ಇವರು ಪೇಸ್ಟ್ರಿ ಪಂಟರ್‌

7

ಇವರು ಪೇಸ್ಟ್ರಿ ಪಂಟರ್‌

Published:
Updated:
ಇವರು ಪೇಸ್ಟ್ರಿ ಪಂಟರ್‌

ಎಂಬಸಿ ಅಪಾರ್ಟ್‍ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ನಾನು ಅನಿವಾರ್ಯ ಕಾರಣದಿಂದ ಕೆಲಸ ಬಿಡಬೇಕಾಯಿತು. ಕೂತಲ್ಲೇ ಕೂತರೆ ಬದುಕು ಬಿಡುತ್ತದೆಯೇ, ಹಣಕಾಸಿನ ಸಮಸ್ಯೆ ನೀಗಿಸಲು ಮತ್ತೆ ಕೆಲಸ ಹುಡುಕಲಾರಂಭಿಸಿದೆ. ಆಗಲೇ ನಗರದ ಹೊವಾರ್ಡ್‌ ಜಾನ್ಸನ್‌ (ಹೊಜೊ) ಹೋಟೆಲ್‌ನಲ್ಲಿ ಕೆಲಸ ಸಿಕ್ಕಿದ್ದು.

ಮನೆಯಲ್ಲಿ ಹಣಕಾಸಿನ ಸ್ಥಿತಿ ಬಿಗಡಾಯಿಸಿತ್ತು. ಆ ಸಮಯದಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾಗ ಹೋಟೆಲ್‌ ಹೊವಾರ್ಡ್‌ ಜಾನ್ಸನ್‌ ಕಟ್ಟಡದ ಕೆಲಸ ನಡೆಯುತ್ತಿತ್ತು. ಆಗ ಅಲ್ಲಿ ಕೆಲಸ ಇದೆಯೇ? ಎಂದು ಕೇಳಿದೆ. ಆಗ ಕಿಚನ್ ಸ್ಟಿವಾರ್ಡ್‌ ಕೆಲಸ ಖಾಲಿ ಇದೆ ಎಂದರು ನಾನೂ ಒಪ್ಪಿಕೊಂಡೆ.

ನಾಗೇನಹಳ್ಳಿ ನಿವಾಸಿಯಾಗಿರುವ ನಾನು ಮೂರು ಮಕ್ಕಳ ತಾಯಿ. 4 ವರ್ಷಗಳ ಹಿಂದೆ ಹೋಟೆಲ್‌ನ ಅಡುಗೆಮನೆ ಸೇರಿದಾಗ ಸಾಕಷ್ಟು ಒತ್ತಡಗಳಿದ್ದವು. ಕೆಲಸಕ್ಕೆ ಸೇರಿದ ಕೆಲದಿನಗಳ ನಂತರ ಪೇಸ್ಟ್ರಿ ಕೇಕ್‌ ಮಾಡುವ ವಿಧಾನ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಅದನ್ನು ಕಲಿಯುವ ಹಂಬಲದ ಕುರಿತು ಹಿರಿಯ ಬಾಣಸಿಗರಿಗೆ ತಿಳಿಸಿದೆ. ಸಹಕಾರವೂ ದೊರೆಯಿತು.

ಹೋಟೆಲ್‌ನ ಮುಖ್ಯ ಅಡುಗೆಮನೆಯಲ್ಲಿ ಪ್ರತಿದಿನ ಸಂಜೆ 4.30ಕ್ಕೆ ನನ್ನ ಪಾಳಿಯ ಕೆಲಸ ಮುಗಿಯುತ್ತಿತ್ತು. ಬಳಿಕ ಬೇಕರಿ ತಿನಿಸು ತಯಾರಿಕೆ ವಿಭಾಗಕ್ಕೆ ತೆರಳಿ ರಾತ್ರಿ 8.30ರವರೆಗೆ ತರಬೇತಿ ಪಡೆಯುತ್ತಿದ್ದೆ. ಮನೆಯಿಂದ ಹೊರಗೆ ಹೋದ ಹೆಣ್ಣು ಸಂಜೆಯಾಗುವುದರೊಳಗೆ ಮನೆ ಸೇರಿಕೊಂಡರೆ ಸಾಕು ಎನ್ನುವ ಮನಸ್ಥಿತಿಗಳು ನನ್ನ ಸುತ್ತಲೂ ಇರುವುದರಿಂದ ಆರಂಭದಲ್ಲಿ ಈ ರೀತಿ ಮಾಡುವುದು ಬೇಡವೆನಿಸಿತ್ತಾದರೂ ಅಡುಗೆ ಕ್ಷೇತ್ರದಲ್ಲಿಯೇ ಏನಾದರೂ ಸಾಧಿಸುವ ಹಂಬಲ ಮತ್ತು ಕುಟುಂಬದ ಬೆಂಬಲ ನನ್ನನ್ನು ಮುನ್ನಡೆಸಿತ್ತು.

ಏಳು ತಿಂಗಳ ನಿರಂತರ ಕಲಿಕೆ ಬಳಿಕ ಇದೀಗ ಬೇಕಿಂಗ್‌ ಷೆಫ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಉದ್ಯೋಗದಲ್ಲಿ ಸಮಾನತೆ ದೊರೆತಿದೆ ಎಂದು ಅರ್ಥೈಸಬಾರದು. ಮನಸುಗಳು ಬದಲಾಗದಿದ್ದರೆ ಎಷ್ಟು ‘ಮಹಿಳಾ ದಿನ’ಗಳನ್ನು ಆಚರಿಸಿದರೂ ವ್ಯವಸ್ಥೆ ಬದಲಾಗದು.

ಮನೆಯಲ್ಲಿನ ಅಡುಗೆಮನೆ ಹೆಂಗಸರಿಗೇ ಮೀಸಲು ಎನ್ನುವ ಭಾವ ಈಗಲೂ ಇದೆ. ಮನೆ ಹಾಗೂ ಹೋಟೆಲ್‌–‌ರೆಸ್ಟೋರೆಂಟ್‌ಗಳಲ್ಲಿನ ಅಡುಗೆ ಕ್ರಮಗಳಲ್ಲಿ ಸಾಕಷ್ಟು ಅಂತರ ಇರುವುದರಿಂದ ಇಲ್ಲಿ ಮಹಿಳೆಯರ ಸಂಖ್ಯೆ ವಿರಳ. ನನ್ನ ಪಾಲಿಗೆ ಹೇಳುವುದಾದರೂ ಈ ಕ್ಷೇತ್ರಕ್ಕೆ ಬಂದದ್ದು ತೀರಾ ಆಕಸ್ಮಿಕ. ಬೇಕರಿ ತಿನಿಸುಗಳ ತಯಾರಿಕೆ ಬಗ್ಗೆ ಆಸಕ್ತಿ ತಳೆದದ್ದೂ ಇಲ್ಲಿಗೆ ಬಂದ ಮೇಲೆಯೇ. ಆದರೆ ಯಾರು ಯಾವ ಕೆಲಸವನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ನಾನು ಉದಾಹರಣೆಯಷ್ಟೆ.

ಅಡುಗೆಯೂ ಒಂದು ಕಲೆ. ರುಚಿಕರವಾಗಿ ಖಾದ್ಯ ತಯಾರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ನನ್ನ ಪಾಲಿಗೆ ಅಡುಗೆ ಪ್ರಯೋಗವೂ, ಕಲೆಯೂ, ಬದುಕೂ ಆಗಿದೆ. ಕೇಕ್‌ ಮಾತ್ರವಲ್ಲದೆ ಎಲ್ಲ ಬಗೆಯ ತಿನಿಸುಗಳನ್ನೂ ರುಚಿಕರವಾಗಿ ತಯಾರಿಸುವುದರಿಂದ ಗ್ರಾಹಕರೂ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಸಿಬ್ಬಂದಿಯೂ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಈಚಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿನ ಅಡುಗೆ ಕೆಲಸಕ್ಕೂ ಸಾಕಷ್ಟು ಓದಿಕೊಂಡಿರುವವರು, ತರಬೇತಿ ಪಡೆದಿರುವವರು ಬರುತ್ತಿದ್ದಾರೆ. ಆಸಕ್ತಿ ಹಾಗೂ ಶ್ರದ್ಧೆ ಇರುವವರು ಮಾತ್ರ ಇಲ್ಲಿ ಉಳಿದುಕೊಳ್ಳಲು ಸಾಧ್ಯ. ನನ್ನಂತಹವರಿಗೆ ಅವಕಾಶ ನೀಡಿದ ಹೊವಾರ್ಡ್‌ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry