ಮಂಗಳವಾರ, ಡಿಸೆಂಬರ್ 10, 2019
23 °C

ಭಾರತದ 5.62 ಲಕ್ಷ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕಳವು

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತದ 5.62 ಲಕ್ಷ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕಳವು

ನವದೆಹಲಿ: ಬ್ರಿಟನ್‌ನ ಕೇಂಬ್ರಿಜ್‌ ಅನಲಿಟಿಕಾ (ಸಿ.ಎ.) ಕಂಪನಿಯು ಫೇಸ್‌ಬುಕ್‌ ಖಾತೆಗಳ ಮೂಲಕ ಮಾಡಿದ ಮಾಹಿತಿ ಕಳವಿನಿಂದಾಗಿ ಭಾರತದಲ್ಲಿ 5.62 ಲಕ್ಷ ಜನರಿಗೆ ತೊಂದರೆ ಆಗಿರಬಹುದು ಎಂದು ಫೇಸ್‌ಬುಕ್‌ ಕಂಪನಿ ಹೇಳಿದೆ.

ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಮಾಹಿತಿ ಕಳವು ಪ್ರಕರಣ ಬಹಿರಂಗವಾದ ಬಳಿಕ ಈ ಕಂಪನಿ ಮತ್ತು ಫೇಸ್‌ಬುಕ್‌ಗೆ ಭಾರತ ಸರ್ಕಾರವು ನೋಟಿಸ್‌ ನೀಡಿತ್ತು.

ವಿವಿಧ ದೇಶಗಳ ಚುನಾವಣೆ ಮೇಲೆ ಪ್ರಭಾವ ಬೀರುವುದಕ್ಕಾಗಿ ಫೇಸ್‌ಬುಕ್‌ನ ಲಕ್ಷಾಂತರ ಬಳಕೆದಾರರ ವೈಯಕ್ತಿಕ ಮಾಹಿತಿ

ಯನ್ನು ಸಿ.ಎ. ಬಳಸಿಕೊಂಡಿತ್ತು. ಕೇಂಬ್ರಿಜ್‌ ಅನಲಿಟಿಕಾ ಕಂಪನಿಯು 8.7 ಕೋಟಿ ಜನರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಹಂಚಿಕೊಂಡಿದೆ ಎಂದು ಫೇಸ್‌ಬುಕ್‌ ಒಪ್ಪಿಕೊಂಡಿದೆ. ಇವರಲ್ಲಿ ಹೆಚ್ಚಿನವರು ಅಮೆರಿಕನ್ನರು.

‘ಮೈಡಿಜಿಟಲ್‌ಲೈಫ್‌’ ಎಂಬ ಆ್ಯಪ್‌ ಅಳವಡಿಸಿಕೊಂಡ 335 ಬಳಕೆದಾರರ ಮಾಹಿತಿಯನ್ನು ಅನಲಿಟಿಕಾ ಕಂಪನಿಯು ನೇರವಾಗಿ ಬಳಸಿಕೊಂಡಿದೆ. ಈ 335 ಜನರ ಜತೆ ಫೇಸ್‌ಬುಕ್‌ ಮೂಲಕ ಸಂಪರ್ಕದಲ್ಲಿದ್ದ 5.62 ಲಕ್ಷ ಜನರ ಮಾಹಿತಿಯನ್ನೂ ಅನಲಿಟಿಕಾ ಕಂಪನಿಯು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಫೇಸ್‌ಬುಕ್‌ ಅಂದಾಜಿಸಿದೆ.

ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ತೊಂದರೆಯಾದ ಜನರ ನಿಖರ ಸಂಖ್ಯೆ ಎಷ್ಟು ಎಂಬುದನ್ನು ಕಂಡುಕೊಳ್ಳಲು

ಪ್ರಯತ್ನ ನಡೆಯುತ್ತಿದೆ ಎಂದು ಫೇಸ್‌ಬುಕ್‌ ವಕ್ತಾರರು ತಿಳಿಸಿದ್ದಾರೆ.

ಮಾಹಿತಿ ಕಳವಿಗೆ ಸಂಬಂಧಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದಾಗಿ ಫೇಸ್‌ಬುಕ್‌ ಕಂಪನಿಯು ಬಳಕೆದಾರರ ಕ್ಷಮೆ ಕೋರಿದೆ. ಭಾರತದಲ್ಲಿಯೂ ಈ ಪ್ರಕರಣ ಸಂಚಲನ ಮೂಡಿಸಿದೆ.

ಮಾಹಿತಿ ಕಳವಿನ ಮೂಲಕ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಫೇಸ್‌ಬುಕ್‌ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನೇ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಕಳೆದ ತಿಂಗಳು ಎಚ್ಚರಿಕೆ ನೀಡಿದ್ದರು.

ಚುನಾವಣೆಗೆ ಮೊದಲು ವಿವಿಧ ಕ್ರಮ

ವಾಷಿಂಗ್ಟನ್‌ (ಪಿಟಿಐ): ಭಾರತ ಸೇರಿ ವಿವಿಧ ದೇಶಗಳಲ್ಲಿನ ಮಹತ್ವದ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಫೇಸ್‌

ಬುಕ್‌ನಲ್ಲಿರುವ ಮಾಹಿತಿಯ ಸುರಕ್ಷತೆಗಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆ ಅಳವಡಿಕೆ ಜತೆಗೆ, ಸಾವಿರಾರು ಜನರನ್ನು ಮಾಹಿತಿ ಸಂರಕ್ಷಣೆ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಫೇಸ್‌ಬುಕ್‌ ಹೇಳಿದೆ.

2018 ಚುನಾವಣೆಗಳ ದೃಷ್ಟಿಯಿಂದ ಮಹತ್ವದ ವರ್ಷ. ಹಾಗಾಗಿ ಟ್ರೋಲ್‌ಗಳ ಮೂಲಕ ಮಾಹಿತಿ ಹರಡುವಿಕೆ ತಡೆಗೆ

ಒತ್ತು ನೀಡಲಾಗಿದೆ. 

ಅಮೆರಿಕದ ಅಲಬಾಮಾ ಸೆನೆಟ್‌ ಚುನಾವಣೆ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಮಾಹಿತಿ ಹರಡುತ್ತಿದ್ದ ಮೆಸಡೋನಿಯಾ ಟ್ರೋಲ್‌ಗಳನ್ನು ಗುರುತಿಸಿ ಕಿತ್ತು ಹಾಕುವಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿತ್ತು ಎಂದು ಜುಕರ್‌ಬರ್ಗ್‌ ತಿಳಿಸಿದ್ದಾರೆ.

ಭಾರತ, ಬ್ರೆಜಿಲ್‌, ಮೆಕ್ಸಿಕೊ, ಪಾಕಿಸ್ತಾನ, ಹಂಗರಿ ದೇಶಗಳಲ್ಲಿ ಈ ವರ್ಷ ಹಲವು ಪ್ರಮುಖ ಚುನಾವಣೆಗಳು ನಡೆಯಲಿವೆ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಕೆಲಸ ಮಾಡಲಾಗುವುದು ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)