ಪೂಜಾರಿಗೆ ಪ್ರಾಪ್ತಿಯಾದ ರಾಹುಲ್‌ ವರ

7
ಹಿರಿಯ ನಾಯಕನಿಗೆ ಜಿಲ್ಲೆಯ ಅಭ್ಯರ್ಥಿಗಳ ಗೆಲುವಿನ ಹೊಣೆ

ಪೂಜಾರಿಗೆ ಪ್ರಾಪ್ತಿಯಾದ ರಾಹುಲ್‌ ವರ

Published:
Updated:

ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಪಕ್ಷದಿಂದಲೇ ದೂರವಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಇದೀಗ ಎಐಸಿಸಿ ಅಧಿನಾಯಕ ರಾಹುಲ್‌ ಗಾಂಧಿ ಅಭಯ ದೊರೆತಿದೆ. ಪಕ್ಷದ ಪ್ರಮುಖ ಹೊಣೆಯನ್ನು ಪೂಜಾರಿ ಅವರ ಹೆಗಲಿಗೆ ಏರಿಸಲು ರಾಹುಲ್‌ ನಿರ್ಧರಿಸಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಹೀಗೊಂದು ಸುದ್ದಿ ಇದೀಗ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿದ್ದ ಜನಾರ್ದನ ಪೂಜಾರಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಬಹುತೇಕ ನಿಶ್ಚಿತವಾಗಿದ್ದು, ಕಾಂಗ್ರೆಸ್‌ ಇನ್ನೊಂದು ಪಾಳೆಯದಲ್ಲಿ ತಳಮಳವನ್ನು ಉಂಟು ಮಾಡಿದೆ.

ಕಣ್ಣೀರಿಗೆ ಕರಗಿದ ರಾಹುಲ್‌: ಮಂಗಳವಾರ ಉಭಯ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ರಾಹುಲ್‌ ಗಾಂಧಿ, ಸಮಾವೇಶದ ನಂತರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ದೇವಸ್ಥಾನದ ದ್ವಾರದಲ್ಲಿಯೇ ನಿಂತಿದ್ದ ಜನಾರ್ದನ ಪೂಜಾರಿ, ರಾಹುಲ್‌ ಗಾಂಧಿ ಅವರನ್ನು ಪ್ರೀತಿಯಿಂದಲೇ ಸ್ವಾಗತಿಸಿದರು. ಹಲವು ಬಾರಿ ದೇವಸ್ಥಾನಕ್ಕೆ ಆಮಂತ್ರಿಸಿದರೂ ಬರದೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಹುಲ್‌ ಅವರನ್ನು ಹಿಂಬಾಲಿಸಿದರು.

ದೇವಸ್ಥಾನದ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಪೂಜಾರಿ ಅವರ ದುಃಖದ ಕಟ್ಟೆಯೂ ಒಡೆಯಿತು. ಪಕ್ಷದಲ್ಲಿ ತಮ್ಮನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ ಪೂಜಾರಿ, ರಾಹುಲ್‌ ಎದುರು ಕಣ್ಣೀರು ಹಾಕಿದ್ದೂ ಆಯಿತು. ಪೂಜಾರಿ ಅವರನ್ನು ಅಪ್ಪಿ ಸಂತೈಸಿದ ರಾಹುಲ್‌ ಗಾಂಧಿ, ಹಿರಿಯ ನಾಯಕನಿಗೆ ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ನೀಡಿದರು.

ಜನಾರ್ದನ ಪೂಜಾರಿ ಅವರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ಬಗ್ಗೆ ಅರಿತಿದ್ದ ರಾಹುಲ್‌ ಗಾಂಧಿ, ಸಮಯ ಇಲ್ಲದೇ ಇದ್ದರೂ ಹಿರಿಯ ನಾಯಕನಿಗೆ ಅಹವಾಲಿಗೆ ಕಿವಿಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರಿಂದ ಆಗುತ್ತಿರುವ ನೋವುಗಳ ಬಗ್ಗೆ ಪೂಜಾರಿ ಅವರು ರಾಹುಲ್‌ ಬಳಿ ಅಳಲು ತೋಡಿಕೊಂಡರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಬಿಲ್ಲವ ಮತಗಳು ನಿರ್ಣಾಯಕ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಪೂಜಾರಿ ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬ ಸಲಹೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು, ರಾಹುಲ್‌ ಅವರಿಗೆ ನೀಡಿದ್ದಾರೆ. ಅಲ್ಲದೇ ಪೂಜಾರಿ ಅವರು, ಪಕ್ಷದ ಹಿರಿಯ ನಾಯಕರಾಗಿದ್ದು, ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎನ್ನುವ ಮಾತನ್ನೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಡಾ. ಪರಮೇಶ್ವರ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ರಾಹುಲ್‌, ಬುಧವಾರ ಬೆಳಿಗ್ಗೆ ಉಭಯ ಜಿಲ್ಲೆಗಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರ ಜತೆ ನಡೆಸಿದ ಸಭೆಯಲ್ಲಿ, ಪಕ್ಷಕ್ಕಾಗಿ ದುಡಿದಿರುವ ಹಿರಿಯ ನಾಯಕರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ. ಹಿರಿಯರನ್ನು ಕಡೆಗಣಿಸಬೇಡಿ.

ಹಿರಿಯರ ಮಾರ್ಗ ದರ್ಶನದಲ್ಲಿ ಯುವ ಪಡೆಯ ಉತ್ಸಾಹ ವನ್ನು ಬಳಸಿಕೊಂಡು ಸಂಘಟನೆ ಮಾಡು ವಂತೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅದರಲ್ಲಿಯೂ ಜನಾರ್ದನ ಪೂಜಾರಿ ಅವರಂತಹ ಪ್ರಬಲ ಬಿಲ್ಲವ ಸಮುದಾಯದ ನಾಯಕರನ್ನು ಕಡೆಗಣಿಸುವುದು ಸರಿಯಲ್ಲ. ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಬಹುತೇಕ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ರಾಹುಲ್ ಅವರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದು, ಪೂಜಾರಿ ಅವರಿಗೆ ಅಭ್ಯರ್ಥಿಗಳ ಗೆಲುವಿನ ಹೊಣೆ ನೀಡಲು ನಿರ್ಧರಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry