ಮಂಗಳವಾರ, ಡಿಸೆಂಬರ್ 10, 2019
26 °C
ಮಕ್ಕಳು, ಯುವಕರಿಗೆ ಮೆಚ್ಚುಗೆಯಾದ ಹಗುರ ಬ್ಯಾಟ್‌ಗಳು‌, ಕ್ರಿಕೆಟ್‌ ಪ್ರಿಯರಿಗೆ ಸಡಗರ

ಹೆದ್ದಾರಿ ಬದಿಯಲ್ಲಿ ಬ್ಯಾಟ್‌ ತಯಾರಿಕೆ, ಮಾರಾಟ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಹೆದ್ದಾರಿ ಬದಿಯಲ್ಲಿ ಬ್ಯಾಟ್‌ ತಯಾರಿಕೆ, ಮಾರಾಟ

ಮಂಡ್ಯ: ಶಾಲಾ ಪರೀಕ್ಷೆಗಳು ಮುಗಿದು ಮಕ್ಕಳಿಗೆ ಬೇಸಿಗೆ ರಜೆ ಬಂದಿದೆ. ಪಾಠದ ಕಾಲ ಮುಗಿದು ಆಟದ ಕಾಲ ಆರಂಭವಾಗಿದೆ. ಈ ನಿಟ್ಟಿನಲ್ಲಿ ನಗರದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕ್ರಿಕೆಟ್‌ ಬ್ಯಾಟ್‌ ತಯಾರಿಸಿ, ಮಾರಾಟ ಮಾಡುವ ಕುಟುಂಬಗಳು ಕ್ಯಾಂಪ್‌ ಹಾಕಿದ್ದು ಕ್ರಿಕೆಟ್‌ ಪ್ರಿಯರನ್ನು ಆಕರ್ಷಿಸುತ್ತಿವೆ.ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಮುಂಭಾಗದಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಮೂರು ಕುಟುಂಬಗಳು ಸ್ಥಳದಲ್ಲೇ ಬ್ಯಾಟ್‌ ತಯಾರಿಸಿ ಮಾರಾಟ ಮಾಡುತ್ತಿವೆ. ಬಿಗ್‌ ಬಜಾರ್‌ ಸಮೀಪವೇ ಇರುವ ಕಾರಣ ಮಕ್ಕಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಈ ಕುಟುಂಬಗಳು ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ದು ಯುವಕರು ಹಾಗೂ ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ. ಬೇಕಾದ ಮಾದರಿಯಲ್ಲಿ, ಅವಶ್ಯವಿರುವ ಅಳತೆಯಲ್ಲಿ ಹೇಳಿ ಬ್ಯಾಟ್‌ ಮಾಡಿಸಿಕೊಳ್ಳಬೇಕಾಗಿದೆ. ಇಷ್ಟವಾಗುವ ಕ್ರಿಕೆಟ್‌ ಆಟಗಾರರ ಭಾವಚಿತ್ರದ ಸ್ಟಿಕ್ಕರ್‌ ಅಂಟಿಸಿಕೊಡುತ್ತಾರೆ. ಜೊತೆಗೆ ಎಂಆರ್‌ಎಫ್‌, ರೀಬಾಕ್‌, ಸಿಯೆಟ್‌ ಮುಂತಾದ ಸ್ಟಿಕರ್‌ ಅಂಟಿಸಿಕೊಡುತ್ತಾರೆ.

ನಗರಕ್ಕೆ ಈ ಕುಟುಂಬಗಳು ಬಂದು ಎಂಟು ದಿನಗಳಾಗಿದೆ. ಇಲ್ಲಿ ನಾಲ್ಕು ಅಳತೆಯ ಬ್ಯಾಟ್‌ಗಳು ದೊರೆಯುತ್ತಿವೆ. ಇದರ ಜೊತೆಗೆ ವಿವಿಧ ಅಳತೆಯ ವಿಕೆಟ್‌ಗಳೂ ದೊರೆಯುತ್ತವೆ. ಬಣ್ಣಬಣ್ಣದ ಸ್ಟಿಕ್ಕರ್‌ ಅಂಟಿಸಿರುವ ಬ್ಯಾಟ್‌, ವಿಕೆಟ್‌ಗಳನ್ನು ರಸ್ತೆಬದಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ದೊಡ್ಡ ಬ್ಯಾಟ್‌, ಮಧ್ಯಮ ಅಳತೆಯ ಬ್ಯಾಟ್‌, ಸಣ್ಣ ಬ್ಯಾಟ್‌ ಹಾಗೂ ಅತೀ ಸಣ್ಣ ಬ್ಯಾಟ್‌ಗಳನ್ನು ಮಾಡಿ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಬೇಸಿಗೆಯಲ್ಲಿ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಾಮೆಂಟ್‌ಗಳು ಹೆಚ್ಚಾಗಿ ನಡೆಯುವ ಕಾರಣ ದೊಡ್ಡ ಬ್ಯಾಟ್‌ಗಳು ಯುವಕರಿಗೆ ಇಷ್ಟವಾಗಿವೆ. ನಗರದ ಸುತ್ತಮುತ್ತಲ ಹಳ್ಳಿ ಮಕ್ಕಳು ಹಾಗೂ ಯುವಕರಿಗೂ ಬ್ಯಾಟ್‌ ಇಷ್ಟವಾಗಿವೆ.

ಮಧ್ಯಮ ಅಳತೆಯ ಬ್ಯಾಟ್‌ಗಳು ಶಾಲಾ ಮಕ್ಕಳಿಗೆ ಸೂಕ್ತವಾಗಿವೆ. ಸಣ್ಣ ಬ್ಯಾಟ್‌ಗಳು ಪುಟಾಣಿ ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿವೆ. ಈ ಬ್ಯಾಟ್‌ಗಳು ಹಗುರವಾಗಿರುವ ಕಾರಣ ಮಕ್ಕಳಿಗೆ ಆಟಕೆಯೂ ಆಗಿವೆ. ಇನ್ನು ಅತೀ ಸಣ್ಣ ಬ್ಯಾಟ್‌ಗಳೂ ದೊರೆಯುತ್ತಿದ್ದು ಒಂದು ವರ್ಷದ ಮಕ್ಕಳಿಗೂ ಸೂಕ್ತವಾಗಿವೆ. ಅತೀ ಸಣ್ಣ ಬ್ಯಾಟ್‌ಗಳು ನೋಡಲು ಆಕರ್ಷಕವಾಗಿದ್ದು ಪೋಷಕರು ಪುಟಾಣಿ ಮಕ್ಕಳಿಗಾಗಿ ಕೊಳ್ಳುತ್ತಿದ್ದಾರೆ.

ಬೆಲೆಯೂ ಕಮ್ಮಿ: ಅಂಗಡಿಗಳಿಗೆ ಹೋಲಿಕೆ ಮಾಡಿದರೆ ಈ ಕಾರ್ಮಿಕರು ಸ್ಥಳದಲ್ಲೇ ತಯಾರಿಸಿ, ಮಾರಾಟ ಮಾಡುತ್ತಿರುವ ಬ್ಯಾಟ್‌ ಬೆಲೆ ಕಡಿಮೆ ಇದೆ. ದೊಡ್ಡ ಅಳತೆಯ ಬ್ಯಾಟ್‌ಗೆ ₹ 350 ನಿಗದಿ ಮಾಡಿದ್ದಾರೆ. ಮಧ್ಯಮ ಅಳತೆ ಬ್ಯಾಟ್‌ಗೆ ₹ 300 ಇದೆ. ಸಣ್ಣ ಬ್ಯಾಟ್‌ಗೆ ₹ 100, ಅತೀ ಸಣ್ಣ ಬ್ಯಾಟ್‌ಗೆ ₹ 50 ನಿಗದಿ ಮಾಡಲಾಗಿದೆ. ‘ಇಷ್ಟು ಹಗುರವಾಗಿರುವ ಬ್ಯಾಟ್‌ಗಳು ಅಂಗಡಿಯಲ್ಲಿ ದೊರೆಯುವುದಿಲ್ಲ. ಈ ಬ್ಯಾಟ್‌ಗಳಿಂದ ಸಣ್ಣ ಮಕ್ಕಳು ಮನೆಯೊಳಗೇ ಕ್ರಿಕೆಟ್‌ ಆಡಬಹುದು. ಹೀಗಾಗಿ ಈ ಬ್ಯಾಟ್‌ ಮಕ್ಕಳಿಗೆ ಇಷ್ಟವಾಗುತ್ತವೆ’ ಎಂದು ತಮ್ಮ ಮಗುವಿಗೆ ಅತೀ ಸಣ್ಣ ಬ್ಯಾಟ್‌ ಕೊಂಡ ತಾವರೆಗೆರೆ ನಿವಾಸ್‌ ರಮೇಶ್‌ ಹೇಳಿದರು.

ಮಹಾರಾಷ್ಟ್ರದಿಂದ: ಮಹಾರಾಷ್ಟ್ರದ ಧೂಲೆ ಜಿಲ್ಲೆಯ ನಿವಾಸಿಗಳಾದ ರಂಜಿತ್‌ ಠಾಕ್ರೆ, ಅರುಣ್‌ ಠಾಕ್ರೆ ಹಾಗೂ ನವೀನ್‌ ಠಾಕ್ರೆ ಅವರ ಕುಟುಂಬಗಳು ಸ್ಥಳೀಯವಾಗಿ ಸಿಗುವ ಹಗುರ ಮರವನ್ನು ತಂದು ಬ್ಯಾಟ್‌ ತಯಾರಿಸುತ್ತಿದ್ದಾರೆ. ಮಹಿಳೆಯರೂ ಬ್ಯಾಟ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಟಾರ್ಪಾಲಿನ್‌ ಸಹಾಯದಿಂದ ಮೂರು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಬ್ಯಾಟ್‌ ಮಾರಾಟ ಮಾಡಿ ಈ ಕುಟುಂಬಗಳು ಜೀವನ ಸಾಗಿಸುತ್ತಿವೆ. ಮೂರು ಕುಟುಂಬಳಿಂದ 15 ಮಂದಿ ಇದ್ದಾರೆ. ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಸೇವಿಸುತ್ತಾರೆ. ಖಾಸಗಿ ಬಸ್‌ ನಿಲ್ದಾಣದ ಬಳಿಯ ನಲ್ಲಿಯಿಂದ ಕುಡಿಯುವ ನೀರು ತರುತ್ತಾರೆ.

‘ನಮ್ಮದು ಅಲೆಮಾರಿ ಜೀವನ. ಮೊದಲು ಊರಿನಲ್ಲಿ ಕೃಷಿ ಮಾಡುತ್ತಿದ್ದವು. ನಮ್ಮ ಊರಿನಲ್ಲಿ ಹಗುರವಾದ ಮರ ಹೇರಳವಾಗಿ ಸಿಗುತ್ತದೆ. ಅದನ್ನು ಬಳಸಿ ಬ್ಯಾಟ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಂಡೆವು. ಮಳೆ ಕೊರತೆಯಿಂದ ನಾವು ಕೃಷಿ ಬಿಟ್ಟು ಬ್ಯಾಟ್‌ ತಯಾರಿಸಿ ಮಾರಾಟ ಮಾಡುತ್ತಿದ್ಧೇವೆ. ಮೊದಲು ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಕ್ಯಾಂಪ್‌ ಮಾಡಿದ್ದೆವು. ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ದೇವೆ. ಜನರ ಪ್ರತಿಕ್ರಿಯೆ ಚೆನ್ನಾಗಿದೆ. ಎರಡು ತಿಂಗಳು ಇಲ್ಲೇ ಇರುತ್ತೇವೆ ’ ಎಂದು ರಂಜಿತ್‌ ಠಾಕ್ರೆ ಹೇಳಿದರು.

ಪ್ರತಿಕ್ರಿಯಿಸಿ (+)