ನಮ್ಮ ಬದುಕು ಅವರ ಸರಕು

7

ನಮ್ಮ ಬದುಕು ಅವರ ಸರಕು

Published:
Updated:
ನಮ್ಮ ಬದುಕು ಅವರ ಸರಕು

ನಗರದಲ್ಲಿ ಪ್ರಮುಖ ಸಂವಹನ ವೇದಿಕೆಯಾದ ಸಾಮಾಜಿಕ ಮಾಧ್ಯಮಗಳು ಒತ್ತಡದ ಬದುಕಿನಲ್ಲಿ ಸಮಾನ ಮನಸ್ಕರನ್ನು ಹುಡುಕಿಕೊಳ್ಳುವ ವೇದಿಕೆಯೂ ಹೌದು. ಭಾವನೆಗಳ ಅಭಿವ್ಯಕ್ತಿ, ವೈಯಕ್ತಿಕ ಸಂಗತಿಗಳ ಹಂಚಿಕೆಗೂ ಉಪಯುಕ್ತ. ಈ ಸಂಗತಿಗಳು ಈಗ ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳಾಗಿ ಪರಿವರ್ತನೆಯಾಗುತ್ತಿವೆ ಎಂಬ ನೋವು ಅನೇಕರಲ್ಲಿ ಮನೆಮಾಡಿದೆ.

‘ಜಾಗತೀಕರಣದ ಬದುಕಿನಲ್ಲಿ ಎಲ್ಲೆಡೆಯೂ ಮಾಹಿತಿ ಕದಿಯುವ ಮಾಫಿಯವೇ ನಮ್ಮನ್ನು ಸುತ್ತುವರೆದಿದೆ. ಸದ್ಯ ಈ ಕುರಿತ ಚರ್ಚೆಗೆ ಫೇಸ್‌ಬುಕ್ ನೆಪಮಾತ್ರ. ವೈದ್ಯಕೀಯ ಮಾಹಿತಿ, ರಾಜಕೀಯ ಚಿಂತನೆ ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಯಾವುದೋ ರಾಜಕೀಯ ಪಕ್ಷ ಅಥವಾ ಮೆಡಿಕಲ್‌ ಮಾಫಿಯ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅಪಾಯಕಾರಿ. ಜಾಗತಿಕ ಜಾಹೀರಾತು ಮಾರುಕಟ್ಟೆಗೆ ಮಾಹಿತಿ ಎನ್ನುವುದು ಅತ್ಯಂತ ಅಗತ್ಯದ ಸರಕು’ ಎನ್ನುತ್ತಾರೆ ಕಥೆಗಾರ ವಸುಧೇಂದ್ರ.

‘ನನ್ನ ಫೇಸ್‌ಬುಕ್‌ ಗೆಳೆಯರೊಬ್ಬರು ಖಿನ್ನತೆ ನಿರೋಧಕಗಳನ್ನು ತೆಗೆದುಕೊಳ್ಳುವಾಗ ಅವಸ್ಥೆ ಹೀಗಿರುತ್ತೆ ಎಂಬುದರ ಕುರಿತು ಫೇಸ್‌ಬುಕ್‌ನಲ್ಲಿ ಒಂದು ಕವನ ಬರೆದಿದ್ದರು. ಇಂತಹ ಮಾಹಿತಿ ಸೋರಿಕೆಯಾದಾಗ ಅವರಿಗೆ ಸಾಂತ್ವನ ಹೇಳುವ ಧ್ವನಿಗಳು ಹೆಚ್ಚಾಗಲಾರವು. ಬದಲಾಗಿ ಖಿನ್ನತೆ ಮತ್ತು ಭಾವನಾತ್ಮಕತೆಗಳನ್ನು ಹೇಗೆ ವೈದ್ಯಕೀಯ ಉತ್ಪನ್ನಗಳ ಮಾರಾಟಕ್ಕೆ ಬಳಸಿಕೊಳ್ಳಬೇಕು ಎನ್ನುವ ಅಂಶವೇ ಮುಖ್ಯವಾಗುತ್ತವೆ. ನನಗೆ ಬರುವ ಸಾವಿರಾರು ಮೆಸೇಜ್‌ ಹಾಗೂ ಇ–ಮೇಲ್‌ಗಳು ಕೂದಲಿಗೆ ಸಂಬಂಧಿಸಿದ ಜಾಹೀರಾತುಗಳಾಗಿರುತ್ತವೆ. ನಾನು ಫೇಸ್‌ಬುಕ್ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಫೋಟೋವನ್ನು ಗಮನಿಸಿ ನನ್ನ ತಲೆಯಲ್ಲಿ ಕೂದಲಿಲ್ಲ ಎಂಬುದನ್ನು ಅರಿತು ನನ್ನ ಅಗತ್ಯತೆ ತಕ್ಕಂತೆ ಜಾಹೀರಾತು ಕಳಿಸುತ್ತಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಯಾವುದೋ ಸೂಪರ್ ಮಾರುಕಟ್ಟೆಗೆ ಹೋದಾಗ ಯಾವುದೊ ಸ್ವ್ಯಾಪ್‌ ಮಾಡಿ ಸ್ಮಾರ್ಟ್‌ ಕಾರ್ಡ್‌ ನೀಡುತ್ತಾರೆ. ಪ್ರತಿಸಾರಿ ಖರೀದಿಗೆ ರಿಯಾಯಿತಿ ಇದೆ ಎಂಬ ಆಸೆ ತೋರುತ್ತಾರೆ. ನಾವಲ್ಲಿ ಯಾವೆಲ್ಲ ವಸ್ತುಗಳನ್ನು ಖರೀದಿಸುತ್ತೇವೆ ಎನ್ನುವುದು ದಾಖಲಾಗುತ್ತದೆ. ನಮ್ಮ ಖರೀದಿಯನ್ನು ಪರಿಗಣಿಸಿಯೇ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಮಾಪನ ಮಾಡಲಾಗುತ್ತದೆ. ತಂತ್ರಜ್ಞಾನದ ಈ ಬದುಕಿನಲ್ಲಿ ಮಾಹಿತಿ ಕಲೆಹಾಕುವುದು ಕಷ್ಟವಲ್ಲ. ಸೆಕೆಂಡುಗಳಲ್ಲಿಯೇ ದೊಡ್ಡ ಡೇಟಾ ರವಾನೆ ಮಾಡಬಹುದು. ಎಲ್ಲ ಕಾಲದಲ್ಲಿಯೂ ಮಾಹಿತಿ ಕದಿಯಲು ಜನ ಕಾತರಿಸುತ್ತಿದ್ದರು. ರಾಜರ ಕಾಲದಲ್ಲಿ ಗೂಢಚಾರರಿರುತ್ತಿದ್ದರು. ಇಂದು ಸಾಮಾಜಿಕ ಮಾಧ್ಯಮಗಳು ಆ ಕೆಲಸವನ್ನು ಸುಲಭವಾಗಿಸಿವೆ’ ಎನ್ನುವುದು ವಸುಧೇಂದ್ರ ಅವರ ಅಭಿಪ್ರಾಯ.

‘ಖಾಸಗಿತನ ಕಾಪಾಡಿಕೊಳ್ಳಲು ಫೇಸ್‌ಬುಕ್‌ನಿಂದ ಹೊರಬನ್ನಿ ಎನ್ನುವುದು ಪರಿಹಾರವಲ್ಲ. ಸಾಮಾಜಿಕ ಬದುಕಿನಿಂದ ದೂರವಿರುವುದು ಕಷ್ಟ. ವೈಯಕ್ತಿಕ ಜೀವನಕ್ಕೂ ಸಾಮಾಜಿಕ ಮಾಧ್ಯಮಗಳ ನಡುವಿನ ತೆಳುವಾದ ಪರಿಧಿಯನ್ನು ಕಾಯ್ದುಕೊಳ್ಳುವುದೇ ನಿಜವಾದ ಪರಿಹಾರ. ಮನೆಯಲ್ಲಿರುವ ಹೆಂಡತಿಗೆ ಹುಟ್ಟುಹಬ್ಬದ ಶುಭಾಶಯವನ್ನು ಫೇಸ್‌ಬುಕ್ ಮೂಲಕ ತಿಳಿಸುವುದು ಅನಗತ್ಯ. ವಿಚ್ಛೇದನ, ವೈದ್ಯಕೀಯ ಸಮಸ್ಯಗಳನ್ನು ಸಾರುವ ವೇದಿಕೆಯಾಗಿ ಇದು ಪರಿವರ್ತನೆಯಾಗಬಾರದು. ನಮ್ಮ ಸಂಗತಿಗಳನ್ನು ಜಗತ್ತಿಗೆ ಸಾರಿಕೊಳ್ಳಬೇಕು ಎನ್ನುವ ಮಾನವ ಸಹಜ ಸ್ವಭಾವವನ್ನು ಈ ಮಾಧ್ಯಮಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ವೈಯುಕ್ತಿಕ ನೆಲೆಯ ಕಡಿವಾಣವೇ ಇದಕ್ಕೆ ಪರಿಹಾರ’ ಎನ್ನುವುದು ಎಚ್‌.ಎಸ್‌.ಆರ್.ಲೇಔಟ್‌ನ ಸ್ವರ್ಣಶ್ರೀ ಅವರ ನಿಲುವು.

‘ಈ ರೀತಿಯ ಖಾಸಗಿತನ ಕುರಿತ ಚರ್ಚೆಗಳು ಕೆಲವು ಕಾಲ ಮಾತ್ರ ಮುನ್ನೆಲೆಗೆ ಬರುತ್ತವೆ. ಹಿಂದೆ ಸುಳ್ಳುಸುದ್ದಿ ಕುರಿತಾಗಿಯೂ ಇಂಥದ್ದೇ ಚರ್ಚೆ ಶುರುವಾಗಿತ್ತು. ಆಗ ಯಾರೂ ಪತ್ರಿಕೆಗಳನ್ನು ಓದುವುದು ನಿಲ್ಲಿಸಲಿಲ್ಲ. ಹಾಗೆಯೇ ಈಗಲೂ ಯಾರೂ ಫೇಸ್‌ಬುಕ್‌ನಿಂದ ದೂರವಾಗುವುದಿಲ್ಲ.

ಈಗ ಪ್ರತಿ ಸುದ್ದಿಯನ್ನೂ ನಂಬುವ ಮುನ್ನ ಅನುಮಾನಿಸುತ್ತಾರೆ. ಸ್ವತಃ ಸುಳ್ಳುಸುದ್ದಿಗಳನ್ನು ಗುರುತಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾರೆ. ಅಂತೆಯೇ ಇನ್ನುಮುಂದೆ ಫೇಸ್‌ಬುಕ್‌ನ ವಿವಿಧ ಅಪ್ಲಿಕೇಶನ್‌ಗಳನ್ನು ಬಳಸುವ ಮುನ್ನ ಯೋಚಿಸುತ್ತಾರೆ. ಎಲ್ಲದಕ್ಕೂ ಕುರುಡಾಗಿ ಅಗ್ರಿ (ಸಮ್ಮತಿ) ಎಂಬ ಬಟನ್‌ ಕ್ಲಿಕ್‌ ಮಾಡುವುದಿಲ್ಲ’ ಎನ್ನುವುದು ಮೆಕ್ಯಾನಿಕಲ್ ಎಂಜಿನಿಯರ್ ಅಭಿಜಿತ್ ರಾವ್ ಅವರ ಅಭಿಪ್ರಾಯ.

‘ಖಾಸಗಿತನ ಕಾಪಾಡಿಕೊಳ್ಳಲು ಸರ್ಕಾರಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ಒಂದಷ್ಟು ಬದಲಾವಣೆ ಅಗತ್ಯ. ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಮಾಹಿತಿ ಸೋರಿಕೆ ಮಾಡುವವರು ಹಾಗೂ ಕದಿಯುವವರಿಗೆ ಶಿಕ್ಷೆ ವಿಧಿಸಬೇಕು. ಪ್ರತಿ ದೇಶ ಮಾಹಿತಿಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ತನ್ನ ನೆಲದ ಕಾನೂನುಗಳನ್ನು ಕಠಿಣವಾಗಿಸಬೇಕು’ ಎನ್ನುತ್ತಾರೆ ಮರಿಯಪ್ಪನಪಾಳ್ಯದ ಸಾಫ್ಟ್‌ವೇರ್ ಎಂಜಿನಿಯರ್ ಭೀಮಾನಾಯ್ಕ್‌.

‘ಫೇಸ್‌ಬುಕ್‌ನಲ್ಲಿ ಮಾಹಿತಿ ಸೋರಿಕೆಯ ಸಾಧ್ಯತೆಗಳಿವೆ ಎಂಬ ಅನುಮಾನ ಅನೇಕ ವರ್ಷಗಳಿಂದಲೇ ದಟ್ಟವಾಗಿತ್ತು. ಈಗ ಅದು ನಿಜವಾಗಿದೆ. ಇದರಿಂದಾಗಿ ಮುಖ್ಯವಾಗಿ ಫೇಸ್‌ಬುಕ್‌ ಮೇಲಿನ ಜನರ ನಂಬಿಕೆ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ‘ಥರ್ಡ್‌ ಪಾರ್ಟಿ ಆ್ಯಪ್‌’. ಇಂಥ ಅಪ್ಲಿಕೇಶನ್‌ಗಳು ಕೆಲವು ಹಂತಗಳಿಗೆ ಒಪ್ಪಿಗೆ ಕೇಳುತ್ತವೆ. ಯಾವೆಲ್ಲಾ ಮಾಹಿತಿ ಹೀಗೆ ಹಂಚಿಕೆಯಾಗಿದೆ ಎನ್ನುವುದನ್ನು ಫೇಸ್‌ಬುಕ್ ತನ್ನ ಬಳಕೆದಾರರಿಗೆ ತಿಳಿಸಬೇಕು. ಇದಕ್ಕಾಗಿ ಫೇಸ್‌ಬುಕ್‌ ಡೆವಲಪರ್‌ ನಿಯಮಗಳನ್ನು ಬಿಗಿ ಮಾಡುತ್ತಿದೆ. ಆದಾಗ್ಯೂ ಸೋರಿಕೆ ಆದರೆ, ಮುಂದೆ ಈ ಆಯ್ಕೆಯನ್ನೇ ನಿಲ್ಲಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ನಮಗೆ ಫೇಸ್‌ಬುಕ್‌ನ ಮೂಲ ಸ್ವರೂಪ ಅಥವಾ ಸೇವೆಗಳು ಮಾತ್ರ ಉಳಿದುಕೊಳ್ಳುತ್ತವೆ. ಬೇರೆ ವೆಬ್‌ಸೈಟ್‌ಗಳಿಗೆ ಪೇಸ್‌ಬುಕ್‌ ಮೂಲಕ ಲಾಗಿನ್‌ ಆಗಲು ಸಾಧ್ಯವಿರುವುದಿಲ್ಲ’ ಎಂದು ಮಾಹಿತಿ ನೀಡುತ್ತಾರೆ ಎಚ್.ಪಿ. ಕಂಪೆನಿಯ ಟೆಕ್ನಿಕಲ್ ಕನ್ಸಲ್ಟೆಂಟ್ ಗಣೇಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry