7

ಜೆಡಿಎಸ್‌ ಟಿಕೆಟ್‌: ಕಗ್ಗಂಟಾದ ಮಂಡ್ಯ ಕ್ಷೇತ್ರ

Published:
Updated:
ಜೆಡಿಎಸ್‌ ಟಿಕೆಟ್‌: ಕಗ್ಗಂಟಾದ ಮಂಡ್ಯ ಕ್ಷೇತ್ರ

ಮಂಡ್ಯ: ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಏಳರ ಪೈಕಿ ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಆದರೆ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಮಳವಳ್ಳಿ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಡಾ.ಕೆ.ಅನ್ನದಾನಿ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿದ ರವೀಂದ್ರ ಶ್ರೀಕಂಠಯ್ಯ ಅವರ ಹೆಸರು ಘೋಷಣೆಯಾಗಿದೆ. ಮದ್ದೂರು ಕ್ಷೇತ್ರದಲ್ಲಿ ಖಚಿತವಾಗಿದ್ದ ಡಿ.ಸಿ.ತಮ್ಮಣ್ಣ ಹೆಸರು ಪ್ರಕಟಗೊಂಡಿದೆ. ನಾಗಮಂಗಲ ಕ್ಷೇತ್ರದಲ್ಲಿ ಕೆ.ಸುರೇಶ್‌ಗೌಡರ ಹೆಸರು ಬಂದಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಸಿ.ಎಸ್‌.ಪುಟ್ಟರಾಜು ಅವರ ಬಂದಿದೆ. ರಾಜ್ಯ ರಾಜಕಾರಣಕ್ಕೆ ಮರಳಲು ಹಾತೊರೆಯುತ್ತಿದ್ದ ಸಂಸದರಿಗೆ ಇದು ಸಿಹಿ ಸುದ್ದಿಯಾಗಿದೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಹಗ್ಗಜಗ್ಗಾಟ ಉಂಟಾಗಿತ್ತು. ಹಾಲಿ ಶಾಸಕರಾದ ಕೆ.ನಾರಾಯಣಗೌಡ ಅವರಿಗೆ ಟಿಕೆಟ್‌ ತಪ್ಪುವ ಭೀತಿ ಇದೆ ಎಂಬ ಮಾತುಗಳು ರಾಜಕೀಯವಲಯದಲ್ಲಿ ಕೇಳುತ್ತಿತ್ತು. ನಾಗಮಂಗಲ ಜೆಡಿಎಸ್‌ ಬಂಡಾಯ ಶಾಸಕ ಎನ್‌.ಚಲುವರಾಯಸ್ವಾಮಿ ಅವರ ಮೂಲಕ ನಾರಾಯಣಗೌಡರನ್ನು ಕಾಂಗ್ರೆಸ್‌ಗೆ ಸೆಳೆಯಲಾಗುತ್ತಿದೆ ಎಂಬೆಲ್ಲ ಸುದ್ದಿ ಹರಡಿದ್ದವು. ಆದರೆ ಈಗ ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿಕೊಳ್ಳಲು ಶಾಸಕರು ಯಶಸ್ವಿಯಾಗಿದ್ದಾರೆ.

ಆಕಾಂಕ್ಷಿಗಳಲ್ಲಿ ತಳಮಳ: ಮಂಡ್ಯ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆ ಮಾಡದೇ ಇರುವುದು ಟಿಕೆಟ್‌ ಆಕಾಂಕ್ಷಿಗಳ ಮನಸ್ಸಿನಲ್ಲಿ ತಳಮಳ ಉಂಟಾಗಿದೆ. ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಉಳಿದಿರುವಾಗ ಅಭ್ಯರ್ಥಿಯ ಹೆಸರು ಘೋಷಣೆ ಆಗಲಿದೆ ಎಂಬ ಸುದ್ದಿ ಈಗ ಹರಡಿದ್ದು ಆಕಾಂಕ್ಷಿಗಳು ಬೇರೆ ನಿರ್ಧಾರ ಕೈಗೊಳ್ಳಲು ಸಮಯ ಸಿಗದಂತೆ ಮಾಡುವ ತಂತ್ರ ರೂಪಿಸಲಾಗುತ್ತಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಎಂ.ಶ್ರೀನಿವಾಸ್‌, ಡಾ.ಎಚ್‌.ಕೃಷ್ಣ, ಕೆ.ಕೆ.ರಾಧಾಕೃಷ್ಣ, ಸಿದ್ದರಾಮೇಗೌಡ, ಡಾ.ಶಂಕರೇಗೌಡ, ಎನ್‌.ಶಿವಣ್ಣ, ಅಶೋಕ್‌ ಜಯರಾಂ, ಅಂಬುಜಮ್ಮ, ಎಚ್‌.ಎನ್‌.ಯೋಗೇಶ್‌, ಜಿ.ಬಿ.ಶಿವಕುಮಾರ್‌ ಮುಂತಾದವರು ಜೆಡಿಎಸ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದು ಹೆಸರು ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.

ಬಂಡಾಯದ ಭೀತಿ: ಕ್ಷೇತ್ರದಲ್ಲಿ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಲಿದ್ದಾರೆ ಎಂಬ ಭೀತಿಯೂ ಕ್ಷೇತ್ರದಲ್ಲಿ ದಟ್ಟವಾಗಿದೆ. ಡಾ.ಶಂಕರೇಗೌಡ, ಎನ್‌.ಶಿವಣ್ಣ, ಎಂ.ಶ್ರೀನಿವಾಸ್‌ ಅವರನ್ನು ಬಿಜೆಪಿ ಮುಖಂಡರು ಈಗಾಗಲೇ ಸಂಪರ್ಕ ಮಾಡಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿದೆ.

‘ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಸಹಜವಾಗಿ ಹೆಸರು ಘೋಷಣೆ ಮಾಡುವುದು ತಡವಾಗಿದೆ. ಕುಮಾರಸ್ವಾಮಿ ಅವರು ಎಲ್ಲರನ್ನೂ ಕರೆದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನು ಒಂದು ವಾರದಲ್ಲಿ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

‘ಟಿಕೆಟ್‌ ಆಕಾಂಕ್ಷಿಗಳೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಆದರೆ ಬೇರೆ ಪಕ್ಷಗಳು ಟಿಕೆಟ್‌ ಘೋಷಣೆ ಮಾಡಿದ ನಂತರ ನಮ್ಮ ಮುಖಂಡರು ಹೆಸರು ಘೋಷಣೆ ಮಾಡಬಹುದು. ಕ್ಷೇತ್ರದಲ್ಲಿ ಜೆಡಿಎಸ್‌ ಬಲಿಷ್ಠವಾಗಿರುವ ಕಾರಣ ಇಲ್ಲಿ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ’ ಎಂದು ಟಿಕೆಟ್‌ ಆಕಾಂಕ್ಷಿ ಡಾ.ಎಚ್‌.ಕೃಷ್ಣ ಹೇಳಿದರು.

‘ಎಲ್ಲಾ ಟಿಕೆಟ್‌ ಆಕಾಂಕ್ಷಿಗಳ ಜೊತೆ ಮಾತನಾಡುವುದಾಗಿ ಕಳೆದ ವಾರವೇ ಕುಮಾರಸ್ವಾಮಿ ತಿಳಿಸಿದ್ದರು. ಆಗ ಮಾತನಾಡಿದ್ದರೆ ಜೆಡಿಎಸ್‌ ಸಮಾವೇಶದ ದಿನ ಮಂಡ್ಯ ಕ್ಷೇತ್ರದ ಹೆಸರೂ ಘೋಷಣೆ ಆಗುತ್ತಿತ್ತು. ಆದರೆ ಸಮಾವೇಶ ಬಂದ ಕಾರಣ ಮಾತನಾಡಲು ಸಾಧ್ಯವಾಗಲಿಲ್ಲ. ಮುಂದಿನ ವಾರ ಮಾತನಾಡುವುದಾಗಿ ತಿಳಿಸಿದ್ದಾರೆ. ಮಾತುಕತೆ ನಂತರ ಹೆಸರು ಘೋಷಣೆಯಾಗಲಿದೆ’ ಎಂದು ಮುಖಂಡ ಕೆ.ಕೆ.ರಾಧಾಕೃಷ್ಣ ತಿಳಿಸಿದರು.

ವಿಜಯಾನಂದ್‌ಗೆ ಟಿಕೆಟ್‌: ವರಿಷ್ಠರಿಗೆ ಪತ್ರ?

‘ನಿತ್ಯ ಸಚಿವ’ ಕೆ.ವಿ.ಶಂಕರಗೌಡ ಅವರ ಕುಟುಂಬಕ್ಕೆ ರಾಜಕೀಯ ನೆಲೆ ಕಲ್ಪಿಸಲು ಅವರ ಮೊಮ್ಮಗ ಕೆ.ಎಸ್‌.ವಿಜಯಾನಂದ ಅವರಿಗೆ ಟಿಕೆಟ್‌ ನೀಡಬೇಕು ಎಂದು ದೇಶ, ವಿದೇಶದಲ್ಲಿರುವ ಕೆ.ವಿ.ಶಂಕರಗೌಡ ಅವರ ಶಿಷ್ಯರು, ಅಭಿಮಾನಿಗಳು ಜೆಡಿಎಸ್‌ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಹರಡಿದೆ.

ಕೆ.ಎಸ್‌.ವಿಜಯಾನಂದ್‌ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅವರಿಗೆ ಸ್ವಂತದ್ದೊಂದು ಮನೆ ಇಲ್ಲ. ತಾತನ ಹೆಸರು ಬಳಸಿಕೊಂಡು ರಾಜಕೀಯವಾಗಿ ಬೆಳೆಯಬಹುದಾಗಿತ್ತು. ಆದರೆ ಅವರು ಸ್ವಂತ ಕಾಲ ಮೇಲೆ ನಿಂತು ಜೀವನ ಕಟ್ಟಿಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅವರಿಗೆ ಟಿಕೆಟ್‌ ನೀಡಬೇಕು ಎಂದು ಪತ್ರ ಬರೆದಿದ್ದೇವೆ. ಪತ್ರದಲ್ಲಿ ಹೊರದೇಶದಲ್ಲಿರುವ ಶಂಕರಗೌಡರ ಶಿಷ್ಯರು, ಅಭಿಮಾನಿಗಳೂ ಇದ್ದಾರೆ. ನಮ್ಮ ಮನವಿಗೆ ವರಿಷ್ಠರು ಸ್ಪಂದಿಸುವ ಭರವಸೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಶಂಕರಗೌಡರ ಶಿಷ್ಯರೊಬ್ಬರು ತಿಳಿಸಿದರು.

‘ನಮ್ಮ ತಾತನವರ ಅಭಿಮಾನಿಗಳು ಪತ್ರ ಬರೆದಿದ್ದಾರೆ ಎಂಬ ವಿಷಯ ನನಗೆ ಗೊತ್ತಿಲ್ಲ. ಆದರೆ ನಾನು ಮೊದಲಿನಿಂದಲೂ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿ. ನಾನು ಅಭ್ಯರ್ಥಿಯಾದರೆ ಪಕ್ಷಭೇದ ಮರೆತು ಜನ ನನ್ನನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ತಾತನ ಹೆಸರಿನಲ್ಲಿ ಒಂದು ಚುನಾವಣೆ ಗೆಲ್ಲಬಹುದಷ್ಟೇ, ಆದರೆ ಮುಂದೆ ನನ್ನಲ್ಲಿರುವ ಸಾಮರ್ಥಕ್ಕೆ ಅನುಗುಣವಾಗಿ ರಾಜಕೀಯ ಜೀವನ ನಿರ್ಧಾರವಾಗುತ್ತದೆ. ಜೆಡಿಎಸ್‌ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್‌ ನೀಡಿದರೆ ಗೆಲುವು ಸಾಧಿಸುವ ವಿಶ್ವಾಸ ನನಗಿದೆ’ ಎಂದು ಕೆ.ಎಸ್‌.ವಿಜಯಾನಂದ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry