ಶುಕ್ರವಾರ, ಮೇ 14, 2021
32 °C

ಸರ್ಕಾರದ ನಿಧಿಯಿಂದ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರದ ನಿಧಿಯಿಂದ ವೇತನ

ಬೆಂಗಳೂರು: ರಾಜ್ಯದ 6,024 ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುವ 50,114 ನೌಕರರಿಗೆ ಇದೇ ತಿಂಗಳಿನಿಂದ ಸರ್ಕಾರದ ನಿಧಿಯಿಂದಲೇ ವೇತನ ಪಾವತಿಯಾಗಲಿದೆ.

ಪಂಚಾಯತ್ ರಾಜ್ ಇಲಾಖೆಯ ಮಾನವ ಸಂಪನ್ಮೂಲ ನಿರ್ವಹಣಾ ಸೇವೆ (ಎಚ್ಆರ್‌ಎಂಎಸ್‌) ಅಡಿಯಲ್ಲಿ ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಇನ್ನು ಮುಂದೆ ವೇತನ ಜಮೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಎಚ್.ಕೆ. ಪಾಟೀಲ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಇಲ್ಲಿಯವರೆಗೆ ಗ್ರಾಮ ಪಂಚಾಯ್ತಿಗಳು ಸಂಗ್ರಹಿಸುತ್ತಿದ್ದ ತೆರಿಗೆ, ಉಪಕರದ ಒಟ್ಟು ಮೊತ್ತದಲ್ಲಿ ಶೇ 40ರಷ್ಟನ್ನು ವೇತನ ಪಾವತಿಗೆ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಆದಾಯ ಕ್ರೋಡೀಕರಣಕ್ಕೆ ಅನುಗುಣವಾಗಿ ವೇತನ ಸಿಗುತ್ತಿತ್ತು ಮತ್ತು ಸಕಾಲದಲ್ಲಿ ಸಿಗುತ್ತಿರಲಿಲ್ಲ. ಎಲ್ಲ ನೌಕರರಿಗೆ ನಿಶ್ಚಿತ ಮೊತ್ತದ ವೇತನ ಸಿಗಬೇಕು ಎಂಬ ಕಾರಣಕ್ಕೆ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಎರಡು–ಮೂರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕರ ವಸೂಲಿಗಾರರು, ಗುಮಾಸ್ತ, ಕಂಪ್ಯೂಟರ್ ಆಪರೇಟರ್‌, ನೀರಗಂಟಿ, ಪಂಪ್ ಸೆಟ್‌ ನಿರ್ವಾಹಕರು, ಕಚೇರಿ ಸಹಾಯಕರು ಹಾಗೂ ಸ್ವಚ್ಛತಾಗಾರರ ನೇಮಕವನ್ನು ಸಕ್ರಮ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2014ರ ಸೆಪ್ಟೆಂಬರ್‌ನಲ್ಲಿ ಎಲ್ಲರ ನೇಮಕಾತಿಯನ್ನು ಸಕ್ರಮಗೊಳಿಸಲಾಯಿತು. ಆದರೆ, ಕನಿಷ್ಠ ವೇತನ, ಸೇವಾ ಭದ್ರತೆ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳು ಸಿಗುತ್ತಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಸಕ್ತಿಯ ಫಲವಾಗಿ ಸೇವಾ ಭದ್ರತೆ ಒದಗಿಸುವ ಆದೇಶ ಹೊರಬಿದ್ದಿದೆ ಎಂದು ಅವರು ವಿವರಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ ಗ್ರಾಮ ಪಂಚಾಯ್ತಿಗಳಲ್ಲಿ ನೌಕರರ ಸಂಖ್ಯೆ ಕಡಿಮೆ ಇತ್ತು. ಸರಾಸರಿ ನೌಕರರ ಲೆಕ್ಕ ತೆಗೆದುಕೊಂಡರೆ ಒಂದು ಪಂಚಾಯ್ತಿಯಲ್ಲಿ ಒಂದೂವರೆಯಷ್ಟು ನೌಕರರು ಮಾತ್ರ ಇದ್ದರು. 35,000 ನೌಕರರ ಸಕ್ರಮ ಮಾಡಿಕೊಂಡ ಬಳಿಕ ಪ್ರತಿ ಪಂಚಾಯ್ತಿಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಅವರನ್ನು ಬಿಟ್ಟು ಐದು ನೌಕರರು ಇರುವಂತಾಗಿದೆ ಎಂದು ಪಾಟೀಲ ಹೇಳಿದರು.

 

ಕನಿಷ್ಠ ವೇತನ ಎಷ್ಟು (₹ಗಳಲ್ಲಿ)

ಹುದ್ದೆ ವೇತನ

ಕರ ವಸೂಲಿಗಾರ, ಗುಮಾಸ್ತ 12,887

ನೀರಗಂಟಿ, ‍ಪಂಪ್ ನಿರ್ವಾಹಕ 11,353

ಕಚೇರಿ ಸಹಾಯಕ 10,775

ಸ್ವಚ್ಛತಾಗಾರ 13,635

 

ಪಿಡಿಒ ಹುದ್ದೆ: ಆಯ್ಕೆಯಾದವರಿಗೆ ನೇಮಕಾತಿ ಆದೇಶ

815 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)  ಹಾಗೂ 809 ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಸದ್ಯವೇ ನೇಮಕಾತಿ ಆದೇಶ ನೀಡಲಾಗುವುದು. ಇದೇ 5ರಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು ಎಂದು ಸಚಿವ ಪಾಟೀಲ ತಿಳಿಸಿದರು.

1,800 ಪಿಡಿಒ ಹುದ್ದೆ ಖಾಲಿ ಇತ್ತು. ಕೆಲವೊಂದು ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಲಾಗಿದೆ. 815 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲಾಗಿದೆ. ಹಾಗಿದ್ದರೂ 400 ಹುದ್ದೆಗಳು ಖಾಲಿ ಉಳಿದಿದ್ದು, ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.