಣದುಬ್ಬರ ಭೀತಿ: ತಿಂಗಳ ಹಿಂದಿನ ಮಟ್ಟಕ್ಕೆ ಸೂಚ್ಯಂಕ

7
ಜಾಗತಿಕ ಷೇರುಪೇಟೆಗಳಲ್ಲಿ ಮತ್ತೆ ಕಂಡುಬಂದ ತಲ್ಲಣ

ಹಣದುಬ್ಬರ ಭೀತಿ: ತಿಂಗಳ ಹಿಂದಿನ ಮಟ್ಟಕ್ಕೆ ಸೂಚ್ಯಂಕ

Published:
Updated:
ಹಣದುಬ್ಬರ ಭೀತಿ: ತಿಂಗಳ ಹಿಂದಿನ ಮಟ್ಟಕ್ಕೆ ಸೂಚ್ಯಂಕ

ಮುಂಬೈ: ಗುರುವಾರವಷ್ಟೇ ಚೇತರಿಕೆಯ ಹಾದಿಗೆ ಮರಳಿದ್ದ ದೇಶಿ ಷೇರುಪೇಟೆಗಳ ವಹಿವಾಟು ಶುಕ್ರವಾರ ಮತ್ತೆ ಕುಸಿತ ಕಂಡಿವೆ.

ಅಮೆರಿಕದಲ್ಲಿ ಬಡ್ಡಿ ದರಗಳು ಹೆಚ್ಚುವ, ಅದರಿಂದ ಹಣದುಬ್ಬರ ಏರಿಕೆಯಾಗುವ ಆತಂಕ ಕಂಡುಬಂದಿದೆ. ಜಾಗತಿಕ ಷೇರುಪೇಟೆಗಳಲ್ಲಿನ ವಹಿವಾಟು ವ್ಯಾಪಕ ಪ್ರಮಾಣದಲ್ಲಿ ಕುಸಿತಗೊಳ್ಳಲು ಇದು ಪ್ರೇರಣೆ ನೀಡಿದೆ.

ಅಮೆರಿಕದ ಟ್ರೆಸರಿ ಬಾಂಡ್‌ಗಳ ಗಳಿಕೆ ಏರಿಕೆಯಾಗಿದ್ದರಿಂದ ಡವ್‌  ಸೂಚ್ಯಂಕ ಎರಡನೆ ಬಾರಿಗೆ ದಿನದ ಗರಿಷ್ಠ ಕುಸಿತ ದಾಖಲಿಸಿತು. ದೇಶಿ ಪೇಟೆಯಲ್ಲಿ ವಿದೇಶಿ ಹೂಡಿಕೆಯ ಹೊರ ಹರಿವು ಕೂಡ ವಹಿವಾಟುದಾರರ ಉತ್ಸಾಹ ಉಡುಗಿಸಿದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಹೆಚ್ಚಿನ ನಷ್ಟಕ್ಕೆ ಗುರಿಯಾದವು.

ಸಂವೇದಿ ಸೂಚ್ಯಂಕವು 407 ಅಂಶಗಳಷ್ಟು ಕುಸಿತಗೊಂಡು ಒಂದು ತಿಂಗಳ ಹಿಂದಿನ ಮಟ್ಟಕ್ಕೆ (34,005 ಅಂಶ) ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 122 ಅಂಶ ಕುಸಿತಗೊಂಡು 10, 455 ಅಂಶಗಳಿಗೆ ಇಳಿಯಿತು. ಜನವರಿ 29ರಂದು 36,444 ಅಂಶಗಳಿಗೆ ತಲುಪಿದ್ದ ಸಂವೇದಿ ಸೂಚ್ಯಂಕವು ಒಂದು ವಾರದಲ್ಲಿ 2,438 ಅಂಶಗಳಷ್ಟು ನಷ್ಟಕ್ಕೆ ಒಳಗಾಗಿದೆ.

ಜಾಗತಿಕ ಪೇಟೆಯಲ್ಲಿ ತಲ್ಲಣ: ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳಗೊಳ್ಳುವ ಭೀತಿಯು ವಿಶ್ವದಾದ್ಯಂತ ಷೇರುಪೇಟೆಗಳಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ಅದಕ್ಕೆ ಕಡಿವಾಣ ವಿಧಿಸಲು ಸರ್ಕಾರ ಬಡ್ಡಿ ದರ ಹೆಚ್ಚಿಸಲು ಮುಂದಾಗಲಿದೆ.

ಬಡ್ಡಿ ದರಗಳು ಏರುಗತಿಯಲ್ಲಿ ಇದ್ದಾಗ ಷೇರುಗಳಲ್ಲಿ ಹೂಡಿಕೆ ಮಾಡಿದವರ ವರಮಾನ ತಗ್ಗಲಿದೆ. ಹೀಗಾಗಿ ಷೇರುಗಳಲ್ಲಿ ಮಾರಾಟ ಒತ್ತಡ ಕಂಡುಬರುತ್ತದೆ. ಹಣದುಬ್ಬರ ಹೆಚ್ಚಳಗೊಂಡಾಗಲ್ಲೆಲ್ಲ ಷೇರು ಬೆಲೆಗಳು ಕುಸಿತ ಕಾಣುವುದು ವಿಶ್ವದಾದ್ಯಂತ ಕಂಡುಬರುವ ಸಾಮಾನ್ಯ ಸಂಗತಿಯಾಗಿದೆ.

**

ಷೇರು ವಹಿವಾಟು ₹ 70 ಲಕ್ಷ ಕೋಟಿ

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ‘ಬಿಎಸ್ಇ’  ಮತ್ತು ‘ಎನ್‌ಎಸ್‌ಇ’ಗಳಲ್ಲಿ ಷೇರು ವಹಿವಾಟಿನ ಪ್ರಮಾಣವು ₹ 70 ಲಕ್ಷ ಕೋಟಿಗಳಷ್ಟಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry