ಲಾಲ್‌ಬಾಗ್‌: ಒಂದೇ ಮರದಲ್ಲಿ 15 ಜೇನುಗೂಡು!

ಮಂಗಳವಾರ, ಮಾರ್ಚ್ 19, 2019
20 °C
ಗಾಜಿನಮನೆ ಮತ್ತು ಬೀಜ ಪರೀಕ್ಷೆ ಪ್ರಯೋಗಾಲಯದ ಕೂಗಳತೆ ದೂರದಲ್ಲಿ ಮೂರು ಜೇನುಗೂಡು

ಲಾಲ್‌ಬಾಗ್‌: ಒಂದೇ ಮರದಲ್ಲಿ 15 ಜೇನುಗೂಡು!

Published:
Updated:
ಲಾಲ್‌ಬಾಗ್‌: ಒಂದೇ ಮರದಲ್ಲಿ 15 ಜೇನುಗೂಡು!

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಜೇನುಗೂಡುಗಳ ಸಂಖ್ಯೆ ಹೆಚ್ಚಾಗಿದ್ದು, ಮುಖ್ಯದ್ವಾರದ ಬಳಿಯ ಬುರುಗದ ಮರವೊಂದರಲ್ಲಿಯೇ ಸುಮಾರು ಹದಿನೈದು ಜೇನುಗೂಡುಗಳಿವೆ.

ಗಾಜಿನಮನೆ ಮತ್ತು ಬೀಜ ಪರೀಕ್ಷೆ ಪ್ರಯೋಗಾಲಯಕ್ಕೆ ಕೂಗಳತೆ ದೂರದಲ್ಲಿನ ಸ್ಥಳದ ಸುತ್ತಮುತ್ತ ಮೂರು ಜೇನುಗೂಡುಗಳಿವೆ.

‘ಬೇಸಿಗೆಯಲ್ಲಿ ಬೇರೆಡೆಗಳಲ್ಲಿ ಸಸ್ಯ ಸಂಪತ್ತು ಕಡಿಮೆಯಾಗುವುದರಿಂದ ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನದಲ್ಲಿ ಜೇನುಗೂಡುಗಳ ಸಂಖ್ಯೆ ಹೆಚ್ಚಾಗುತ್ತದೆ. ಒಂದೊಂದು ಮರದಲ್ಲೂ 20–30 ಗೂಡುಗಳು ನಿರ್ಮಾಣವಾಗುತ್ತವೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.

‘240 ಎಕರೆ ವಿಸ್ತಾರವಿರುವ ಲಾಲ್‌ಬಾಗ್‌ನಲ್ಲಿ ನಾಲ್ಕೈದು ಕಡೆ ಜೇನುಗೂಡುಗಳು ಕಟ್ಟುತ್ತವೆ. ಬುರುಗದ ಮರದಲ್ಲಿಯೇ ಹೆಚ್ಚಾಗಿ ಗೂಡು ಕಟ್ಟುತ್ತವೆ. 10 ಅಡಿಗಿಂತ ಕೆಳಮಟ್ಟದಲ್ಲಿರುವ ಗೂಡುಗಳನ್ನು ತೆರವು ಮಾಡುತ್ತೇವೆ. ಎತ್ತರದಲ್ಲಿರುವ ಗೂಡುಗಳನ್ನು ಸ್ಥಳಾಂತರಿಸುವುದು ಕಷ್ಟ’ ಎಂದರು.

‘ಮಧ್ಯಾಹ್ನದ ಸಮಯದಲ್ಲಿ ಅವುಗಳು ಕೆರೆಗೆ ನೀರು ಕುಡಿಯಲು ಹೋಗುತ್ತವೆ. ಕೆರೆ ಬಳಿ ಯಾರಾದರೂ ಕಲ್ಲು ಎಸೆದರೆ ದಾಳಿ ಮಾಡುತ್ತವೆ. ಅಲ್ಲಿ ಹೋಗುವವರಿಗೆ ಎಚ್ಚರಿಕೆ ನೀಡುತ್ತೇವೆ. ಜೇನುಗೂಡು ಇರುವ ಮರಗಳ ಬಳಿ ಸಂಚರಿಸದಂತೆ ತಿಳಿಸುತ್ತೇವೆ’ ಎಂದು ಹೇಳಿದರು.

‘ಹುಳುಗಳು ಎದ್ದಾಗ, ವಾಟರ್‌ ಜೆಟ್‌ಗಳ ಮೂಲಕ ಮಳೆಯಂತೆ ನೀರು ಚಿಮ್ಮಿಸುವ ವ್ಯವಸ್ಥೆಯೂ ಇದೆ. ಅದರಿಂದ ಹುಳುಗಳ ರೆಕ್ಕೆ ತೇವಗೊಳ್ಳುತ್ತದೆ. ಆಗ ಅವುಗಳಿಗೆ ಹಾರಲಾಗುವುದಿಲ್ಲ. ಈ ವೇಳೆ ಜನರು ಸುಲಭವಾಗಿ ದಾಳಿಯಿಂದ ತಪ್ಪಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಜೇನುತಜ್ಞರಿಂದ ಪ್ರತಿ ವಾರ ಪರಿಶೀಲನೆ ಮಾಡಿಸುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಫ್ಲಾಶ್‌ ಬಳಸಿ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಿದ್ದೇವೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

ಏಕೆ ಏಳುತ್ತವೆ?: ಅತಿಯಾದ ಹೊಗೆ–ಧೂಳು ಏಳುವುದು, ದುರ್ಗಂಧ ಬೀರಿದಾಗ, ಕ್ಯಾಮೆರಾ ಫ್ಲ್ಯಾಶ್‌ನ ಬೆಳಕು ಗೂಡಿನ ಮೇಲೆ ಬಿದ್ದಾಗ, ಹದ್ದುಗಳ ದಾಳಿ, ಮರಿಗಳಿಗೆ ಹಾರುವುದನ್ನು ಕಲಿಸುವಾಗ, ಸ್ಥಳ ಬದಲಾವಣೆ ಹಾಗೂ ಕಿಡಿಗೇಡಿಗಳು ಗೂಡಿಗೆ ಕಲ್ಲು ಹೊಡೆದ ಸಂದರ್ಭದಲ್ಲಿ ಜೇನುಹುಳುಗಳು ಗೂಡಿನಿಂದ ಏಳುತ್ತವೆ.

**

ಎಚ್ಚರಿಕೆ ಫಲಕ

ಲಾಲ್‌ಬಾಗ್‌ನ ನಾಲ್ಕು ದಿಕ್ಕಿನಲ್ಲಿರುವ ದ್ವಾರಗಳ ಬಳಿ ಜೇನುಗೂಡುಗಳಿರುವ ಕುರಿತು ಎಚ್ಚರಿಕೆ ಫಲಕಗಳನ್ನು ಹಾಕಲಾಗುತ್ತದೆ. ಹುಳುಗಳಿಗೆ ತೊಂದರೆ ಮಾಡದಂತೆ ಪ್ರವಾಸಿಗರು ವಹಿಸಬೇಕಾದ ಎಚ್ಚರಿಕೆ ಹಾಗೂ ಅವುಗಳು ಗೂಡಿನಿಂದ ಎದ್ದಾಗ ಹೇಗೆ ರಕ್ಷಣೆ ಪಡೆಯಬೇಕು ಎಂಬ ವಿಷಯ ಫಲಕಗಳಲ್ಲಿ ಇರಲಿದೆ ಎಂದು ಎಂ.ಜಗದೀಶ್‌ ತಿಳಿಸಿದರು.

‘ಉದ್ಯಾನಕ್ಕೆ ಜೇನುಹುಳು ಬೇಕು’

ಜೇನುಹುಳುಗಳು ಈ ಪ್ರಕೃತಿಯ ಒಂದು ಭಾಗ. ಪ್ರಕೃತಿಯ ಪರಾಗಸ್ಪರ್ಶ ಕ್ರಿಯೆಗೆ ಇವು ಬೇಕೇ ಬೇಕು. ಕಟ್ಟಡಗಳಲ್ಲಿ ಕಟ್ಟಿದ್ದರೆ ಸ್ಥಳಾಂತರ ಮಾಡಬಹುದು. ಮರಗಳಲ್ಲಿ ಕಟ್ಟಿರುವ ಗೂಡುಗಳ ಸ್ಥಳಾಂತರ ಅಷ್ಟು ಸುಲಭವಲ್ಲ. ಮತ್ತೆ ಅದೇ ಸ್ಥಳದಲ್ಲಿ ಬಂದು ಕಟ್ಟಿಕೊಳ್ಳುತ್ತವೆ ಎಂದು ಚಂದ್ರಶೇಖರ್ ತಿಳಿಸಿದರು.

* ಏನು ಮಾಡಬೇಕು

ಜೇನುಹುಳುಗಳು ಎದ್ದಾಗ ದುಪ್ಪಟ ಅಥವಾ ಕರವಸ್ತ್ರದಿಂದ ಮುಖ ಮುಚ್ಚಿಕೊಂಡು, ಕೆಳಕ್ಕೆ ಮುಖ ಮಾಡಿ ಅಲುಗಾಡದಂತೆ ಮಲಗಬೇಕು. ಹುಳುಗಳು ಕೆಲ ಹೊತ್ತು ಮನುಷ್ಯನ ಸುತ್ತ ಹಾರಾಡಿ ಹೋಗುತ್ತವೆ. ಯಾಕೆಂದರೆ, ಜೇನುಹುಳುಗಳು ನೀರು ಕುಡಿಯುವ ಅಥವಾ ಮಕರಂದ ಹೀರುವ ಸಂದರ್ಭದಲ್ಲಿ ಮಾತ್ರ ಒಂದೂವರೆ ಅಡಿಗಿಂತ ಕೆಳಗಡೆ ಹಾರಾಡುತ್ತವೆ.

* ಏನು ಮಾಡಬಾರದು

ಹುಳುಗಳು ಮುಖ ಅಥವಾ ಮೈಗೆ ಕಚ್ಚಿದಾಗ, ತಕ್ಷಣ ಉಜ್ಜಿಕೊಂಡು ಅವುಗಳನ್ನು ಸಾಯಿಸಬಾರದು. ಹಾಗೆ ಮಾಡುವುದರಿಂದ ಒಮ್ಮೆಲೇ ನೂರಾರು ಹುಳುಗಳು ಮೈತುಂಬಾ ಮುತ್ತಿಕೊಳ್ಳುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry