ಕುಡಿಯುವ ನೀರು; ಮುನ್ನೆಚ್ಚರಿಕೆ ವಹಿಸಿ

7
ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ

ಕುಡಿಯುವ ನೀರು; ಮುನ್ನೆಚ್ಚರಿಕೆ ವಹಿಸಿ

Published:
Updated:
ಕುಡಿಯುವ ನೀರು; ಮುನ್ನೆಚ್ಚರಿಕೆ ವಹಿಸಿ

ವಿಜಯಪುರ: ‘ಬೇಸಿಗೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಸನ್ನದ್ಧಗೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಸಂಜೆ ಬರ ನಿರ್ವಹಣೆ ಕುರಿತಂತೆ ನಡೆಸಿದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ’ ಎಂದರು.

‘ವಿದ್ಯುತ್ ಕೊರತೆಯಾಗದಂತೆ ಎಚ್ಚರಿಕೆ ವಹಿಸುವ ಜತೆಗೆ ಜಾನುವಾರು ಗಳಿಗೆ ಮೇವಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಹಿಂದಿನ ವರ್ಷ ಜಿಲ್ಲೆಯಾದ್ಯಂತ ತಲೆದೋರಿದ್ದ ಬರಗಾಲದ ಸಂದರ್ಭ ದಲ್ಲಿ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಅದರಂತೆ ಈ ಬಾರಿಯೂ ಕೂಡ ಸಮಿತಿಯನ್ನು ಮುಂದುವರೆಸಿಕೊಂಡು ಹೋಗುವಂತೆ’ ಸಚಿವ ಪಾಟೀಲ ಸಲಹೆ ನೀಡಿದರು.

‘ಈ ಬಾರಿ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕೂಡ ಹೆಚ್ಚಾಗುವ ಸಾಧ್ಯತೆಯಿದ್ದು, ಈ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

ಈಗಾಗಲೇ ಈ ಹಿಂದಿನ ಬರ ಪರಿಸ್ಥಿತಿಯಿಂದ ಆದ ತೊಂದರೆ, ಅನುಭವವನ್ನು ಮನಗಂಡು ಪ್ರಸಕ್ತ ವರ್ಷ ಆಲಮಟ್ಟಿ ಜಲಾಶಯದಲ್ಲಿಯೂ ಕೂಡ ಜೂನ್ ಅಂತ್ಯದವರೆಗೆ ಸಾಕಾಗುವಷ್ಟು ಹೆಚ್ಚಿನ ನೀರು ಸಂಗ್ರಹಿಸಲು ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಅದರಂತೆ ಅಂತರ್ಜಲ ಕಡಿಮೆಯಾದ ಪಕ್ಷದಲ್ಲಿ ಸಕಾಲಕ್ಕೆ ಜನರಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಖಾಸಗಿ ಕೊಳವೆಬಾವಿ ಮಾಲೀಕರ ನೆರವನ್ನು ಸಹ ಪಡೆಯಿರಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾನುವಾರುಗಳಿಗಾಗಿ ಮೇವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವುದೇ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಗೆ ಮೇವು ಸರಬರಾಜಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅವಶ್ಯಕ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮೂಲಕ ಮೇವು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಸರಬರಾಜು ಆಗದಂತೆ ಮುನ್ನೆಚ್ಚರಿಕೆ ವಹಿಸಿ’ ಎಂದು ಸೂಚಿಸಿದರು.

‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ಜತೆಗೆ ಸ್ಥಳೀಯವಾಗಿ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಬರದ ತುರ್ತು ಸೇವೆಗಳಿಗಾಗಿ, ಬರ ನಿಭಾಯಿಸುವ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವ ಕುರಿತು ಚುನಾವಣಾ ಆಯೋಗದ ಗಮನಕ್ಕೂ ತರುವಂತೆ’ ಎಂ.ಬಿ.ಪಾಟೀಲ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್‌, ಉಪ ವಿಭಾಗಾಧಿಕಾರಿ ಕರಲಿಂಗಣ್ಣವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

**

ಅಧಿಕಾರಿಗಳಿಗೆ ಅಭಿನಂದನೆ

ನಾಲ್ಕು ವರ್ಷ 10 ತಿಂಗಳ ಕಾಲಾವಧಿ ಎಲ್ಲ ಅಧಿಕಾರಿಗಳು ವಿವಿಧ ಅಭಿವೃದ್ಧಿ ಕಾರ್ಯದಲ್ಲಿ ಸಹಕಾರ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಸಚಿವರು, ಬರ ನಿರ್ವಹಣೆ, ನೀರಾವರಿ, ಕೃಷಿ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದ್ದು, ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಜೆಡಿಎ ಡಾ.ಬಿ.ಮಂಜುನಾಥ್, ಹೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಜಿ.ಕೆ.ಗೊಟ್ಯಾಳ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮನೋಜಕುಮಾರ ಗಡಬಳ್ಳಿ, ಹಲಗಣಿ ಪಿಡಿಓ ಎಸ್‌.ಆರ್‌.ಕಟ್ಟಿ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಎಂ.ಎ.ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಸನ್ನ ತಮ್ಮ ಅನುಭವ, ಸಚಿವರ ಸಹಕಾರವನ್ನು ಸ್ಮರಿಸಿದರು.

**

ಡಿ.ಸಿ, ಜಿ.ಪಂ. ಸಿಇಒ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು, ಗ್ರಾ.ಪಂ. ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ನೀರಿನ ಸಮಸ್ಯೆ ಪರಿಹರಿಸಿ

-ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry