ಗುರುವಾರ , ಡಿಸೆಂಬರ್ 12, 2019
25 °C
ಅಧಿಕಾರಿಗಳ ಶಾಮೀಲಿನ ಮಾಹಿತಿ ಬಿಚ್ಚಿಟ್ಟ ಬಂಧಿತರು

ಪಿಎನ್‌ಬಿ ವಂಚನೆ ಹಗರಣ: ಮತ್ತಷ್ಟು ಸುಳಿವು ಬಯಲು

ಪಿಟಿಐ Updated:

ಅಕ್ಷರ ಗಾತ್ರ : | |

ಪಿಎನ್‌ಬಿ ವಂಚನೆ ಹಗರಣ: ಮತ್ತಷ್ಟು ಸುಳಿವು ಬಯಲು

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರು ₹11,400 ಕೋಟಿ ವಂಚನೆ ಮಾಡಿದ ಪ್ರಕರಣದ ತನಿಖೆ ತೀವ್ರಗೊಂಡಿದೆ. ಹಗರಣದಲ್ಲಿ ಭಾಗಿಯಾಗಿರುವ ಇತರ ಅಧಿಕಾರಿಗಳ ಬಗ್ಗೆ ಪಿಎನ್‌ಬಿಯ ಬಂಧಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಬ್ಯಾಂಕ್‌ನ ಕಂಪ್ಯೂಟರ್‌ ವ್ಯವಸ್ಥೆಯನ್ನು ಬಳಸಿಕೊಳ್ಳಲು ನೀರವ್‌ ಅವರ ಸಿಬ್ಬಂದಿಗೆ ಬ್ಯಾಂಕ್‌ನ ಅಧಿಕಾರಿಗಳು ಅವಕಾಶ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವು ಬ್ಯಾಂಕುಗಳ ವಿದೇಶಿ ಶಾಖೆಗಳ ಅಧಿಕಾರಿಗಳ ಬಗ್ಗೆಯೂ ತನಿಖೆ ನಡೆಸಲು ವಿವಿಧ ತನಿಖಾ ಸಂಸ್ಥೆಗಳು ನಿರ್ಧರಿಸಿವೆ.

ಪಿಎನ್‌ಬಿಯ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್‌ನಾಥ್‌ ಶೆಟ್ಟಿ ಮತ್ತು ಅಧಿಕಾರಿ ಮನೋಜ್‌ ಖರಾತ್‌ ಹಾಗೂ ನೀರವ್‌ ಮೋದಿ ಸಮೂಹ ಸಂಸ್ಥೆಯ ಹೇಮಂತ್‌ ಭಟ್‌ ಅವರನ್ನು ಸಿಬಿಐ ಶನಿವಾರವೇ ಬಂಧಿಸಿದೆ.

ಸಾಲಕ್ಕೆ ಖಾತರಿ ಪತ್ರ ನೀಡಿರುವ ಈ ಹಗರಣದಲ್ಲಿ ಬ್ಯಾಂಕ್‌ನ ಇತರ ಅಧಿಕಾರಿಗಳ ಪಾತ್ರದ ಬಗ್ಗೆ ಬಂಧಿತ ಅಧಿಕಾರಿಗಳು ಆರಂಭದಲ್ಲಿ ಹಾರಿಕೆಯ ಉತ್ತರ ನೀಡುತ್ತಿದ್ದರು.

ಆದರೆ ಬಳಿಕ ಅವರು ಕೆಲವು ಮಹತ್ವದ ಸುಳಿವು ನೀಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಹಗರಣವು ಎಷ್ಟು ದೊಡ್ಡದಾಗಿದೆ, ಹಣವನ್ನು ಯಾವ ರೀತಿ ಮತ್ತು ಎಲ್ಲಿಗೆ ವರ್ಗಾಯಿಸಲಾಗಿದೆ ಹಾಗೂ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಹಗರಣಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿವೆ.

ಜಂಟಿ ಸಂಸದೀಯ ಸಮಿತಿಯಿಂದ ಹಗರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ತನಿಖೆ ಚುರುಕು

* 45 ಸ್ಥಗಳಲ್ಲಿ ಭಾನುವಾರ ಶೋಧ

* ಸುಮಾರು ₹20 ಕೋಟಿಯ ಆಭರಣ ವಶ

* ಮುಟ್ಟುಗೋಲು ಹಾಕಿಕೊಂಡ 29 ಆಸ್ತಿಗಳ ಪರಿಶೀಲನೆ

* 25 ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪ್ರಕ್ರಿಯೆ ಶುರು

* ನೀರವ್‌, ಅವರ ಸಂಬಂಧಿಕರು ಮತ್ತು ಕಂಪನಿಗಳಿಗೆ ಸೇರಿದ 105 ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ

* ಪಿಎನ್‌ಬಿ ಅಧಿಕಾರಿಗಳ ವಿಚಾರಣೆಯನ್ನು ಸಿಬಿಐ ಮುಂದುವರಿಸಿದೆ

* ಇ.ಡಿ. ಇನ್ನಷ್ಟು ಸ್ಥಳಗಳಲ್ಲಿ ಶೋಧ ನಡೆಸಿದೆ

* ವಿವಿಧ ಸಂಸ್ಥೆಗಳು ನಡೆಸುತ್ತಿರುವ ತನಿಖೆ ತೀವ್ರಗೊಂಡಿದೆ

* ಗೀತಾಂಜಲಿ ಸಮೂಹದ 18 ಅಂಗ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲನೆ ನಡೆಯುತ್ತಿದೆ

200 ಶೆಲ್‌ ಕಂಪನಿಗಳು

ನೀರವ್‌, ಅವರ ಸಂಬಂಧಿ ಮತ್ತು ಪಾಲುದಾರ ಮೆಹುಲ್‌ ಚೋಕ್ಸಿ ಹಾಗೂ ಇತರರು ಆರಂಭಿಸಿರುವ 200 ಶೆಲ್‌ ಕಂಪನಿಗಳು (ಹಣ ಅಕ್ರಮ ವರ್ಗಾವಣೆಗಾಗಿಯೇ ಆರಂಭಿಸಿರುವ ಕಂಪನಿಗಳು) ಮತ್ತು ಇವರ ಬೇನಾಮಿ ಆಸ್ತಿಗಳ ಬಗ್ಗೆ ತನಿಖಾ ಸಂಸ್ಥೆಗಳು ಗಮನ ಕೇಂದ್ರೀಕರಿಸಿವೆ.

ವಂಚನೆ ಮೂಲಕ ಪಿಎನ್‌ಬಿಯಿಂದ ಪಡೆದ ₹11,400 ಕೋಟಿ ಮೊತ್ತವನ್ನು ವರ್ಗಾಯಿಸಲು ಈ 200 ಕಂಪನಿಗಳನ್ನು ಬಳಸಿಕೊಂಡಿರಬಹುದು ಎಂಬ ಅನುಮಾನ ಇದೆ. ನೀರವ್‌ ಮತ್ತು ಇತರ ಆರೋಪಿಗಳ ವಿರುದ್ಧ ತೆರಿಗೆ ವಂಚನೆ ಪ್ರಕರಣಗಳ ತನಿಖೆಯೂ ನಡೆಯುತ್ತಿದೆ.

ಟ್ವೀಟ್‌

ಪರೀಕ್ಷೆ ಬರೆಯುವುದು ಹೇಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಎರಡು ತಾಸು ಪಾಠ ಮಾಡಿದ್ದಾರೆ. ಆದರೆ ₹22 ಸಾವಿರ ಕೋಟಿ ಬ್ಯಾಂಕ್‌ ಹಗರಣದ ಬಗ್ಗೆ ಎರಡು ನಿಮಿಷವೂ ಮಾತನಾಡುತ್ತಿಲ್ಲ. ಜೇಟ್ಲಿ ಅಡಗಿಕೊಂಡಿದ್ದಾರೆ. ತಪ್ಪಿತಸ್ಥರು ಎಂಬಂತೆ ವರ್ತಿಸುವುದನ್ನು ನಿಲ್ಲಿಸಿ. ಮಾತನಾಡಿ

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಪ್ರತಿಕ್ರಿಯಿಸಿ (+)