ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಪೂರ್ಣ ಹೃದಯ ಚಿಕಿತ್ಸೆಗೆ ಆಸ್ಪತ್ರೆ ಸಿದ್ಧ

350 ಹಾಸಿಗೆ ವ್ಯವಸ್ಥೆಯ ಜಯದೇವ ಹೃದ್ರೋಗ ವಿಜ್ಞಾನ ಹೊಸ ಆಸ್ಪತ್ರೆ 6ಕ್ಕೆ ಲೋಕಾರ್ಪಣೆ
Last Updated 1 ಮಾರ್ಚ್ 2018, 11:27 IST
ಅಕ್ಷರ ಗಾತ್ರ

ಮೈಸೂರು: ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಆಸ್ಪತ್ರೆ) ಕಾಮಗಾರಿ ಪೂರ್ಣಗೊಂಡಿದೆ. 350 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆ ಮಾರ್ಚ್ 6ರಂದು ಲೋಕಾರ್ಪಣೆಗೊಳ್ಳಲಿದೆ.

ತೆರೆದ ಹೃದಯದ ಶಸ್ತ್ರಚಿಕಿತ್ಸೆ ಇನ್ನುಮುಂದೆ ಸ್ಥಳೀಯವಾಗಿಯೇ ನಡೆಯಲಿದೆ. ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ತೆತ್ತು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಇದರಿಂದ ತಪ್ಪಲಿದೆ. ಕೆ.ಆರ್.ಎಸ್‌ ರಸ್ತೆಯಲ್ಲಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೂ ಅವಕಾಶ ಮಾಡಿಕೊಟ್ಟಿರುವುದು ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಬೆಂಗಳೂರಿಗೆ ತೆರಳುವುದು ತಪ್ಪಲಿದೆ.

ಏನೇನು ವಿಶೇಷ?: ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಕೆ.ಆರ್.ಆಸ್ಪತ್ರೆಯ ಆವರಣದಲ್ಲಿರುವ ಜಯದೇವ ಆಸ್ಪತ್ರೆಯ ಕಟ್ಟಡದಲ್ಲಿ ಜಾಗದ ಕೊರತೆ ಇತ್ತು. ಹೀಗಾಗಿ, ಅಲ್ಲಿ ಆಪರೇಷನ್‌ ಥಿಯೇಟರ್‌ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಹೊಸ ಆಸ್ಪತ್ರೆಯ ಕಟ್ಟಡದಲ್ಲಿ ಹೃದಯದ ಶಸ್ತ್ರಚಿಕಿತ್ಸೆಗಾಗಿಯೇ 4 ಸುಸಜ್ಜಿತ ಆಪರೇಷನ್‌ ಥಿಯೇಟರ್‌ ನಿರ್ಮಿಸಲಾಗಿದೆ.

‘ರೋಗಿಗಳು ಮೈಸೂರಿನಲ್ಲೇ ಅತಿ ಕ್ಲಿಷ್ಟ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿ ಕೊಳ್ಳಬಹುದಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯ ಶಸ್ತ್ರಚಿಕಿತ್ಸೆಗಾಗಿ ಹೆಚ್ಚುವರಿ 4 ಆಪರೇಷನ್‌ ಥಿಯೇಟರ್‌ ನಿರ್ಮಿಸಲಾಗಿದೆ. 4 ಕಾರ್ಡಿಯೊ ಕ್ಯಾತ್‌ಲ್ಯಾಬ್ (ಹೃದಯದ ಕವಾಟಗಳ ಅಧ್ಯಯನ ಹಾಗೂ ಸಮಸ್ಯೆ ಪತ್ತೆ ಪ್ರಯೋಗಾಲಯ), ಕಾರ್ಡಿಯಾಕ್ ಸಿಟಿ ಸ್ಕ್ಯಾನಿಂಗ್, ಎಂಆರ್‌ಐ, ಸಿಟಿ, ಎಕೊ, ಟ್ರೆಡ್‌ಮಿಲ್‌ ಪರೀಕ್ಷೆ, ಆ್ಯಂಜಿಯೊಗ್ರಾಂ, ಆ್ಯಂಜಿಯೊಪ್ಲಾಸ್ಟಿ, ಎಲೆಕ್ಟ್ರೊ ಫಿಸಿಯಾಲಜಿ ಸೌಲಭ್ಯಗಳಿವೆ. 60 ಹಾಸಿಗೆಯುಳ್ಳ ಐಸಿಯು (ತುರ್ತು ನಿಗಾ ಘಟಕ) ಇರುವುದು ವಿಶೇಷ.

ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ 4 ಆಪರೇಷನ್‌ ಥಿಯೇಟರ್, 4 ಕಾರ್ಡಿಯೋ ಕ್ಯಾತ್‌ಲಾಬ್ (ಆ್ಯಂಜಿಯೋಗ್ರಾಂ), 4 ಆಪರೇಷನ್ ಥಿಯೇಟರ್‌ (ಸಾಮಾನ್ಯ) ಭೌತಿಕ ಸೌಲಭ್ಯವನ್ನು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಕಲ್ಪಿಸಲಾಗಿದೆ.

ಸಿಬ್ಬಂದಿಗೆ ಕೊರತೆ ಇಲ್ಲ: ಹೊಸ ಆಸ್ಪತ್ರೆಯಾದರೂ ಇಲ್ಲಿ ಸಿಬ್ಬಂದಿಗೆ ಕೊರತೆಯಿಲ್ಲ. ಏಕೆಂದರೆ, ಕೆ.ಆರ್.ಆಸ್ಪತ್ರೆಯಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ ಹಾಲಿ 180 ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಶುಶ್ರೂಷಕರೂ ಇದ್ದಾರೆ. ಇವರೆಲ್ಲೂ ಹೊಸ ಆಸ್ಪತ್ರೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಜತೆಗೆ ವೈದ್ಯೇತರ ಸಿಬ್ಬಂದಿ, ಆಡಳಿತ ಸಿಬ್ಬಂದಿಯೂ ಹೊಸ ಆಸ್ಪತ್ರೆಗೆ ಸ್ಥಳಾಂತರಗೊಳ್ಳುತ್ತಿರುವುದು ಎಲ್ಲ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.
***
ಹಳೆಯ ಕಟ್ಟಡದಲ್ಲಿ ಮಿತಿಗಳೇ ಹೆಚ್ಚು!

ಮೈಸೂರು: ಕೆ.ಆರ್‌.ಆಸ್ಪತ್ರೆಯ ಆವರಣದಲ್ಲಿ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜಯದೇವ ಆಸ್ಪತ್ರೆಯಲ್ಲಿ ಮಿತಿಗಳೇ ಹೆಚ್ಚಿದ್ದವು. ತಾತ್ಕಾಲಿಕ ಕಟ್ಟಡವಾಗಿದ್ದ ಕಾರಣ, 150 ಹಾಸಿಗೆಗಳು ಮಾತ್ರ ಇದ್ದವು. ಅಲ್ಲದೇ, ಐಷಾರಾಮಿ ಸೌಲಭ್ಯ ನೀಡಲು ಸಾಧ್ಯವಾಗುತ್ತಿರಲಿಲ್ಲ.

ಪ್ರತಿನಿತ್ಯ ಆಸ್ಪತ್ರೆಗೆ 400 ಹೊರರೋಗಿಗಳು ಬರುತ್ತಿದ್ದಾರೆ. ಅವರಲ್ಲಿ ತುರ್ತು ಪರಿಸ್ಥಿತಿ ಇರುವವರಿಗೆ ಮಾತ್ರ ಚಿಕಿತ್ಸೆ ನೀಡಿ ಮಿಕ್ಕವರನ್ನು ವಾಪಸು ಕಳುಹಿಸಲಾಗುತ್ತಿತ್ತು. ಅಲ್ಲದೇ, ಜಾಗದ ಮಿತಿಯಿಂದಾಗಿ ಯಾವುದೇ ಹೊಸ ಭೌತಿಕ ಸೌಲಭ್ಯ ಕಲ್ಪಿಸಲು ಅವಕಾಶವೇ ಇರಲಿಲ್ಲ.

ಹೊಸ ಆಸ್ಪತ್ರೆಯ ಒಟ್ಟು 4 ಲಕ್ಷ ಚದರ ಅಡಿಯಲ್ಲಿ ನಿರ್ಮಾಣವಾಗಿದೆ. 4 ಅಂತಸ್ತಿನ ಈ ಕಟ್ಟಡದಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೇ, ವಿಸ್ತರಣೆಗೂ ಅವಕಾಶವಿದೆ. ಹೊಸ ಆಸ್ಪತ್ರೆಯ ಆವರಣದಲ್ಲಿ ಖಾಲಿ ಜಾಗವೂ ಇದ್ದು ಭವಿಷ್ಯದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೂ ಸಾಧ್ಯತೆ ಇದೆ ಎಂದು ಡಾ.ಮಂಜುನಾಥ್‌ ತಿಳಿಸಿದರು.

ಹೊಸ ಆಸ್ಪತ್ರೆಯಲ್ಲಿ ಅಗತ್ಯ ಎಲ್ಲ ಬೆಂಬಲ ಸೇವೆಗಳು ಲಭ್ಯವಿವೆ. ಉದಾಹರಣೆಗೆ ಇಡೀ ಆಸ್ಪತ್ರೆಗೆ ತುರ್ತು ವಿದ್ಯುತ್‌ ಪೂರೈಸಬಲ್ಲ ಜನರೇಟರ್, ಎಸಿ ಪ್ಲಾಂಟ್‌, ಬಾಯ್ಲರ್‌ ಯೂನಿಟ್, ಪಂಪ್‌ ಹೌಸ್‌ ಇದೆ. ಇಡೀ ಆವರಣವೇ ದೊಡ್ಡ ಊರಿನಂತೆ ಭಾಸವಾಗುತ್ತದೆ ಎಂದರು.
***
60 ಲಕ್ಷ ಜನಕ್ಕೆ ಉಪಯೋಗ

ಈ ಆಸ್ಪತ್ರೆ ಕೇವಲ ಮೈಸೂರಿನವರಿಗೆ ಮಾತ್ರ ಪ್ರಯೋಜನಕಾರಿಯಲ್ಲ; ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳ ಹೃದ್ರೋಗಿಗಳಿಗೆ ಸಹಾಯವಾಗುತ್ತದೆ.

ಮಂಡ್ಯ, ಚಾಮರಾಜನಗರ, ಹಾಸನ, ಕೊಡಗಿನ ರೋಗಿಗಳೂ ಚಿಕಿತ್ಸೆ ಪಡೆಯಬಹುದು. ಮೈಸೂರನ್ನೂ ಸೇರಿ ಒಟ್ಟು 60 ಲಕ್ಷ ಜನಸಂಖ್ಯೆಯ ಪ್ರದೇಶ ವ್ಯಾಪ್ತಿಗೆ ಈ ಆಸ್ಪತ್ರೆಯು ಒಳಗೊಳ್ಳುತ್ತದೆ. ಈ ವ್ಯಾಪ್ತಿಯ ಮಂದಿಯು ಇನ್ನುಮುಂದೆ ಯಾವುದೇ ರೀತಿಯ ಹೃದಯ ಸಂಬಂಧಿ ಚಿಕಿತ್ಸೆಗೂ ಬೆಂಗಳೂರನ್ನು ಅವಲಂಬಿಸಬೇಕಿಲ್ಲ. ಎಲ್ಲ ಪ್ಯಾಕೇಜ್‌ಗಳು ಹೊಸ ಆಸ್ಪತ್ರೆಯಲ್ಲೇ ಸಿಗುತ್ತವೆ.
***
ಚಿಕಿತ್ಸೆ ಮೊದಲು, ಶುಲ್ಕ ಬಳಿಕ

ಜಯದೇವ ಸಂಸ್ಥೆಯ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮೊದಲು, ಶುಲ್ಕ ಬಳಿಕ ಎಂಬ ತತ್ವವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.

ಇದಕ್ಕಾಗಿ ಸಂಸ್ಥೆಯು 35 ಚಾರಿಟಬಲ್‌ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳು ರೋಗಿಗಳ ದುಬಾರಿ ಶುಲ್ಕ ಭರಿಸಲು ಹೆಗಲು ನೀಡುತ್ತವೆ. ಇದರಿಂದ ರೋಗಿಗಳಿಗೆ ಬಹುತೇಕ ಶುಲ್ಕದ ವೆಚ್ಚ ಕಡಿಮಯಾಗಲಿದೆ. ಇದೇ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಎನ್‌ಎಬಿಎಚ್‌ ಮಾನ್ಯತೆ ಪಡೆದ ದೇಶದ ಮೊದಲ ಸಂಸ್ಥೆ ಇದಾಗಿದೆ.
***
ಲಭ್ಯ ವಿವಿಧ ಚಿಕಿತ್ಸೆಗಳು

* 2ಡಿ ಎಕೊ ಕಾರ್ಡಿಯೋಗ್ರಾಂ
* ಟಿಇಇ
* ಡಾಪ್ಲರ್‌ ಸ್ಟಡಿ
* ಕರೋಟಿಡ್‌ ಡಾಪ್ಲರ್ ಸ್ಟಡಿ
* ಟ್ರೆಡ್‌ಮಿಲ್‌ ಪರೀಕ್ಷೆ
* ಮಯೋ ಕಾರ್ಡಿಯಲ್ ಪರ್ಫ್ಯೂಷನ್‌ ಸ್ಕ್ಯಾನ್
* ಕರೋನರಿ ಆ್ಯಂಜಿಯೊಗ್ರಾಂ
* ಕ್ಯಾತ್ ಸ್ಟಡಿ
* ಪರ್ಕುಟೇನಿಯಸ್ ಟ್ರಾನ್ಸ್ ಮೈಟ್ರಲ್ ಕಮಿಶುರೊಟಮಿ (ಪಿಟಿಎಂಸಿ)
* ಪೆರಿಫೆರಲ್‌ ಆ್ಯಂಜಿಯೊಗ್ರಾಂ
* ಪರಿಫಿರಲ್‌ ಆ್ಯಂಜಿಯೊಪ್ಲಾಸ್ಟಿ
* ಪರ್ಮನೆಂಟ್ ಪೇಸ್‌ಮೇಕರ್
* ಬಲೂನ್ ಪರ್ಮೊನರಿ
* ಎಲೆಕ್ಟ್ರೊ ಫಿಸಿಯಾಲಜಿ ಅಧ್ಯಯನ
* ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ
* ತೆರೆದ ಶಸ್ತ್ರಚಿಕಿತ್ಸೆ
* ಹೃದಯದ ಕವಾಟ ಬದಲಾವಣೆ
* ಮುಚ್ಚಿದ ಹೃದಯ ಶಸ್ತ್ರಚಿಕಿತ್ಸೆ
* ಎಂಆರ್‌ಐ
* ಸಿಟಿ ಸ್ಕ್ಯಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT